ಮೈಸೂರಿನಲ್ಲಿ ಅಜಯ್ ದೇವಗನ್ ಚಿತ್ರಕ್ಕೆ ಬ್ರೇಕ್; 'ಮೈದಾನ್' ಬಿಡುಗಡೆಗೆ ಕೋರ್ಟ್ ತಜೆಯಾಜ್ಞೆ! ಮುಂದೇನು?
ಮೈಸೂರು: ಏಪ್ರಿಲ್ 10ಕ್ಕೆ ದೇಶದಾದ್ಯಂತ ಬಿಡುಗಡೆಯಾಗಲಿದ್ದ ಬಾಲಿವುಡ್ ಬಿಗ್ ಸಿನಿಮಾ 'ಮೈದಾನ್'ಗೆ ಮೈಸೂರು ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಮೈಸೂರಿನ ಪ್ರಿನ್ಸಿಪಾಲ್ ಡಿಸ್ಟ್ರಿಕ್ಟ್ ಮತ್ತು ಸೆಶನ್ಸ್ ಕೋರ್ಟ್ ಈ ಕುರಿತು ಆಜ್ಞೆ ಹೊರಡಿಸಿದೆ.
ಮೈಸೂರಿನ ಅನಿಲ್ ಕುಮಾರ್ ಎನ್ನುವ ಸಿನಿಮಾ ಕತೆಗಾರ ದಾಖಲಿಸಿದ್ದ ದೂರಿನ ಅನ್ವಯ ಈ ತೀರ್ಪು ಹೊರಬಿದ್ದಿದೆ. ಅಜಯ್ ದೇವಗನ್ ಮುಖ್ಯ ಪಾತ್ರದಲ್ಲಿ ನಟಿಸಿರುವ 'ಮೈದಾನ್' ಸಿನಿಮಾವನ್ನು ಬೋನಿ ಕಪೂರ್ ನಿರ್ಮಾಣ ಮಾಡಿದ್ದಾರೆ.

ಇದು ನನ್ನ ಕಥೆ, ನಾನೇ ಬರೆದ ಕಥೆ ಎಂದು ಬರಹಗಾರ ಅನಿಲ್ ಕುಮಾರ್ ದೂರಿನಲ್ಲಿ ದಾಖಲಿಸಿದ್ದಾರೆ. 1950ರಲ್ಲಿ ಫೀಫಾ ವರ್ಲ್ಡ್ ಕಪ್‌ನಿಂದ ಉಚ್ಛಾಟಿಸಲ್ಪಟ್ಟ ಭಾರತದ ಫುಟ್ಬಾಲ್ ಟೀಂ ಕುರಿತಾದ ಈ ಕಥೆಯನ್ನು ತಾನು 2018ರಲ್ಲಿ ಲಿಂಕ್ಡ್ ಇನ್‌ನಲ್ಲಿ ಅಪ್ಲೋಡ್ ಮಾಡಿದ್ದೆ. ಅಷ್ಟೇ ಅಲ್ಲ, 2019ರಲ್ಲಿ ಸ್ಕ್ರೀನ್ ರೈಟರ್ಸ್ ಅಸೋಸಿಯೇಶನ್‌ನಲ್ಲಿ ಈ ಬಗ್ಗೆ ಕಥೆಯ ಸಾರ ಮತ್ತು ಶೀರ್ಷಿಕೆಯನ್ನೂ ರಿಜಿಸ್ಟರ್ ಮಾಡಿಸಿದ್ದೆ. ಆದರೆ, ಈಗ ನನ್ನ ಕಥೆಯನ್ನೇ ಬಳಸಿಕೊಂಡು ಬಾಲಿವುಡ್‌ನಲ್ಲಿ 'ಮೈದಾನ್' ಸಿನಿಮಾ ಮಾಡಿದ್ದಾರೆ ಎನ್ನುವ ಆರೋಪ ಇವರದ್ದು.
ಇದಲ್ಲದೇ ತಾನು ಈಗಾಗಲೇ ಈ ಕತೆಯ ಕುರಿತಾಗಿ ಶಾರುಖ್ ಖಾನ್, ಆಮಿರ್ ಖಾನ್, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್ ಮತ್ತು ಅಜಯ್ ದೇವಗನ್ ಜೊತೆಗೂ ಚರ್ಚೆ ಮಾಡಿದ್ದೆ ಎಂದೂ ಹೇಳಿಕೊಂಡಿದ್ದಾರೆ.
