Kangana Ranaut: ಪ್ರಧಾನಿ ಮೋದಿಯನ್ನು ಶ್ರೀರಾಮನಿಗೆ ಹೋಲಿಸಿ ಕಂಗನಾ ವಿಶ್! ಕ್ವೀನ್ ಹೊಸ ಕಾಂಟ್ರವರ್ಸಿ ಶುರು!
ಬಾಲಿವುಡ್ ಕ್ವೀನ್ ಕಂಗನಾ ರಾನೌತ್ ಕಾಂಟ್ರವರ್ಸಿ ಕ್ವೀನ್ ಕೂಡಾ ಹೌದು. ಆಕೆ ಸಿನಿಮಾ ಮಾಡಿ ಸುದ್ದಿಯಾದಷ್ಟೇ ತನ್ನ ವಿವಾದಗಳಿಂದಲೂ ಸುದ್ದಿಯಲ್ಲೇ ಇದ್ದೇ ಇರ್ತಾರೆ. ಕೆಲವೊಮ್ಮೆ ಸಿನಿಮಾಗಿಂತಲೂ ವಿವಾದಗಳೇ ಹೆಚ್ಚು ಎನ್ನುವಂಥಾ ಸನ್ನಿವೇಶಗಳನ್ನೂ ಸೃಷ್ಟಿಸಿಕೊಂಡಿರುತ್ತಾರೆ. ಕಂಗನಾ ಈಗ ಹೊಸ ಕಾಂಟ್ರವರ್ಸಿಯಲ್ಲಿ ಸಿಕ್ಕಿಕೊಂಡಿದ್ದಾರೆ.
ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೆ ಕಂಗನಾ ಶುಭಾಶಯ ಕೋರಿದ ಪರಿಗೆ ಈ ಪರ-ವಿರೋಧಗಳು ಕೇಳಿಬರ್ತಿವೆ. ಎಕ್ಸ್ (ಟ್ವಿಟರ್) ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ಮೋದಿಗೆ ವಿಶ್ ಮಾಡುತ್ತಾ ಕಂಗನಾ ಹೀಗೆ ಬರೆದುಕೊಂಡಿದ್ದಾರೆ.

"ಇಡೀ ವಿಶ್ವದ ಅತ್ಯಂತ ಪ್ರೀತಿ ಪಾತ್ರ ನಾಯಕನಿಗೆ ಹುಟ್ಟು ಹಬ್ಬದ ಶುಭಾಶಯ. ಕೇವಲ ತನ್ನ ಶ್ರಮ ಮತ್ತು ಶ್ರದ್ಧೆಯಿಂದ ಹೊಸ ಭಾರತದ ಕರ್ತೃವಾದ ಒಬ್ಬ ಸಾಮಾನ್ಯ ವ್ಯಕ್ತಿ. ನೀವು ಭಾರತದ ಜನರ ಪಾಲಿಗೆ ಕೇವಲ ಪ್ರಧಾನ ಮಂತ್ರಿಯಲ್ಲ, ಈ ದೇಶದ ಪ್ರಜ್ಞೆಯೊಂದಿಗೆ ಶ್ರೀರಾಮನಂತೆ ನಿಮ್ಮ ಹೆಸರು ಶಾಶ್ವತವಾಗಿ ಸೇರಿಹೋಗಿದೆ. ಭಗವಂತ ನಿಮಗೆ ದೀರ್ಘವಾದ ಆರೋಗ್ಯವಂತ ಬದುಕು ಕರುಣಿಸಲಿ, ಸರ್" ಎಂದು ಬರೆದಿದ್ದಾರೆ.
