ರವೀನಾ ಟಂಡನ್ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಿದ್ದವನಿಗೆ ₹100 ಕೋಟಿ ಮಾನನಷ್ಟ ಕೇಸ್: ಏನಿದು ಘಟನೆ?
ಬಾಲಿವುಡ್ ನಟಿ ರವೀನಾ ಟಂಡನ್ ಕೆಲವು ದಿನಗಳ ಹಿಂದಷ್ಟೇ ಸುದ್ದಿಯಾಗಿದ್ದರು. ರಾತ್ರಿ ವೇಳೆ ಮುಂಬೈನಲ್ಲಿ ಕೆಲವು ಜನರು ರವೀನಾ ಟಂಡನ್‌ರನ್ನು ಸುತ್ತುವರೆದಿದ್ದರು. ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. KGF 2 ನಟಿ ಕೆಲವರ ಮೇಲೆ ಹಲ್ಲೆ ಮಾಡಿದ್ದರು. ಈ ವೇಳೆ ಅಲ್ಲಿನ ಸ್ಥಳೀಯರು ಅವರನ್ನು ಸುತ್ತುವರೆದಿದ್ದರು ಎಂದು ವಿಡಿಯೋವೊಂದನ್ನು ಪೋಸ್ಟ್ ಮಾಡಲಾಗಿತ್ತು. ಆ ವಿಡಿಯೋ ವೈರಲ್ ಆಗುತ್ತಿದ್ದಂತೆ ರವೀನಾ ವಿರುದ್ಧ ಟೀಕೆಗಳು ವ್ಯಕ್ತವಾಗಿದ್ದವು.
ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದವನ ವಿರುದ್ಧ ಈಗ ರವೀನಾ ಟಂಡನ್ ಮಾನನಷ್ಟ ನೋಟೀಸ್ ಅನ್ನು ಕಳುಹಿಸಿದ್ದಾರೆ. ಅಷ್ಟಕ್ಕೂ ಏನಿದು ರವೀನಾ ಟಂಡನ್ ವಿಡಿಯೋ ಕೇಸ್? ಪೋಸ್ಟ್ ಮಾಡಿದ್ದು ಫೇಕ್ ವಿಡಿಯೋನಾ? ಇದೆಲ್ಲವನ್ನು ತಿಳಿಯಲು ಮುಂದೆ ಓದಿ.

ಮೊಹ್ಸೀನ್ ಶೇಖ್ ಎನ್ನುವ ವ್ಯಕ್ತಿಗೆ ಬಾಲಿವುಡ್ ನಟಿ ರವೀನಾ ಟಂಡನ್ ತಮ್ಮ ವಕೀಲರ ಮೂಲಕ ಮಾನನಷ್ಟ ನೋಟೀಸ್ ಅನ್ನು ಕಳುಹಿಸಿಕೊಟ್ಟಿದ್ದಾರೆ. ಆತ ಮುಂಬೈನಲ್ಲಿ ತಡ ರಾತ್ರಿ ನಡೆದ ಗಲಾಟೆ ವಿಡಿಯೋವನ್ನು ಪೋಸ್ಟ್ ಮಾಡಿ, ನಟಿ ಮಧ್ಯಪಾನ ಮಾಡಿದ್ದರು ಎಂದು ಆರೋಪಿಸಿದ್ದ. ಈ ಪೋಸ್ಟ್‌ನಲ್ಲಿ ಸುಳ್ಳು ಹೇಳಲಾಗಿದೆ ಎಂದು ಬಾಲಿವುಟ್ ನಟಿ ರವೀನಾ ಟಂಡನ್ 100 ಕೋಟಿ ರೂಪಾಯಿ ಮಾನನಷ್ಟ ನೋಟೀಸ್ ದಾಖಲು ಮಾಡಿದ್ದಾರೆ.
ಈ ಬಗ್ಗೆ ರವೀನಾ ಟಂಡನ್ ವಕೀಲೆಯಾಗಿರುವ ಸನಾ ರಾಯೀಸ್ ಖಾನ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. "ಇತ್ತೀಚೆಗೆ ಸುಳ್ಳನ್ನು ಹಬ್ಬಿಸುವ ಮೂಲಕ ರವೀನಾ ಟಂಡನ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ನಡೆದಿತ್ತು. ಸಿಸಿಟಿವಿ ಮೂಲಕ ಇದು ಸುಳ್ಳು ಎಂದು ಸ್ಪಷ್ಟನೆ ನೀಡಲಾಗಿದ್ದು, ಯಾವುದೇ ದೂರು ದಾಖಲಾಗಿಲ್ಲ. ಆದರೆ, ಇತ್ತೀಚೆಗೆ ವ್ಯಕ್ತಿಯೊಬ್ಬ ತಾನು ಪತ್ರಕರ್ತ ಎಂದು ಹೇಳಿಕೊಂಡು ಸುಳ್ಳು ಸುದ್ದಿಯನ್ನು ಎಕ್ಸ್ ಖಾತೆಯಲ್ಲಿ ಹಬ್ಬಿಸುತ್ತಿದ್ದಾನೆ. ಇದು ವಾಸ್ತವಿಕವಾಗಿ ಸುಳ್ಳು ಮತ್ತು ತಪ್ಪುದಾರಿಗೆ ಎಳೆಯುವ ಕೆಲಸ ಆಗಿದೆ" ಎಂದು ಇಂಡಿಯಾ ಟುಡೇಗೆ ಹೇಳಿಕೊಂಡಿದ್ದರು.

