ಭಾಯಿಜಾನ್ ಬ್ಯಾಚುಲರ್ ಆಗೇ ಉಳಿಯಲು ಇದೇ ಕಾರಣ.. ಮದುವೆ ಹಿಂದಿನ ದಿನ ಬೇರೆ ಹುಡುಗಿ ಜೊತೆ ಸಿಕ್ಕಿ ಬಿದ್ದಿದ್ದ ಸಲ್ಮಾನ್!
ಇಡೀ ಬಾಲಿವುಡ್ ಪಾಲಿಗೆ ಭಾಯಿ ಆಗಿರೋದು ಸಲ್ಮಾನ್ ಖಾನ್. 'ಭಾಯಿ' ಯಾಕಂದ್ರೆ ಆತ ಒಬ್ಬ ಪರ್ಮನೆಂಟ್ ಬ್ಯಾಚುಲರ್ ಅನ್ನೋದು ಹಳೇ ಜೋಕ್. ಈಗ್ಯಾಕೆ ಇದೆಲ್ಲಾ ಪೀಠಿಕೆ ಅಂದರೆ, ಹಿಂದೊಮ್ಮೆ ಇನ್ನೇನು ಮದುವೆ ಆಗೇ ಹೋಯ್ತು ಅನ್ನುವ ಹಂತಕ್ಕೆ ಸಲ್ಮಾನ್ ಬದುಕು ತಲುಪಿತ್ತು.
ನಟಿ ಸಂಗೀತಾ ಬಿಜಲಾನಿ ಜೊತೆ ಅನೇಕ ವರ್ಷಗಳ ಪ್ರೇಮದ ನಂತರ ಸಲ್ಲೂ ಸಪ್ತಪದಿ ತುಳಿಯೋಕೆ ಸಜ್ಜಾಗಿದ್ದರು. ಆದರೆ, ರಾತ್ರೋರಾತ್ರಿ ನಾನು ಇವನನ್ನು ಮದ್ವೆಯಾಗೋದಿಲ್ಲ ಅಂತ ಹೇಳಿ ಸಂಗೀತಾ ಬಿಜಲಾನಿ ಎದ್ದು ಹೋಗಿಬಿಟ್ಟಿದ್ದಳು.

ಇದೆಲ್ಲಾ ಕಳೆದು ದಶಕಗಳೇ ಕಳೆದಿವೆ. ಆದರೆ, ಕೆಲ ವರ್ಷಗಳ ಹಿಂದೆ ಕಾಫಿ ವಿತ್ ಕರಣ್ ಟಾಕ್ ಶೋನಲ್ಲಿ ತನ್ನ ಖಾಸಗಿ ಬದುಕಿನ ಬಗ್ಗೆ ಮಾತನಾಡುತ್ತಾ ಈ ಬಗ್ಗೆ ಸಲ್ಮಾನ್ ಮನಬಿಚ್ಚಿ ಮಾತನಾಡಿದ್ದರು. "ಸಂಗೀತಾ ವಿಚಾರದಲ್ಲಂತೂ ಕಾರ್ಡ್ ಕೂಡಾ ಪ್ರಿಂಟ್ ಆಗಿ ಹಂಚಲಾಗಿತ್ತು. ಆದರೆ, ನಾನು ತಪ್ಪು ಮಾಡ್ಬಿಟ್ಟೆ, ಅವಳು ಹೊರಟು ಹೋದಳು" ಎಂದಿದ್ದರು. ಈ ಬಗ್ಗೆ ಕರಣ್ ಜೋಹರ್ ಮತ್ತಷ್ಟು ವಿವರ ಕೇಳಿದಾಗ ಸಂಗೀತಾ ತನ್ನನ್ನು ಬೇರೆ ಹುಡುಗಿ ಜೊತೆ ರೆಡ್ ಹ್ಯಾಂಡ್ ಆಗಿ ನೋಡಿದ್ದಳು, ನಾನು ಸಿಕ್ಕಿಕೊಂಡಿದ್ದೆ ಎಂದು ಸಲ್ಲೂ ಮಿಯಾ ಹೇಳಿದ್ದರು.
ಸಲ್ಮಾನ್ ಖಾನ್ ಯಾವ ಹುಡುಗಿ ಜೊತೆ ಇದ್ರಪ್ಪಾ ಮದ್ವೆಯಂಥಾ ಟೈಮಲ್ಲಿ ಅಂತ ಅಭಿಮಾನಿಗಳು ಕೂಡಾ ತಲೆ ಕೆಡಿಸಿಕೊಂಡಿದ್ದರು. ಇದೀಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಸಲ್ಮಾನ್ ಖಾನ್ ನಟಿ ಸೋಮಿ ಅಲಿ ಜೊತೆ ಸಿಕ್ಕಿಹಾಕಿಕೊಂಡಿದ್ರಂತೆ! ಅದನ್ನು ಕಂಡು ಪ್ರೇಯಸಿ ಸಂಗೀತಾ ಬಿಜಲಾನಿ ಮದುವೆಯನ್ನು ರದ್ದು ಮಾಡಿದ್ದರು ಅನ್ನೋ ವಿಚಾರವನ್ನು ಖುದ್ದು ಮಾಜಿ ಪ್ರೇಯಸಿ ಸೋಮಿ ಅಲಿ ಟಾಕ್ ಶೋ ಒಂದರಲ್ಲಿ ಬಹಿರಂಗಪಡಿಸಿದ್ದಾರೆ.