ಕಂಗನಾ ಮಾಡಿರುವ ವಿಶ್ ಬಗ್ಗೆ ಹೆಚ್ಚೇನೂ ಚರ್ಚೆಯಾಗಿಲ್ಲ. ಆದರೆ, ಆಕೆ ಇಲ್ಲಿ ಪ್ರಧಾನಿ ಮೋದಿಯನ್ನು ಶ್ರೀರಾಮನಿಗೆ ಹೋಲಿಸಿದ್ದು ಈಗ ದೊಡ್ಡ ಮಟ್ಟಿಗೆ ಸುದ್ದಿಯಾಗಿದೆ. ಅನೇಕ ಎಕ್ಸ್ (ಮಾಜಿ ಟ್ವಿಟರ್) ಬಳಕೆದಾರರು ಕಂಗನಾ ಪೋಸ್ಟ್‌ಗೆ ಪ್ರತಿಕ್ರಿಯಿಸಲು ಆರಂಭಿಸಿದ್ದಾರೆ. "ಅಕ್ಕಾ... ಆದರೂ ನಿಮಗೆ ಟಿಕೆಟ್ ಕೊಡಲ್ಲ ಬಿಡಿ" ಎಂದು ಒಬ್ಬ ಎಕ್ಸ್ ಬಳಕೆದಾರ ಕಂಗನಾ ಕಾಲೆಳೆದ್ರೆ, ಮತ್ತೊಬ್ಬರು "ನೀನೊಬ್ಬ ದೊಡ್ಡ ನಾಟಕದ ರಾಣಿ" ಎಂದು ಮೂದಲಿಸಿದ್ದಾರೆ.
ಈ ಎಲ್ಲಾ ಟ್ರೋಲ್‌ಗಳ ನಡುವೆಯೇ ಅನೇಕರು ಕಂಗನಾ ಶುಭಾಶಯವನ್ನು ಮೆಚ್ಚಿಕೊಂಡಿದ್ದಾರೆ ಕೂಡಾ. ಆಧುನಿಕ ಭಾರತಕ್ಕೆ ಹೊಸ ದಿಕ್ಕು ನೀಡಿದ ಪ್ರಧಾನಿಗೆ ಬಾಲಿವುಡ್‌ನ ಕ್ವೀನ್ ವಿಶ್ ಮಾಡಿದ್ದು ಬಹಳಷ್ಟು ಶೇರ್ ಕೂಡಾ ಆಗ್ತಿದೆ. ಕಂಗನಾ ರನೌತ್ ಅಲ್ಲದೇ ಅನೇಕ ಬಾಲಿವುಡ್ ತಾರೆಯರು ಪ್ರಧಾನಿ ಮೋದಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.
ಅಕ್ಷಯ್ ಕುಮಾರ್, ರಾಜ್‌ಕುಮಾರ್ ರಾವ್, ಹೇಮಾಮಾಲಿನಿ, ಸನ್ನಿ ಡಿಯೋಲ್, ಟೈಗರ್ ಶ್ರಾಫ್ ಸೇರಿದಂತೆ ಅನೇಕ ಹಿರಿಕಿರಿಯ ತಾರೆಯರು ನೆಚ್ಚಿನ ನಾಯಕನಿಗೆ ಬರ್ತಡೇ ವಿಶ್ ಮಾಡಿದ್ದಾರೆ.
ಅಂದ್ಹಾಗೆ, ಕಂಗನಾ ತಮ್ಮ ಹೊಸ ಚಿತ್ರ 'ತೇಜಸ್' ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಭಾರತದ ಪ್ರತಿಷ್ಟಿತ ಸ್ವದೇಶಿ ನಿರ್ಮಿತ ಲಘು ಯುದ್ಧವಿಮಾನ ತೇಜಸ್ ಕುರಿತಾದ ಈ ಸಿನಿಮಾದಲ್ಲಿ ಕಂಗನಾ ಏರ್ ಫೋರ್ಸ್ ಪೈಲಟ್ ಪಾತ್ರ ನಿರ್ವಹಿಸಿದ್ದಾರೆ. ಅಕ್ಟೋಬರ್ 20ರಂದು ಈ ಸಿನಿಮಾ ಬಿಡುಗಡೆಯಾಗಲಿದೆ. ಭಾರತದ ಶಕ್ತಿಯನ್ನು ಜಗತ್ತಿಗೆ ಸಾರುವಲ್ಲಿ ತೇಜಸ್ ಯುದ್ಧ ವಿಮಾನದ ಪಾತ್ರ ದೊಡ್ಡದು. ಕಂಗನಾ ಈ ಚಿತ್ರದ ಮೂಲಕ ತೇಜಸ್ ತಯಾರಿ ಮತ್ತು ಸಾಧನೆಯ ಕಥೆ ಹೇಳಲಿದ್ದಾರೆ. ತೇಜಸ್ ಸಿನಿಮಾವನ್ನು ಸರ್ವೇಶ್ ಮೆವಾರ ನಿರ್ದೇಶಿಸಿದ್ದಾರೆ.


Click it and Unblock the Notifications











