ಮಕ್ಕಳ ಬಳಿಕ ಅಪ್ಪನಿಗೂ ಬಂತು ಕೊರೊನಾ ವೈರಸ್: ಬಾಲಿವುಡ್ ಕುಟುಂಬಕ್ಕೆ ಕೋವಿಡ್ ಕಾಟ
ಬಾಲಿವುಡ್ ನಿರ್ಮಾಪಕ ಕರೀಮ್ ಮೊರಾನಿ ಅವರಲ್ಲಿಯೂ ಕೊರೊನಾ ವೈರಸ್ ಪಾಸಿಟಿವ್ ಕಂಡುಬಂದಿದೆ. ತಮ್ಮ ಅವಳಿ ಮಕ್ಕಳಾದ ಜೋಯಾ ಮತ್ತು ಶಾಜಾ ಮೊರಾನಿ ಅವರಲ್ಲಿ ಕೊರೊನಾ ವೈರಸ್ ಪಾಸಿಟಿವ್ ದೃಢಪಟ್ಟ ಬಳಿಕ ಕರೀಮ್ ಅವರನ್ನೂ ತಪಾಸಣೆಗೆ ಒಳಪಡಿಸಲಾಗಿತ್ತು. ಈಗ ಒಂದೇ ಕುಟುಂಬದ ಮೂವರಲ್ಲಿ ಕೊರೊನಾ ವೈರಸ್ ಕಂಡುಬಂದಿದೆ.
ಕರೀಮ್ ಅವರನ್ನು ಮುಂಬೈನ ನಾನಾವತಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ. ಈ ಸುದ್ದಿಯನ್ನು ಕರೀಮ್ ಅವರ ಸಹೋದರ ಖಚಿತಪಡಿಸಿದ್ದಾರೆ. 'ಅವರು ತಮ್ಮ ಹೆಣ್ಣುಮಕ್ಕಳ ಜತೆಯಲ್ಲಿಯೇ ಇದ್ದಿದ್ದರಿಂದ ಈ ವೈದ್ಯಕೀಯ ವರದಿಯನ್ನು ನಾವು ನಿರೀಕ್ಷಿಸಿದ್ದೆವು. ಕರೀಮ್ ಅವರಲ್ಲಿ ಕೊರೊನಾ ವೈರಸ್ ಪಾಸಿಟಿವ್ ಕಂಡುಬಂದಿದೆ' ಎಂದು ತಿಳಿಸಿದ್ದಾರೆ.
ಶಾಜಾ ಮೊರಾನಿ ಕೂಡ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಆಕೆಯ ಅಕ್ಕ, ಬಾಲಿವುಡ್ ನಟಿ ಜೊಯಾ ಮೊರಾನಿ ಕೋಕಿಲಾ ಬೆನ್ ಅಂಬಾನಿ ಆಸ್ಪತ್ರೆಯಲ್ಲಿದ್ದಾರೆ.

ಮಾರ್ಚ್ ಮೊದಲ ವಾರದಲ್ಲಿ ಶ್ರೀಲಂಕಾದಿಂದ ಶಾಜಾ ವಾಪಸ್ ಆಗಿದ್ದರು. ಅವರಲ್ಲಿ ಯಾವುದೇ ಲಕ್ಷಣಗಳು ಕಂಡುಬರದೇ ಇದ್ದರೂ ಮುಂಬೈನ ನಾನಾವತಿ ಆಸ್ಪತ್ರೆಗೆ ಸೋಮವಾರ ದಾಖಲಾಗಿದ್ದರು. ಬಳಿಕ ಅವರಲ್ಲಿ ಸೋಂಕು ಇರುವುದು ಕಂಡುಬಂದಿತ್ತು. ರಾಜಸ್ಥಾನದಿಂದ ಮಾರ್ಚ್ ಮಧ್ಯದಲ್ಲಿ ಮನೆಗೆ ಮರಳಿದ್ದ ಜೋಯಾ ಅವರಲ್ಲಿ ಕೂಡ ಕೊರನಾ ವೈರಸ್ ಇರುವುದು ದೃಢಪಟ್ಟಿದೆ.


Click it and Unblock the Notifications











