ಸಂಜಯ್ ದತ್ ವಿಸ್ಕಿ ಬ್ರ್ಯಾಂಡ್‌ಗೆ ಬಾರಿ ಬೇಡಿಕೆ; 45 ದಿನಗಳಲ್ಲಿ 3 ಲಕ್ಷ ಬಾಟಲಿ ಸೇಲ್.. ಗಳಿಸಿದ್ದೆಷ್ಟು?
ಯಾವುದೇ ಚಿತ್ರರಂಗಕ್ಕೆ ಹೋದರೂ ಅಲ್ಲಿನ ಕಲಾವಿದರು ಒಂದಲ್ಲ ಒಂದು ಬ್ಯುಸಿನೆಸ್‌ಗೆ ಕೈ ಹಾಕಿರುತ್ತಾರೆ. ಅದರಲ್ಲಿ ಬಾಲಿವುಡ್ ಮಂದಿ ಎಲ್ಲರಿಗಿಂತ ಮೇಲು ಎನ್ನಬಹುದು. ಸಲ್ಮಾನ್ ಖಾನ್, ಹೃತಿಕ್ ರೋಷನ್, ಶಾರುಖ್ ಖಾನ್‌ನಿಂದ ಹಿಡಿದು ನಟಿಯರಲ್ಲಿ ಕತ್ರಿನಾ ಕೈಫ್, ದೀಪಿಕಾ ಪಡುಕೋಣೆ ಸೇರಿದಂತೆ ಹಲವು ಮಂದಿ ತಮ್ಮ ಬ್ರ್ಯಾಂಡ್ ಅನ್ನು ಹುಟ್ಟಾಕಿ ಗೆದ್ದಿದ್ದಾರೆ. ಅವರಲ್ಲಿ ಸಂಜಯ್ ದತ್ ಕೂಡ ಸೇರಿಕೊಂಡಿದ್ದಾರೆ.
'ಕೆಜಿಎಫ್ 2'ನ ಅಧೀರ 2023ರಲ್ಲಿ ತನ್ನ ಸ್ವಂತ ವಿಸ್ಕಿ ಬ್ರ್ಯಾಂಡ್ ಅನ್ನು ಶುರು ಮಾಡಿದ್ದರು. ಅವರ ಮಾಲೀಕತ್ವದ 'ಗ್ಲೆನ್‌ವಾಕ್' ಹೆಸರಿನ ಸ್ಕಾಚ್ ವಿಸ್ಕಿ ಈಗ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಸಂಜಯ್ ದತ್ ಒಡೆತನದ ಸ್ಕಾಚ್ ವಿಸ್ಕಿ ಬ್ರ್ಯಾಂಡ್ ಕಳೆದ 45 ದಿನಗಳಲ್ಲಿ ಸುಮಾರು 200mlನ 3 ಲಕ್ಷ ಬಾಟಲಿಗಳನ್ನು ಸೇಲ್ ಮಾಡಿ ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

2024ರ ಡಿಸೆಂಬರ್ ತಿಂಗಳಿಂದ ಸಂಜಯ್ ದತ್ ವಿಸ್ಕಿ ಗ್ಲೆನ್‌ವಾಕ್‌ಗೆ ಮಹಾರಾಷ್ಟ್ರದಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಬಂದಿದೆ. ಮದ್ಯಪಾನ ಪ್ರಿಯರು ಈ ಸ್ಕಾಚ್ ವಿಸ್ಕಿಯನ್ನು ಹೆಚ್ಚು ಇಷ್ಟ ಪಡುವುದಕ್ಕೆ ಶುರು ಮಾಡಿದ್ದಾರೆ. ಹೀಗಾಗಿ ಸಿಕ್ಕಾಪಟ್ಟೆ ಬೇಡಿಕೆ ಬಂದಿದ್ದು ಸಂಜಯ್ ದತ್ ಜೇಬಿಗೆ ಕೋಟಿ ಲೆಕ್ಕದಲ್ಲಿ ಹಣ ಹರಿದು ಬಂದಿದೆ. ಹಾಗಿದ್ದರೆ, 45 ದಿನಗಳಲ್ಲಿ ಸಂಜಯ್ ದತ್ ವಿಸ್ಕಿ ಗಳಿಸಿದ್ದೆಷ್ಟು ಕೋಟಿ? ಮುಂದಿನ ಪ್ಲ್ಯಾನ್ ಏನು ಅನ್ನೋದನ್ನು ನೋಡೋಣ.
45 ದಿನಗಳಲ್ಲಿ ಗಳಿಸಿದ್ದೆಷ್ಟು?
ಸಂಜಯ್ ದತ್ ಅವರ ವಿಸ್ಕಿ ಬ್ರ್ಯಾಂಡ್ ದಿಢೀರನೇ ಸದ್ದು ಮಾಡುವುದಕ್ಕೆ ಶುರು ಮಾಡಿದೆ. ಅಂದ್ಹಾಗೆ 200ml ಗ್ಲೆನ್‌ವಾಕ್ ಸ್ಕಾಚ್ ವಿಸ್ಕಿಯ ಬೆಲೆ 500 ರೂಪಾಯಿ. ಕಳೆದ 45 ದಿನಗಳಲ್ಲಿ 3 ಲಕ್ಷಕ್ಕೂ ಅಧಿಕ ಬಾಟಲ್‌ಗಳನ್ನು ಸೇಲ್ ಮಾಡಿದ್ದು, 15 ಕೋಟಿ ರೂಪಾಯಿ ಸಂಜಯ್ ದತ್ ಅಕೌಂಟ್‌ಗೆ ಸೇರಿದೆ ಎಂದು ಎಕಾನಾಮಿಕ್ ಟೈಮ್ಸ್ ವರದಿ ಮಾಡಿದೆ. ಇದು ಸಂಜಯ್ ದತ್ ವ್ಯಾಪಾರಕ್ಕೆ ದೊಡ್ಡ ಬೂಸ್ಟ್ ಸಿಕ್ಕಿದೆ ಅಂತಲೇ ಹೇಳಬಹುದು.

