'ನಾಟು ನಾಟು' ಆಸ್ಕರ್ ಗೆದ್ದ ಬೆನ್ನಲೇ ಶಾರುಖ್ ಹಳೆ ಟ್ವೀಟ್ ವೈರಲ್: ಅದರಲ್ಲಿ ಅಂತಹದ್ದೇನಿತ್ತು?
ಇಂದು (ಮಾರ್ಚ್ 13) ಭಾರತವೇ ಹೆಮ್ಮೆ ಪಡುವ ದಿನ. ಭಾರತಕ್ಕೆ ಎರಡು ಆಸ್ಕರ್ ಪ್ರಶಸ್ತಿಗಳು ಲಭಿಸಿವೆ. ಈ ಸಂಭ್ರಮ ಸಿನಿಪ್ರಿಯರಲ್ಲಿ ಮುಗಿಲು ಮುಟ್ಟಿದೆ. ಅದರಲ್ಲೂ ರಾಜಮೌಳಿ ನಿರ್ದೇಶಿಸಿದ RRR ಸಿನಿಮಾದ "ನಾಟು ನಾಟು.." ಹಾಡು ತೀವ್ರ ಪೈಪೋಟಿ ಮಧ್ಯೆ ಪ್ರಶಸ್ತಿಯನ್ನು ಗೆದ್ದಿದೆ. ವಿಶ್ವದಾದ್ಯಂತ ಇಡೀ ತಂಡಕ್ಕೆ ಶುಭಾಶಯಗಳ ಸುರಿಮಳೆಯೇ ಹರಿದು ಬರುತ್ತಿದೆ.
ಈ ಮಧ್ಯೆ ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್ ಹಳೆಯ ಟ್ವೀಟ್ ಒಂದು ವೈರಲ್ ಆಗುತ್ತಿದೆ. ಟಾಲಿವುಡ್ ಮೆಗಾಸ್ಟಾರ್ ಅನ್ನು ಟ್ಯಾಗ್ ಮಾಡಿ ಕಿಂಗ್ ಖಾನ್ ಟ್ವೀಟ್ ಮಾಡಿದ್ದರು. ಆಗ RRR ಸಿನಿಮಾದ "ನಾಟು ನಾಟು" ಹಾಡು ಬೆಸ್ಟ್ ಒರಿಜಿನಲ್ ಕ್ಯಾಟಗರಿಯಲ್ಲಿ ನಾಮ ನಿರ್ದೇಶನಗೊಂಡಿತ್ತು. ಆಗ ರಾಮ್ ಚರಣ್‌ಗೆ ಶಾರುಖ್ ಮಾಡಿದ್ಧ ಟ್ವೀಟ್ ಅನ್ನೇ ಇಟ್ಟುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡಲಾಗುತ್ತಿದೆ.

ಅಂದು ಶಾರುಖ್ ಮಾಡಿದ ಟ್ವೀಟ್ ಏನು?
ಶಾರುಖ್ ಖಾನ್ ಇತ್ತೀಚೆಗೆ ಬಾಲಿವುಡ್‌ನಲ್ಲಿ ಮತ್ತೆ ಸೂಪರ್‌ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಬಾಲಿವುಡ್‌ನಲ್ಲಿ 'ಬಾಹುಬಲಿ 2' ಮೂಲಕ ರಾಜಮೌಳಿಯೇ ಬರೆದಿದ್ದ ದಾಖಲೆಯನ್ನು ಶಾರುಖ್ ಖಾನ್ ಸಿನಿಮಾ 'ಪಠಾಣ್' ಅಳಿಸಿ ಹಾಕಿದೆ. ಸದ್ಯ ಕಿಂಗ್ ಖಾನ್ ಮತ್ತೆ ಯಶಸ್ಸಿನ ತುತ್ತ ತುದಿಯಲ್ಲಿದ್ದಾರೆ. ಆಸ್ಕರ್ ಸಂಭ್ರಮದ ವೇಳೆ ಶಾರುಖ್ ಟಾಲಿವುಡ್ ನಟ ರಾಮ್ ಚರಣ್‌ಗೆ ಮಾಡಿದ್ದ ಹಳೇ ಟ್ವೀಟ್ ವೈರಲ್ ಆಗುತ್ತಿದೆ.
"ನಾಟು ನಾಟು" ಆಸ್ಕರ್ ಗೆಲ್ಲಬೇಕು ಅಂತ ವಿಶ್ವದಾದ್ಯಂತ ಇರುವ ಭಾರತೀಯರು ಆಸೆ ಪಟ್ಟಿದ್ದರು. ಆಗ ಶಾರುಖ್ ಖಾನ್ ಕೂಡ ಈ ಹಾಡಿನ ಬಗ್ಗೆನೇ ಟ್ವೀಟ್ ಮಾಡಿದ್ದರು. RRR ಆಸ್ಕರ್ ಗೆದ್ದು ಬರುತ್ತೆ ಅನ್ನೋ ನಂಬಿಕೆಯಲ್ಲಿ ಟ್ವೀಟ್ ಮಾಡಿದ್ದರು. ಅಲ್ಲದೇ ರಾಜ್ ಚರಣ್ ಬಳಿಕ ಒಂದು ಮನವಿ ಕೂಡ ಮಾಡಿಕೊಂಡಿದ್ದರು. ಅದೇ ಟ್ವೀಟ್ ಈಗ ಮತ್ತೆ ವೈರಲ್ ಆಗುತ್ತಿದೆ.

