ರಣ್‌ವೀರ್ ಸಿಂಗ್ - ದೀಪಿಕಾ ಜೋಡಿಗೆ ಮೊದಲ ಸೋಲು: '83' ಫ್ಲಾಪ್‌ಗೆ ಕಾರಣವೇನು?
1983ಯಲ್ಲಿ ಕಪಿಲ್ ದೇವ್ ಮತ್ತು ತಂಡ ಮೊದಲ ಬಾರಿಗೆ ಭಾರತಕ್ಕೆ ವಿಶ್ವಕಪ್ ತಂದು ಕೊಟ್ಟಿದ್ದರು. ಥಿಯೇಟರ್‌ನಲ್ಲಿ ರಣ್‌ವೀರ್ ಸಿಂಗ್ ಹೊಸ ಇತಿಹಾಸ ಸಲ್ಲಿಸಲು ಸಜ್ಜಾಗಿದ್ದರು. ನಿರ್ದೇಶಕ ಕಬೀರ್ ಖಾನ್ ಕಪಿಲ್ ದೇವ್ ತಂಡ ವಿಶ್ವಕಪ್ ಗೆದ್ದ ರೋಚಕ ಕ್ಷಣಗಳನ್ನು ಬೆಳ್ಳಿಪರದೆ ಮೇಲೆ ಕಟ್ಟಿಕೊಟಿದ್ದರು. ಸಿನಿಮಾ ನೋಡಿದವರೆಲ್ಲಾ '83' ಸಿನಿಮಾವನ್ನು ಹಾಡಿ ಹೊಗಳಿದ್ದರು. ರಣ್‌ವೀರ್ ಸಿಂಗ್ ಪಾತ್ರ ಕಂಡು ಜೈ ಹೋ ಎಂದಿದ್ದರು. ಒಂದಲ್ಲ ಎರಡಲ್ಲ, ಐದು ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಿತ್ತು.
ಒಂದೂವರೆ ವರ್ಷದಿಂದ ಬಿಡುಗಡೆ ಕಾದು ಕೂತಿದ್ದ '83' ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ನೋಡಿ ಈ ವರ್ಷದ ಬ್ಲಾಕ್‌ಬಸ್ಟರ್ ಹಿಟ್ ಆಗುತ್ತೆ ಎಂದೇ ನಂಬಲಾಗಿತ್ತು. ಸೋಲನ್ನೇ ಕಾರಣದ ರಣ್‌ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಜೋಡಿ ಮತ್ತೆ ತೆರೆಮೇಲೆ ಕಾಣಿಸಿಕೊಂಡಿತ್ತು. 83ಯಲ್ಲಿ ವಿಶ್ವ ಕಪ್ ಗೆದ್ದ ತಂಡ ಪ್ರಚಾರಕ್ಕೆ ಇಳಿದಿತ್ತು. ಹೀಗಿದ್ದರೂ '83' ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿದೆ. ಒಂದು ವಾರ ಕಳೆದರೂ ಈ ಸಿನಿಮಾ 100 ಕೋಟಿ ದಾಟಲು ಪರದಾಡುತ್ತಿದೆ. ಅಸಲಿಗೆ ರಣ್‌ವೀರ್-ದೀಪಿಕಾ ಜೋಡಿಗೆ ಮೊದಲು ಸೋಲಿನ ರುಚಿ ತೋರಿಸಿದ್ದೇಕೆ? ಈ ಸೋಲಿಗೆ ಅಸಲಿ ಕಾರಣವೇನು? ಅನ್ನುವುದನ್ನು ತಿಳಿಯಲು ಮುಂದೆ ಓದಿ.

ಸೈಡರ್ ಮ್ಯಾನ್, ಪುಷ್ಪ ಸವಾಲು
ಬಾಲಿವುಡ್ ಮಂದಿರ ಪ್ರಕಾರ, ಎರಡು ಸಿನಿಮಾಗಳು ಥಿಯೇಟರ್‌ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರುವಾಗ, ಹೊಸ ಸಿನಿಮಾ ಬಿಡುಗಡೆ ಮಾಡಬಾರದು. '83' ಸಿನಿಮಾ ರಿಲೀಸ್‌ಗೂ ಒಂದು ವಾರ ಮೊದಲು ಅಲ್ಲು ಅರ್ಜುನ್ ನಟನೆಯ 'ಪುಷ್ಪ' ಹಾಗೂ ಹಾಲಿವುಡ್ ಸಿನಿಮಾ 'ಸೈಡರ್ ಮ್ಯಾನ್' ಬಿಡುಗಡೆಯಾಗಿತ್ತು. ಈ ಎರಡೂ ಸಿನಿಮಾಗಳೂ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿದ್ದವು. ಇದಕ್ಕೆ ಸರಿಯಾಗಿ ಒಂದು ವಾರದ ಬಳಿಕ '83' ರಿಲೀಸ್ ಆಗಿತ್ತು. ಆದರೆ, 'ಸೈಡರ್ ಮ್ಯಾನ್' ಹಾಗೂ 'ಪುಷ್ಪ' ಹ್ಯಾಂಗೋವರ್‌ನಲ್ಲಿದ್ದವರು '83' ನೋಡಲು ಮನಸ್ಸು ಮಾಡಲಿಲ್ಲ.