ನಿರಂತರವಾಗಿ ರವೀನಾ ಟಂಡನ್ ಅವರ ಹೆಸರನ್ನು ಬಳಸಿಕೊಂಡು ಸುಳ್ಳು ಸುದ್ದಿಯನ್ನು ಹಬ್ಬಿಸಲಾಗುತ್ತಿದೆ. ಅಲ್ಲದೆ, ತಮ್ಮ ಬಗ್ಗೆ ಪ್ರಚಾರ ಮಾಡಿಕೊಳ್ಳುವುದಕ್ಕೆ ಅವರ ಹೆಸರಿಗೆ ಕಪ್ಪು ಚುಕ್ಕೆ ಬಳಿಯುವ ಕೆಲಸ ನಡೆಯುತ್ತಿದೆ ಎಂದು ರವೀನಾ ಪರ ಅಡ್ವೋಕೇಟ್ ಸನಾ ರಾಯೀಸ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ. ಹೀಗಾಗಿ ಅಗತ್ಯವಿರುವ ಎಲ್ಲಾ ಕಾನೂನು ಕ್ರಮಗಳನ್ನು ತೆಗೆದುಕೊಂಡಿರುವುದಾಗಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಕೆಲವು ದಿನಗಳ ಹಿಂದೆ ರವೀನಾ ಟಂಡನ್ ಅವರನ್ನು ಜನರು ಮುತ್ತಿಕೊಂಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಈ ವೇಳೆ ರವೀನಾ ಟಂಡನ್ ಪ್ರಯಾಣಿಸುತ್ತಿದ್ದ ಕಾರು ಮಹಿಳೆಯೊಬ್ಬಗೆ ಡಿಕ್ಕಿ ಹೊಡೆದಿತ್ತು. ಈ ವೇಳೆ ರವೀನಾ ಹಾಗೂ ಅವರ ಕಾರು ಡ್ರೈವರ್ ಆ ಮಹಿಳೆಯ ವಿರುದ್ಧವೇ ತಿರುಗಿಬಿದ್ದಿದ್ದರು ಎಂದು ಆ ವಿಡಿಯೋವನ್ನು ಶೇರ್ ಮಾಡಿ, ಗಂಭೀರ ಆರೋಪ ಮಾಡಲಾಗಿತ್ತು.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಮುಂಬೈ ಪೊಲೀಸರು ಸಿಸಿಟಿವಿ ತುಣುಕನ್ನು ಬಿಡುಗಡೆ ಮಾಡಿದ್ದರು. ರವೀನಾ ಟಂಡನ್ ಕಾರು ಯಾವುದೇ ಮಹಿಳೆಗೆ ಡಿಕ್ಕಿ ಹೊಡೆದಿರಲಿಲ್ಲ ಅನ್ನೋದು ಸಾಬೀತಾಗಿತ್ತು. ಆ ಬಳಿಕವೂ ಸುಳ್ಳು ಸುದ್ದಿಯನ್ನು ಹಬ್ಬಿಸಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ರವೀನಾ ಟಂಡನ್ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿರುವ ವ್ಯಕ್ತಿಗೆ 100 ಕೋಟಿ ರೂಪಾಯಿಯ ಮಾನನಷ್ಟ ನೋಟೀಸ್ ಅನ್ನು ಕಳುಹಿಸಿಕೊಡಲಾಗಿದೆ.


Click it and Unblock the Notifications











