ರಾಜಕೀಯಕ್ಕೆ ಹೋದರೂ ಆಲಿಯಾ ಭಟ್ ಬೆನ್ನು ಬಿಡದ ಕಂಗನಾ ರಣಾವತ್..!
ಕಂಗನಾ ರಣಾವತ್ ರಾಜಕೀಯದ ಪಡಸಾಲೆಗೆ ಹೋದ ನಂತರ, ಹಿಂದಿ ಚಿತ್ರರಂಗ.. ಅಲ್ಲಿನ ಸ್ವಜನಪಕ್ಷಪಾತ.. ರಾಜಕೀಯ.. ಭೇದ-ಭಾವ.. ಇತ್ಯಾದಿ, ಇತ್ಯಾದಿ ವಿಚಾರಗಳನ್ನೆಲ್ಲ ಮರೆಯುತ್ತಾರೆ, ದೇಶದ ಬಗ್ಗೆ.. ಅಭಿವೃದ್ದಿಯ ಬಗ್ಗೆ.. ತಮ್ಮ ಕ್ಷೇತ್ರ ಮಂಡಿಯ ಸಮಸ್ಯೆಯ ಬಗ್ಗೆ ಮಾತನಾಡ್ತಾರೆ, ರಾಜಕೀಯದಲ್ಲಿ ಕ್ರಾಂತಿಯ ಕಹಳೆ ಊದುತ್ತಾರೆ ಎಂದು ಎಲ್ಲರು ಅಂದುಕೊಂಡಿದ್ದರು.
ಆದರೆ.. ಕಂಗನಾ ರಣಾವತ್ ಮಾತ್ರ, ಇನ್ನೂ ಅದೇ ರಾಷ್ಟ್ರ ಪ್ರಶಸ್ತಿ.. ಅದೇ ನೆಪೋ ಕಿಡ್.. ಬಾಲಿವುಡ್‌ನ ಲಾಭಿ..ಅದೇ ಕರಣ್ ಜೋಹರ್ ಸುತ್ತ ಮುತ್ತನೇ ಗಿರಕಿ ಹೊಡೆಯುತ್ತಿದ್ದಾರೆ.
ಹೌದು, ಟೈಮ್ಸ್ ನೌ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಂಗನಾ ಇತ್ತೀಚೆಗೆ ಭಾಗಿಯಾಗಿದ್ದರು. ಅನೇಕ ವಿಚಾರಗಳನ್ನ ಮಾತನಾಡಿದರು. ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರ್ ಲಾಲ್ ನೆಹರು ಅಲ್ಲ ಬದಲಿಗೆ ಸುಭಾಶ್ ಚಂದ್ರ ಬೋಸ್ ಎಂದು ಹೇಳುವ ಮೂಲಕ ತಮ್ಮ ರಾಜಕೀಯ ಪಾಂಡಿತ್ಯದ ಪ್ರದರ್ಶನವನ್ನೂ ಮಾಡಿದ್ದರು ಕಂಗನಾ.

ಇದೇ ಕಾರ್ಯಕ್ರಮದಲ್ಲಿ ಮಾತನಾಡಿರುವ ಕಂಗನಾ ರಣಾವತ್, ಆಲಿಯಾ ಭಟ್ ಮೇಲೆ ಮತ್ತೊಮ್ಮೆ ಟೀಕಾಸ್ತ್ರವನ್ನ ಪ್ರಯೋಗಿಸಿದ್ದಾರೆ. ನಾನು ಅವರನ್ನು ಇಂಡಸ್ಟ್ರಿಯ ಸ್ಟಾರ್ ಕಿಡ್ ರೀತಿಯೇ ನೋಡುತ್ತೇನೆ. ಕಂಗನಾಗೆ ಎಲ್ಲಾ ಅವಾರ್ಡ್ ಸಿಕ್ಕಿದೆ ನನಗೂ ಬೇಕು ಎಂದು ಅವರು ಹಠ ಹಿಡಿದಿರುತ್ತಾರೆ. ಹೀಗಾಗಿ ಎಲ್ಲಾ ಪ್ರಶಸ್ತಿಗಳನ್ನು ಅವರಿಗೆ ನೀಡಲಾಗಿದೆ ಎಂದಿದ್ದಾರೆ ಕಂಗನಾ.

