'ಸಲಾರ್'ಗೆ 'ಡಂಕಿ' ಢಿಕ್ಕಿ: ಕೆಜಿಎಫ್ ಲಿಂಕ್ ಇರೋದಕ್ಕೆ ಪ್ರಭಾಸ್, ಪ್ರಶಾಂತ್ ನೀಲ್ ಸಿನಿಮಾ ಕ್ರಿಸ್‌ಮಸ್‌ಗೆ ರಿಲೀಸ್?
ಈ ಕ್ರಿಸ್‌ಮಸ್ ಸಿನಿಪ್ರಿಯರ ಪಾಲಿಗೆ ಬಹುದೊಡ್ಡ ಸಂಭ್ರಮ. ಅದೇ ಅಭಿಮಾನಿಗಳ ಪಾಲಿಗೆ ಮಹಾಯುದ್ಧ. ಅಭಿಮಾನಿಗಳ ಕ್ಲ್ಯಾಶ್ ಆದ್ರೂ ಆಶ್ಚರ್ಯ ಇಲ್ಲ ಎನ್ನುವಂಥಾ ಸಂದರ್ಭ. ಯಾಕಂದ್ರೆ ಈ ವರ್ಷದ ಕ್ರಿಸ್‌ಮಸ್‌ಗೆ ಎರಡು ಬಿಗ್ ಸ್ಟಾರ್‌ಗಳ ಮಹತ್ವಾಕಾಂಕ್ಷೆಯ ಬಿಗ್ ಸಿನಿಮಾಗಳು ಒಟ್ಟಿಗೆ ರಿಲೀಸ್ ಆಗ್ತಿವೆ. ಪ್ರಭಾಸ್ ಸಿನಿಮಾ 'ಸಲಾರ್'. ಶಾರುಖ್ ಖಾನ್ ಸಿನಿಮಾ 'ಡಂಕಿ'.
ಆದ್ರಿಲ್ಲಿ 'ಸಲಾರ್' ಬಿಡುಗಡೆಗೆ 'ಕೆಜಿಎಫ್' ಕನೆಕ್ಷನ್ ಇದೆ ಅನ್ನೋದೊಂದು ಇಂಟರೆಸ್ಟಿಂಗ್ ವಿಚಾರ. ಪ್ರಶಾಂತ್ ನೀಲ್ ನಿರ್ದೇಶನ, ಹೊಂಬಾಳೆ ಫಿಲಂಸ್ ಪ್ರೊಡಕ್ಷನ್ ಇರೋದೇ ಈ ಕನೆಕ್ಷನ್ ಅಂತ ನೀವಂದುಕೊಂಡ್ರೆ ಅದು ತಪ್ಪು. ಕಿಸ್‌ಮಸ್‌ಗೆ 'ಸಲಾರ್' ರಿಲೀಸ್ ಆಗುತ್ತಿರುವುದಕ್ಕೆ ವಿಶೇಷ ಸಂಬಂಧ-ಲೆಕ್ಕಾಚಾರವಿದೆ. ಅದೇನು ಅಂತ ತಿಳಿಯುವುದಕ್ಕೆ ಮುಂದೆ ಓದಿ..

ಒಂದ್ಕಡೆ 'ಕೆಜಿಎಫ್' ರೂವಾರಿ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಪ್ರಭಾಸ್ ನಟಿಸಿದ 'ಸಲಾರ್ -ಸೀಜ್‌ಫೈಯರ್' ಡಿಸೆಂಬರ್ 22ಕ್ಕೆ ಬಿಡುಗಡೆಯಾಗ್ತಿದೆ. ಅದೇ ಮತ್ತೊಂದೆಡೆ ಅದೇ ದಿನ 'ಮುನ್ನಾಭಾಯಿ', 'ಪಿಕೆ', 'ಸಂಜು' ಅಂತಹ ಯಶಸ್ವಿ ಸಿನಿಮಾಗಳ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಬ್ಲಾಕ್‌ಬಸ್ಟರ್‌ಗಳ ಸರದಾರ ಆಕ್ಷನ್ ಕಟ್ ಹೇಳಿದ 'ಡಂಕಿ' ಕೂಡ ರಿಲೀಸ್ ಆಗ್ತಿದೆ. ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶಾರುಖ್ ಖಾನ್ ನಟಿಸಿರೋದೇ ಹೈಲೈಟ್.
