ಮೊದಲ ದಿನ 'ಕಾಂತಾರ' ಹಿಂದಿ ವರ್ಷನ್ ಕಲೆಕ್ಷನ್ ಎಷ್ಟು? ಹಿಂದಿ ಬೆಲ್ಟ್‌ನಲ್ಲಿ ರೆಸ್ಪಾನ್ಸ್ ಹೇಗಿದೆ?
'ಕಾಂತಾರ' ಮೊದಲೇ ಪ್ಯಾನ್ಸ್ ಇಂಡಿಯಾ ರಿಲೀಸ್ ಆಗಬೇಕಿತ್ತು. ಆದರೆ, ರಿಷಬ್ ಶೆಟ್ಟಿ ಅದ್ಯಾಕೆ ಪ್ಯಾನ್ ಇಂಡಿಯಾ ಮಾಡುವುದಕ್ಕೆ ಹಿಂದೆ ಸರಿದ್ರೋ? ಈಗ್ಯಾಕೆ ಪ್ಯಾನ್ ಇಂಡಿಯಾ ರಿಲೀಸ್ ಮಾಡಿದ್ರೋ ಅವರೇ ಹೇಳಬೇಕು.
ಕನ್ನಡಿಗರು ಆಸೆ ಪಟ್ಟಂತೆ ಕೊನೆಗೂ 'ಕಾಂತಾರ' ಪ್ಯಾನ್ ಇಂಡಿಯಾ ರಿಲೀಸ್ ಆಗುತ್ತಿದೆ. ಸದ್ಯಕ್ಕೆ ಹಿಂದಿ ಅವತರಣಿಕೆ ನಿನ್ನೆ (ಅಕ್ಟೋಬರ್ 13)ರಂದು ರಿಲೀಸ್ ಆಗಿದೆ. ಅದೇ ತೆಲುಗು ವರ್ಷನ್ ಇಂದು (ಅಕ್ಟೋಬರ್ 14) ರಿಲೀಸ್ ಆಗುತ್ತಿದೆ.
ರಿಷಬ್ ಶೆಟ್ಟಿಯ 'ಕಾಂತಾರ'ಗೆ ಹಿಂದಿ ಬೆಲ್ಟ್‌ನಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಇತ್ತು. ಬಿಡುಗಡೆಗೂ ಮುನ್ನವೇ 'ಕಾಂತಾರ' ಸಿಕ್ಕಾಪಟ್ಟೆ ಸೌಂಡ್ ಮಾಡಿತ್ತು. ಹೀಗಾಗಿ ಸಿನಿಮಾದ ಮೊದಲ ದಿನದ ಕಲೆಕ್ಷನ್ ಎಷ್ಟು? ಅನ್ನೋ ಕುತೂಹಲಕ್ಕೀಗ ತೆರೆಬಿದ್ದಿದೆ. ಟ್ರೇಡ್ ಅನಲಿಸ್ಟ್‌ಗಳು ಮೊದಲ ದಿನದ ಕಲೆಕ್ಷನ್ ರಿಪೋರ್ಟ್ ಅನ್ನು ಹೊರಹಾಕಿದ್ದಾರೆ.

'ಕಾಂತಾರ' 2500 ಸ್ಕ್ರೀನ್‌ಗಳಲ್ಲಿ ರಿಲೀಸ್
ಕರ್ನಾಟಕದಲ್ಲಿ 'ಕಾಂತಾರ' ಬ್ಲಾಕ್‌ಬಸ್ಟರ್ ಅಂತ ಸಾಬೀತಾಗಿದೆ. ಬಿಡುಗಡೆಯಾಗಿ ಮೂರನೇ ವಾರಕ್ಕೆ ಲಗ್ಗೆ ಇಟ್ಟರೂ ರಾಜ್ಯದಲ್ಲಿ ತುಂಬಿದ ಪ್ರದರ್ಶನ ಕಾಣುತ್ತಿದೆ. ಸಿನಿಮಾಗೆ ಸಖತ್ ರೆಸ್ಪಾನ್ಸ್ ಸಿಗುತ್ತಿದ್ದಂತೆ ಹಿಂದಿ ಬೆಲ್ಟ್‌ಗಳಲ್ಲೂ ರಿಲೀಸ್ ಮಾಡುವ ನಿರ್ಧಾರಕ್ಕೆ ಬಂದಿದ್ದರು. ಅದರಂತೆ ಸುಮಾರು 2500 ಸ್ಕ್ರೀನ್‌ಗಳಲ್ಲಿ ನಿನ್ನೆ (ಅಕ್ಟೋಬರ್ 13) 'ಕಾಂತಾರ' ರಿಲೀಸ್ ಆಗಿದೆ. 'ಕಾಂತಾರ' ಕ್ರೇಜ್ ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಹೇಗೆ ವರ್ಕೌಟ್ ಆಗಿದೆ ಅನ್ನೋ ಕುತೂಹಲಕ್ಕೆ ತೆರೆಬಿದ್ದಿದೆ.