ಶೂ ಇಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಫುಟ್ಬಾಲ್ ಆಡಲು ಹೋಗುವ ಭಾರತದ ಆಟಗಾರರ ಕಥೆ ಇದರ ಮೂಲವಸ್ತು ಎನ್ನಲಾಗಿದೆ. ಈಗ ನಡೆದಿರುವುದು ಕೃತಿಚೌರ್ಯ, ಮೈಸೂರು ಕೋರ್ಟ್ ನನಗೆ ನ್ಯಾಯ ನೀಡಿದೆ ಎಂದು ಅನಿಲ್ ಕುಮಾರ್ ಹೇಳಿದ್ದಾರೆ. ಅಂದ ಹಾಗೆ 'ಮೈದಾನ್' ಚಿತ್ರಕ್ಕೆ ಸಾಲು ಸಾಲು ವಿವಾದಗಳು ಎದುರಾಗುತ್ತಲೇ ಇದೆ.
2022ರಲ್ಲಿ ಎಸ್ ಎಸ್ ರಾಜಮೌಳಿಯ ಆರ್ ಆರ್ ಆರ್ ಸಿನಿಮಾ ಬಿಡುಗಡೆಯಾಗುವಾಗ್ಲೇ ಮೈದಾನ್ ಕೂಡಾ ಬಿಡುಗಡೆಯಾಗುತ್ತದೆ ಎಂದು ನಿರ್ಧಾರವಾಗಿತ್ತು. ಆರ್ ಆರ್ ಆರ್ ಚಿತ್ರದಲ್ಲಿ ಅಜಯ್ ದೇವಗನ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. 'ಮೈದಾನ್'ನಲ್ಲಿ ಅವರೇ ನಾಯಕ. ಎರಡೂ ಚಿತ್ರಗಳು ಬಾಕ್ಸಾಫೀಸಲ್ಲಿ ಮುಖಾಮುಖಿ ಆಗಬಾರದು ಎನ್ನುವ ಉದ್ದೇಶದಿಂದ ಕೆಂಡಾಮಂಡಲರಾಗಿದ್ದ 'ಮೈದಾನ್' ನಿರ್ಮಾಪಕ ಬೋನಿ ಕಪೂರ್ ಮತ್ತು ಆರ್ ಆರ್ ಆರ್ ತಂಡ ಕೂತು ಮಾತನಾಡಿ ಒಂದು ಒಳ ಒಪ್ಪಂದಕ್ಕೆ ಬಂದು ವಿಷಯ ಇತ್ಯರ್ಥ ಮಾಡಿಕೊಂಡಿದ್ದವು.
ಈಗ 2024ರ ಈದ್‌ಗೆ ಬಿಡುಗಡೆ ಮಾಡುವುದು ಎಂದು ನಿರ್ಧಾರ ಮಾಡಿ ಘೋಷಣೆ ಮಾಡಿದ ನಂತರವೂ ಒಂದಷ್ಟು ವಿವಾದಗಳನ್ನು 'ಮೈದಾನ್' ಎದುರಿಸಬೇಕಾಯ್ತು. ಆದರೆ, ಈ ಸ್ಟೇ ವಿಚಾರ ಮಾತ್ರ ನಾಳಿನೇ ಬಿಡುಗಡೆ ಇರೋದ್ರಿಂದ ಚಿತ್ರತಂಡ ಇದನ್ನು ಹೇಗೆ ಎದುರಿಸುತ್ತದೆ ಎನ್ನುವ ಕುತೂಹಲವಂತೂ ಇದೆ. ಈಗಾಗಲೇ ಮುಂಬೈನಲ್ಲಿ ಚಿತ್ರದ ಪ್ರೀಮಿಯರ್ ನಡೆದಿದ್ದು, ನೋಡಿದವರೆಲ್ಲರೂ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ನಾಳಿನ ಬಿಡುಗಡೆಯ ಬಗ್ಗೆ ಚಿತ್ರತಂಡ ಇನ್ನೂ ಯಾವುದೇ ಕ್ಲಾರಿಟಿ ಕೊಡದೇ ಇರೋದ್ರಿಂದ ಗೊಂದಲವಂತೂ ಇದ್ದೇ ಇದೆ.


Click it and Unblock the Notifications