ಈ ಬ್ರಾಂಡ್ ಹಿಂದಿನ ಕತೆಯೇನು?
ಕಾರ್ಟೆಲ್ ಬ್ರೋಸ್ ಅನ್ನೋ ಪ್ರೀಮಿಯಂ ವಿಸ್ಕಿ ಮೇಕರ್ ಗ್ಲೆನ್‌ವಾಕ್ ವಿಸ್ಕಿಯನ್ನು ಸಿದ್ದಪಡಿಸುತ್ತಿದೆ. 2023 ಜೂನ್‌ನಲ್ಲಿ ಈ ಬ್ರ್ಯಾಂಡ್ ಲಾಂಚ್ ಆಗಿತ್ತು. ಈ ಬ್ಲೆಂಡೆಡ್ ಸ್ಕಾಚ್ ವಿಸ್ಕಿ ಕಳೆದ ಡಿಸೆಂಬರ್‌ನಿಂದ 45 ದಿನಗಳ ಅಂತರದಲ್ಲಿ 2.85 ಲಕ್ಷ ಬಾಟಲ್‌ಗಳನ್ನು ಸೇಲ್ ಮಾಡಿದ್ದು, ಮೊದಲ ಏಳು ತಿಂಗಳಲ್ಲಿ 6 ಲಕ್ಷಕ್ಕೂ ಅಧಿಕ ಬಾಟಲ್‌ಗಳು ಸೇಲ್ ಆಗಿದ್ದವು. ಆದರೆ, ಕಳೆದ 45 ದಿನಗಳಲ್ಲಿ ಶೇ.500ರಷ್ಟು ಸೇಲ್ ಏರಿಕೆಯಾಗಿದೆ ಎನ್ನಲಾಗಿದೆ.
ವಿತರಣೆ ಹೇಗಾಗುತ್ತಿದೆ?
ಸಂಜಯ್ ದತ್ ವಿಸ್ಕಿ ಬ್ರ್ಯಾಂಡ್ ಬಹುತೇಕ ಮಹಾರಾಷ್ಟ್ರಗಳಲ್ಲೇ ಹೆಚ್ಚಾಗಿ ಸೇಲ್ ಆಗುತ್ತಿದೆ. ಅಲ್ಲಿನ ಸುಮಾರು 32 ಜಿಲ್ಲೆಗಳಲ್ಲಿ ಗ್ಲೆನ್‌ವಾಕ್ ವಿಸ್ಕಿ ಲಭ್ಯವಿದೆ. ಸುಮಾರು 1400 ವೈನ್ ಸ್ಟೋರ್ ಹಾಗೂ 3500ಕ್ಕೂ ಅಧಿಕ ಬಾರ್‌ಗಳಲ್ಲಿ ಗ್ಲೆನ್‌ವಾಕ್ ವಿಸ್ಕಿಯನ್ನು ಮಾರಾಟ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಗೋವಾ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಮಧ್ಯಪ್ರದೇಶ್ ಚಂಡೀಘಡ್ ಸೇರಿದಂತೆ ಹಲವೆಡೆ ವಿತರಣೆ ಮಾಡುವ ಆಲೋಚನೆ ಹೊಂದಿದೆ.
ಹೇಗಿದೆ ಬೆಲೆ?
ಗ್ಲೆನ್‌ವಾಕ್ ವಿಸ್ಕಿ ಜನರ ಕೈಗೆಟುಕುವ ಬೆಲೆಯಲ್ಲಿ ಸಿಗುತ್ತಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಒಂದು 200ml ಬಾಟಲ್‌ಗೆ 500 ರೂಪಾಯಿ. ಹಾಗೂ 700ml ಬಾಟಲ್‌ಗೆ 1600 ರೂಪಾಯಿ ಬೆಲೆ ನಿಗದಿ ಪಡಿಸಲಾಗಿದೆ. ಬಾಲಿವುಡ್‌ನ ಹಲವು ಸ್ಟಾರ್ ನಟರಂತೆ ಸಂಜಯ್ ದತ್ ಕೂಡ ಉದ್ಯಮ ಆರಂಭಿಸಿ ಸಕ್ಸಸ್‌ಫುಲ್ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.


Click it and Unblock the Notifications











