"ಶೌಚಾಲಯಕ್ಕೆ ನಡೆದುಕೊಂಡು ಹೋಗ್ತಿದ್ರೆ, ಮೇಡಂ ಟಾಯ್ಲೆಟ್ ಹೋಗ್ತಿದ್ದಾರೆ ಅಂತ ಪಿಸುಗುಡುತ್ತಿದ್ರು"-ನಟಿ ಕರೀಷ್ಮಾ ಕಪೂರ್
ಬಾಲಿವುಡ್‌ನ ಸ್ಟಾರ್ ನಟಿ ಕರೀಷ್ಮಾ ಕಪೂರ್ ಯಾರಿಗೆ ಗೊತ್ತಿಲ್ಲ ಹೇಳಿ? ಇವರ ಡ್ಯಾನ್ಸ್‌ಗೆ, ಸೌಂದರ್ಯಕ್ಕೆ ಮರುಳಾಗದವರೇ ಇಲ್ಲ. 90ರ ದಶಕದಲ್ಲಿ ಕರೀಷ್ಮಾ ಕಪೂರ್ ಕಾಲ್‌ಶೀಟ್‌ಗಾಗಿ ನಿರ್ಮಾಪಕರು ಕ್ಯೂನಿಲ್ಲುವಷ್ಟು ಬೇಡಿಕೆಯ ನಟಿಯಾಗಿದ್ದರು. ಗೋವಿಂದ, ಆಮಿರ್ ಖಾನ್, ಸಲ್ಮಾನ್ ಖಾನ್, ಅಜಯ್ ದೇವಗನ್, ಅಕ್ಷಯ್ ಕುಮಾರ್ ಅಂತ ಸ್ಟಾರ್‌ಗಳೊಂದಿಗೆ ಸರಿ ಸಮನಾಗಿ ಹೆಜ್ಜೆ ಹಾಕುತ್ತಿದ್ದ ನಟಿಯೀಕೆ. ಇತ್ತೀಚೆಗೆ ಅವರು ವೃತ್ತಿ ಬದುಕಿನ ಆರಂಭದ ದಿನಗಳಲ್ಲಿ ಅನುಭವಿಸಿದ ಕಷ್ಟಗಳನ್ನು ಹೇಳಿಕೊಂಡಿದ್ದಾರೆ.
ಬಾಲಿವುಡ್ ಸಿನಿಮಾಗಳಲ್ಲಿ ನಟಿಸುವಾಗ ಮೂಲ ಸೌಕರ್ಯಗಳೇ ಇಲ್ಲದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಔಟ್ ಡೋರ್ ಶೂಟಿಂಗ್ ಮಾಡುವಾಗ ನಟಿಯರಿಗೆ ವಾಶ್ ರೂಮ್ ಇರುತ್ತಿರಲಿಲ್ಲ. ಬಟ್ಟೆಯನ್ನು ಬದಲಾಯಿಸುವುದಕ್ಕೆ ಚಿಕ್ಕದೊಂದು ಕೊಠಡಿ ಕೂಡ ಇರುತ್ತಿರಲಿಲ್ಲ. ಔಟ್ ಡೋರ್ ಶೂಟಿಂಗ್ ಮಾಡುವ ಎಂತಹ ಕಷ್ಟಗಳನ್ನು ಎದುರಿಸಿದ್ದರು ಅನ್ನೋದನ್ನು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಬಾಲಿವುಡ್ ಅಂತಹ ಶ್ರೀಮಂತ ಚಿತ್ರರಂಗದಲ್ಲಿ ಆಧುನಿಕ ಸೌಕರ್ಯಗಳ ಕೊರತೆ ಇತ್ತು. ಅದರ ನಡುವೆಯೂ ಕೆಲಸ ಮಾಡಬೇಕಾಗಿದ್ದ ಆ ಅನಿವಾರ್ಯತೆಯನ್ನು ಕರೀಷ್ಮಾ ಕಪೂರ್ ವಿವರಿಸಿದ್ದಾರೆ. ಕರಿಷ್ಮಾ ಕಪೂರ್ ಹೇಳಿಕೆಗಳನ್ನು ಹಿಂದಿ ಮಾಧ್ಯಮಗಳು ವರದಿ ಮಾಡಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ಈ ಬಗ್ಗೆ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಅಷ್ಟಕ್ಕೂ ಕರೀಷ್ಮಾ ಕಪೂರ್ ಏನು ಹೇಳಿದ್ದಾರೆಂದು ನೋಡುವುದಾರೇ.
