ಪಾಕ್ ಪತ್ರಕರ್ತೆ ಪ್ರಶ್ನೆಗೆ "ಮದುವೆ ಆಗ್ತೀನಿ, ವರದಕ್ಷಿಣೆಯಾಗಿ ಇಡೀ ಪಾಕಿಸ್ತಾನ ಕೊಡಿ" ಎಂದಿದ್ದೇಕೆ ಮಾಜಿ ಪ್ರಧಾನಿ ವಾಜಪೇಯಿ?
ಭಾರತ ಕಂಡ ಜನಪ್ರಿಯ ಪ್ರಧಾನ ಮಂತ್ರಿಗಳಲ್ಲಿ ಅಟಲ್ ಬಿಹಾರಿ ವಾಜಪೇಯಿ ಕೂಡ ಒಬ್ಬರು. ತಮ್ಮ ಸ್ಪೂರ್ತಿದಾಯಕ ಭಾಷಣಗಳಿಂದಲೇ ಅಟಲ್ ಬಿಹಾರಿ ವಾಜಪೇಯಿ ಜನರ ಮನಸ್ಸನ್ನು ಗೆದ್ದಿದ್ದರು. ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಭಾಷಣ ಮಾಡುತ್ತಿದ್ದಾರೆ ಅಂದರೆ, ಜನರೇ ಮಂತ್ರಮುಗ್ಧರಾಗುತ್ತಿದ್ದರು.
ಅಟಲ್ ಬಿಹಾರಿ ವಾಜಪೇಯಿಯವರನ್ನು ವಿರೋಧ ಪಕ್ಷದವರು ಇಷ್ಟ ಪಡುತ್ತಿದ್ದರು. ಅಷ್ಟೇ ಯಾಕೆ ಭಾರತದ ಸಾಂಪ್ರದಾಯಿಕ ವಿರೋಧಿ ರಾಷ್ಟ್ರ ಪಾಕಿಸ್ತಾನ ಜನರು ಕೂಡ ಅಟಲ್ ಬಿಹಾರಿ ವಾಜಪೇಯಿ ಅವರ ಮಾತುಗಳನ್ನು ಇಷ್ಟ ಪಡುತ್ತಿದ್ದರು. ಮಾಜಿ ಪ್ರಧಾನಿ ವಾಜಪೇಯಿ ಅವರನ್ನು ನೆನಪಿಸಿಕೊಳ್ಳುವುದು ಹೀಗೆ.

ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ, 1999ರಲ್ಲಿ ಪಾಕಿಸ್ತಾನದ ಲಾಹೋರ್‌ಗೆ ಭೇಟಿ ಕೊಟ್ಟಿದ್ದರು. ಈ ಐತಿಹಾಸಿಕ ರಾಜಕೀಯದ ಪುಟಗಳಲ್ಲಿ ದಾಖಲಾಗಿದೆ. ಅಮೃತ್ ಸರದಿಂದ ಲಾಹೋರ್‌ಗೆ ವಿಶೇಷ ಬಸ್ ಸಂಪರ್ಕ ಉದ್ಘಾಟಿಸುವುದಕ್ಕೂ ಮುನ್ನ ಪತ್ರಿಕಾಗೋಷ್ಠಿಯನ್ನು ಕರೆಯಲಾಗಿತ್ತು. ಈ ವೇಳೆ ಪಾಕ್ ಪತ್ರಕರ್ತೆಯೊಬ್ಬರು, ವಾಜಪೇಯಿ ಅವರಿಗೆ "ನಾನು ನಿಮ್ಮನ್ನು ಮದುವೆ ಆಗುತ್ತೇನೆ. ಬದಲಾಗಿ ನೀವು ಕಾಶ್ಮೀರ ಕೊಡಿ" ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ಅಟಲ್ ಬಿಹಾರಿ ವಾಜಪೇಯಿ ಕೂಡ "ನಾನು ನಿಮ್ಮನ್ನು ಮದುವೆ ಆಗಲು ಸಿದ್ಧ. ವರದಕ್ಷಿಣೆ ರೂಪದಲ್ಲಿ ಇಡೀ ಪಾಕಿಸ್ತಾನವನ್ನು ಕೊಡಿ" ಎಂದು ಉತ್ತರ ಕೊಟ್ಟಿದ್ದರು.
ಅಷ್ಟಕ್ಕೂ ವಾಜಪೇಯಿ ಅವರ ಬಗ್ಗೆ ಈಗ್ಯಾಕೆ ಮಾತು ಅಂದ್ರೆ, ಅವರ ಜೀವನ ಚರಿತ್ರೆ ಸಿನಿಮಾ ಆಗಿದೆ. ಅಟಲ್ ಬಿಹಾರಿ ವಾಜಪೇಯಿ ಪಾತ್ರದಲ್ಲಿ ಬಾಲಿವುಡ್ ನಟ ಪಂಕಜ್ ತ್ರಿಪಾಠಿ ಕಾಣಿಸಿಕೊಂಡಿದ್ದಾರೆ. ಆ ಸಿನಿಮಾವೇ 'ಮೇ ಅಟಲ್ ಹೂ'. ಈ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಇದರಲ್ಲಿ ಪಾಕಿಸ್ತಾನದಲ್ಲಿ ವಾಜಪೇಯಿ ಅವರ ಮದುವೆ ಪ್ರಸಂಗದ ಬಗೆಗಿನ ಸನ್ನಿವೇಶವನ್ನು ಸೇರಿಸಲಾಗಿದೆ.
'ಮೇ ಅಟಲ್ ಹೂ' ಟ್ರೈಲರ್ ರಿಲೀಸ್ ಬಳಿಕ ತರಹೇವಾರಿ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಅಟಲ್ ಬಿಹಾರಿ ವಾಜಪೇಯಿ ಅವರ ಬಯೋಪಿಕ್‌ನಲ್ಲಿ ರಾಜಕೀಯವೇ ಹೆಚ್ಚಿದೆ ಎಂದು ಹೇಳುತ್ತಿದ್ದರೆ, ಮತ್ತೆ ಕೆಲವರು ಟ್ರೈಲರ್ ನಿರೀಕ್ಷೆಗಳನ್ನು ಹುಟ್ಟಾಕುತ್ತಿದೆ ಎಂದಿದ್ದಾರೆ. ಅದೇ ಇನ್ನೊಂದು ಕಡೆ ಭಾರತ ಹಾಗೂ ಪಾಕಿಸ್ತಾನದ ನಡುವಿನ ಸಂದರ್ಭಗಳೇ ಹೆಚ್ಚಿವೆ ಎಂಬ ಅಭಿಪ್ರಾಯಗಳು ಕೂಡ ವ್ಯಕ್ತವಾಗುತ್ತಿವೆ.

