ಅಂಬಾನಿ ಮಗನ ಮದುವೆಯಲ್ಲಿ ತಲೈವಾ ಡ್ಯಾನ್ಸ್; ದುಡ್ಡು ಎಂತಹವರನ್ನು ಕುಣಿಸುತ್ತದೆ ಎಂದು ಟ್ರೋಲ್!
ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಕಿರಿಯ ಪುತ್ರನ ವಿವಾಹವು ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯುತ್ತಿದೆ. ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹ ಮಹೋತ್ಸವಕ್ಕೆ ವಿಶ್ವದಾದ್ಯಂತ ಸೆಲೆಬ್ರಿಟಿಗಳು, ಉದ್ಯಮಿಗಳು ಭಾಗಿ ಆಗಿದ್ದಾರೆ.
ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ಕುಟುಂಬ ಸಮೇತ ಮದುವೆಗೆ ಹಾಜರ್ ಆಗಿದ್ದಾರೆ. ಪತ್ನಿ, ಮಗಳು, ಅಳಿಯ ಮತ್ತು ಮೊಮ್ಮಗನೊಂದಿಗೆ ತಲೈವಾ ಅಂಬಾನಿ ಮದುವೆ ಮನೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅನಿಲ್ ಕಪೂರ್ ಜೊತೆ ರಜನಿಕಾಂತ್ ಹಾಕಿರುವ ಸ್ಟೆಪ್ಸ್ ಫುಲ್ ವೈರಲ್ ಆಗುತ್ತಿದೆ. ಅಷ್ಟೇ ಅಲ್ಲ ಇದು ಟ್ರೋಲ್ ಕೂಡ ಆಗುತ್ತಿದೆ.

ಕುಬೇರ ಅಂಬಾನಿ ಮನೆ ಮದುವೆ ಅಂದ್ರೆ ತಮಾಷೆನಾ? ಆಮಂತ್ರಣ ಪತ್ರಿಕೆಯಿಂದ ಮದುವೆ ನಡೆಯುವ ಸ್ಥಳದವರೆಗೆ, ಅತಿಥಿಗಳಿಗೆ ನೀಡುವ ಡ್ರೆಸ್‌ನಿಂದ ಹಿಡಿದು ಊಟದವರೆಗೆ ಎಲ್ಲವೂ ವಿಶೇಷ. ಎಂಗೇಜ್ ಮೆಂಟ್ ಮತ್ತು ಪ್ರಿ ವೆಡ್ಡಿಂಗ್ ಅನ್ನು ಒಂದು ರೇಂಜ್‌ನಲ್ಲಿ ಮಾಡಿರುವ ಮುಖೇಶ್ ಅಂಬಾನಿ, ಮಗನ ಮದುವೆ ಸಮಾರಂಭವನ್ನು ಅಭೂತಪೂರ್ವ ರೀತಿಯಲ್ಲಿ ನೆರವೇರಿಸಲು ರೆಡಿಯಾಗಿದ್ದಾರೆ. ಮೂರು ದಿನಗಳ ವಿವಾಹ ಸಮಾರಂಭವು ಸಾಮಾನ್ಯ ಸಂಗತಿಯಲ್ಲ. ಸದ್ಯ ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಸ್ವರ್ಗವೇ ಭೂಮಿಗಿಳಿದಂತೆ ಭಾಸವಾಗುತ್ತಿದೆ.
ನವ ವಧು ವರರನ್ನು ಅತಿರಥ ಮಹಾರಥರು ಆಶೀರ್ವದಿಸಲಿದ್ದಾರೆ. ಶಾರುಖ್ ಖಾನ್, ಸಲ್ಮಾನ್ ಖಾನ್, ರಾಮ್‌ಚರಣ್, ಮಹೇಶ್ ಬಾಬು, ರಜನಿಕಾಂತ್, ಯಶ್ ಆದಿಯಾಗಿ ಭಾರತೀಯ ಚಿತ್ರರಂಗದ ಸ್ಟಾರ್ ನಟರೆಲ್ಲಾ ಅಂಬಾನಿ ಮನೆ ಮದುವೆ ಸಮಾರಂಭದಕ್ಕೆ ಫ್ಯಾಮಿಲಿ ಸಮೇತ ಭಾಗಿ ಆಗುತ್ತಿದ್ದಾರೆ. ಪಾಪ್ ಗಾಯಕರು ಹಾಡು ಹಾಡಿ ಅತಿಥಿಗಳನ್ನು ರಂಜಿಸುತ್ತಿದ್ದಾರೆ. ಇದಕ್ಕಾಗಿ ಕೋಟಿ ಕೋಟಿ ಸುರಿಯಲಾಗುತ್ತಿದೆ.