ನಿಜಾ.. ಇಲ್ಲಿ ಎಲ್ಲಿಯೂ ಕಂಗನಾ ರಣಾವತ್, ಆಲಿಯಾ ಭಟ್ ಹೆಸರನ್ನ ಹೇಳಿಲ್ಲ. ಆದರೆ.. ''ಸಮಜ್ದಾರ್ ಕೋ ಇಶಾರಾ ಕಾಫಿ ಹೈ''. ಕಂಗನಾ ಮಾತನ್ನ ಅರ್ಥ ಮಾಡಿಕೊಂಡಿರುವ ಅನೇಕರು, ಆಲಿಯಾ ಭಟ್ ಹೆಸರನ್ನ ಹೇಳಿ ನೇರಾನೇರವಾಗಿಯೇ ಹೇಳಬಹುದಿತ್ತಲ್ಲ ಎಂಬ ಪ್ರಶ್ನೆಯನ್ನ ಕಂಗನಾ ರಣಾವತ್ ಗೆ ಈಗ ಕೇಳುತ್ತಿದ್ದಾರೆ.
ಯಾಕೆಂದರೆ.. ಸ್ಟಾರ್ ಕಿಡ್ ಗಳಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದು ಆಲಿಯಾ ಭಟ್ ಮಾತ್ರ. ಇನ್ನೂ ಆಲಿಯಾ ಭಟ್ ಮೇಲೆ ಕಂಗನಾ ಕಿಡಿ ಕಾರುತ್ತಿರುವುದು ಇದು ಮೊದಲ ಬಾರಿ ಅಲ್ಲ. ಹಿಂದೆಯೂ ಅನೇಕ ಬಾರಿ ಆಲಿಯಾ ಭಟ್ ಮೇಲೆ ಕಂಗನಾ ಅಟ್ಯಾಕ್ ಮಾಡಿದ್ದಾರೆ. ''ಪಾಪಾ ಕಿ ಪರಿ'' ಎಂದು ಆಲಿಯಾ ಅವರನ್ನ ಕಂಗನಾ ಕರೆದಿದ್ದಾರೆ.
ಕೇವಲ ಆಲಿಯಾ ಮಾತ್ರ ಅಲ್ಲ, ಆಲಿಯಾ ಗಂಡ ರಣ್‌ಬೀರ್ ಕಪೂರ್ ಅವರನ್ನೂ ಕೂಡ ಕಂಗನಾ ರಣಾವತ್ ಬಿಟ್ಟಿಲ್ಲ. ಇಬ್ಬರ ವಿರುದ್ಧ ಅನೇಕ ಬಾರಿ ಕಂಗನಾ ಗುಡುಗಿದ್ದಾರೆ. ಆದರೆ ಈ ಗುಡುಗು ಸಿಡಿಲುಗಳಿಗೆ ಆಲಿಯಾ ಆಗಲಿ.. ರಣ್‌ಬೀರ್ ಆಗಲಿ.. ಬೆಚ್ಚಿ ಬಿದ್ದಿಲ್ಲ. ಬದಲಿಗೆ ತಮ್ಮ ಪಾಡಿಗೆ ತಾವೂ ಇಬ್ಬರು ಕೆಲಸವನ್ನ ಮಾಡಿಕೊಂಡು ಹೋಗುತ್ತಿದ್ದಾರೆ. ಆದರೆ ಕಂಗನಾ ಮಾತ್ರ ಇನ್ನೂ ಕಾಲೆಳೆಯುವುದರಲ್ಲಿಯೇ ಕಾಲ ಕಳೆಯುತ್ತಿದ್ದಾರೆ.
ಹೀಗಾಗಿಯೇ ಅನೇಕರು ಕಂಗನಾ ರಣಾವತ್ ಗೆ ಸಲಹೆಯನ್ನ ಈಗ ಕೊಡುತ್ತಿದ್ದಾರೆ. ಹಳೆಯ ಕ್ಯಾಸೆಟ್‌ನ್ನೇ ರಿವೈಂಡ್ ಮಾಡುವ ಬದಲು, ರಾಜಕೀಯದಲ್ಲಿ ಆಗಬೇಕಿರುವ ಕೆಲಸ ಬಗ್ಗೆ ಯೋಚನೆ ಮಾಡಿ, ನಿಮ್ಮ ಮಂಡಿ ಕ್ಷೇತ್ರದ ಜನರ ಬಗ್ಗೆ ಯೋಚನೆ ಮಾಡಿ ಎನ್ನುವ ಅಭಿಪ್ರಾಯವನ್ನ ವ್ಯಕ್ತಪಡಿಸುತ್ತಿದ್ದಾರೆ.
ವ್ಯಕ್ತವಾಗುತ್ತಿರುವ ಈ ಸಾರ್ವತ್ರಿಕ ಅಭಿಪ್ರಾಯಗಳನ್ನ ಗಮನಿಸಿ, ಕಂಗನಾ ರಣಾವತ್ ಸದ್ಯಕ್ಕೆ ಬಾಲಿವುಡ್ ಬೆನ್ನು ಬಿಟ್ಟು ರಾಜಕೀಯದ ಕಡೆ ಮುಖ ಮಾಡುತ್ತಾರಾ, ರಾಜಕೀಯ ಹಾಗೂ ಅಲ್ಲಿರುವ ಸಮಸ್ಯೆ, ಜನ ಸಾಮಾನ್ಯರ ಕಷ್ಟ-ನಷ್ಟಗಳನ್ನ ಕೇಳ್ತಾರಾ, ಜನರ ಜೊತೆ ಬೆರೆಯುತ್ತಾರಾ ಅನ್ನುವುದನ್ನ ಈಗ ಕಾದು ನೋಡಬೇಕಿದೆ.


Click it and Unblock the Notifications













