ರೋಹಿತ್ ಶೆಟ್ಟಿಗೆ ನಾಚಿಕೆಯಾಗಬೇಕು ಎಂದ ಫ್ಯಾನ್ಸ್‌ಗೆ ಕತ್ರಿನಾ ಕೈಫ್ ಹೇಳಿದ್ದೇನು?
ಎರಡು ದಿನಗಳಿಂದ ಬಾಲಿವುಡ್ ಅಂಗಳದಲ್ಲಿ ರೋಹಿತ್ ಶೆಟ್ಟಿ ಹೆಸರು ತೀವ್ರ ಚರ್ಚೆಯಲ್ಲಿತ್ತು. ಟ್ವಿಟ್ಟರ್ ಹಾಗೂ ಇನ್‌ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ 'ಶೇಮ್ ಆನ್ ಯೂ ರೋಹಿತ್ ಶೆಟ್ಟಿ' ಎಂಬ ಸಾಲುಗಳು ಟ್ರೆಂಡಿಂಗ್‌ನಲ್ಲಿತ್ತು. ಇದಕ್ಕೆ ಕಾರಣ ನಟಿ ಕತ್ರಿಕಾ ಕೈಫ್ ಬಗ್ಗೆ ನಿರ್ದೇಶಕ ರೋಹಿತ್ ಶೆಟ್ಟಿ ಆಡಿದ್ದ ಮಾತುಗಳು.
ಕತ್ರಿಕಾ ಅವರನ್ನು ಕಡೆಗಣಿಸುವಂತೆ ರೋಹಿತ್ ಶೆಟ್ಟಿ ನೀಡಿದ್ದ ಹೇಳಿಕೆಗೆ ಕತ್ರಿನಾ ಅಭಿಮಾನಿಗಳು ಮಾತ್ರವಲ್ಲ, ಅವರ ವಿರೋಧಿಗಳೂ ರೋಹಿತ್ ವಿರುದ್ಧ ಕೆರಳಿದ್ದರು. ಪುರುಷ ಪ್ರಧಾನ ಸಿನಿಮಾ ಜಗತ್ತಿನಲ್ಲಿ ನಟಿಯರಿಗೆ ಇರುವ ಮಹತ್ವ ಕಡಿಮೆ ಎಂದು ಆರೋಪವಿದೆ.
ಹೀಗಿರುವಾಗ ನಿರ್ದೇಶಕರೊಬ್ಬರು ಬಹಿರಂಗವಾಗಿ ಅವರನ್ನು ಅವಹೇಳನೆ ಮಾಡುವಂತೆ ಹೇಳಿರುವುದು ಎಷ್ಟು ಸರಿ? ಇದು ಕಲಾವಿದರಿಗೆ ಮಾಡುವ ಅವಮಾನವಲ್ಲವೇ ಎಂದು ರೊಚ್ಚಿಗೆದ್ದಿದ್ದರು. ಈಗ ಸ್ವತಃ ಕತ್ರಿನಾ ಕೈಫ್ ಸ್ಪಷ್ಟೀಕರಣ ನೀಡಿ, ಅಭಿಮಾನಿಗಳನ್ನು ಸಮಾಧಾನಪಡಿಸಲು ಪ್ರಯತ್ನಿಸಿದ್ದಾರೆ. ಮುಂದೆ ಓದಿ...

ಬಹುತಾರಾಗಣದ ಚಿತ್ರ
ಬಹುತಾರಾಗಣದ 'ಸೂರ್ಯವಂಶಿ' ಚಿತ್ರ ಈ ತಿಂಗಳು ತೆರೆಕಾಣಲಿದೆ. ಮುಖ್ಯ ಪಾತ್ರದಲ್ಲಿ ಅಕ್ಷಯ್ ಕುಮಾರ್, ರಣವೀರ್ ಸಿಂಗ್ ಮತ್ತು ಅಜಯ್ ದೇವಗನ್ ನಟಿಸಿದ್ದು, ಅದರಲ್ಲಿ ಕತ್ರಿನಾ ಕೈಫ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ನಿರ್ದೇಶಕ ರೋಹಿತ್ ಶೆಟ್ಟಿ ಆಡಿದ ಮಾತುಗಳು ಕೆಂಗಣ್ಣಿಗೆ ಗುರಿಯಾಗಿತ್ತು.

