ಮಾಜಿ ಮಿಸ್ ಇಂಡಿಯಾ ಸೆಲೀನಾ ಜೇಟ್ಲಿ ಪತಿ ವಿರುದ್ಧ FIR; ಮುಂಬೈ ಪೊಲೀಸರಿಂದ LOC ಜಾರಿ
ನಟಿ ಸೆಲೀನಾ ಜೇಟ್ಲಿ ಮತ್ತೆ ಸುದ್ದಿಯಲ್ಲಿ ಇದ್ದಾರೆ. ತಮ್ಮ ಪತಿ ವಿರುದ್ಧ ಪೀಟರ್ ಹಾಗ್ ವಿರುದ್ಧ ಸೆಲೀನಾ ಜೇಟ್ಲಿ ದೂರನ್ನು ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ ಮುಂಬೈ ಪೊಲೀಸರು ಭಾರತೀಯ ನ್ಯಾಯ ಸಂಹಿತೆ 2023ರ ಅಡಿಯಲ್ಲಿ ವಿವಿಧ ಸೆಕ್ಷನ್‌ನಲ್ಲಿ ಎಫ್‌ಐಆರ್ ಅನ್ನು ದಾಖಲಿಸಿದ್ದಾರೆ.
ಸೆಲೀನಾ ಜೇಟ್ಲಿ ತಮ್ಮ ಪತಿ ಆಸ್ಟ್ರಿಯನ್ ಮೂಲದ ಪ್ರಜೆ ಪೀಟರ್ ಹಾಗ್ ವಿರುದ್ಧ ಕ್ರೂರತೆ, ದೈಹಿಕ ಹಲ್ಲೆ, ಬೆದರಿಕೆ ಹಾಗೂ ನಿರಂತರ ಕಿರುಕುಳ ನೀಡಿರುವ ಬಗ್ಗೆ ಆರೋಪ ಮಾಡಿದ್ದರು. ಈ ಸಂಬಂಧ ಮುಂಬೈ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲು ಮಾಡಿದ್ದರು. ಸೆಲೀನಾ ಜೇಟ್ಲಿ ಪತಿ ದೂರಿನ ಅನ್ವಯ ತನಿಖೆಗೆ ಸಹಕರಿಸದ ಹಿನ್ನೆಲೆಯಲ್ಲಿ ಪೀಟರ್ ಹಾಗ್ ವಿರುದ್ಧ ಮುಂಬೈ ಪೊಲೀಸರು ಲುಕ್ ಔಟ್ ಸುತ್ತೋಲೆ (LOC) ಜಾರಿ ಮಾಡಿದ್ದಾರೆಂದು ಇಂಡಿಯಾ ಟುಡೇ ವರದಿ ಮಾಡಿದೆ.

2003ರಿಂದ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಸೆಲೀನಾ ಜೇಟ್ಲಿ ಬಾಲಿವುಡ್ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಹಿಂದಿ ಜೊತೆಗೆ ತೆಲುಗು ಹಾಗೂ ಕನ್ನಡ ಸಿನಿಮಾದಲ್ಲೂ ನಟಿಸಿದ್ದಾರೆ. ಉಪೇಂದ್ರ ನಟಿಸಿದ್ದ 'ಶ್ರೀಮತಿ' ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ತಮ್ಮ ವೃತ್ತಿ ಬದುಕಿನ ಯಶಸ್ಸಿನಲ್ಲಿ ಇರುವಾಗಲೇ ಸೆಲೀನಾ ಜೇಟ್ಲಿ ಆಸ್ಟ್ರೀಯಾದ ಹೋಟೆಲ್ ಉದ್ಯಮಿ ಪೀಟರ್ ಹಾಗ್ ಅವರನ್ನು ವಿವಾಹವಾಗಿದ್ದರು. ಈ ದಂಪತಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದರು. ಅದರಲ್ಲಿ ಒಂದು ಮಗು ಅನಾರೋಗ್ಯದಿಂದ ಸಾವನ್ನಪ್ಪಿತ್ತು. ಇತ್ತೀಚೆಗೆ ಇವರಿಬ್ಬರ ಸಂಬಂಧದದಲ್ಲಿ ಬಿರುಕು ಬಿಟ್ಟಿದ್ದು, ಸೆಲೀನಾ ಜೇಟ್ಲಿ ತಮ್ಮ ಪತಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಮಾಜಿ ಮಿಸ್ ಇಂಡಿಯಾ ಹಾಗೂ ಮಿಸ್ ಯೂನಿವರ್ಸ್ ರನ್ನರ್-ಅಪ್ ಆಗಿರುವ ಸೆಲೀನಾ ಜೇಟ್ಲಿಗೆ ನಟನೆ ಜೊತೆಗೆ ಸಾಮಾಜಿಕ ಕೆಲಸಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಆದರೆ, ಇತ್ತೀಚೆಗೆ ತಮ್ಮ ವೈಯಕ್ತಿಕ ವಿಚಾರದ ಬಗ್ಗೆನೇ ಸುದ್ದಿಯಲ್ಲಿ ಇದ್ದಾರೆ. ಸೆಲೀನಾ ಜೇಟ್ಲಿ ನೀಡಿದ ದೂರಿನ ಮೇರೆಗೆ ಮುಂಬೈ ಪೊಲೀಸರು 2005ರ ಮಹಿಳೆಯರ ಮೇಲಿನ ಕೌಟುಂಬಿಕ ಹಿಂಸಾಚಾರ ಕಾಯಿದೆ ಅಡಿ ಪೀಟರ್ ಹಾಗ್ ವಿರುದ್ಧ ಕ್ರಿಮಿನಲ್ ಕೇಸ್ ಅನ್ನು ದಾಖಲಿಸಿದ್ದಾರೆ.
ಇದೀಗ ಪೀಟರ್ ಹಾಗ್ ಮೇಲಿನ ಆರೋಪದ ವಿರುದ್ಧ ತನಿಖೆ ಆರಂಭ ಆಗಿದೆ. ಭಾರತೀಯ ನ್ಯಾಯ ಸಂಹಿತೆ, 2023ರ ಸೆಕ್ಷನ್‌ಗಳಾದ 85, 115(2), 351(2) ಮತ್ತು 352ರ ಅಡಿಯಲ್ಲಿ ಪೀಟರ್ ಹಾಗ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಆದರೆ, ಪೊಲೀಸರು ನಡೆಸುತ್ತಿರುವ ತನಿಖೆಗೆ ಪೀಟರ್ ಹಾಗ್ ಸಹಕಾರ ನೀಡದೇ ಇರುವುದರಿಂದ ಮುಂಬೈ ಪೊಲೀಸ್ ಈ ಪ್ರಕರಣವನ್ನು ಮತ್ತಷ್ಟು ಗಂಭೀರವಾಗಿ ತೆಗೆದುಕೊಂಡಿದ್ದಾರೆ.

