ಸುಶಾಂತ್ ಆತ್ಮದೊಂದಿಗೆ ಮಾತುಕತೆ: ಸಾವಿನ ರಹಸ್ಯ ತಿಳಿಸಲಿದ್ದಾರಾ ಪ್ಯಾರಾನಾರ್ಮಲ್ ತಜ್ಞ?
ಸುಶಾಂತ್ ಸಿಂಗ್ ರಜಪೂತ್ ಸಾವು ಬಾಲಿವುಡ್‌ನಲ್ಲಿ ಕೋಲಾಹಲ ಎಬ್ಬಿಸಿದೆ. ವಿವಿಧ ಬಗೆಯ ವಾದ ವಿವಾದಗಳಿಗೆ ಸುಶಾಂತ್ ಪ್ರಕರಣ ಬುನಾದಿಯಾಗಿದೆ. ಸುಶಾಂತ್ ಅವರದ್ದು ಆತ್ಮಹತ್ಯೆಯಲ್ಲ, ಅದು ಕೊಲೆ ಎಂದು ಅನೇಕರು ಆರೋಪಿಸುತ್ತಿದ್ದಾರೆ. ಈ ನಡುವೆ ಅಮೆರಿಕದ ಖ್ಯಾತ ಪ್ಯಾರಾನಾರ್ಮಲ್ ಪರಿಣತ ಸ್ಟೀವ್ ಹಫ್, ತಾವು ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮದೊಂದಿಗೆ ಮಾತನಾಡಿರುವುದಾಗಿ ಹೇಳಿದ್ದಾರೆ.
Recommended Video
ತಮಗೆ ಮೃತಪಟ್ಟವರ ಆತ್ಮಗಳೊಂದಿಗೆ ಮಾತನಾಡುವ ಶಕ್ತಿ ಇದೆ. ಆ ಆತ್ಮಗಳ ಅನುಭವಗಳು, ಸಾವಿನ ಕಾರಣ ಮುಂತಾದವುಗಳನ್ನು ಅವುಗಳಿಂದಲೇ ಕೇಳುತ್ತೇನೆ ಎಂದು ಹೇಳಿಕೊಂಡಿರುವ 'ಅತೀಂದ್ರಿಯ ಶಕ್ತಿಗಳ ಸಂವಹನಕಾರ' ಸ್ಟೀವ್ ಹಫ್, ಸುಶಾಂತ್ ಸಿಂಗ್ ರಜಪೂತ್ ಅವರ ಅಭಿಮಾನಿಗಳ ಮನವಿಯ ಮೇರೆಗೆ ಸುಶಾಂತ್ ಆತ್ಮದೊಂದಿಗೆ ಮಾತನಾಡಿರುವುದಾಗಿ ತಿಳಿಸಿದ್ದಾರೆ. ಈ ಸಂಬಂಧ ಎರಡು ವಿಡಿಯೋಗಳನ್ನು ಅವರು ಬಿಡುಗಡೆ ಮಾಡಿದ್ದಾರೆ. ಮುಂದೆ ಓದಿ...

ಯೂಟ್ಯೂಬ್ ವಿಡಿಯೋ
ಸತತ ಹತ್ತು ವರ್ಷಗಳ ಪ್ರಯತ್ನದ ಬಳಿಕ ಸ್ಪಿರಿಟ್ ಬಾಕ್ಸ್ ತಯಾರಿಸಿರುವುದಾಗಿ ಹೇಳಿರುವ ಸ್ಟೀವ್, ಅದರ ಮೂಲಕ ಸುಶಾಂತ್ ಜತೆ ಸಂಭಾಷಣೆ ನಡೆಸಿದ್ದಾಗಿ ತಿಳಿಸಿದ್ದಾರೆ. ಸುಶಾಂತ್ ಅಭಿಮಾನಿಗಳ ಕೋರಿಕೆಯಂತೆ ಅವರ ಆತ್ಮವನ್ನು ಸಂಪರ್ಕಿಸಿ ಮಾತನಾಡಿದ್ದು, ಅದರಲ್ಲಿ ರೆಕಾರ್ಡ್ ಮಾಡಲಾಗಿರುವ ಸಂಗತಿಗಳನ್ನು ಹಂಚಿಕೊಂಡಿರುವುದಾಗಿ ಯೂಟ್ಯೂಬ್ ವಿಡಿಯೋದಲ್ಲಿ ತಿಳಿಸಿದ್ದಾರೆ.

