Anant Ambani-Radhika pre wedding:ಅನಂತ್ –ರಾಧಿಕಾ ಪ್ರಿ ವೆಡ್ಡಿಂಗ್‌ನಲ್ಲಿ ರಜನಿ-ರಾಮ್‌ಚರಣ್? ಉಳಿದವರೆಲ್ಲಿ?
ಕಳೆದ ಮೂರು ದಿನಗಳಿಂದ ಎಲ್ಲಿ ನೋಡಿದ್ರೂ ಅನಂತ್ ಅಂಬಾನಿ -ರಾಧಿಕಾ ಮರ್ಚೆಂಟ್ ಪ್ರಿ- ವೆಡ್ಡಿಂಗ್ ಪಾರ್ಟಿಯದ್ದೇ ಸದ್ದು- ಸುದ್ದಿ. ದೇಶವಿದೇಶಗಳ ಉದ್ಯಮಿಗಳು ತಮ್ಮ ಕುಟುಂಬ ಸಮೇತ ಬಂದಿಳಿದಿದ್ದು ಮಾತ್ರವಲ್ಲ, ಇಡೀ ಬಾಲಿವುಡ್ ಈಗ ಜಾಮ್‌ನಗರದಲ್ಲಿ ಇದೆಯೇನೋ ಅನ್ನಿಸುವಂತೆ ಎಲ್ಲರೂ ಖುಷಿಖುಷಿಯಾಗಿ ಪಾರ್ಟಿ ಮಾಡ್ತಿದ್ದಾರೆ. ಅಷ್ಟೇ ಅಲ್ಲ, ಸ್ಟೇಜ್ ಮೇಲೂ ಪರ್ಫಾರ್ಮೆನ್ಸ್ ಕೊಟ್ಟು ಎಲ್ಲರನ್ನೂ ರಂಜಿಸ್ತಿದ್ದಾರೆ.
ಫೇಸ್‌ಬುಕ್‌ನ (Meta)ಮಾರ್ಕ್ ಜುಕರ್ಬರ್ಗ್, ಬಿಲ್ ಗೇಟ್ಸ್ (Microsoft), ಪಾಪ್ ತಾರೆ ರಿಹಾನಾ ಅದೆಷ್ಟು ಉತ್ಸಾಹದಿಂದ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸ್ತಿದ್ದಾರೆ ಅನ್ನೋದನ್ನ ನೋಡಿ ಜನ ನಿಜಕ್ಕೂ ಆಶ್ಚರ್ಯಪಡ್ತಿದ್ದಾರೆ.

ಇನ್ನು ಬಾಲಿವುಡ್ ಅಂಗಳದಿಂದ ದೀಪಿಕಾ ಪಡುಕೋಣೆ, ರಣ್ವೀರ್ ಸಿಂಗ್, ರಣ್ಬೀರ್ ಕಪೂರ್, ಆಲಿಯಾ ಭಟ್, ಶ್ರೇಯಾ ಘೋಷಾಲ್, ಪತ್ನಿ ಮತ್ತು ಮಕ್ಕಳ ಜೊತೆ ಬಂದಿಳಿದ ಶಾರುಖ್ ಖಾನ್, ಆಮಿರ್ ಖಾನ್, ಸಲ್ಮಾನ್ ಖಾನ್, ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ, ಸಂಜಯ್ ದತ್, ಟೈಗರ್ ಶ್ರಾಫ್, ಅಮಿತಾಭ್ ಮೊಮ್ಮಗಳು ನವ್ಯಾ ನವೇಲಿ ನಂದಾ, ಕರೀನಾ ಕಪೂರ್, ಕರಿಷ್ಮಾ ಕಪೂರ್, ಸೈಫ್ ಅಲಿ ಖಾನ್, ಜಾಹ್ನವಿ ಕಪೂರ್, ಅನಿಲ್ ಕಪೂರ್, ಅನನ್ಯಾ ಪಾಂಡೆ, ಆದಿತ್ಯ ರಾಯ್ ಕಪೂರ್, ಮಾಧುರಿ ದೀಕ್ಷಿತ್, ಸೋನಂ ಕಪೂರ್ ಮುಂತಾದ ಎಲ್ರೂ ಮೊದಲನೇ ದಿನದಿಂದಲೇ ಅಲ್ಲಿನ ನಾನಾ ಸಮಾರಂಭಗಳಲ್ಲಿ ಮಿಂಚ್ತಾ ಇದ್ದಾರೆ.
ಆದರೆ, ಇಷ್ಟೆಲ್ಲಾ ದೊಡ್ಡ ತಾರೆಯರ ದಂಡು ಕಂಡಾಗ ನಮ್ಮ ದಕ್ಷಿಣ ಭಾರತದ ಸ್ಟಾರ್‌ಗಳೂ ಯಾರೂ ಕಾಣ್ತಿಲ್ವಲ್ಲ? ಇವರನ್ನು ಕರೆದೇ ಇಲ್ವಾ? ಅಥವಾ ಕರೆದಿದ್ರೂ ಇವರು ಹೋಗಿಲ್ವಾ? ಅಂತ ಅಭಿಮಾನಿಗಳಿಗೆ ಸಣ್ಣ ಡೌಟ್. ಇಂದು ಮಾರ್ಚ್ 1ರಿಂದ 3ರವರಗೆ ನಡೆಯುತ್ತಿರುವ ಈ ಅದ್ಧೂರಿ ಕಾರ್ಯಕ್ರಮದ ಕೊನೆಯ ದಿನ. ಇವತ್ತು ಸೂಪರ್‌ಸ್ಟಾರ್ ರಜನಿಕಾಂತ್ ತಮ್ಮ ಪತ್ನಿ ಲತಾ ರಜನಿಕಾಂತ್ ಮತ್ತು ಮಗಳು ಐಶ್ವರ್ಯಾ ಜೊತೆ ಕಾಣಿಸಿಕೊಂಡಿದ್ದಾರೆ.
ಅದನ್ನು ಬಿಟ್ರೆ ನಿನ್ನೆ ಶನಿವಾರ ರಾತ್ರಿ (ಮಾರ್ಚ್ 2) ನಡೆದ ಪಾರ್ಟಿಯಲ್ಲಿ ವೇದಿಕೆ ಮೇಲೆ ಶಾರುಖ್, ಆಮಿರ್ ಮತ್ತು ಸಲ್ಮಾನ್ ಖಾನ್ ಡ್ಯಾನ್ಸ್ ಮಾಡುವಾಗ ಆಸ್ಕರ್ ಗೆದ್ದ ಹಾಡು RRRನ ನಾಟು ನಾಟು ಕೂಡಾ ಪ್ಲೇ ಆಯ್ತು. ಆಗ ನಡುವೆ ಕಂಡುಬಂದಿದ್ದು ಅದೇ ಹಾಡಿನಲ್ಲಿ ಸಖತ್ ಹೆಜ್ಜೆ ಹಾಕಿದ್ದ ನಟ ರಾಮ್‌ಚರಣ್. ಅಲ್ಲಿಗೆ ದಕ್ಷಿಣದಿಂದ ಕನಿಷ್ಠ ಇಬ್ಬರು ಕಲಾವಿದರು ಕುಟುಂಬ ಸಮೇತ ಕಾಣಿಸಿಕೊಂಡಂತಾಯ್ತು.

