"ನನ್ನ ಬಳಿ ಕನ್ನಡ ಹಾಡು ಹಾಡಿಸಲಿಲ್ಲ" ಎಂದಿದ್ದ ಆಶಾ ಭೋಸ್ಲೆ; ಲೆಜೆಂಡರಿ ಗಾಯಕಿ ಹಾಡಿದ 3 ಕನ್ನಡ ಗೀತೆಗಳಿವು
ಭಾರತದ ಸಂಗೀತಲೋಕ ಕಂಡ ಅತ್ಯುತ್ತಮ ಗಾಯಕಿಯರಲ್ಲಿ ಆಶಾ ಭೋಸ್ಲೆ ಹೆಸರು ಮೊದಲ ಸಾಲಿನಲ್ಲಿ ಇರುತ್ತೆ. ಅದರಲ್ಲೂ ಸಿನಿಮಾ ಕ್ಷೇತ್ರದಲ್ಲಿ ಇವರು ಕೊಟ್ಟ ಕೊಡುಗೆ ಅಪಾರ. ಸುಮಾರು 7 ದಶಕಗಳಿಂದ ಹಾಡುತ್ತಾ ಸಂಗೀತ ಪ್ರಿಯರನ್ನು ರಂಜಿಸಿದ ಗಾಯಕಿ ಇವರು. ಸಂಗೀತದ ಕುಟುಂಬದಿಂದಲೇ ಬಂದ ಆಶಾ ಭೋಸ್ಲೆ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರುವುದಕ್ಕೆ ಪಟ್ಟ ಪಾಡು ಅಷ್ಟಿಷ್ಟಲ್ಲ.
ಆಶಾ ಭೋಸ್ಲೆ ಭಾರತದ ಪ್ರಮುಖ ಭಾಷೆಗಳಲ್ಲಿ ಹಾಡಿದ್ದಾರೆ. ಹಿಂದಿಯಲ್ಲಿ ಅತೀ ಹೆಚ್ಚು ಹಾಡುಗಳನ್ನು ಹಾಡಿದ್ದರೂ, ಮರಾಠಿ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಪ್ರಮುಖ ಭಾಷೆಯಲ್ಲಿ ಇವರ ಧ್ವನಿಯನ್ನು ಹೇಳಬಹುದು. ಹಾಗೇ ಕನ್ನಡದಲ್ಲಿಯೂ ಕೇವಲ ಮೂರು ಹಾಡುಗಳನ್ನು ಹಾಡಿದ್ದಾರೆ. ಹಾಗಂತ ಆಶಾ ಭೋಸ್ಲೆಗೆ ಕನ್ನಡ ಹಾಡುಗಳನ್ನು ಹಾಡಬಾರದು ಅಂತೇನು ಇರಲಿಲ್ಲ. ಇನ್ನು ಹೆಚ್ಚು ಹಾಡುಗಳನ್ನು ಹಾಡಬೇಕು ಅನ್ನೋ ಇತ್ತು.

'ಮತ್ತೆ ಮುಂಗಾರು' ಅನ್ನೋ ಸಿನಿಮಾದ ಒಂದು ಹಾಡಿನ ರೆಕಾರ್ಡಿಂಗ್ ವೇಳೆ ಆಶಾ ಭೋಸ್ಲೆ ಅವರೇ ಈ ಆಸೆಯನ್ನು ವ್ಯಕ್ತಪಡಿಸಿದ್ದರು. ಕನ್ನಡ ಚಿತ್ರರಂಗ ಯಾಕೋ ನನ್ನ ಬಳಿಕ ಕನ್ನಡ ಹಾಡುಗಳನ್ನು ಹಾಡಿಸುತ್ತಿಲ್ಲ ಎಂದು ಬೇಸರ ಹೊರ ಹಾಕಿದ್ದರು. ಹಾಗಿದ್ದರೆ, ಆ ವೇಳೆ ಆಶಾ ಭೋಸ್ಲೆ ಏನು ಹೇಳಿದ್ದರು? ಅವರು ಹಾಡದ ಆ ಮೂರು ಕನ್ನಡ ಗೀತೆಗಳು ಯಾವುವು? ತಿಳಿಯುವುದಕ್ಕೆ ಮುಂದೆ ಓದಿ.
ಆಶಾ ಭೋಸ್ಲೆ ಅವರನ್ನು ಹೆಚ್ಚಾಗಿ ಹಿಂದಿ ಹಾಡುಗಳಿಂದಲೇ ಗುರುತಿಸುವುದು ಉಂಟು. ಆದರೆ, ಅವರು ಕೇವಲ ಬಾಲಿವುಡ್ ಸಿನಿಮಾಗಳಿಗಷ್ಟೇ ಸೀಮಿತವಾಗಿರಲಿಲ್ಲ. ತೆಲುಗು, ತಮಿಳು, ಮರಾಠಿ, ಬೆಂಗಾಲಿ ಸೇರಿದಂತೆ ಸುಮಾರು 20ಕ್ಕೂ ಅಧಿಕ ಪ್ರಾದೇಶಿಕ ಭಾಷೆಗಳಲ್ಲಿ ಹಾಡಿದ್ದಾರೆ. ಹಾಗೇ ವಿದೇಶಿ ಭಾಷೆಗಳಲ್ಲೂ ಹಾಡಿ ಹೆಗ್ಗಳಿಕೆ ಇವರದ್ದು. ಈ ಗ್ಯಾಪ್‌ನಲ್ಲಿ ಕನ್ನಡ ಹಾಡುಗಳನ್ನು ಹಾಡಿದ್ದಾರೆ.