'ಕಾಂತಾರ' ಹಿಂದಿ ಡೇ ಓನ್ ಕಲೆಕ್ಷನ್ ಎಷ್ಟು?
ರಿಷಬ್ ಶೆಟ್ಟಿಯ 'ಕಾಂತಾರ' ಮೊದಲ ದಿನದ ರೆಸ್ಪಾನ್ಸ್ ಅದ್ಭುತವಾಗಿದೆ. ಫಸ್ಟ್ ಡೇನೇ ಈ ಸಿನಿಮಾ ಸುಮಾರು 2500 ಸ್ಕ್ರೀನ್‌ಗಳಿಂದ 1.30 ಕೋಟಿ ರೂ. ಯಿಂದ 1.50 ಕೋಟಿ ರೂ. (Net) ಕಲೆಕ್ಷನ್ ಮಾಡಿರಬಹುದು ಎಂದು ಟ್ರೇಡ್ ಅನಲಿಸ್ಟ್‌ಗಳು ಅಂದಾಜು ಮಾಡಿದ್ದಾರೆ. ಆದರೆ, ಮೊದಲ ದಿನ ಆದ (Gross) ಕಲೆಕ್ಷನ್ ಎಷ್ಟು ಅನ್ನೋದು ಇನ್ನೂ ಅಧಿಕೃತವಾಗಿ ಹೊರಬಿದ್ದಿಲ್ಲ. ಲೆಕ್ಕಾಚಾರದ ಪ್ರಕಾರ, 'ಕಾಂತಾರ' ಫಸ್ಟ್ ಕಲೆಕ್ಷನ್ ಆಶಾದಾಯಕವಾಗಿದೆ.

ಬಾಲಿವುಡ್ ಸಿನಿಮಾಗಳಿಗೆ ಟಕ್ಕರ್ ಕೊಡುತ್ತಾ?
'ಕಾಂತಾರ' ಕರ್ನಾಟಕದಲ್ಲಿ ತೆರೆಕಂಡ ಎರಡು ವಾರಗಳ ಬಳಿಕ ಬಾಲಿವುಡ್ ಬೆಲ್ಟ್‌ಗಳಲ್ಲಿ ರಿಲೀಸ್ ಆಗಿದೆ. ಇದೇ ವೇಳೆ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ಬಿಡುಗಡೆಯಾಗಿವೆ. ವಿಭಿನ್ನ ಸಿನಿಮಾಗಳ ಮೂಲಕ ಗಮನ ಸೆಳೆಯುವ ಆಯುಷ್ಮಾನ್ ಖುರಾನಾ ನಟಿಸಿದ 'ಡಾಕ್ಟರ್ ಜಿ' ಹಾಗೂ ಪರಿಣಿತಿ ಚೋಪ್ರಾ ನಟನೆಯ 'ಕೋಡ್ ನೇಮ್ ತಿರಂಗ' ರಿಲೀಸ್ ಆಗಿದೆ. ಸದ್ಯ ಈ ಸಿನಿಮಾಗಳಿಗೆ ಆತಂಕ ಇಲ್ಲ. ಆದರೆ, ಮುಂದಿನ ದಿನಗಳಲ್ಲಿ 'ಕಾಂತಾರ' ಈ ಎರಡೂ ಸಿನಿಮಾಗಳಿಗೂ ಟಕ್ಕರ್ ಕೊಡಬಹುದು.

ಅಡ್ವಾನ್ಸ್ ಬುಕಿಂಗ್ ಕೂಡ ಸೂಪರ್
ರಿಷಬ್ ಶೆಟ್ಟಿ ಅಭಿನಯದ 'ಕಾಂತಾರ' ಬಿಡುಗಡೆಗೂ ಮುನ್ನವೇ ಅಡ್ವಾನ್ಸ್ ಬುಕಿಂಗ್ ಅನ್ನು ಓಪನ್ ಮಾಡಲಾಗಿತ್ತು. ಮೂರು ದಿನಗಳ ಹಿಂದೆ 'ಕಾಂತಾರ' ಹಿಂದಿ ವರ್ಷನ್‌ನ ಅಡ್ವಾನ್ಸ್ ಬುಕಿಂಗ್ ಮಾಡಲಾಗಿತ್ತು. ಮೂಲಗಳ ಪ್ರಕಾರ, ಸುಮಾರು 18 ಸಾವಿರಕ್ಕೂ ಅಧಿಕ ಟಿಕೆಟ್‌ಗಳು ಬುಕ್ ಆಗಿದ್ದರ ಬಗ್ಗೆ ವರದಿಯಾಗಿದೆ. ಹೀಗಾಗಿ ಹಿಂದಿ ಬೆಲ್ಟ್‌ನಲ್ಲಿ ಅಡ್ವಾನ್ಸ್ ಬುಕಿಂಗ್ ಅಂತಾಗಿದ್ದು ಸುಮಾರು 32 ಲಕ್ಷ ಎನ್ನಲಾಗಿದೆ.


Click it and Unblock the Notifications