ರಾಮ್ ಚರಣ್ ಬಳಿಕ ಶಾರುಖ್ ಇಟ್ಟಿದ್ದ ಬೇಡಿಕೆ ಏನು?
ಶಾರುಖ್ ಖಾನ್ ಟ್ವೀಟ್ ಹೇಗಿತ್ತು ಅಂದ್ರೆ, RRR ಸಿನಿಮಾ ಆಸ್ಕರ್ ಗೆದ್ದು ಬಂದೇ ಬರುತ್ತೆ ಅನ್ನೋ ಭವಿಷ್ಯವನ್ನು ನುಡಿದಂತೆ ಇತ್ತು. " ನನ್ನ ಮೆಗಾ ಪವರ್‌ಸ್ಟಾರ್ ರಾಮ್‌ಚರಣ್‌ಗೆ ಧನ್ಯವಾದಗಳು. ನಿಮ್ಮ RRR ಟೀಮ್ ಆಸ್ಕರ್ ಅನ್ನು ಭಾರತಕ್ಕೆ ತಂದಾಗ, ದಯವಿಟ್ಟು ನನಗೆ ಅದನ್ನು ಸ್ಪರ್ಶಿಸಲು ಅವಕಾಶ ಕೊಡು" ಎಂದು ಟ್ವೀಟ್ ಮಾಡಿದ್ದರು. ಅಲ್ಲದೆ ಇಂಗ್ಲಿಷ್ ಅಷ್ಟೇ ಅಲ್ಲದೆ ತೆಲುಗಿನಲ್ಲೂ ಟ್ವೀಟ್ ಮಾಡಿದ್ದರು. ಇದೇ ಟ್ವೀಟ್ ಈಗ ವೈರಲ್ ಆಗುತ್ತಿದೆ.
ಶಾರುಖ್ ಖಾನ್ ನುಡಿದಂತೆ RRR ಸಿನಿಮಾದ "ನಾಟು ನಾಟು.." ಸಾಂಗ್ ಆಸ್ಕರ್ ಪ್ರಶಸ್ತಿಯನ್ನು ಗೆದ್ದಿದೆ. ವಿಶ್ವದ ಮೂಲೆ ಮೂಲೆಯಿಂದ ಸಿನಿಮಾ ಮೆಚ್ಚುಗೆ ಮಾತುಗಳು ಕೇಳಿ ಬರುತ್ತಿವೆ. ಈ ಬೆನ್ನಲ್ಲೇ ಶಾರುಖ್ ಖಾನ್ RRR ಹಾಗೂ "ಎಲಿಫೆಂಟ್ ವಿಸ್ಪರರ್ಸ್" ವಿಶ್ ಮಾಡಿ ಟ್ವೀಟ್ ಮಾಡಿದ್ದಾರೆ.
ಆಸ್ಕರ್ ಗೆದ್ದವರಿಗೆ ಶಾರುಖ್ ಖಾನ್ ಹೇಳಿದ್ದೇನು?
RRR ಸಿನಿಮಾದ "ನಾಟು ನಾಟು.." ಹಾಗೂ 'ಎಲಿಫೆಂಟ್ ವಿಸ್ಪರರ್ಸ್' ಆಸ್ಕರ್ ಪ್ರಶಸ್ತಿಯನ್ನು ಗೆಲ್ಲುತ್ತಿದ್ದಂತೆ ಶಾರುಖ್ ಖಾನ್ ಟ್ವೀಟ್ ಮೂಲಕ ವಿಶ್ ಮಾಡಿದ್ದಾರೆ. " ಎಲಿಫೆಂಟ್ ವಿಸ್ಪರರ್ಸ್‌ಗಾಗಿ ಗುನೀತ್ ಮೊಂಗ, ಕಾರ್ತಿಕಿ ಗೊನ್ಸಾಲ್ವಿನ್‌ಗೆ ಬಿಗಿಯಾದ ಅಪ್ಪುಗೆ. ಹಾಗೇ ಎಂಎಂ ಕೀರವಾಣಿ, ಚಂದ್ರಭೋಸ್ ಅವರಿಗೆ ರಾಜಮೌಳಿ, ರಾಮ್ ಚರಣ್, ಜೂ.ಎನ್‌ಟಿಆರ್‌ಗೆ ನೀವು ಸಾಧಿಸಿ ತೋರಿಸಿದ್ದಕ್ಕೆ ಧನ್ಯವಾದಗಳು. ಎರಡೂ ಆಸ್ಕರ್ ಪ್ರಶಸ್ತಿಗಳು ನಿಜಕ್ಕೂ ಸ್ಪೂರ್ತಿದಾಯಕ." ಎಂದು ಶಾರುಖ್ ಖಾನ್ ಟ್ವೀಟ್ ಮಾಡಿದ್ದಾರೆ.
'ಪಠಾಣ್' ಸಕ್ಸಸ್ ಖುಷಿಯಲ್ಲಿರೋ ಶಾರುಖ್ ಖಾನ್ 'ಜವಾನ್' ಹಾಗೂ 'ಡಂಕಿ' ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಈ ಎರಡೂ ಸಿನಿಮಾಗಳ ಮೇಲೆ ನಿರೀಕ್ಷೆ ಹೆಚ್ಚಾಗಿದ್ದು, ಬಾಕ್ಸಾಫೀಸ್‌ನಲ್ಲಿ ಯಾವ ಮಟ್ಟಿಗೆ ಸದ್ದು ಮಾಡುತ್ತೆ? ಅನ್ನೋ ಕುತೂಹಲವಿದೆ.


Click it and Unblock the Notifications