ವಿಶ್ವ ಕಪ್ ಇತಿಹಾಸ ಎಲ್ಲರಿಗೂ ಗೊತ್ತಿದೆ
1983ರಲ್ಲಿ ಕಪಿಲ್ ದೇವ್ ಮತ್ತು ತಂಡ ಮೊದಲ ಬಾರಿಗೆ ಕ್ರಿಕೆಟ್‌ನಲ್ಲಿ ವಿಶ್ವಕಪ್ ಗೆದ್ದಿದ್ದು ಎಲ್ಲರಿಗೂ ಗೊತ್ತಿದೆ. ಈ ರೋಚಕ ಘಟನೆಯ ಬಗ್ಗೆ ಕಳೆದ ಮೂರೂವರೆ ದಶಕಗಳಿಂದ ಕೇಳುತ್ತಲೇ ಇದ್ದಾರೆ. ಹೀಗಾಗಿ ಜನರಿಗೆ ಈ ಕೇಳಿರುವ ರೋಚಕ ಕಥೆಯನ್ನು ಮತ್ತೆ ತೆರೆಮೇಲೆ ನೋಡುವ ಉತ್ಸಾಹ ಉಳಿದಿರಲಿಲ್ಲ. ಅಲ್ಲದೆ ತೆರೆಮೇಲೆ ಕ್ರಿಕೆಟ್‌ಗಿಂತ ಹೆಚ್ಚಾಗಿ ಭಾವನೆಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ ಎಂಬ ಮಾತುಗಳೂ ಕೂಡ ಕೇಳಿ ಬಂದಿದ್ದವು.

ಸಣ್ಣ ಊರುಗಳಲ್ಲಿ '83' ಸಿನಿಮಾ ಇಷ್ಟಪಡಲಿಲ್ಲ'
ಮುಂಬೈ, ಪೂನಾ, ದೆಹಲಿ ಇಂತಹ ಮಹಾನಗರಗಳಲ್ಲಿ ಸಿನಿಮಾ ಚೆನ್ನಾಗಿ ಓಡಿದೆ. ಆದರೆ, ಈ ಭಾಗಗಳಲ್ಲೇ ಕೆಲವೆಡೆ ಥಿಯೇಟರ್‌ನಲ್ಲಿ ಶೇ.50ರಷ್ಟು ಆಸನದ ವ್ಯವಸ್ಥೆ ಇತ್ತು. ಇದರೊಂದಿಗೆ ಉಳಿದ ಭಾಗಗಳಲ್ಲಿ ಸಿನಿಮಾ ನೋಡಲು ಜನರು ಉತ್ಸಾಹ ತೋರಲಿಲ್ಲ. ಜಿಲ್ಲೆಗಳು, ತಾಲೂಕು ಭಾಗಗಳಲ್ಲಿ ಜನರು ತೆರೆಮೇಲೆ ಕ್ರಿಕೆಟ್ ಪಂದ್ಯವನ್ನು ನೋಡಲು ಮನಸ್ಸು ಮಾಡಲಿಲ್ಲ. ಹೀಗಾಗಿ ಕೇವಲ ಮಹಾನಗರಕ್ಕೆ ಮಾತ್ರ ಸಿನಿಮಾ ಸೀಮಿತವಾಯಿತು.

'83' ವಿತರಣೆ ಮಾಡುವಲ್ಲಿ ಸೋತಿದೆ
'83' ಸಿನಿಮಾ ವಿತರಣೆ ವಿಚಾರದಲ್ಲಿ ವಿತರಕರ ಮನವೊಲಿಸಿಕೊಳ್ಳಲಿಲ್ಲ. ಹೀಗಾಗಿ ಕೆಲವೆಡೆ ವಿತರಕರು ಸಿನಿಮಾವನ್ನು ಸರಿಯಾಗಿ ಬಿಡುಗಡೆ ಮಾಡಿಲ್ಲ ಎನ್ನಲಾಗಿದೆ. ವಿತರಕರು ಹೆಚ್ಚಿಗೆ ಶೇರ್ ಕೇಳಿದ್ದರು ಮತ್ತು ಎರಡು ವಾರ ಥಿಯೇಟರ್‌ನಲ್ಲಿ ಪ್ರದರ್ಶನ ಮಾಡುವ ಭರವಸೆಯನ್ನು ನೀಡಿದ್ದರು. ಆದರೆ, ಸಿನಿಮಾ ತಂಡ ಈ ಮಾತನ್ನು ಒಪ್ಪಿಕೊಂಡಿಲ್ಲ. ಹೀಗಾಗಿ ವಿತರಕರು ಅತೀ ಹೆಚ್ಚು ಪ್ರೇಕ್ಷಕರು ಸೇರುವ ಸಣ್ಣ ಪುಟ್ಟ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಮಾಡುವ ರಿಸ್ಕ್ ತೆಗೆದುಕೊಳ್ಳಲಿಲ್ಲ. ಈ ಎಲ್ಲಾ ಕಾರಣಕ್ಕೆ ಸಿನಿಮಾ ಸೋತಿದೆ ಎಂದು ಬಾಲಿವುಡ್ ಮಂದಿ ಅಂದಾಜು ಮಾಡುತ್ತಿದ್ದಾರೆ.


Click it and Unblock the Notifications