ಆ ಮೂರು ಕನ್ನಡ ಹಾಡುಗಳು ಯಾವುವು ಎಂದು ನೋಡುವುದಾರೆ, 1967ರಲ್ಲಿ ತೆರೆಕಂಡಿದ್ದ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಸಿನಿಮಾದ "ಏನೋ ಏನೋ.." ಹಾಡು ಹೆಚ್ಚು ಜನಪ್ರಿಯತೆ ಪಡೆದಿತ್ತು. 1973ರಲ್ಲಿ ತೆರೆಕಂಡ ಡಾ.ರಾಜ್‌ಕುಮಾರ್ ನಟನೆಯ 'ದೂರದ ಬೆಟ್ಟ' ಸಿನಿಮಾದ "ಸವಾಲು ಹಾಕಿ ಸೋಲಿಸಿ.." ಅನ್ನೋ ಹಾಡು. ಹಾಗೇ 3ನೇ ಹಾಡು 2010ರಲ್ಲಿ ತೆರೆಕಂಡ 'ಮತ್ತೆ ಮುಂಗಾರು' ಸಿನಿಮಾದ "ಹೇಳದೆ ಕಾರಣ.." ಎಂಬ ಹಾಡನ್ನು ಹಾಡಿದ್ದಾರೆ.
2010ರಲ್ಲಿ ತೆರೆಕಂಡ 'ಮತ್ತೆ ಮುಂಗಾರು' ಸಿನಿಮಾದ ಪ್ಯಾಥೋ ಹಾಡನ್ನು ಹಾಡುವಾಗ ಆಶಾ ಭೋಸ್ಲೆ ಕನ್ನಡ ಹಾಡುಗಳನ್ನು ಹಾಡುವ ಆಸೆಯನ್ನು ವ್ಯಕ್ತಪಡಿಸಿದ್ದರು. "ಬಹಳ ವರ್ಷಗಳಾಗಿವೆ. ನಾನು ಹೈದರಾಬಾದ್‌ಗೆ ಬಂದು ತೆಲುಗು ಹಾಡನ್ನು ಹಾಡಿದ್ದೆ. ಆದರೆ, ನಾನು ಕನ್ನಡ ಹಾಡನ್ನು ಹಾಡಿರಲಿಲ್ಲ. ಮಲಯಾಳಂನಲ್ಲಿ ಹಾಡಿದ್ದೇನೆ. ತೆಲುಗಿನಲ್ಲಿ ಹಾಡಿದ್ದೇನೆ. ತಮಿಳಿನಲ್ಲಿ ಹಾಡಿದ್ದೇನೆ. ಆದರೆ, ಕನ್ನಡ ಹಾಡಿಲ್ಲ. ಇದು ನನ್ನ ಮೊದಲ ಕನ್ನಡ ಹಾಡು ಅನಿಸುತ್ತಿದೆ" ಎಂದು ಆಶಾ ಭೋಸ್ಲೆ ಹೇಳಿದ್ದರು. ಆ ವೇಳೆ ಅವರಿಗೆ ಈ ಹಿಂದೆ ಹಾಡಿದ ಎರಡು ಹಾಡುಗಳ ನೆನಪು ಇದ್ದಂತೆ ಕಾಣಲಿಲ್ಲ.
ಇಷ್ಟೇ ಅಲ್ಲದೆ " ಕನ್ನಡ ಹಾಡನ್ನು ಯಾರೂ ನನ್ನಿಂದ ಹಾಡಿಸಲಿಲ್ಲ. ಆಶಾ ಭೋಸ್ಲೆ ಅವರಿಗೆ ಕನ್ನಡ ಬರುವುದಿಲ್ಲ ಎಂದು ಅವರು ಅಂದುಕೊಂಡಿದ್ದಾರೆ ಅನಿಸುತ್ತಿದೆ. ಅದರಿಂದ ಅವರು ನನ್ನ ಬಳಿ ಹಾಡಿಸಲಿಲ್ಲ ಅಂತ ಅನಿಸುತ್ತೆ." ಎಂದು ನಗು ನಗುತ್ತಲೇ ಕನ್ನಡದಲ್ಲಿ ಹಾಡುವ ಆಸೆಯನ್ನು ವ್ಯಕ್ತಪಡಿಸಿದ್ದರು.
'ಮತ್ತೆ ಮುಂಗಾರು' ಸಿನಿಮಾದ ಹಾಡಿನ ಬಗ್ಗೆನೂ ಮೆಚ್ಚುಗೆ ವ್ಯಕ್ತಪಡಿಸಿದ್ದರು. "ನನಗೆ ಈ ಸಿನಿಮಾ ಟ್ಯೂನ್ ತುಂಬಾನೇ ಇಷ್ಟ ಆಗಿದೆ. ಹಾಡು ತುಂಬಾನೇ ಇಷ್ಟ ಆಯ್ತು. ನಾನು 65 ವರ್ಷಗಳಿಂದ ಹಾಡುತ್ತಿದ್ದೇನೆ. ನನಗೆ ಬೇರೆ ಹಾಡನ್ನು ಹಾಡಿದ್ದ ನೆನಪಿಲ್ಲ. ಬಹಳ ದಿನಗಳಿಂದ ಈ ಚಿತ್ರರಂಗದಲ್ಲಿ ಇದ್ದಿದ್ದರಿಂದ ನೆನಪಿಲ್ಲ. ಹಾಗಾಗಿ ಇದು ನನ್ನ ಮೊದಲ ಹಾಡು ಆಗಬಹುದು" ಎಂದು ಆಶಾ ಭೋಸ್ಲೆ ಹೇಳಿದ್ದರು.


Click it and Unblock the Notifications