'ರಾಮಾಯಣ' ಧಾರಾವಾಹಿಯ ಶ್ರೀರಾಮನಿಗೆ ಲೋಕಸಭೆ ಟಿಕೆಟ್ ನೀಡಿದ ಬಿಜೆಪಿ: ಏನಿದು ಲೆಕ್ಕಾಚಾರ?
2024ರ ಲೋಕಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ಮತ್ತಷ್ಟು ಹೆಚ್ಚಾಗುತ್ತಿದೆ. ಉರಿ ಬಿಸಿಲಿಗಿಂತ ಲೋಕಸಭೆ ಕಾವು ಹೆಚ್ಚಾಗುವ ಮುನ್ಸೂಚನೆಯಂತೂ ಸಿಕ್ಕಿದೆ. ಇಂದು( ಮಾರ್ಚ್ 24) ಬಿಜೆಪಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳ 5ನೇ ಪಟ್ಟಿಯನ್ನು ರಿಲೀಸ್ ಮಾಡಿದೆ. ಇದರಲ್ಲಿ ಅಚ್ಚರಿ ಎಂಬಂತೆ 'ರಾಮಾಯಣ' ಧಾರಾವಾಹಿಯ ಶ್ರೀರಾಮ ಪಾತ್ರಧಾರಿ ಅರುಣ್ ಗೋವಿಗೆ ಟಿಕೆಟ್ ನೀಡಲಾಗಿದೆ.
ನಟ ಅರುಣ್ ಗೋವಿಲ್ ಬಾಲಿವುಡ್‌ನ ಜನಪ್ರಿಯ ನಟ. ಕಿರುತೆರೆಯ ಜೊತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, 80ರ ದಶಕದ ಅಂತ್ಯದಲ್ಲಿ ಬಂದ 'ರಾಮಾಯಣ' ಧಾರಾವಾಹಿಯಲ್ಲಿ ಶ್ರೀರಾಮನಾಗಿ ನಟಿಸಿದ್ದರು. ಆ ಪಾತ್ರವನ್ನು ಇನ್ನು ಬಹುತೇಕ ಮಂದಿ ಮರೆತಿಲ್ಲ. ಆ ಜನಪ್ರಿಯತೆ ಇನ್ನೂ ಉಳಿಸಿಕೊಂಡಿರುವ ಅರುಣ್ ಗೋವಿಲ್‌ಗೆ ಬಿಜೆಪಿ ಲೆಕ್ಕಾಚಾರ ಹಾಕಿ ಟಿಕೆಟ್ ನೀಡಿದೆ.

ಹಿರಿಯ ನಟ ಅರುಣ್ ಗೋವಿಲ್‌ಗೆ ಬಿಜೆಪಿ ಪಕ್ಷ ಉತ್ತರ ಪ್ರದೇಶದ ಮೀರತ್ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಟಿಕೆಟ್ ನೀಡಿದೆ. ಐದನೇ ಪಟ್ಟಿಯಲ್ಲಿ ಅರುಣ್ ಗೋವಿಲ್ ಹೆಸರು ಮೀರತ್‌ನಿಂದ ಫೈನಲ್ ಆಗಿದೆ. ಇದು ಅವರ ಅಭಿಮಾನಿಗಳಿಗೆ, ಬಿಜೆಪಿ ಬೆಂಬಲಿಗರ ಸಂತಸವನ್ನು ದುಪ್ಪಟ್ಟು ಮಾಡಿದೆ.
ಅಷ್ಟಕ್ಕೂ ಬಿಜೆಪಿ ಅರುಣ್ ಗೋವಿಲ್‌ಗೆ ಟಿಕೆಟ್ ನೀಡಿದ್ದಕ್ಕೆ ಕಾರಣವಿದೆ. 'ರಾಮಾಯಣ' ಧಾರಾವಾಹಿಯ ನಟ ಅರುಣ್ ಗೋವಿಲ್ ಉತ್ತರ ಪ್ರದೇಶದ ಮೀರತ್‌ನವರೇ ಆಗಿದ್ದಾರೆ. ಅಲ್ಲದೆ ಇತ್ತೀಚೆಗೆ ಶ್ರೀರಾಮ ಮಂದಿರ ಉದ್ಘಾಟನೆ ವೇಳೆ ಸಕ್ರಿಯರಾಗಿದ್ದರು. ಜೊತೆ ಪ್ರಮುಖ ಆಕರ್ಷಣೆ ಕೂಡ ಆಗಿದ್ದರು. ಇದೇ ಬೆನ್ನಲ್ಲೇ ಮೀರತ್‌ನ ಲೋಕಸಭೆ ಅಭ್ಯರ್ಥಿಯಾಗಿ ಟಿಕೆಟ್ ಘೋಷಣೆಯಾಗಿದೆ.

