ಕಂಗನಾ ರಣಾವತ್ ಮತ್ತು ಅಮೀರ್ ಖಾನ್ ಸ್ನೇಹ ಕೆಡಲು ಕಾರಣ ಬಿಚ್ಚಿಟ್ಟ ಸಹೋದರಿ
ಬಾಲಿವುಡ್ ಕಲಾವಿದರಾದ ಕಂಗನಾ ರಣಾವತ್ ಮತ್ತು ಅಮೀರ್ ಖಾನ್ ಒಂದು ಕಾಲದಲ್ಲಿ ಉತ್ತಮ ಗೆಳೆತನ ಬಾಂಧವ್ಯ ಹೊಂದಿದ್ದರು. ಅಮೀರ್ ಖಾನ್ ಅವರನ್ನು ತಮ್ಮ ರೋಲ್ ಮಾಡೆಲ್ ಎಂದೇ ಕಂಗನಾ ಭಾವಿಸಿದ್ದರು. ಆದರೆ ಇಬ್ಬರ ಗೆಳೆತನ ಇದ್ದಕ್ಕಿದ್ದಂತೆ ಬಿರುಕುಬಿಟ್ಟಿತು. ಇದಕ್ಕೆ ಕಾರಣವಾಗಿದ್ದು ಅವರ ನಡುವಿನ ವಿಭಿನ್ನ ರಾಜಕೀಯ ದೃಷ್ಟಿಕೋನಗಳೇ ಇದಕ್ಕೆ ಕಾರಣ ಎಂದು ಕಂಗನಾ ತಂಗಿ ಬಹಿರಂಗಪಡಿಸಿದ್ದಾರೆ.
ಅಷ್ಟೇನೂ ಗಂಭೀರವಲ್ಲದ ಅಂಶಗಳು ಗೆಳೆತನವನ್ನು ಹಾಳುಮಾಡಲು ಕಾರಣವಾಗಬಹುದು ಎಂದು ಕಂಗನಾ ಸಹೋದರಿ ರಂಗೋಲಿ ಚಾಂಡೇಲ್ ಹೇಳಿದ್ದಾರೆ.
ಅಮೀರ್ ಖಾನ್ ಅವರು ನಿರೂಪಣೆ ಮಾಡುತ್ತಿದ್ದ 'ಸತ್ಯಮೇವ ಜಯತೆ' ಶೋದಲ್ಲಿ ಕಂಗನಾ ಭಾಗವಹಿಸಿದ್ದ ಕಂತಿನ ದೃಶ್ಯವೊಂದನ್ನು ಹಂಚಿಕೊಂಡಿರುವ ರಂಗೋಲಿ, 'ಅವಳೊಬ್ಬ ಲೆಜೆಂಡ್. ಇಡೀ ಒಂದು ಪೀಳಿಗೆಗೆ ಆಕೆ ಸ್ಫೂರ್ತಿ ನೀಡಿದ್ದಾಳೆ' ಎಂದು ಹೇಳಿದ್ದಾರೆ.

ಅಮೀರ್ ಖಾನ್ ರೋಲ್ ಮಾಡೆಲ್ ಆಗಿದ್ದರು
ಒಂದು ಕಾಲದಲ್ಲಿ ಆಕೆ ಅಮೀರ್ ಖಾನ್ ಸರ್ ಅವರನ್ನು ರೋಲ್ ಮಾಡೆಲ್ ಎಂದು ಅನುಸರಿಸಿದ್ದಳು ಎಂಬುದನ್ನು ಮರೆಯುವಂತಿಲ್ಲ. ಅವರೂ ಆಕೆಗೆ ಮಾರ್ಗದರ್ಶನ ನೀಡಿದ್ದರು. ಬೇಸರದ ಸಂಗತಿಯೆಂದರೆ ಈಗ ಎಲ್ಲವೂ ಬದಲಾಗಿದೆ. ಆದರೆ ಅದು ಪರವಾಗಿಲ್ಲ. ರಾಜಕೀಯ ದೃಷ್ಟಿಕೋನದ ಕಾರಣದಿಂದ ಗೆಳೆತನಕ್ಕೆ ಹಾನಿಯಾದರೆ ಅದು ಅಷ್ಟು ಗಟ್ಟಿ ಇರಲಿಲ್ಲ ಎಂದರ್ಥ' ಎಂದು ಹೇಳಿದ್ದಾರೆ.

ಅಮೀರ್, ಅನುರಾಗ್ ಬಸುಗೆ ಕೃತಜ್ಞತೆ
ತನ್ನನ್ನು ಮಾದರಿ ಮಹಿಳೆಯಾಗಿ ರೂಪಿಸಿದ ಪುರುಷರಿಗೆ ಧನ್ಯವಾದ ಹೇಳಲು ಕಂಗನಾ ಬಯಸಿದ್ದಳು. ಕಲಾವಿದೆಯಾಗಿ ಅಮೀತ್ ಖಾನ್ ಆಕೆಗೆ ವೃತ್ತಿ ಬದುಕಿನ ಗುರಿಗಳನ್ನು ರೂಪಿಸಿಕೊಟ್ಟರು. ಹಾಗೆಯೇ ಅವಳು ಹೇಗೆ ನಟಿಸಬೇಕೆಂದು ಕಲಿಸಿಕೊಟ್ಟ ಶ್ರೇಯಸ್ಸನ್ನು ನಿರ್ದೇಶಕ ಅನುರಾಗ್ ಬಸು ಅವರಿಗೆ ನೀಡಿದ್ದಾಳೆ ಎಂದು ವಿವರಿಸಿದ್ದಾರೆ.

ಕಂಗನಾ ಸಿನಿಮಾಕ್ಕೆ ಅಮೀರ್ ಗೈರು
ಕಳೆದ ವರ್ಷ ತಮ್ಮ 'ಮಣಿಕರ್ಣಿಕ: ದಿ ಕ್ವೀನ್ ಆಫ್ ಝಾನ್ಸಿ' ಚಿತ್ರದ ಪ್ರದರ್ಶನಕ್ಕೆ ಹಾಜರಾಗದ ಕಾರಣಕ್ಕೆ ಅಮೀರ್ ಖಾನ್ ಕುರಿತು ಕಂಗನಾ ಅಸಮಾಧಾನ ವ್ಯಕ್ತಪಡಿಸಿದ್ದರು. ಅಮೀರ್ ಅವರ 'ದಂಗಲ್' ಮತ್ತು 'ಸೀಕ್ರೆಟ್ ಸೂಪರ್ ಸ್ಟಾರ್' ಚಿತ್ರಗಳ ಪ್ರದರ್ಶನದಲ್ಲಿ ತಾವು ಭಾಗವಹಿಸಿದ್ದಾಗಿ ಹೇಳಿದ್ದರು.

ಅಮೀರ್ ಹೇಳಿದ್ದೇನು?
ಇದಕ್ಕೆ ಪ್ರತಿಕ್ರಿಯಿಸಿದ್ದ ಅಮೀರ್, 'ಆಕೆ ನನ್ನ ಮೇಲೆ ಅಸಮಾಧಾನ ಹೊಂದಿದ್ದಾರೆಯೇ? ಆದರೆ ಆಕೆ ಇದನ್ನು ನನಗೆ ಹೇಳಿಯೇ ಇಲ್ಲ. ಆಕೆಯನ್ನು ಮುಂದಿನ ಬಾರಿ ಭೇಟಿಯಾದಾಗ ಮಾತನಾಡುತ್ತೇನೆ' ಎಂದು ಹೇಳಿದ್ದರು.


Click it and Unblock the Notifications