ಸೆಲೀನಾ ಜೇಟ್ಲಿ ಹಾಗೂ ಪೀಟರ್ ಹಾಗ್ ನಡುವೆ ಕಳೆದ ಕೆಲವು ತಿಂಗಳಿಂದ ಕಿತ್ತಾಟ ನಡೆಯುತ್ತಿದೆ. ಕಳೆದ ವರ್ಷ ಅಂದರೆ, 2025ರಲ್ಲಿ ಪತಿ ಪೀಟರ್ ಹಾಗ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ಅದೇ ವರ್ಷ ನವೆಂಬರ್ ತಿಂಗಳಲ್ಲಿ ಕೌಟುಂಬಿಕ ಹಿಂಸಾಚಾರ ಕಾಯಿದೆ ಅಡಿಯಲ್ಲಿ ದೂರನ್ನು ದಾಖಲಿಸಿದ್ದರು. ಇಲ್ಲಿಂದ ಇಬ್ಬರ ನಡುವಿನ ದಾಂಪತ್ಯ ಕಿತ್ತಾಟ ಜಗತ್ತಿಗೆ ಜಾಹೀರಾಗಿದೆ.
ಇಬ್ಬರ ಪ್ರಕರಣ ಬೆಳಕಿಗೆ ಬಂದಾಗ, ಪಿಟಿಐ ವರದಿಯೊಂದನ್ನು ಪ್ರಕಟಿಸಿತ್ತು. ಅದರ ಪ್ರಕಾರ ಸೆಲೀನಾ ಜೇಟ್ಲಿ ತಮ್ಮ ಪತಿ ಪೀಟರ್ ಹಾಗ್ ಅವರಿಂದ ತಿಂಗಳ ನಿರ್ವಹಣೆಗಾಗಿ ಮಾಸಿಕ ವೆಚ್ಚ ಅಂತ 10 ಲಕ್ಷ ರೂಪಾಯಿ ಹಾಗೂ 50 ಕೋಟಿ ರೂಪಾಯಿ ಪರಿಹಾರದ ಡಿಮ್ಯಾಂಡ್ ಮಾಡಿದ್ದಾರೆ. ಇದರೊಂದಿಗೆ ಸೆಲೀನಾ ಜೇಟ್ಲಿ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ತಮ್ಮ ಮಕ್ಕಳನ್ನು ಭೇಟಿ ಮಾಡುವುದಕ್ಕೆ ಪತಿ ಪೀಟರ್ ಹಾಗ್ ಅಡ್ಡಿ ಪಡಿಸುತ್ತಿದ್ದಾರೆ ಎಂದು ದೂರಿದ್ದರು.
ಇತ್ತೀಚೆಗಿನ ವರದಿ ಪ್ರಕಾರ, ಸೆಲೀನಾ ಜೇಟ್ಲಿ ಮಕ್ಕಳು ಸದ್ಯ ಆಸ್ಟ್ರಿಯಾದಲ್ಲಿ ಪತಿ ಪೀಟರ್ ಹಾಗ್ ಅವರ ಕಸ್ಟಡಿಯಲ್ಲಿದ್ದಾರೆ. ಅವರ ಮಕ್ಕಳನ್ನು ನೋಡುವುದಕ್ಕೆ ಯಾವುದೇ ನಿಯಂತ್ರಣ ಹಾಕದೇ ವಿಡಿಯೋ ಕಾಲ್ ಹಾಗೂ ಫೋನ್‌ಕಾಲ್ ಮೂಲಕ ಸಂಪರ್ಕ ಕಲ್ಪಿಸುವಂತೆ ಅವಕಾಶಕ್ಕಾಗಿ ಕೋರ್ಟ್‌ನಲ್ಲಿ ಸೆಲೀನಾ ಜೇಟ್ಲಿ ಮನವಿ ಮಾಡಿಕೊಂಡಿದ್ದಾರೆಂದು ವರದಿಯಾಗಿದೆ.


Click it and Unblock the Notifications