ರವಿ ಜಾದವ್ 'ಮೇ ಅಟಲ್ ಹೂ' ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. " ಬಾಲ್ಯದಿಂದಲೂ ನಾನು ದೇಶಕ್ಕೆ ಶ್ರೀ ಅಟಲ್ ಬಿಹಾರಿ ವಾಜಪೇಯಿ ಕೊಟ್ಟ ಕೊಡುಗೆ ಹಾಗೂ ಅವರ ಜರ್ನಿಯನ್ನು ಫಾಲೋ ಮಾಡುತ್ತಲೇ ಬಂದಿದ್ದೇನೆ. ನಮ್ಮ ದೇಶ ಕಂಡ ಅತ್ಯಂತ ಜನಪ್ರಿಯ ನಾಯಕನ ಬಗ್ಗೆ ನಿರೂಪಣೆ ಮಾಡುತ್ತಿರುವುದಕ್ಕೆ ನನಗೆ ಹೆಮ್ಮೆ ಎನಿಸಿದೆ." ಎಂದು ನಿರ್ದೇಶಕರು ಹೇಳಿದ್ದಾರೆ.
ಹಾಗೇ ವಾಜಪೇಯಿ ಪಾತ್ರದಲ್ಲಿ ನಟಿಸಿರುವ ಪಂಕಜ್ ತ್ರಿಪಾಠಿ, " ಸಿನಿಮಾ ಅನ್ನುವುದಕ್ಕಿಂತ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಜರ್ನಿಯಲ್ಲಿ ಭಾಗಿಯಾಗಿದ್ದು ನನ್ನ ಹೃದಯಕ್ಕೆ ಹತ್ತಿರವೆನಿಸಿದೆ. ಇವರು ನಿಜಕ್ಕೂ ಒಬ್ಬ ಲೆಜೆಂಡ್. ಅವರ ಸ್ಫೂರ್ತಿದಾಯಕ ಜರ್ನಿಯನ್ನು ಪ್ರಪಂಚಕ್ಕೆ ಪರಿಚಯಿಸುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ." ಎಂದು ನಟ ಪಂಕಜ್ ತ್ರಿಪಾಠಿ ಹೇಳಿದ್ದಾರೆ.
'ಮೇ ಅಟಲ್ ಹೂ' ಸಿನಿಮಾವನ್ನು ಭಾನುಶಾಲಿ ಸ್ಟುಡಿಯೋಸ್ ಲಿಮಿಟೆಡ್ ಮತ್ತು ಲೆಗೆಂಡ್ ಸ್ಟುಡಿಯೋ ಪ್ರೊಡಕ್ಷನ್ ನಿರ್ಮಾಣ ಮಾಡಿದೆ. ಈ ಸಿನಿಮಾ 2024, ಜನವರಿ 19ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ.


Click it and Unblock the Notifications