ನನಗೆ ರೆಕ್ಕೆಗಳು ಸಿಕ್ಕಿವೆ
ತಮ್ಮದೇ ಕೆಲವು ಸಾಮಗ್ರಿಗಳ ಮುಂದೆ ಕುಳಿತ ಸ್ಟೀವ್ ಹಫ್, ಅದರಲ್ಲಿ ಮಾತುಕತೆ ನಡೆಸಿದ್ದಾರೆ. ಅವರು ಕೇಳುವ ಪ್ರಶ್ನೆಗಳಿಗೆ ಧ್ವನಿಯೊಂದು ಪ್ರತಿಕ್ರಿಯಿಸುತ್ತದೆ. ಆಗ ಸ್ಪೀಕರ್‌ನಲ್ಲಿ ಬೆಳಕು ಮೂಡುತ್ತದೆ. ನಿಮ್ಮನ್ನು ನೀವೇ ಸಾಯಿಸಿಕೊಂಡಿದ್ದೇ ಎಂದು ಪ್ರಶ್ನೆ ಕೇಳಿದಾಗ 'ನಾನು ಏಂಜೆಲ್‌ಗಳ ಜತೆ ಮಾತನಾಡುತ್ತಿದ್ದೇನೆ, ನನಗೆ ರೆಕ್ಕೆಗಳು ಸಿಕ್ಕಿವೆ' ಎಂಬ ಪ್ರತಿಕ್ರಿಯೆ ಬರುತ್ತದೆ.

ಸಾವಿನ ಹಿಂದಿನ ರಾತ್ರಿ ನಡೆದಿದ್ದೇನು?
ನಿಮ್ಮ ಸಾವಿನ ದಿನದ ರಾತ್ರಿ ಏನು ನಡೆಯಿತು? ಎಂದು ಹಫ್ ಕೇಳಿದ್ದಾರೆ, ಅದಕ್ಕೆ ಸುಶಾಂತ್ ಆತ್ಮ 'ಗಂಡಸರ ಜತೆ ದೊಡ್ಡ ವಾದ ವಿವಾದ ನಡೆಯಿತು' ಎಂದಿದೆ. 'ನೀವು ಹೇಗೆ ಸತ್ತು ಹೋದಿರಿ ಎನ್ನುವುದು ನೆನಪಿದೆಯೇ?' ಎಂಬ ಪ್ರಶ್ನೆಗೆ 'ಅವರು ಮೊಳೆಗಳನ್ನು ತಂದರು' ಎಂಬ ಉತ್ತರ ಸಿಕ್ಕಿದೆ.
ಮನೆಯಲ್ಲಿ ನಡೆದಿತ್ತು ಎನ್ನಲಾದ ಜಗಳದ ಬಗ್ಗೆ ಮತ್ತಷ್ಟು ಮಾಹಿತಿ ಕೇಳಲು ಪ್ರಯತ್ನಿಸಿದಾಗ 'ಅದೀಗ ಮುಗಿದು ಹೋಗಿದೆ' ಎಂದು ಸುಶಾಂತ್ ಆತ್ಮ ಉತ್ತರ ನೀಡಿದೆಯಂತೆ.

ಸುಶಾಂತ್ ಸ್ಪಿರಿಟ್ ಬಾಕ್ಸ್ ಸೆಷನ್
ಒಂದು ವಾರದ ಹಿಂದೆ ತಮ್ಮ 'ಹಫ್ ಪ್ಯಾರಾನಾರ್ಮಲ್' ಚಾನೆಲ್‌ನಲ್ಲಿ ಮೊದಲ ವಿಡಿಯೋ ಬಿಡುಗಡೆ ಮಾಡಿದ್ದ ಸ್ಟೀವ್ ಹಫ್, ತಾವು ಸುಶಾಂತ್ ಆತ್ಮದೊಂದಿಗೆ ಮಾತನಾಡಿದ್ದು, ಅವರು ಬಹಳ ಸ್ಪಷ್ಟ ಮತ್ತು ಸುಂದರವಾಗಿ ಮಾತನಾಡಿದರು ಎಂದಿದ್ದಾರೆ. ತಮ್ಮ ವಿಡಿಯೋಕ್ಕೆ 'ಸುಶಾಂತ್ ಸಿಂಗ್ ರಜಪೂತ್ ಸ್ಪಿರಿಟ್ ಬಾಕ್ಸ್ ಸೆಷನ್' ಎಂಬ ಶೀರ್ಷಿಕೆ ಇರಿಸಿದ್ದಾರೆ.

