National Cinema Day: 99 ರೂಪಾಯಿಗೆ ಟಿಕೆಟ್.. 'ಜವಾನ್' ಸಿನಿಮಾದ 2 ಲಕ್ಷ ಟಿಕೆಟ್ ಸೋಲ್ಡ್.. ಎಲ್ಲೆಲ್ಲಿ ಹೇಗಿದೆ ರೆಸ್ಪಾನ್ಸ್?
ಇಂದು(ಅಕ್ಟೋಬರ್ 13) ನ್ಯಾಷನಲ್ ಸಿನಿಮಾ ಡೇ 2023. ಕಳೆದ ವರ್ಷದಂತೆ ಎಲ್ಲಾ ಮಲ್ಟಿಪ್ಲೆಕ್ಸ್ ಸಂಸ್ಥೆಗಳು ಒಟ್ಟಿಗೆ ಸೇರಿ ಒಂದು ದಿನ ನ್ಯಾಷನಲ್ ಸಿನಿಮಾ ಡೇ ಅಂತ ಆಚರಣೆ ಮಾಡುತ್ತವೆ. ಈ ಮೂಲಕ ಯಾವುದೇ ಸಿನಿಮಾ ಆಗಿದ್ದರೂ, ನಾರ್ಮಲ್ ಸ್ಕ್ರೀನ್‌ನಲ್ಲಿ 99 ರೂಪಾಯಿ ಸಿನಿಮಾ ತೋರಿಸುತ್ತೆ.
2022ರ 'ನ್ಯಾಷನಲ್ ಸಿನಿಮಾ ಡೇ'ಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಕಳೆದ ವರ್ಷ ಸೆಪ್ಟೆಂಬರ್ 23ಕ್ಕೆ ನ್ಯಾಷನಲ್ ಸಿನಿಮಾ ಡೇ ಆಚರಣೆ ಮಾಡಲಾಗಿತ್ತು. ಈ ದಿನ ಸುಮಾರು 6.5 ಮಿಲಿಯನ್ ಟಿಕೆಟ್‌ಗಳು ಒಂದೇ ದಿನ ಸೇಲ್ ಆಗಿ ದಾಖಲೆಯನ್ನು ಬರೆದಿತ್ತು.

ಹೀಗಾಗಿ ಈ ವರ್ಷ ಕೂಡ ಇಂದು(ಅಕ್ಟೋಬರ್ 13) ನ್ಯಾಷನಲ್ ಸಿನಿಮಾ ಡೇ ಆಚರಣೆ ಮಾಡಲಾಗಿದೆ. ಈ ಸಂಭ್ರಮದ ಲಾಭವನ್ನು ಕೆಲವು ಸಿನಿಮಾಗಳು ಪಡೆದುಕೊಂಡಿವೆ. ಅದರಲ್ಲೂ ಶಾರುಖ್ ಖಾನ್ ನಟನೆಯ 'ಜವಾನ್' ಸಿನಿಮಾಗೆ ಹೆಚ್ಚು ಲಾಭ ಆಗಿದೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾಗೆ ಎಲ್ಲೆಲ್ಲಿ ಎಷ್ಟು ರೆಸ್ಪಾನ್ಸ್ ಸಿಕ್ಕಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
'ಜವಾನ್' ರಿಲೀಸ್ ಆಗಿ 37 ದಿನ
'ಜವಾನ್' ಈ ವರ್ಷ ರಿಲೀಸ್ ಆಗುತ್ತಿರುವ ಶಾರುಖ್ ಖಾನ್ ನಟನೆಯ ಎರಡನೇ ಸಿನಿಮಾ. ಇದಕ್ಕೂ ಮುನ್ನ 'ಪಠಾಣ್' ಸಿನಿಮಾ ರಿಲೀಸ್ ಆಗಿತ್ತು. ಎರಡೂ ಸಿನಿಮಾವೂ ಬಾಕ್ಸಾಫೀಸ್‌ನಲ್ಲಿ ದಾಖಲೆ ಗಳಿಕೆಯನ್ನೇ ಕಂಡಿದೆ. ವಿಶೇಷ ಅಂದರೆ, ಎರಡೂ ಸಿನಿಮಾಗಳೂ ಸಾವಿರ ಕೋಟಿ ಕ್ಲಬ್ ಸೇರಿದೆ. ಸದ್ಯ 'ಜವಾನ್' ರಿಲೀಸ್ ಆಗಿ 37 ದಿನಗಳಾಗಿವೆ. ಇನ್ನೇನಿ ಚಿತ್ರಮಂದಿರದಿಂದ ಕಾಲ್ಕಿಳಲು ಸಜ್ಜಾಗಿರುವ ಚಿತ್ರಕ್ಕೆ ನ್ಯಾಷನಲ್ ಸಿನಿಮಾ ಡೇ ಸಿಕ್ಕಾಪಟ್ಟೆ ಬೂಸ್ಟ್ ಕೊಟ್ಟಿದೆ.
