ಭಾರತ ರತ್ನ ಲತಾ ಮಂಗೇಶ್ಕರ್‌ಗೆ ಕೊರೊನಾ ಪಾಸಿಟಿವ್: ಖ್ಯಾತ ಗಾಯಕಿಗೆ ಐಸಿಯುನಲ್ಲಿ ಚಿಕಿತ್ಸೆ
ಭಾರತ ರತ್ನ ಲತಾ ಮಂಗೇಶ್ಕರ್ ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದು( ಜನವರಿ 11) ಲತಾ ಮಂಗೇಶ್ಕರ್ ಅವರಿಗೆ ಕೊರೊನಾ ಸೋಂಕು ತಗುಲಿರುವುದು ಧೃಡಪಟ್ಟಿರುವುದ್ದು, ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 92 ವರ್ಷದ ಗಾಯಕಿಗೆ ಕೊರೊನಾ ಸೋಂಕು ಧೃಡಪಟ್ಟಿರುವ ವಿಚಾರ, ಬಾಲವುಡ್ ಮಂದಿಯಲ್ಲಿ ಆತಂಕ ಹೆಚ್ಚಿಸಿದೆ.
'ಭಾರತದ ನೈಂಟಿಗೇಲ್' ಎಂದೇ ಹೆಸರುವಾಸಿಯಾಗಿರುವ ಲತಾ ಮಂಗೇಶ್ಕರ್ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಲತಾ ಮಂಗೇಶ್ಕರ್ ಅವರಿಗೆ ಕೊರೊನಾ ಸೋಂಕು ತಗುಲಿರುವುದನ್ನು ಅವರ ಸಂಬಂಧಿ ರಚನಾ ಮಾಧ್ಯಮಗಳಿಗೆ ಸ್ಪಷ್ಟ ಪಡಿಸಿದ್ದಾರೆ. ಖ್ಯಾತ ಗಾಯಕಿಗೆ ಕೊರೊನಾದ ಲಘು ಲಕ್ಷಣಗಳು ಕಾಣಿಸಿಕೊಂಡಿದ್ದವು. ಹೀಗಾಗಿ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಲತಾ ಮಂಗೇಶ್ಕರ್‌ಗೆ ಐಸಿಯುನಲ್ಲಿ ಚಿಕಿತ್ಸೆ
92 ವರ್ಷದ ಲತಾ ಮಂಗೇಶ್ಕರ್ ಅವರಿಗೆ ವಯೋಸಹಜ ಅನಾರೋಗ್ಯದ ಸಮಸ್ಯೆಗಳಿವೆ. ಹೀಗಾಗಿ ಮುನ್ನಚ್ಚರಿಕೆ ಕ್ರಮವಾಗಿ ವೈದ್ಯರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. " ಲತಾ ಮಂಗೇಶ್ಕರ್ ಅವರಿಗೆ ಆರೋಗ್ಯ ಸಮಸ್ಯೆಗಳಿವೆ. ಅಲ್ಲದೆ ವಯಸ್ಸಾಗಿರುವುದರಿಂದ ವೈದ್ಯರು ಅವರನ್ನು ಎಚ್ಚರಿಕೆಯಿಂದ ಚಿಕಿತ್ಸೆ ನೀಡುತ್ತಿದ್ದಾರೆ." ಎಂದು ಮೂಲಗಳು ತಿಳಿಸಿದೆ. ಸದ್ಯ ಲತಾ ಮಂಗೇಶ್ಕರ್ ಆರೋಗ್ಯ ಸ್ಥಿರವಾಗಿದೆ.

ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು
ಲತಾ ಮಂಗೇಶ್ಕರ್ 2019ರಲ್ಲಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. 2019ರ ನವೆಂಬರ್‌ನಲ್ಲಿ ಉಸಿರಾಟ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಲತಾ ಮಂಗೇಶ್ಕರ್ ಅವರ ಸಹೋದರಿ ವೈರಲ್ ಸೋಂಕಿನಿಂದ ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿಸಿದ್ದರು. 2021ರ ಸೆಪ್ಟೆಂಬರ್ ತಿಂಗಳಲ್ಲಿ ಲತಾ ಮಂಗೇಶ್ಕರ್ 92ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಕೇವಲ ಆಪ್ತರಿಗಷ್ಟೇ ಈ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಭಾರತ ರತ್ನ ಲತಾ ಮಂಗೇಶ್ಕರ್ ಅವರಿಗೆ ಹುಟ್ಟುಹಬ್ಬದ ಶುಭಾಶಯವನ್ನು ಕೋರಿದ್ದರು.

ಕನ್ನಡದಲ್ಲೂ ಹಾಡಿದ್ದಾರೆ ಲತಾ ಮಂಗೇಶ್ಕರ್
ಗಾಯಕಿ ಲತಾ ಮಂಗೇಶ್ಕರ್, ಸೆಪ್ಟೆಂಬರ್ 28, 1929ರಲ್ಲಿ ಜನಿಸಿದರು. ಭಾರತದ ಹಲವು ಭಾಷೆಗಳಲ್ಲಿ ಲತಾ ಮಂಗೇಶ್ಕರ್ ಅವರು ಹಾಡಿದ್ದಾರೆ. ಹಿಂದಿ ಭಾಷೆಯಲ್ಲಿ ಅತೀ ಹೆಚ್ಚು ಹಾಡುಗಳನ್ನು ಹಾಡಿರುವ ಗಾಯಕಿ ಕನ್ನಡದಲ್ಲಿಯೂ ಒಂದು ಹಾಡನ್ನು ಹಾಡಿದ್ದಾರೆ. 1967ರಲ್ಲಿ ತೆರೆಕಂಡ 'ಕ್ರಾಂತಿ ವೀರ ಸಂಗೊಳ್ಳಿರಾಯಣ್ಣ' ಸಿನಿಮಾದಲ್ಲಿ 'ಬೆಳ್ಳನೆ ಬೆಳಗಾಯಿತು' ಎಂಬ ಹಾಡನ್ನು ಹಾಡಿದ್ದಾರೆ. ಇದು ಲತಾ ಮಂಗೇಶ್ಕರ್ ಕನ್ನಡದಲ್ಲಿ ಹಾಡಿದ ಏಕೈಕ ಹಾಡು.

ಲತಾ ಮಂಗೇಶ್ಕರ್‌ಗೆ ದಾದಾ ಸಾಹೇಬ್ ಫಾಲ್ಕೆ
1974ರಲ್ಲಿ ಅತೀ ಹೆಚ್ಚು ಹಾಡುಗಳನ್ನು ಹಾಡಿದ ಗಾಯಕಿ ಎಂಬ ಕಾರಣಕ್ಕೆ ಗಿನ್ನಿಸ್ ಬಕ್‌ನಲ್ಲಿ ಇವರ ಹೆಸರು ದಾಖಲಾಗಿದೆ. 1948 ರಿಂದ 1974ರ ಅವಧಿಯಲ್ಲಿ ಲತಾ ಮಂಗೇಶ್ಕರ್ ಸುಮಾರು 25 ಸಾವಿರ ಹಾಡುಗಳನ್ನು ಹಾಡಿದ್ದಾರೆ. ಲತಾ ಮಂಗೇಶ್ಕರ್ ಅವರು ಸಿನಿಮಾ ರಂಗಕ್ಕೆ ನೀಡಿದ ಸಾಧನೆಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಫ್ರಾನ್ಸ್ ಅತೀ ಉನ್ನತ ನಾಗರೀಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.


Click it and Unblock the Notifications