'ರಾಮಾಯಣ'ದಲ್ಲಿ ಶ್ರೀರಾಮನ ಪಾತ್ರ ಮಾಡಿದ ದಿನದಿಂದ ಅರುಣ್ ಗೋವಿಲ್‌ರನ್ನೇ ಅದೆಷ್ಟೋ ಮಂದಿ ಶ್ರೀರಾಮ ಅಂತ ಪೂಜೆ ಮಾಡುತ್ತಿರುವವರು ಇದ್ದಾರೆ. ಶ್ರೀರಾಮನ ಪಾತ್ರ ಅಷ್ಟೊಂದು ಜನಪ್ರಿಯತೆಯನ್ನು ತಂದುಕೊಟ್ಟಿತ್ತು. 80ರ ದಶಕದ ಅಂತ್ಯದಲ್ಲಿ ಪ್ರಸಾರ ಆಗಿದ್ದ 'ರಾಮಾಯಣ' ಧಾರಾವಾಹಿ ಇಂದಿಗೂ ವೀಕ್ಷಕರ ಫೇವರಿಟ್.
ಇತ್ತೀಚೆಗೆ 'ಆದಿಪುರುಷ್' ರಿಲೀಸ್ ವೇಳೆ ಇಡೀ ಸಿನಿಮಾ ವಿವಾದಕ್ಕೆ ಒಳಗಾದಾಗ ವೀಕ್ಷಕರು 80 ದಶಕದ 'ರಾಮಾಯಣ' ಧಾರಾವಾಹಿಯನ್ನೇ ಉದಾಹರಣೆ ನೀಡಿದ್ದರು. ರಾಮ ಪಾತ್ರದಲ್ಲಿ ಅರುಣ್ ಗೋವಿಲ್ ಅನ್ನು ಮೆಚ್ಚಿಕೊಂಡ ಜನತೆ ರಾಜಕೀಯದಲ್ಲೂ ಯಶಸ್ಸು ನೀಡಬಹುದೇ? ಎಂಬ ಕೂತೂಹಲ ಮೂಡಿದೆ.
1977ರಲ್ಲಿ ತೆರೆಕಂಡ 'ಪಹೇಲಿ' ಸಿನಿಮಾ ಮೂಲಕ ನಟನೆ ಶುರು ಮಾಡಿದ್ದ ಅರುಣ್ ಗೋವಿಲ್ ಇತ್ತೀಚೆಗೆ ತೆರೆಕಂಡಿರೊ 'ಆರ್ಟಿಕ್ 370'ವರೆಗೂ ನಿರಂತರವಾಗಿ ನಟಿಸುತ್ತಿದ್ದಾರೆ. 2024ರಲ್ಲಿ ಫೆಬ್ರವರಿ 23ರಂದು ತೆರೆಕಂಡಿದ್ದ 'ಆರ್ಟಿಕಲ್ 370' ಸಿನಿಮಾದಲ್ಲಿ ಅರುಣ್ ಗೋವಿಲ್ ಪ್ರಧಾನಿ ನರೇಂದ್ರ ಮೋದಿ ಪಾತ್ರದಲ್ಲಿ ನಟಿಸಿದ್ದರು. 20 ಕೋಟಿ ರೂಪಾಯಿಯಲ್ಲಿ ನಿರ್ಮಾಣಗೊಂಡಿದ್ದ ಈ ಸಿನಿಮಾ 100 ಕೋಟಿ ರೂಪಾಯಿ ಕಲೆಹಾಕಿತ್ತು.


Click it and Unblock the Notifications