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಗೆ 1000 ಕೋಟಿ ರೂ.ಗೂ ಅಧಿಕ ಖರ್ಚು ಮಾಡುತ್ತಿದ್ದಾರೆ ಎನ್ನಲಾಗ್ತಿದೆ. ಬರೀ ಸಿನಿಮಾ ಅಲ್ಲ ರಾಜಕೀಯ, ಕ್ರೀಡೆ, ವ್ಯಾಪಾರ ಕ್ಷೇತ್ರದ ಗಣ್ಯರು ಅದ್ಧೂರಿ ಕಲ್ಯಾಣೋತ್ಸವಕ್ಕೆ ಹಾಜರಾಗುತ್ತಿದ್ದಾರೆ. ಮದುವೆ ಮನೆಯ ಫೋಟೊಗಳು, ವೀಡಿಯೋಗಳು ಸಖತ್ ವೈರಲ್ ಆಗುತ್ತಿದೆ. ಹೀಗೆ ಭಾರತೀಯ ಚಿತ್ರರಂಗದ ಖ್ಯಾತ ತಾರೆಯರೆಲ್ಲಾ ಒಂದೇ ಕಾರ್ಯಕ್ರಮಕ್ಕೆ ಒಂದೆಡೆ ಸೇರಿರುವುದು ಇದೇ ಮೊದಲು ಎನಿಸುವಂತಿದೆ.
ಸೂಪರ್ ಸ್ಟಾರ್ ರಜನಿಕಾಂತ್ ಸಾಮಾನ್ಯವಾಗಿ ಸಿನಿಮಾಗಳಲ್ಲಿ ಡ್ಯಾನ್ಸ್ ಮಾಡುತ್ತಾರೆ. ಸಾರ್ವಜನಿಕವಾಗಿ ಎಲ್ಲೂ ಡ್ಯಾನ್ಸ್ ಮಾಡುವವರಲ್ಲ. ಆದರೆ ಅಂಬಾನಿ ಮನೆ ಮದುವೆ ಸಮಾರಂಭದಲ್ಲಿ ತಾರೆಯರೆಲ್ಲಾ ಸ್ಟೆಪ್ಸ್ ಹಾಕಿ ಎಂಜಾಯ್ ಮಾಡಿದ್ದಾರೆ. ಅದರಲ್ಲಿ ರಜನಿಕಾಂತ್ ಡ್ಯಾನ್ಸ್ ವೀಡಿಯೋ ವೈರಲ್ ಆಗುತ್ತಿದೆ. 20ರ ಯುವಕನಂತೆ ತಲೈವಾ ಹೆಜ್ಜೆ ಹಾಕಿದ್ದಾರೆ. ಕ್ರೀಮ್ ಕಲರ್ ಪಂಚೆ, ಕುರ್ತಾ ತೊಟ್ಟು ತಲೈವಾ ಕಾಣಿಸಿಕೊಂಡಿದ್ದಾರೆ.
ಅಭಿಮಾನಿಗಳು ರಜನಿಕಾಂತ್ ಡ್ಯಾನ್ಸ್ ನೋಡಿ ಖುಷಿಪಟ್ಟಿದ್ದಾರೆ. ಮತ್ತೆ ಕೆಲವರು ಅಂಬಾನಿ ದುಡ್ಡು ಯಾರನ್ನು ಬೇಕಾದರೂ ಕುಣಿಸುತ್ತದೆ. ದುಡ್ಡಿನ ತಾಳಕ್ಕೆ ಯಾರು, ಎಲ್ಲಿ ಬೇಕಾದರೂ ಕುಣಿಯುತ್ತಾರೆ ಎಂದು ಎಂದು ಟ್ರೋಲ್ ಮಾಡುತ್ತಿದ್ದಾರೆ. 'ದಿಲ್ ಧಡಕ್ನೆ ದೋ' ಚಿತ್ರದ 'ಗಲ್ಲನ್ ಗುಡಿಯನ್' ಹಾಡಿಗೆ ಅನಿಲ್ ಕಪೂರ್ ಹಾಗೂ ರಣ್‌ವೀರ್ ಸಿಂಗ್ ಜೊತೆ ರಜಿನಿಕಾಂತ್ ಡ್ಯಾನ್ಸ್ ಮಾಡಿರುವುದನ್ನು ನೋಡಬಹುದು.
ತಲೈವಾ ಸಿನಿಮಾಗಳ ವಿಚಾರಕ್ಕೆ ಬಂದರೆ 'ವೆಟ್ಟೆಯಾನ್' ಬಿಡುಗಡೆಗೆ ಸಜ್ಜಾಗುತ್ತಿದೆ. ಲೋಕೇಶ್ ಕನಕರಾಜ್ ನಿರ್ದೇಶನದ 'ಕೂಲಿ' ಚಿತ್ರಕ್ಕೆ ರಜನಿಕಾಂತ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಶೀಘ್ರದಲ್ಲೇ ಚಿತ್ರೀಕರಣದಲ್ಲಿ ಭಾಗಿ ಆಗಲಿದ್ದಾರೆ.


Click it and Unblock the Notifications











