ಲೆಜೆಂಡರಿ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆಗೆ ಹೃದಯ ಸ್ತಂಭನ; ಮುಂಬೈ ಆಸ್ಪತ್ರೆಯಲ್ಲಿ ಚಿಕಿತ್ಸೆ
ಜನಪ್ರಿಯ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದು (ಏಪ್ರಿಲ್ 11) ಹಿರಿಯ ಗಾಯಕಿ ಆಶಾ ಭೋಸ್ಲೆ ಹೃದಯ ಸ್ತಂಭನವಾಗಿದ್ದು, ಈ ಹಿನ್ನೆಲೆಯಲ್ಲಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ವರದಿಯಾಗಿದೆ. ಅವರಿಗೆ ಆಸ್ಪತ್ರೆಯ ತುರ್ತು ವೈದ್ಯಕೀಯ ಸೇವೆಯ ವಿಭಾಗದಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ.
ಆಶಾ ಭೋಸ್ಲೆ ಆರೋಗ್ಯದ ಬಗ್ಗೆ ಅವರ ಕುಟುಂಬದಿಂದ ಯಾವುದೇ ರೀತಿಯ ಅಧಿಕೃತ ಹೇಳಿಕೆ ಇನ್ನೂ ಹೊರ ಬಿದ್ದಿಲ್ಲ. ಈ ಹಿನ್ನೆಲೆಯಲ್ಲಿ ಬಾಲಿವುಡ್ ಮಂದಿ ಹಾಗೂ ಅವರ ಅಭಿಮಾನಿಗಳು ಆತಂಕದಲ್ಲಿದೆ. ಭಾರತೀಯ ಸಂಗೀತ ಲೋಕದ ಲೆಜೆಂಡರಿ ಗಾಯಕಿ ಬೇಗ ಗುಣಮುಖರಾಗುವಂತೆ ಅಭಿಮಾನಿಗಳು ಪ್ರಾರ್ಥನೆ ಮಾಡುತ್ತಿದ್ದಾರೆ.

ಸುಮಾರು 7 ದಶಕಗಳ ಕಾಲ ಬೇರೆ ಬೇರೆ ಭಾಷೆಯ ಸಿನಿಮಾಗಳಿಗೆ ಹಾಡಿರುವ ಆಶಾ ಭೋಸ್ಲೆ, ಸಂಗೀತ ಲೋಕಕ್ಕೆ ಸೂಪರ್ ಹಿಟ್ ಹಾಡುಗಳನ್ನು ಕೊಟ್ಟಿದ್ದಾರೆ. ಭಾರತದ ಹಲವು ಭಾಷೆಗಳಲ್ಲಿ ಆಶಾ ಭೋಸ್ಲೇ ಲೆಕ್ಕವಿಲ್ಲದಷ್ಟು ಹಾಡುಗಳನ್ನು ಹಾಡಿದ್ದಾರೆ. 92 ವರ್ಷದ ಲೆಜೆಂಡರಿ ಗಾಯಕಿಗೆ ದಿಢೀರನೇ ಹೃದಯ ಸ್ತಂಭನ ಆಗಿದ್ದು, ಚಿಕಿತ್ಸೆ ನಡೆಯುತ್ತಿದೆ. ಸದ್ಯ ಆಸ್ಪತ್ರೆ ವೈದ್ಯ ಪ್ರತಿತ್ ಸಂದಾನಿ ಗಾಯಕಿ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಆಶಾ ಭೋಸ್ಲೆ ಕಂಡಿಷನ್ ಬಗ್ಗೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ವೈದ್ಯರು ಕೂಡ ಸಂಪೂರ್ಣ ಮಾಹಿತಿ ನೀಡಿಲ್ಲ. "ಲೆಜೆಂಡರಿ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆಯವರಿಗೆ ಶನಿವಾರ, ಏಪ್ರಿಲ್ 11ರಂದು ಹೃದಯ ಸ್ತಂಭನ ಆಗಿದೆ. ಅವರನ್ನು ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರಿಗೆ ಸದ್ಯಕ್ಕೆ ಎಮರ್ಜೆನ್ಸಿ ಮೆಡಿಕಲ್ ಯುನಿಟ್‌ನಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ" ಎಂದು ಆಸ್ಪತ್ರೆ ವೈದ್ಯ ಪ್ರತಿತ್ ಸಂಬಾನಿ ಹೇಳಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ.