ಬೆಳಕು ಸಿಗುತ್ತಿದೆ...
ಮೊದಲ ಮಾತುಕತೆಯಲ್ಲಿ ಸ್ಟೀವ್, 'ನೀವು ಬೆಳಕಿನಲ್ಲಿದ್ದೀರಾ?' ಎಂದು ಕೇಳಿದ್ದಾರೆ. ಅದಕ್ಕೆ ಸುಶಾಂತ್ 'ಸ್ಟೀವ್, ನಾನು ಬೆಳಕು ಪಡೆದುಕೊಳ್ಳುತ್ತಿದ್ದೇನೆ' ಎಂದು ಹೇಳಿದ್ದಾರೆ. ಆದರೆ ಸುಶಾಂತ್ ಆತ್ಮ ಹೇಳಿರುವುದು 'ಸ್ಟೀವ್, ನನ್ನನ್ನು ಕೊಲೆ ಮಾಡಲಾಗುತ್ತಿದೆ' ಎಂದು ಅವರ ಅಭಿಮಾನಿಗಳು ಪ್ರತಿಪಾದಿಸಿದ್ದಾರೆ. 'ನೀವು ಬೆಳಕಿನಲ್ಲಿದ್ದೀರಿ. ಅದನ್ನು ಕಳೆದ ರಾತ್ರಿ ಕಂಡಿದ್ದೀರಿ' ಎಂದಾಗ, 'ನಾನು ಅದರಲ್ಲಿದ್ದೆ' ಎಂದು ಆತ್ಮ ತಿಳಿಸಿದೆ.

ಪ್ರೀತಿ ಬೇಕು ಎಂದ ಸುಶಾಂತ್!
'ನನಗೆ ನಿಮ್ಮ ಕೆಲಸಗಳ ಬಗ್ಗೆ ಗೊತ್ತಿಲ್ಲ. ಆದರೆ ನಿಮ್ಮನ್ನು ತುಂಬಾ ಪ್ರೀತಿಸುತ್ತಿದ್ದರು. ನಿಮಗೆ ಬಹಳಷ್ಟು ಮಂದಿ ಅಭಿಮಾನಿಗಳಿದ್ದಾರೆ. ನಿಮ್ಮ ಅಭಿಮಾನಿಗಳಿಗೆ ಏನಾದರೂ ಹೇಳಲು ಬಯಸುತ್ತೀರಾ? ಎಂದು ಕೇಳಿದ್ದಾರೆ. ನೀವು ಹೇಗೆ ಸತ್ತು ಹೋಗಿದ್ದು ನೆನಪಿದೆಯೇ? ಎಂದು ಮತ್ತೆ ಕೇಳಿದಾಗ, 'ಅವರು ಎಲ್ಲವನ್ನೂ ಔಷಧಕ್ಕೆ ಬಿಟ್ಟುಬಿಟ್ಟರು' ಎಂಬ ಉತ್ತರ ಬಂದಿದೆ. 'ನನಗೆ ಸ್ವಲ್ಪ ಪ್ರೀತಿ ಬೇಕು' ಎಂದು ಸುಶಾಂತ್ ಆತ್ಮ ಹೇಳಿದೆಯಂತೆ.

