ಸಮಂತಾ ಬಳಿಕ ಪತಿ ಹೆಸರು ಕೈ ಬಿಟ್ಟ ಪ್ರಿಯಾಂಕಾ: ಅಮ್ಮ ಹೇಳಿದ ಮಾತೇನು?
ನಟಿ ಸಮಂತಾ ಪತಿ ನಾಗಚೈತನ್ಯರಿಂದ ವಿಚ್ಛೇದನ ಪಡೆಯುವ ಮುನ್ನ ಸೋಶಿಯಲ್ ಮೀಡಿಯಾ ಖಾತೆಯಿಂದ ಅಕ್ಕಿನೇನಿ ಹೆಸರನ್ನು ತೆಗೆದು ಹಾಕಿದ್ದರು. ಈಗ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಕೂಡ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಮ್ಮ ಹೆಸರಿನ ಜೊತೆ ಸೇರಿಕೊಂಡಿದ್ದ ಪತಿಯ ಹೆಸರನ್ನು ತೆಗೆದು ಹಾಕಿದ್ದಾರೆ. ಈ ವಿಷಯ ಬಹಿರಂಗ ಆಗುತ್ತಿದ್ದಂತೆ ಇಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂದು ಚರ್ಚೆಯಾಗುತ್ತಿದೆ .
ಹಾಲಿವುಡ್ ಗಾಯಕ-ನಟ ನಿಕ್ ಜೋನಸ್ ಜೊತೆ ವಿವಾಹವಾದ ಬಳಿಕ ಪ್ರಿಯಾಂಕಾ ಚೋಪ್ರಾ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪ್ರಿಯಾಂಕಾ ಚೋಪ್ರಾ ಜೊತೆ ಪತಿ ಹೆಸರು ಜೋನಸ್ ಸೇರಿಸಿಕೊಂಡಿದ್ದರು. ಈಗ ಅದೇ ಜೋನಸ್ ಹೆಸರನ್ನು ತಮ್ಮ ಹೆಸರಿನಿಂದ ಕೈ ಬಿಟ್ಟಿದ್ದಾರೆ. ಪ್ರಿಯಾಂಕಾ ತನ್ನ ಹೆಸರಿನ ಜೊತೆ ಅಂಟಿಕೊಂಡಿದ್ದ ಜೋನಸ್ ಹೆಸರನ್ನು ಕೈಬಿಟ್ಟಿದ್ದು ಹಲವು ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

ಪ್ರಿಯಾಂಕಾ ದಾಂಪತ್ಯದಲ್ಲಿ ಬಿರುಕು?
ಪ್ರಿಯಾಂಕಾ ಚೋಪ್ರಾ ಸದ್ಯ ಪತಿಯೊಂದಿಗೆ ನೆಲೆಸಿದ್ದಾರೆ. ನಟನೆ ಜೊತೆ ಗಾಯನದಲ್ಲಿ ಹೆಸರು ಮಾಡಿರುವ ನಟಿ ಹಾಲಿವುಡ್‌ನಲ್ಲಿ ನೆಲೆ ಕಂಡುಕೊಂಡಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ನಟಿಯನ್ನು ಸೆಲೆಬ್ರಿಟಿಗಳು ಪ್ರಿಯಾಂಕಾ ಚೋಪ್ರಾ ಜೋನಸ್ ಎಂದೇ ಗುರುತಿಸುತ್ತಾರೆ. ವಿವಾಹದ ಬಳಿಕ ಪ್ರಿಯಾಂಕಾ ಚೋಪ್ರಾ ಕೂಡ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಜೋನಾಸ್ ಹೆಸರನ್ನು ಸೇರಿಸಿಕೊಂಡಿದ್ದರು. ಆದ್ರೀಗ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪ್ರಿಯಾಂಕಾ ಚೋಪ್ರಾ ಜೊತೆಯಿದ್ದ ಪತಿಯ ಹೆಸರನ್ನು ತೆಗೆದುಹಾಕಿದ್ದಾರೆ. ಇದರಿಂದ ಇಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಗಾಳಿ ಸುದ್ದಿ ಹರಡಬೇಡಿ ಎಂದು ಪ್ರಿಯಾಂಕಾ ಅಮ್ಮ
ಪ್ರಿಯಾಂಕಾ ತನ್ನ ಹೆಸರಿನಿಂದ ಜೋನಸ್ ಕಿತ್ತು ಹಾಕುತ್ತಿದ್ದಂತೆ ಹಲವು ಗಾಳಿಸುದ್ದಿಗೆ ಆಹಾರವಾಗಿದ್ದರು. ಈ ಬಗ್ಗೆ ಪ್ರಿಯಾಂಕಾ ತಾಯಿ ಮಧು ಚೋಪ್ರಾ ಖಾರವಾಗಿ ಪ್ರತಿಕ್ರಿಯಿಸಿದ್ದು, " ಇದೆಲ್ಲಾ ಸುಳ್ಳು ಸುದ್ದಿ, ಸುಖಾಸುಮ್ಮನೆ ಗಾಳಿಸುದ್ದಿಯನ್ನು ಹಬ್ಬಿಸಬೇಡಿ ಎಂದು ಹೇಳಿ" ಎಂದು ಹೇಳಿದ್ದಾರೆ.