ಇನ್ನೊಂದು ಕಡೆ 92 ವರ್ಷದ ಲೆಜೆಂಡರಿ ಗಾಯಕಿ ಆಶಾ ಭೋಸ್ಲೆ ಅವರ ಆರೋಗ್ಯ ಗಂಭೀರವಾಗಿದೆ ಎಂದು ಲೋಕಮತ್ ವರದಿ ಮಾಡಿದೆ. ಇದು ಅವರ ಅಭಿಮಾನಿಗಳನ್ನು ಮತ್ತಷ್ಟು ಆತಂಕಕ್ಕೆ ತಳ್ಳಿದೆ. ಆದರೆ, ಇದೂವರೆಗೂ ಅವರ ಕುಟುಂಬದಿಂದ ಯಾರೂ ಅವರ ಆರೋಗ್ಯದ ಬಗ್ಗೆ ಇದೂವರೆಗೂ ಯಾವುದೇ ರೀತಿಯ ಹೇಳಿಕೆಯನ್ನು ಕೊಟ್ಟಿಲ್ಲ. ಹಾಗೇ ಆಸ್ಪತ್ರೆಯ ವೈದ್ಯರು ಕೂಡ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದ್ದು, ಇದೂವರೆಗೂ ಹೆಚ್ಚಿನ ಮಾಹಿತಿಯನ್ನು ಹಂಚಿಕೊಂಡಿಲ್ಲ.
ಇನ್ನು ಆಶಾ ಭೋಸ್ಲೇ ಸಂಬಂಧಿ ತಡವಾಗಿ ಸೋಶಿಯಲ್ ಮೀಡಿಯಾ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಎದೆ ಭಾಗದಲ್ಲಿ ಸೋಂಕು ತಗುಲಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಕುಟುಂಬದ ಖಾಸಗಿತನವನ್ನು ಗೌರವಿಸಿ, ಅವರು ಬೇಗ ಗುಣಮುಖರಾಗುವಂತೆ ಪ್ರಾರ್ಥಿಸಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಅಂದ್ಹಾಗೆ ಆಶಾ ಭೋಸ್ಲೆ ಮೊದಲ ಹಾಡನ್ನು ಮರಾಠಿ ಸಿನಿಮಾ 'ಮಾಜಾ ಬಲ್'ಗೆ ಹಾಡಿದ್ದರು. ಇದು 1943ರಲ್ಲಿ ರಿಲೀಸ್ ಆಗಿತ್ತು. ಇದರ ಹಿಂದೇನೆ 1948ರಲ್ಲಿ ತೆರೆಕಂಡ ಚುನರಿಯಾ ಅನ್ನೋ ಸಿನಿಮಾದ "ಸಾವನ್ ಆಯಾ.." ಅನ್ನೋ ಹಾಡು ಹಾಡಿ ಗಮನ ಸೆಳೆದಿದ್ದರು. ಸುಮಾರು 7 ದಶಕಗಳ ಕಾಲ ಹಾಡಿರುವ ಆಶಾ ಭೋಸ್ಲೆ ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಆಶಾ ಭೋಸ್ಲೆ ಇಲ್ಲಿವರೆಗೂ 20 ಭಾರತೀಯ ಭಾಷೆಯ ಜೊತೆಗೆ ವಿದೇಶಿ ಭಾಷೆಯಲ್ಲೂ ಹಾಡಿದ್ದಾರೆ. ಎಸ್‌ಡಿ ಬರ್ಮನ್, ಆರ್‌ಡಿ ಬರ್ಮನ್, ಓಪಿ ನಾಯ್ಯರ್, ಇಳಯರಾಜ, ಬಪ್ಪಿ ಲಹರಿಯಂತಹ ದಿಗ್ಗಜರ ಸಂಗೀತ ನಿರ್ದೇಶನದಲ್ಲಿ ಹಾಡಿದ್ದಾರೆ. ಗಾಯನದ ಜೊತೆ ಜೊತೆಗೆ ನಟನೆ ಕೂಡ ಮಾಡಿದ್ದು, 'ಮಾಯೈ' ಅನ್ನೋ ಮರಾಠಿ ಸಿನಿಮಾದಲ್ಲಿ ನಟಿಸಿದ್ದಾರೆ. ಇವರ ಸಾಧನೆ ಭಾರತದ ಪ್ರತಿಷ್ಠಿತ ಪ್ರಶಸ್ತಿಗಳಾದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ (2000), ಪದ್ಮ ವಿಭೂಷಣ ಪ್ರಶಸ್ತಿ (2008) ಲಭಿಸಿದೆ.


Click it and Unblock the Notifications