'ಸಲಾರ್' ನಾನಾ ಕಾರಣಗಳಿಗೆ ಕನ್ನಡಿಗರೂ ಇಷ್ಟಪಟ್ಟು ಕಾಯ್ತಿರೋ ಸಿನಿಮಾ. ಮೊಟ್ಟಮೊದಲ ಬಾರಿಗೆ ಪ್ರಭಾಸ್‌ಗೆ ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳಿದ್ದಾರೆ. ಕೆಜಿಎಫ್ ಚಾಪ್ಟರ್ 1 ಮತ್ತು ಚಾಪ್ಟರ್ 2 ನಂತರ ಪ್ರಶಾಂತ್ ನೀಲ್ ಕೈಗೆತ್ತಿಕೊಂಡ ದೊಡ್ಡ ಪ್ರಾಜೆಕ್ಟ್ ಇದು. ಕನ್ನಡದ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ 'ಸಲಾರ್' ಸಿನಿಮಾ ನಿರ್ಮಾಣ ಮಾಡಿದೆ.
ತೆಲುಗಿನಲ್ಲಿ ಮೂಡಿಬರ್ತಿರೋ ಚಿತ್ರವಾದರೂ, ಬೇರೆ ಭಾಷೆಗಳಿಗೂ ಡಬ್ ಆಗ್ತಿರೋ 'ಸಲಾರ್' ಮೇಲೆ ಪ್ರಭಾಸ್‌ಗೂ ಭಾರೀ ಭರವಸೆ ಇದೆ. ಈ ಚಿತ್ರದ ಗೆಲುವು ಪ್ರಭಾಸ್‌ಗೆ ಈಗಿನ ಸಂದರ್ಭದಲ್ಲಿ ಅತ್ಯಂತ ಅವಶ್ಯಕ ಕೂಡಾ ಹೌದು. 'ಬಾಹುಬಲಿ' ನಂತರ ಸಾಲು ಸಾಲು ಸೋಲನ್ನು ಉಂಡಿರುವ ಪ್ರಭಾಸ್ 'ಸಲಾರ್' ಮೂಲಕ ಮತ್ತೆ ಯಶಸ್ಸನ್ನು ಕೈಗೆಟುಕಿಸಿಕೊಳ್ಳೋಕೆ ಇದು ಸರಿಯಾದ ಅವಕಾಶ ಕೂಡಾ ಹೌದು ಅಂತಾರೆ ಸಿನಿ ಪಂಡಿತರು.

ಇನ್ನು 'ಡಂಕಿ' ವಿಚಾರ. ಬಹಳ ವರ್ಷಗಳ ಬ್ರೇಕ್ ನಂತರ ರಾಜ್‌ಕುಮಾರ್ ಹಿರಾನಿ ಸಿನಿಮಾ ಮಾಡ್ತಿದ್ದಾರೆ. ಅಲ್ಲದೇ ಶಾರುಖ್ ಖಾನ್ ಮತ್ತು ಹಿರಾನಿ ಮೊಟ್ಟಮೊದಲ ಬಾರಿಗೆ ಜೊತೆಯಾಗಿ ಕೆಲಸ ಮಾಡ್ತಿದ್ದಾರೆ. ಈ ವರ್ಷ ಬಿಡುಗಡೆಯಾದ ಎರಡೂ ಚಿತ್ರಗಳ ಮೂಲಕ ಶಾರುಖ್ ಬಾಕ್ಸಾಫೀಸ್ ಚಿಂದಿ ಉಡಾಯಿಸಿದ್ದಾರೆ. ಪಠಾಣ್, ಜವಾನ್ ಚಿತ್ರಗಳು ಸಾವಿನಂಚಿನಲ್ಲಿದ್ದ ಬಾಲಿವುಡ್ ಕಲೆಕ್ಷನ್‌ಗೆ ಅಮೃತ ಕೊಟ್ಟು ಕಾಪಾಡಿವೆ.