ಹಣದ ದುರಾಸೆಯಿಲ್ಲ
ಸುಶಾಂತ್ ಅವರ ಆತ್ಮದೊಂದಿಗೆ ಮಾತನಾಡುವಂತೆ ಅನೇಕ ಇ-ಮೇಲ್‌ಗಳು ಬಂದಿದ್ದವು. ಅದಕ್ಕೆ ಪ್ರಯತ್ನಿಸಿದ್ದೆ. ತಮ್ಮ ಜೊತೆ ಸಂಪರ್ಕಿಸಲು ಸುಶಾಂತ್ ಆತ್ಮ ಮಾರ್ಗದರ್ಶಿಯೊಬ್ಬರ ಸಹಾಯ ಪಡೆದುಕೊಂಡಿದೆ. ಜೀವವನ್ನೇ ಪಣವಾಗಿಟ್ಟುಕೊಂಡು ಈ ಕೆಲಸ ಮಾಡುತ್ತಿದ್ದೇನೆ. ಇದೆಲ್ಲವೂ ಶೇ 100ರಷ್ಟು ಸತ್ಯ. ಆದರೆ ಈ ವಿಡಿಯೋಗಳಿಂದ ಹಣ ಮಾಡುವ ದುರಾಸೆ ಇಲ್ಲ. ನಾನು ಈ ಕೆಲಸಕ್ಕೆ ಹಣ ಪಡೆದುಕೊಂಡಿಲ್ಲ ಎಂದು ಸ್ಟೀವ್ ಹೇಳಿದ್ದಾರೆ.

ನಂಬಲು ಅರ್ಹವೇ?
ಈ ಹಿಂದೆ ಸ್ಟೀವ್ ಅವರು ಮೈಕಲ್ ಜಾಕ್ಸನ್ ಆತ್ಮದೊಂದಿಗೆ ಸಂಭಾಷಣೆ ನಡೆಸಿದ್ದಾಗಿ ಹೇಳಿ ಸುದ್ದಿಯಾಗಿದ್ದರು. ಆತ್ಮಗಳ ಜತೆ ಮಾತನಾಡುವುದಾಗಿ ಹೇಳಿಕೊಂಡಿರುವ ಅನೇಕ ಪ್ಯಾರಾನಾರ್ಮಲ್ ತಜ್ಞರು ನಮ್ಮ ನಡುವೆ ಇದ್ದಾರೆ. ಈ ಚಟುವಟಿಕೆಯನ್ನು ಆಧರಿಸಿ ಅನೇಕ ಸಿನಿಮಾಗಳು ಬಂದಿವೆ. ಆದರೆ ನಂಬಲು ಸಾಧ್ಯವೇ? ಇದೆಲ್ಲ ಸುಳ್ಳುಕಥೆ ಎಂದು ಹೆಚ್ಚಿನವರು ನಿರಾಕರಿಸಿದರೂ, ಕೆಲವರು ನಂಬಿಕೆ ಹೊಂದಿದ್ದಾರೆ.

ವಿಡಿಯೋಗಳಿಗೆ ಭಾರಿ ವೀಕ್ಷಣೆ
ಸುಶಾಂತ್ ಆತ್ಮದ ಜತೆ ಮತ್ತಷ್ಟು ಮಾತುಕತೆ ನಡೆಸಿ ಎಂದು ಅವರ ಅಭಿಮಾನಿಗಳು ಮನವಿ ಮಾಡುತ್ತಿದ್ದಾರೆ. ಮೊದಲ ಭಾಗದ ವಿಡಿಯೋವನ್ನು ಸುಮಾರು ನಾಲ್ಕು ಮಿಲಿಯನ್ ಮಂದಿ ವೀಕ್ಷಿಸಿದ್ದರೆ, ಎರಡನೆಯ ಭಾಗ ಈಗಾಗಲೇ ಸುಮಾರು ಮೂರು ಮಿಲಿಯನ್ ವೀಕ್ಷಣೆಗೆ ಒಳಪಟ್ಟಿದೆ. ಆತ್ಮದ ಜತೆ ಮಾತನಾಡಲು ಹಣ ಪಡೆಯುವುದಿಲ್ಲ ಎನ್ನುವ ಸ್ಟೀವ್, ತಮ್ಮ ವಿಡಿಯೋ ಮೂಲಕವೇ ಪ್ರಚಾರ ಪಡೆದು ಹಣ ಮಾಡುತ್ತಿದ್ದಾರೆ ಎಂಬ ಆರೋಪವೂ ಇದೆ.


Click it and Unblock the Notifications











