ಆ 09 ನಿಮಿಷ ನಾನು ಹೇಗೆ ಅಭಿನಯಿಸಿದ್ದೇ ಗೊತ್ತಾ ; ಅನಿಮಲ್‌ನ ಆ ದೃಶ್ಯದ ಬಗ್ಗೆ ಮೌನ ಮುರಿದ ರಶ್ಮಿಕಾ..!
ರಶ್ಮಿಕಾ ಮಂದಣ್ಣ ಹಾಗೂ ಟ್ರೋಲ್ ಪೇಜ್ ಗಳ ನಡುವೆ ಅವಿನಾಭಾವ ಸಂಬಂಧ ಇದೆ. ಕಾಲ ಕಾಲಕ್ಕೆ ಈ ಸಂಬಂಧ ಜಗಜ್ಜಾಹೀರಾಗುತ್ತಾನೇ ಬಂದಿದೆ. ನೊಂದು ಬೆಂದು ಕೊಡಗಿನ ಕಿನ್ನರಿ ಕಣ್ಣೀರು ಹಾಕಿದ್ದು ಇದೆ. ಆದರೂ ಟ್ರೋಲ್ ಮಾಡೋರು ರಶ್ಮಿಕಾ ಬೆನ್ನು ಬಿಡ್ತಿಲ್ಲ. ಹೀಗಾಗಿಯೇ ರಶ್ಮಿಕಾ ಇನ್ನೊಮ್ಮೆ ಟ್ರೋಲಿಗರ ವಿರುದ್ಧ ಕೆರಳಿ ಕೆಂಡವಾಗಿದ್ದಾರೆ. ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
ಹೌದು, ಕನ್ನಡದಿಂದ ಕಣ್ಮರೆಯಾದ ರಶ್ಮಿಕಾ, ಅನಿಮಲ್ ಸಿನಿಮಾದಲ್ಲಿ ಆಕ್ಟ್ ಮಾಡಿದಾಗ, ಅನೇಕರು ಆಡಿಕೊಂಡಿದ್ದರು. ಇದಕ್ಕೆ ಕಾರಣವಾಗಿದ್ದು ಚಿತ್ರದಲ್ಲಿನ ಒಂದು ದೃಶ್ಯ. ಆ ದೃಶ್ಯದಲ್ಲಿ ರಶ್ಮಿಕಾ ಮಂದಣ್ಣ ತುಟಿ ಕಚ್ಚಿಕೊಂಡು ಮಾತನಾಡಿದ್ದರು. ಅವತ್ತು ಹಾಗೂ ಇವತ್ತು.. ಕರ್ವಾ ಚೌತ್ ನ ಆ ಸನ್ನಿವೇಶದಲ್ಲಿ ರಶ್ಮಿಕಾ ಮಾತನಾಡಿದ್ದಾದರೂ ಏನು ಅನ್ನುವುದು ಇವತ್ತು ಕೂಡ ಬಗೆಹರಿಯದ ಪ್ರಶ್ನೆಯಾಗಿಯೇ ಉಳಿದಿದೆ. ಈ ಪ್ರಶ್ನೆಗೆ ರಶ್ಮಿಕಾ ಉತ್ತರವನ್ನ ಕೊಡದೇ ಇದ್ದರೂ, ಆ ದೃಶ್ಯದ ಬಗ್ಗೆ ತಮ್ಮ ಅಭಿಪ್ರಾಯವನ್ನ ಹಂಚಿಕೊಂಡಿದ್ದಾರೆ. ಟ್ರೋಲ್ ಮಾಡಿದವರಿಗೆ ತಿರುಗೇಟು ಕೊಟ್ಟಿದ್ದಾರೆ.

ಬಾಲಿವುಡ್ ನ ಜನಪ್ರಿಯ ನಾಯಕಿ ನೇಹಾ ಧೂಪಿಯಾ ನಡೆಸಿ ಕೊಡುವ ನೋ ಫಿಲ್ಟರ್ ನೇಹಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಶ್ಮಿಕಾ, ನನ್ನ ಅಭಿನಯ ಕಂಡು ಅರಗಿಸಿಕೊಳ್ಳಲಾರದೇ ಅನಿಮಲ್ ಚಿತ್ರದ ಬಿಡುಗಡೆಯ ಸಮಯದಲ್ಲಿ ನನ್ನ ಟ್ರೋಲ್ ಮಾಡಿದರು ಎಂಬರ್ಥದಲ್ಲಿ ಮಾತನಾಡಿದ್ದಾರೆ. ನಾನು ಹೇಗೆ ನಟಿಸಿದ್ದೇನೆ ನನಗೆ ಗೊತ್ತು ಅಂದಿದ್ದಾರೆ.