ಇನ್ನು ಕೊನೆಯ ದಿನದ ರಾತ್ರಿಯ ಪಾರ್ಟಿ ಮತ್ತು ಕಾರ್ಯಕ್ರಮಗಳು ಇನ್ನೂ ಆಗಬೇಕಿದೆ. ರಜನಿಕಾಂತ್ ರೀತಿ ಅನೇಕರು ಕೊನೆಯ ದಿನ ಹೋಗೋಣ ಸಾಕು ಎಂದುಕೊಂಡಿರಲೂ ಸಾಕು. ಅಥವಾ ತಮ್ಮದೇ ಆದ ಬೇರೆ ಬೇರೆ ಕೆಲಸಗಳಿಂದಾಗಿ ಸಮಯ ಆಗದೆಯೂ ಇರ್ಬಹುದು ಅನ್ನೋದು ಸಾಮಾಜಿಕ ಜಾಲತಾಣಗಳಲ್ಲಿ ದಕ್ಷಿಣ ಚಿತ್ರರಂಗದ ಅಭಿಮಾನಿಗಳು ತಮ್ಮ ತಮ್ಮಲ್ಲೇ ಮಾಡಿಕೊಳ್ತಿರೋ ಚರ್ಚೆಗಳಷ್ಟೇ.
ದೇಶದ ಅತೀ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿಯ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆ ಜುಲೈ ತಿಂಗಳಲ್ಲಿ ನಡೆಯುತ್ತದೆ ಎನ್ನಲಾಗಿದೆ. ಆದರೆ ಮದುವೆಗೂ ಮುನ್ನ ಎಲ್ಲಾ ಆಪ್ತರನ್ನು ಒಂದೆಡೆ ಸೇರಿಸಿ ಸಂಭ್ರಮಿಸೋ ಮೂರು ದಿನಗಳ ಪ್ರಿ -ವೆಡ್ಡಿಂಗ್ ಸೆಲಬ್ರೇಶನ್ ಇದು. 2500 ಬಗೆಯ ವಿವಿಧ ಖಾದ್ಯಗಳ ಸವಿಯ ಜೊತೆಗೆ ಜಾಮ್ನಗರ್ ಎನ್ನುವ ಅನಂತ್ ಅಂಬಾನಿಯ ಕರ್ಮಭೂಮಿಯನ್ನು ಇಡೀ ಜಗತ್ತಿಗೆ ಈ ಕಾರ್ಯಕ್ರಮದ ಮೂಲಕ ಪರಿಚಯ ಮಾಡಿಕೊಡಲಾಯ್ತು.


Click it and Unblock the Notifications