ಕಣ್ಣು ಮಿಟುಕಿಸಿದ್ದ ಕತ್ರಿನಾ
ಈ ಚಿತ್ರದಲ್ಲಿ ಬಾಂಬ್ ಬ್ಲಾಸ್ಟ್ ಆಗುವ ದೃಶ್ಯವೊಂದಿದೆ. ಅಕ್ಷಯ್ ಕುಮಾರ್, ರಣವೀರ್ ಸಿಂಗ್ ಮತ್ತು ಅಜಯ್ ದೇವಗನ್ ಅವರ ಜತೆಗೆ ಕತ್ರಿನಾ ನಡೆದುಕೊಂಡು ಬರುವಾಗ ಹಿನ್ನೆಲೆಯಲ್ಲಿ ಭಾರಿ ಸ್ಫೋಟವಾಗುತ್ತದೆ. ಈ ದೃಶ್ಯದ ಚಿತ್ರೀಕರಣದ ವೇಳೆ ಕತ್ರಿನಾ ಕಣ್ಣುಗಳನ್ನು ಮಿಟುಕಿಸಿದ್ದರು. ಸೂಕ್ಷ್ಮವಾಗಿ ಗಮನಿಸಿದರೆ ಅದು ಕಾಣುತ್ತಿತ್ತು ಎಂದು ರೋಹಿತ್ ತಿಳಿಸಿದ್ದರು.
ಈ ದೃಶ್ಯವನ್ನು ನಾಲ್ಕು ಟೇಕ್ ತೆಗೆದುಕೊಂಡು ಚಿತ್ರೀಕರಿಸಿದ ಬಳಿಕ ಕತ್ರಿನಾ, ಕಣ್ಣುಗಳನ್ನು ಮಿಟುಕಿಸಿದ್ದರಿಂದ ದೃಶ್ಯದ ಉದ್ದೇಶಕ್ಕೆ ತೊಂದರೆಯಾಗುತ್ತದೆ. ಹೀಗಾಗಿ ಮತ್ತೊಂದು ಟೇಕ್ ತೆಗೆದುಕೊಳ್ಳೋಣವೇ ಎಂದು ರೋಹಿತ್ ಶೆಟ್ಟಿ ಬಳಿ ಕೇಳಿದ್ದರಂತೆ.

ರೋಹಿತ್ ಶೆಟ್ಟಿ ಹೇಳಿದ್ದೇನು?
'ಕತ್ರಿನಾ, ನಾನು ನಿಮಗೆ ಪ್ರಾಮಾಣಿಕವಾಗಿ ಹೇಳುತ್ತೇನೆ, ನಿಮ್ಮ ಕಡೆಗೆ ಯಾರೂ ನೋಡುವುದಿಲ್ಲ' ಎಂದು ರೋಹಿತ್ ಪ್ರತಿಕ್ರಿಯಿಸಿದರಂತೆ. ಇದರಿಂದ ಕೋಪಗೊಂಡ ಕತ್ರಿನಾ, 'ನೀವು ಇದನ್ನು ನನಗೆ ಹೇಗೆ ಹೇಳುತ್ತೀರಿ?' ಎಂದು ಪ್ರಶ್ನಿಸಿದ್ದರಂತೆ. ಆಗ ರೋಹಿತ್, 'ಬ್ಲಾಸ್ಟ್ ಹಿಂದೆ ಆಗುವಾಗ ಮೂವರು ಸ್ಟಾರ್‌ಗಳು ಮುಂದೆ ಬರುತ್ತಿರುತ್ತಾರೆ. ಯಾರೂ ನಿಮ್ಮನ್ನು ಗಮನಿಸುವುದಿಲ್ಲ ಎಂದೆ. ಆ ಶಾಟ್‌ಅನ್ನು ಹಾಗೆಯೇ ಉಳಿಸಿಕೊಂಡೆ. ಪ್ರೋಮೋದಲ್ಲಿ ಆಕೆ ನಡೆಯುವಾಗ ಕಣ್ಣುಗಳನ್ನು ಮಿಟುಕಿಸುತ್ತಾರೆ. ಆದರೆ ಅದನ್ನು ಯಾರು ನೋಡುತ್ತಾರೆ?' ಎಂದು ಹೇಳಿದ್ದರು.

