ರಣ್‌ವೀರ್ ಸಿಂಗ್, ಹೃತಿಕ್, ಯಶ್ ಬಳಿಕ ವಿಜಯ್ ದೇವರಕೊಂಡ ಹಿಂದೆ ಬಿದ್ದ ಕರಣ್ ಜೋಹರ್!
ಈ ವರ್ಷ ಕೂಡ ಬಾಲಿವುಡ್ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಹೇಳಿಕೊಳ್ಳುವಷ್ಟು ಕಲೆಕ್ಷನ್ ಮಾಡಿಲ್ಲ. ರಣ್‌ಬೀರ್ ಕಪೂರ್ ಹಾಗೂ ಆಲಿಯಾ ಭಟ್ ಅಭಿನಯದ 'ಬ್ರಹ್ಮಾಸ್ತ್ರ' ಸಿನಿಮಾ ಮಾತ್ರ ಬಾಕ್ಸಾಫೀಸ್‌ನಲ್ಲಿ ತಕ್ಕಮಟ್ಟಿಗೆ ಸದ್ದು ಮಾಡಿತ್ತು.
'ಬ್ರಹ್ಮಾಸ್ತ್ರ' ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ 450 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಕಂಡಿದೆ. ಹಿಂದಿಯಲ್ಲಿ ಯಶಸ್ಸು ಕಂಡ ಕೆಲವೇ ಕೆಲವು ಸಿನಿಮಾಗಳಲ್ಲಿ ಈ ಸಿನಿಮಾ ಕೂಡ ಒಂದು. ಹೀಗಾಗಿ ಎರಡನೇ ಚಾಪ್ಟರ್‌ಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
'ಬ್ರಹ್ಮಾಸ್ತ್ರ' ಸಿನಿಮಾ ಮೇಕಿಂಗ್ ಸಮಯದಲ್ಲೇ ಈ ಸಿನಿಮಾವನ್ನು ಮೂರು ಭಾಗಗಳಲ್ಲಿ ಶೂಟ್ ಮಾಡಿ ಬಿಡುಗಡೆ ಮಾಡಲಾಗುತ್ತೆ ಎಂದು ಹೇಳಲಾಗಿತ್ತು. ಅದರಂತೆಯೇ ಎರಡನೇ ಭಾಗದ ದೇವ್ ಪಾತ್ರಕ್ಕೆ ಸ್ಟಾರ್ ನಟರ ಹುಡುಕಾಟದಲ್ಲಿ ನಿರ್ಮಾಪಕ ಕರಣ್ ಜೋಹರ್ ಇದ್ದಾರೆ.

ದೇವ್ ಪಾತ್ರದಲ್ಲಿ ಕರಣ್ ಜೋಹರ್?
'ಬ್ರಹಾಸ್ತ್ರ 2' ಸಿನಿಮಾ ಶೀಘ್ರದಲ್ಲಿಯೇ ಸೆಟ್ಟೇರಬೇಕಿದೆ. ಎರಡನೇ ಭಾಗದಲ್ಲಿ ದೇವ್ ಪಾತ್ರದ ಮೇಲೆ ಸಾಗಲಿದೆ. ಹೀಗಾಗಿ ಈ ದೇವ್ ಪಾತ್ರಕ್ಕೆ ಸ್ಟಾರ್ ನಟನನ್ನು ಹುಡುಕಲು ನಿರ್ಮಾಪಕರ ಕರಣ್ ಜೋಹರ್ ಮುಂದಾಗಿದ್ದಾರೆ. ಸದ್ಯ ಬಾಲಿವುಡ್‌ನಲ್ಲಿ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ಟಾಲಿವುಡ್ ನಟ ವಿಜಯ್ ದೇವರಕೊಂಡಗೆ ಈ ಪಾತ್ರವನ್ನು ಕೇಳಲಾಗಿದೆ. ಈಗಾಗಲೇ ವಿಜಯ್ ದೇವರಕೊಂಡ ಹಾಗೂ ಕರಣ್ ಜೋಹರ್ ಒಂದು ಸುತ್ತಿನ ಮಾತುಕತೆ ಕೂಡ ನಡೆಸಿದ್ದಾರೆ ಎನ್ನಲಾಗಿದೆ.