ಅದು, ಒಂದೆರೆಡು ನಿಮಿಷದ ದೃಶ್ಯವಾಗಿರಲಿಲ್ಲ. ಬದಲಿಗೆ ಒಂಬತ್ತು ನಿಮಿಷದ ದೃಶ್ಯವಾಗಿತ್ತು ಎಂದಿರುವ ರಶ್ಮಿಕಾ, ಆ ದೃಶ್ಯ ಮಾಡುವಾಗ ನನ್ನ ಅಕ್ಕ-ಪಕ್ಕ ನಿಂತುಕೊಂಡು, ನನ್ನ ಅಭಿನಯವನ್ನ ಒಂಬತ್ತು ನಿಮಿಷ ಕಣ್ತುಂಬಿಕೊಂಡಿದ್ದ ಚಿತ್ರತಂಡದ ಸದಸ್ಯರೇ ನನ್ನ ಅಭಿನಯದ ಬಗ್ಗೆ ಚಕಾರ ಎತ್ತಲಿಲ್ಲ. ಬದಲಿಗೆ ಬಾಯ್ತುಂಬ ಎಲ್ಲರೂ ಹೊಗಳಿದ್ದರು. ಚಪ್ಪಾಳೆಯನ್ನೂ ತಟ್ಟಿದರು.
ಆದರೆ ಸೆಟ್ನಲ್ಲಿ ಇಷ್ಟವಾದ ದೃಶ್ಯವನ್ನು ಜನರು ಟ್ರೋಲ್ ಮಾಡಿದರು. ಆ ದೃಶ್ಯವನ್ನ ನಾವು ಹೇಗೆ ಚಿತ್ರೀಕರಣ ಮಾಡಿದ್ದು ಅನ್ನುವುದು ನನಗೆ ಗೊತ್ತು.ಆಡಿಕೊಂಡು ನಕ್ಕ ಜನಕ್ಕೆ ಗೊತ್ತಿಲ್ಲ ಎಂದಿದ್ದಾರೆ ರಶ್ಮಿಕಾ ಮಂದಣ್ಣ
ಇನ್ನೂ ಅದೇ ಒಂಬತ್ತು ನಿಮಿಷದಲ್ಲಿರುವ ಹತ್ತು ಸೆಕೆಂಡ್ ನ ತುಣುಕನ್ನ ಟ್ರೇಲರ್ ನಲ್ಲಿ ನೋಡಿ ಜನ ನನ್ನ ಬಗ್ಗೆ ಅಪಹಾಸ್ಯವನ್ನ ಮಾಡಿದರು. ರಶ್ಮಿಕಾಗೆ ಅಭಿನಯವೇ ಬರಲ್ಲ ಎಂಬ ಅರ್ಥದಲ್ಲಿ ಮಾತನಾಡಿದರು. ಇದನ್ನೆಲ್ಲ ನೋಡಿದಾಗ ನನಗೆ ಸಿಕ್ಕಾಪಟ್ಟೆ ಬೇಸರವಾಗಿತ್ತು ಎಂದಿರುವ ರಶ್ಮಿಕಾ ಮಂದಣ್ಣ ಈ ಕಾರಣಕ್ಕೆ ನಾನು ಜನರೊಂದಿಗೆ ಮಾತನಾಡಬೇಕು. ನಿಜವಾಗಿಯೂ ಏನಾಗುತ್ತಿದೆ ಎಂದು ನನಗೆ ತಿಳಿಯಬೇಕು ಎಂದು ಕೂಡ ಹೇಳಿದ್ದಾರೆ.
ಸದ್ಯಕ್ಕೆ ರಶ್ಮಿಕಾ ಮಂದಣ್ಣ ಅವರ ಈ ಫಿಲ್ಟರ್ ಲೆಸ್ ಮಾತುಗಳಿಗೆ ಅನೇಕರು ಮೆಚ್ಚುಗೆಯನ್ನ ಸೂಚಿಸುತ್ತಿದ್ದಾರೆ. ಯಾರು ಏನೇ ಅನ್ನಲಿ, ಎಷ್ಟೇ ಕಾಲೆಳೆಯಲಿ ನೀವು ನಿಮ್ಮ ಕೆಲಸವನ್ನ ಮಾಡಿಕೊಂಡು ಹೋಗಿ ಎಂಬ ಅಭಿಪ್ರಾಯವನ್ನೂ ಕೂಡ ಅನೇಕರು ವ್ಯಕ್ತಪಡಿಸುತ್ತಿದ್ದಾರೆ. ಅಂದ್ಹಾಗೇ ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪಾ 2 ಇದೇ ವರ್ಷ ತೆರೆಗೆ ಬರಲಿದೆ. ಇನ್ನೂ ಆನಿಮಲ್ ನಂತರ ಹಿಂದಿಯಲ್ಲಿ ಕೂಡ ರಶ್ಮಿಕಾ ಬೇಡಿಕೆ ಹೆಚ್ಚಾಗಿದೆ.


Click it and Unblock the Notifications