'ಸಲಾರ್'ನಲ್ಲಿ ಪ್ರಭಾಸ್ ಜೊತೆ ಮಲಯಾಳಂನ ಜನಪ್ರಿಯ ನಟ-ನಿರ್ಮಾಪಕ ಪೃಥ್ವಿರಾಜ್ ಸುಕುಮಾರನ್ ಕೂಡಾ ಮುಖ್ಯ ಪಾತ್ರವೊಂದನ್ನು ನಿರ್ವಹಿಸಿದ್ದಾರೆ.
'ಕೆಜಿಎಫ್ ಚಾಪ್ಟರ್ 1' ಸಿನಿಮಾ ಕೂಡಾ ಕ್ರಿಸ್‌ಮಸ್ ಸಂದರ್ಭದಲ್ಲೇ ಬಿಡುಗಡೆಯಾಗಿತ್ತು. ನಂತರ ಆ ಸಿನಿಮಾ ಬರೆದ ಇತಿಹಾಸವನ್ನು ನಾವೆಲ್ಲರೂ ನೋಡಿದ್ದೇವೆ. ಕನ್ನಡ ಚಿತ್ರರಂಗದ ನಕ್ಷೆಯನ್ನೇ ಬದಲಿಸಿದ ಸಿನಿಮಾ ಅದು.
ಹೀಗಾಗಿ ಕ್ರಿಸ್‌ಮಸ್ ವೇಳೆ (ಡಿಸೆಂಬರ್ ಸೆಂಟಿಮೆಂಟ್) ಬಿಡುಗಡೆಯಾದರೆ ತಮಗೆ ನಿಜಕ್ಕೂ ಲಕ್ಕಿ ಅಂತ ಹೊಂಬಾಳೆ ಫಿಲಂಸ್ ಕೂಡಾ ಲೆಕ್ಕ ಹಾಕಿರೋದ್ರಲ್ಲಿ ಏನೂ ತಪ್ಪಿಲ್ಲ. ಹಾಗಾಗಿ ಈ ಹಿಂದೆ ಸೆಪ್ಟೆಂಬರ್ ರಿಲೀಸ್ ಡೇಟ್ ಎಂದುಕೊಂಡಿದ್ರೂ ಈಗ ಮತ್ತೆ ಕ್ರಿಸ್‌ಮಸ್ ಬಿಡುಗಡೆಯೇ ಸರಿ ಅನ್ನೋ ಲೆಕ್ಕಾಚಾರಕ್ಕೆ ಬಂದು ರಿಲೀಸ್ ಡೇಟ್ ಫಿಕ್ಸ್ ಮಾಡಿದ್ದಾರೆ. ಕ್ರಿಸ್‌ಮಸ್-ಹೊಸಾ ವರ್ಷ ಎಲ್ಲಾ ಸೇರಿ ಇಡೀ ವಾರ ಹಬ್ಬದ ವಾತಾವರಣ ಇರುತ್ತೆ. ರಜೆ ಇರೋದ್ರಿಂದ 'ಸಲಾರ್' ಕೂಡಾ 'ಕೆಜಿಎಫ್' ಲೆವೆಲ್‌ಗೆ ಅಥವಾ ಅದಕ್ಕಿಂತಲೂ ಒಂದು ಹೆಜ್ಜೆ ಹೆಚ್ಚೇ ಯಶಸ್ಸು ಕಾಣಬಹುದು ಅನ್ನೋದು ಚಿತ್ರತಂಡದ ಲೆಕ್ಕಾಚಾರ.


Click it and Unblock the Notifications