ಕರೀಷ್ಮಾ ಕಪೂರ್ ಲಂಡನ್‌ನ ಲೇಡೀಸ್ ಸ್ಟಡಿ ಗ್ರೂಪ್ ಎನ್ನುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಕರೀಷ್ಮಾ ಕಪೂರ್ ವೃತ್ತಿ ಬದುಕಿನ ಆರಂಭದ ದಿನಗಳನ್ನು ಮೆಲುಕು ಹಾಕಿದ್ದಾರೆ. ಈ ವೇಳೆ ಇಂದಿನ ನಟ-ನಟಿಯರಿಗೆ ಸಿಗುತ್ತಿರುವ ಸೌಲಭ್ಯಗಳ ಬಗ್ಗೆ ಮಾತಾಡಿದ್ದಾರೆ. ಅವರು ವೃತ್ತಿ ಬದುಕನ್ನು ಆರಂಭಿಸಿದ ವೇಳೆ ಶೌಚಾಲಯ, ಬಟ್ಟೆ ಬದಲಿಸಲು ಕೊಠಡಿ ಸಿಗುವುದೇ ದೊಡ್ಡ ಸೌಕರ್ಯವಾಗಿತ್ತು ಎಂದಿದ್ದಾರೆ. ಅಷ್ಟೇ ಅಲ್ಲದೆ ಕೆಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ಲಂಡನ್‌ನ ಲೇಡೀಸ್ ಸ್ಟಡಿ ಗ್ರೂಪ್ ಕಾರ್ಯಕ್ರಮದಲ್ಲಿ "ಇಂದಿನ ಪೀಳಿಗೆಯ ನಟರು ಮೂವರು ಅಡುಗೆ ಮಾಡುವವರು ಹಾಗೂ ವ್ಯಾನಿಟಿ ವ್ಯಾನ್‌ಗಳನ್ನು ಹೊಂದಿದ್ದಾರೆ. ಆದರೆ, ಅಂದು ನಮಗೆ ಸ್ವಚ್ಛವಾದ ಶೌಚಾಲಯ ಸಿಗುವುದೇ ದೊಡ್ಡ ಸೌಕರ್ಯ ಎನಿಸಿತ್ತು. ಯಾವುದಾದರೂ ಸಿನಿಮಾದ ಔಟ್ ಡೋರ್ ಶೂಟಿಂಗ್‌ಗೆ ಹೋದರೆ, ನಾವು ಪೊದೆಗಳ ಹಿಂದೆ ಅವಿತುಕೊಂಡು ಬಟ್ಟೆ ಬದಲಾಯಿಸುತ್ತಿದ್ದೆವು." ಎಂದು ಕರೀಷ್ಮಾ ಕಪೂರ್ ಹೇಳಿದ್ದಾರೆ.

ಹಾಗೇ ಶೌಚಾಲಯ ಬಗ್ಗೆನೂ ಹೇಳಿಕೊಂಡಿದ್ದಾರೆ. ಮೈಲಿಗಟ್ಟಲೆ ನಡೆಯಬೇಕಿತ್ತು. ಆ ಕಡೆಗೆ ಹೊರಟರೆ ಜನರು ಹೇಗೆ ಆಡಿಕೊಳ್ಳುತ್ತಿದ್ದರು ಎಂದು ಈ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ. "ಅಂದಿನ ದಿನಗಳಲ್ಲಿ ಯಾರಾದರೂ ಶೌಚಾಲಯಕ್ಕೆ ಹೋಗಬೇಕೆಂದರೆ, ಮೈಲಿಗಟ್ಟಲೆ ನಡೆಯಬೇಕಿತ್ತು. ಆಗ ಇಡೀ ಚಿತ್ರತಂಡ ಮೇಡಂ ಟಾಯ್ಲೆಟ್‌ಗೆ ಹೋಗುತ್ತಿದ್ದಾರೆಂದು ಪಿಸುಗುಟ್ಟುತ್ತಿತ್ತು. ನಾವು ಅಂತಹ ದಿನಗಳನ್ನು ನೋಡಿದ್ದೇವೆ" ಎಂದು ಕರೀಷ್ಮಾ ಕಪೂರ್ ಹೇಳಿದ್ದಾರೆ.
ಕರೀಷ್ಮಾ ಕಪೂರ್ 90ರ ದಶಕದ ಬಹುಬೇಡಿಕೆಯ ನಟಿಯಾಗಿದ್ದರು. ಬಾಲಿವುಡ್‌ನ ದಿಗ್ಗಜರೊಂದಿಗೆ ನಾಯಕಿಯಾಗಿ ನಟಿಸಿದ್ದರು. ಆದರೆ, ಮದುವೆ ಬಳಿಕ ಕರೀಷ್ಮಾ ಕಪೂರ್ ಸಿನಿಮಾರಂಗದಿಂದ ದೂರವಿದ್ದರು. ಆದರೆ, ಕರೀಷ್ಮಾ ಕಪೂರ್ ದಾಂಪತ್ಯ ಹೆಚ್ಚು ದಿನ ಇರಲಿಲ್ಲ. ವಿಚ್ಛೇದನದ ಬಳಿಕ ಕರೀಷ್ಮಾ ಕಪೂರ್ ಸಿನಿಮಾರಂಗಕ್ಕೆ ಎಂಟ್ರಿ ಕೊಡುವುದಕ್ಕೆ ಮುಂದಾಗಿದ್ದರು. ಆದರೆ, ಆ ಪ್ರಯತ್ನ ಕೈ ಹಿಡಿಯಲಿಲ್ಲ.


Click it and Unblock the Notifications