ತಪ್ಪಾಗಿ ಅರ್ಥೈಸಲಾಗಿದೆ...
ಇದು ಭಾರಿ ವಿವಾದ ಸೃಷ್ಟಿಸಿತ್ತು. 'ರೋಹಿತ್ ನಿಮಗೆ ನಾಚಿಕೆಯಾಗಬೇಕು' ಎಂದು ಅನೇಕರು ಕಿಡಿಕಾರಿದ್ದರು. ಎರಡು ದಿನಗಳ ಬಳಿಕ ಕತ್ರಿನಾ ಅದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. 'ಸ್ನೇಹಿತರೇ, ನಾನು ಸಾಮಾನ್ಯವಾಗಿ ಮಾಧ್ಯಮಗಳ ವರದಿ ಅಥವಾ ಲೇಖನಗಳಿಗೆ ಪ್ರತಿಕ್ರಿಯಿಸುವುದಿಲ್ಲ. ಆದರೆ ಈ ಪ್ರಕರಣದಲ್ಲಿ, ರೋಹಿತ್ ಶೆಟ್ಟಿ ಹೇಳಿರುವ ಮಾತನ್ನು ಬೇರೆ ರೀತಿಯಲ್ಲಿ ಅರ್ಥೈಸಲಾಗಿದೆ ಹಾಗೂ ಸಂಪೂರ್ಣವಾಗಿ ತಪ್ಪಾಗಿ ತಿಳಿಯಲಾಗಿದೆ. 'ಈ ಫ್ರೇಮ್‌ನಲ್ಲಿ ಮೂವರು ನಟರಿದ್ದಾರೆ ಹಾಗೂ ಸ್ಫೋಟ ಸಂಭವಿಸುತ್ತಿರುವುದರಿಂದ ಯಾರೂ ನಿಮ್ಮನ್ನು ನೋಡುವುದಿಲ್ಲ ಎಂದು ರೋಹಿತ್ ಹೇಳಿರುವುದಲ್ಲ' ಎಂದು ಕತ್ರಿನಾ ಇನ್‌ಸ್ಟಾಗ್ರಾಂನಲ್ಲಿ ಬರೆದಿದ್ದಾರೆ.

ರೋಹಿತ್ ಶೆಟ್ಟಿ ಹೇಳಿದ್ದು ಹಾಗಲ್ಲ...
'ಶಾಟ್‌ನಲ್ಲಿ ನಾನು ಕಣ್ಣು ಮಿಟುಕಿಸಿದ್ದನ್ನು ಅವರಿಗೆ ಹೇಳಿದ್ದೆ. ಅದಕ್ಕೆ ರೋಹಿತ್ ಸರ್, ಫ್ರೇಂನಲ್ಲಿ ನಾಲ್ಕು ಜನರು ಜತೆಯಾಗಿ ಇರುತ್ತೀರಿ. ಅಲ್ಲದೆ, ಬಾಂಬ್ ಸ್ಫೋಟವೂ ಆಗುತ್ತದೆ. ಹೀಗಾಗಿ ನೀವು ಕಣ್ಣು ಮಿಟುಕಿಸಿದ್ದನ್ನು ಯಾರೂ ಗಮನಿಸುವುದಿಲ್ಲ ಎಂದಿದ್ದರು. ಇಷ್ಟಾದರೂ ನಾವು ಮತ್ತೊಂದು ಟೇಕ್ ತೆಗೆದುಕೊಂಡಿದ್ದೆವು. ರೋಹಿತ್ ಸರ್ ಜತೆಗೆ ನಾನು ಉತ್ತಮ ಬಾಂಧವ್ಯ ಹಾಗೂ ಒಡನಾಟ ಹೊಂದಿದ್ದೇನೆ. ಸಿನಿಮಾದಿಂದ ನನ್ನ ಪಾತ್ರದವರೆಗೂ ಎಲ್ಲ ಸಂಗತಿಗಳ ಚರ್ಚೆಯನ್ನೂ ನಾನು ಯಾವಾಗಲೂ ಎಂಜಾಯ್ ಮಾಡಿದ್ದೇನೆ. ಮುಖ್ಯವಾಗಿ ಅವರು ನನಗೆ ಸ್ನೇಹಿತನಾಗಿ ನನ್ನ ಜತೆಗೆ ಇದ್ದಾರೆ. ಅವರ ಮಾತನ್ನು ಬೇರೆಯದೇ ಅರ್ಥದಲ್ಲಿ ಗ್ರಹಿಸಲಾಗಿದೆ. ನಿಮಗೆಲ್ಲ ಒಳ್ಳೆಯ ದಿನವಾಗಿರಲಿ ಎಂದು ಆಶಿಸುತ್ತೇನೆ' ಎಂಬುದಾಗಿ ಕತ್ರಿನಾ ತಿಳಿಸಿದ್ದಾರೆ.


Click it and Unblock the Notifications