ಹೊಸ ಮನೆಯಲ್ಲಿ ದೀಪಾವಳಿ ಹಬ್ಬ ಆಚರಿಸಿದ್ದ ದಂಪತಿ
ಇತ್ತೀಚೆಗೆ ಪ್ರಿಯಾಂಕಾ ಚೋಪ್ರಾ ಹಾಗೂ ಪತಿ ನಿಕ್ ಅಮೆರಿಕದ ಲಾಸ್ ಎಂಜಲೀಸ್‌ನಲ್ಲಿ ಹೊಸ ಮನೆಯನ್ನು ಖರೀದಿ ಮಾಡಿದ್ದರು. ಅದೇ ಮನೆಯಲ್ಲಿ ದೀಪಾವಳಿ ಹಬ್ಬವನ್ನ ಆಚರಿಸಿದ್ದರು. ಈ ವೇಳೆ ಪ್ರಿಯಾಂಕಾ ಪತಿಯೊಂದಿಗೆ ಕೆಲವು ಫೋಟೊಗಳನ್ನು ಶೇರ್ ಮಾಡಿದ್ದರು. " ಇದು ನಮ್ಮ ಮೊದಲ ಮನೆಯಲ್ಲಿ ಮೊದಲ ದೀಪಾವಳಿ. ಈ ಸಂಜೆಯನ್ನು ವಿಶೇಷವನ್ನಾಗಿಸಲು ಕಷ್ಟಪಟ್ಟ ಎಲ್ಲರಿಗ ಧನ್ಯವಾದಗಳು. ಕೇವಲ ಬಟ್ಟೆ, ಡ್ಯಾನ್ಸ್ ಅಷ್ಟೇ ಅಲ್ಲ. ನನ್ನ ಮನೆ ಹಾಗೂ ಸಂಸ್ಕೃತಿಯನ್ನು ಗೌರವಿಸಿದ್ದಕ್ಕೆ ಧನ್ಯವಾದ. ನನಗೆ ನನ್ನ ಮನೆಗೆ ಮರಳಿ ಬಂದಂತಹ ಅನುಭವವಾಗುತ್ತಿದೆ. ನನ್ನ ಪತಿ ನಿಕ್ ಜೋನಸ್ ಕನಸುಗಳನ್ನು ನಿರ್ಮಿಸುವವರು ನೀವೆ. ಐ ಲವ್ ಯು." ಎಂದು ಪ್ರಿಯಾಂಕಾ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು.

2018ರಲ್ಲಿ ನಿಕ್-ಪ್ರಿಯಾಂಕಾ ವಿವಾಹ
ಪ್ರಿಯಾಂಕಾ ಚೋಪ್ರಾ ಹಾಗೂ ಪಾಪ್ ಸ್ಟಾರ್ ನಿಕ್ ಜೋನಸ್ 2018 ಡಿಸೆಂಬರ್1 ರಂದು ವಿವಾಹವಾಗಿದ್ದರು. ಭಾರತದಲ್ಲೇ ಪ್ರಿಯಾಂಕಾರನ್ನು ನಿಕ್ ಅದ್ದೂರಿಯಾಗಿ ವಿವಾಹವಾಗಿದ್ದರು. ಬಳಿಕ ಪ್ರಿಯಾಂಕಾ ಹಾಗೂ ನಿಕ್ ಜೋನಸ್ ಅಮೆರಿಕದಲ್ಲಿ ನೆಲೆಸಿದ್ದರು.


Click it and Unblock the Notifications