ಯಶ್ ಹೃತಿಕ್ ಬಳಿಕ ವಿಜಯ್?
'ಬ್ರಹ್ಮಾಸ್ತ್ರ 2'ಗೆ ಈ ಹಿಂದೆ ಹಲವು ನಟರನ್ನು ಅಪ್ರೋಚ್ ಮಾಡಲಾಗಿತ್ತು. ಮೊದಲ ರಣ್‌ವೀರ್ ಸಿಂಗ್ ಈ ಸಿನಿಮಾದಲ್ಲಿ ದೇವ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಆ ಬಳಿಕ ಹ್ಯಾಂಡ್‌ಸಮ್ ಹಂಕ್ ಹೃತಿಕ್ ರೋಷನ್ ಹೆಸರು ಕೂಡ ಕೇಳಿ ಬಂದಿತ್ತು. ಇತ್ತೀಚೆಗೆ ರಾಕಿಂಗ್ ಸ್ಟಾರ್ ಯಶ್ ಹೆಸರು ಕೂಡ ಕೇಳಿ ಬಂದಿತ್ತು. ಆದರೆ, ಈ ಮೂವರೂ ನಟರೂ ಕೂಡ 'ಬ್ರಹ್ಮಾಸ್ತ್ರ' ಪಾರ್ಟ್ 2ನಲ್ಲಿ ನಟಿಸಲು ಒಪ್ಪಿಕೊಂಡಿಲ್ಲ. ಈ ಕಾರಣಕ್ಕೆ ವಿಜಯ್ ದೇವರಕೊಂಡಗೆ ಅಪ್ರೋಚ್ ಮಾಡಲಾಗಿದೆ ಎನ್ನಲಾಗಿದೆ.

ಕರಣ್-ವಿಜಯ್ ಸ್ನೇಹಿತರು
'ಲೈಗರ್' ಸಿನಿಮಾ ವೇಳೆ ವಿಜಯ್ ದೇವರಕೊಂಡ ಹಾಗೂ ಕರಣ್ ಜೋಹರ್ ನಡುವೆ ಉತ್ತಮ ಬಾಂಧವ್ಯ ಬೆಳೆದಿದೆ. ಬಾಲಿವುಡ್‌ನಲ್ಲಿ ವಿಜಯ್ ಎಂಟ್ರಿಗೆ ನೆರವಾಗಿದ್ದೇ ಕರಣ್ ಜೋಹರ್. ಈ ಕಾರಣಕ್ಕೆ ದೇವ್ ಪಾತ್ರ ಮಾಡಲು ವಿಜಯ್ ದೇವರಕೊಂಡ ಒಪ್ಪುಕೊಳ್ಳಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಅಯನ್ ಮುಖರ್ಜಿ ನಿರ್ದೇಶಿಸಿರೋ 'ಬ್ರಹ್ಮಾಸ್ತ್ರ' ಮೊದಲ ಭಾಗ ಇನ್ನೂ ದೊಡ್ಡ ಮಟ್ಟಕ್ಕೆ ಸದ್ದು ಮಾಡಿದ್ದರೆ, ಸೂಪರ್‌ಸ್ಟಾರ್‌ಗಳು ಗ್ರೀನ್ ಕೊಡುವ ಎಲ್ಲಾ ಸಾಧ್ಯತೆಗಳೂ ಇತ್ತು.

ವಿಜಯ್ ಬಂದ್ರೆ ಸೌತ್ ಸ್ಟಾರ್ ಬರ್ತಾರೆ
ಅಷ್ಟಕ್ಕೂ ವಿಜಯ್ ದೇವರಕೊಂಡರನ್ನು ಅಪ್ರೋಚ್ ಮಾಡಿದ್ದಕ್ಕೊಂದು ಕಾರಣವಿದೆ. ವಿಜಯ್ ದೇವರಕೊಂಡ ಬಂದರೆ, ದಕ್ಷಿಣ ಭಾರತದ ನಟರನ್ನು ಕರೆದುಕೊಂಡು ಬರಬಹುದು ಅನ್ನೋದು ಕರಣ್ ಜೋಹರ್ ಲೆಕ್ಕಾಚಾರವೆಂದು ಬಾಲಿವುಡ್‌ನಲ್ಲಿ ಸುದ್ದಿ ಹಬ್ಬಿದೆ. ಆದರೆ, ವಿಜಯ್ ದೇವರಕೊಂಡ 'ಲೈಗರ್' ಸೋಲಿನ ಬಳಿಕ ಯಾವ ನಿರ್ಧಾರ ತೆಗೆದುಕೊಳ್ಳುಬಹುದು ಅನ್ನೋದು ಸದ್ಯ ನಿಗೂಢವಾಗಿಯೇ ಉಳಿದಿದೆ.


Click it and Unblock the Notifications