99 ರೂ. ಬೆಲೆ.. 2 ಲಕ್ಷ ಟಿಕೆಟ್ ಮಾರಾಟ
ಅಟ್ಲಿ ನಿರ್ದೇಶನದಲ್ಲಿ ಶಾರುಖ್ ಜೊತೆ ನಯನತಾರಾ, ವಿಜಯ್ ಸೇತುಪತಿ, ಸಾನ್ಯಾ ಮಲ್ಹೋತ್ರಾ, ಸುನಿಲ್ ಗ್ರೋವರ್, ಪ್ರಿಯಾಮಣಿ ಸೇರಿದಂತೆ ಹಲವರು ನಟಿಸಿದ್ದಾರೆ. ದೀಪಿಕಾ ಪಡುಕೋಣೆ ಹಾಗೂ ಸಂಜಯ್ ದತ್ ಇಬ್ಬರೂ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನ್ಯಾಷನಲ್ ಸಿನಿಮಾ ಡೇ ಹಿನ್ನೆಲೆಯಲ್ಲಿ 'ಜವಾನ್' ಸಿನಿಮಾಗೆ ಭಾರೀ ಬೇಡಿಕೆ ಬಂದಿದೆ ಎನ್ನಲಾಗಿದೆ. ಇಂದು (ಅಕ್ಟೋಬರ್ 13) ಮಧ್ಯರಾತ್ರಿ ವೇಳೆ ಸುಮಾರು 2 ಲಕ್ಷಕ್ಕೂ ಅಧಿಕ ಟಿಕೆಟ್‌ಗಳು ಸೇಲ್ ಆಗಿವೆ ಎಂದು ವರದಿಯಾಗಿವೆ.
ಎಲ್ಲೆಲ್ಲಿ ಹೇಗಿದೆ ರೆಸ್ಪಾನ್ಸ್?
ನ್ಯಾಷನಲ್ ಸಿನಿಮಾ ಡೇ ದಿನ 'ಜವಾನ್' ಸಿನಿಮಾದ 4 ಲಕ್ಷಕ್ಕೂ ಅಧಿಕ ಟಿಕೆಟ್ ಸೇಲ್ ಆಗಿರಬಹುದು ಎಂದು ಅಂದಾಜು ಮಾಡಲಾಗಿದೆ. ಮುಂಬೈ, ದೆಹಲಿ ಸೇರಿದಂತೆ ಹಲವು ಮೆಟ್ರೋ ಪಾಲಿಟಿನ್ ಸಿಟಿಗಳಲ್ಲಿ 'ಜವಾನ್' ಸಿನಿಮಾಗೆ ಭಾರೀ ಬೇಡಿಕೆ ಇದೆ. ಈ ಮೂಲಕ 37ನೇ ದಿನ ಮತ್ತೆ ಕೋಟಿ ಲೆಕ್ಕದಲ್ಲಿ ಸಿನಿಮಾ ಕಲೆಕ್ಷನ್ ಆಗಿರಬಹುದು ಎಂದು ಟ್ರೇಡ್ ಎಕ್ಸ್‌ಪರ್ಟ್ಸ್ ನಿರೀಕ್ಷೆ ಮಾಡಿದ್ದಾರೆ.
ಕಲೆಕ್ಷನ್ ಲೆಕ್ಕಾಚಾರವೇನು?
ಶಾರುಖ್ ಖಾನ್ ಸಿನಿಮಾ 'ಜವಾನ್' ನಿನ್ನೆ (ಅಕ್ಟೋಬರ್ 12) ಅಂದರೆ, 36ನೇ ದಿನ ಕೇವಲ 77 ಲಕ್ಷ ರೂಪಾಯಿ ಕಲೆಕ್ಷನ್ ಆಗಿತ್ತು. ಆದರೆ, ಇಂದು (37ನೇ ದಿನ) ಸುಮಾರು 4 ಕೋಟಿ ರೂಪಾಯಿ ಕಲೆಕ್ಷನ್ ಆಗಬಹುದು ಎಂದು ಟ್ರೇಡ್ ಎಕ್ಸ್‌ಪರ್ಟ್ ಅಂದಾಜು ಮಾಡುತ್ತಿದ್ದಾರೆ. ಸದ್ಯ 2 ಲಕ್ಷ ಟಿಕೆಟ್ ಸೇಲ್ ಆಗಿರೋ ಲೆಕ್ಕ ಸಿಕ್ಕಿದ್ದು, ಈ ದಿನ ಮಾರಾಟ ಆದ 'ಜವಾನ್' ಟಿಕೆಟ್‌ಗಳ ಅಧಿಕೃತ ಲೆಕ್ಕ ಹೊರಬೀಳಬೇಕಿದೆ.


Click it and Unblock the Notifications