ಅಷ್ಟೇ ಅಲ್ಲ"ಅವತ್ತು, ಆತನ ಮದುವೆಗೆ ಕೆಲವೇ ದಿನಗಳಿದ್ದಾಗ ಸಲ್ಮಾನ್ ಮತ್ತು ನಾನು ನನ್ನ ಮುಂಬೈ ಅಪಾರ್ಟ್ಮೆಂಟ್‌ನಲ್ಲಿ ಇದ್ದೆವು. ಆಗ ಸಂಗೀತಾ ಅಲ್ಲಿಗೆ ಬಂದಿದ್ದಳು. ನಮ್ಮನ್ನು ಒಟ್ಟಿಗೆ ನೋಡಿ ಕೋಪ ಮಾಡಿಕೊಂಡು ಮದುವೆ ಕ್ಯಾನ್ಸಲ್ ಮಾಡಿದ್ದಳು. ಆದರೆ, ಕರ್ಮ ರಿಟರ್ನ್ಸ್ ಅಂತಾರಲಾ, ಅದು ಸತ್ಯ. ನಾನು ಸಂಗೀತಾಗೆ ಮಾಡಿದ್ದನ್ನೇ ಬದುಕು ನನಗೆ ಮಾಡಿದೆ. ನನ್ನ ಬದುಕಿನಲ್ಲೂ ಇದೇ ರೀತಿ ನನಗೆ ಆಯ್ತು." ಎಂದು ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ನಟಿ ಸೋಮಿ ಅಲಿ ಹೇಳಿದ್ದಾರೆ.
ಇದಲ್ಲದೇ ಕೆಲವೇ ದಿನಗಳ ಮಟ್ಟಿಗೆ ಮಾತ್ರ ಸಲ್ಮಾನ್ ಖಾನ್ ಮತ್ತು ನಾನು ಜೊತೆಗಿದ್ದೆವು ಎಂದು ಎಲ್ಲರೂ ಹೇಳ್ತಾರೆ. ಆದರೆ, ನಮ್ಮ ಸಂಬಂಧ ಸುಮಾರು 8 ವರ್ಷಗಳ ಸುದೀರ್ಘ ಸಮಯದ್ದಾಗಿತ್ತು. ಸಲ್ಮಾನ್ ಬಹಳ ಹಿಂಸೆ ನೀಡುತ್ತಿದ್ದ. ಆತನೊಬ್ಬ ಸ್ತ್ರೀಯರಿಗೆ ಕಿರುಕುಳ ಕೊಡುವ ದುಷ್ಟ ಮನೋಭಾವದವನು. ಆತ ನನ್ನ ಮೇಲೆ ಅನೇಕ ಬಾರಿ ಹಲ್ಲೆ ಮಾಡಿದ್ದಿದೆ" ಎಂದು ಸೋಮಿ ಅಲಿ ಖಾಸಗಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಸೋಮಿ ಅಲಿ ಈ ಹೇಳಿಕೆ ಈಗ ಬಾಲಿವುಡ್ ಅಂಗಳದಲ್ಲಿ ಬಾಂಬ್ ಸಿಡಿಸಿದಂತಾಗಿದೆ. ಸಲ್ಮಾನ್ ಮತ್ತು ಆತನ ಹತ್ತಾರು ಗೆಳತಿಯರ ಬಗ್ಗೆ ಅನೇಕ ವರ್ಷಗಳಿಂದ ಸುದ್ದಿಗಳು ಓಡಾಡ್ತಲೇ ಇದೆ. ಕರಾವಳಿ ಚೆಲುವೆ ಐಶ್ವರ್ಯಾ ರೈ ಜೊತೆಗೆ ಸಲ್ಮಾನ್ ಅಫೇರ್ ನಡೆಯುತ್ತಿದೆ ಎನ್ನುವ ಗುಲ್ಲೆದ್ದಿದ್ದ ಸಂದರ್ಭದಲ್ಲೂ ಹೀಗೇ ಐಶ್ವರ್ಯಾ ಮನೆಯದುರು ಸಲ್ಲೂ ದಾಂಧಲೆ ಎಬ್ಬಿಸಿದ್ದ, ಆಕೆಯ ಶೂಟಿಂಗ್ ಸ್ಥಳಗಳಿಗೂ ತೆರಳಿ ಗಲಾಟೆ ಮಾಡ್ತಿದ್ದ ಎನ್ನುವ ಸುದ್ದಿಗಳು ಓಡಾಡುತ್ತಿದ್ದವು. ಐಶ್ವರ್ಯಾ, ಸಲ್ಮಾನ್‌ಗೆ ಗುಡ್ ಬೈ ಹೇಳೋಕೆ ಆತನ ಇದೇ ನಡವಳಿಕೆ ಕಾರಣ ಎನ್ನಲಾಗಿತ್ತು.
ಇದೀಗ ಸೋಮಿ ಅಲಿ ಹೇಳಿಕೆಗಳು ಬ್ಯಾಡ್ ಬಾಯ್ ಸಲ್ಮಾನ್ ಖಾನ್‌ರನ್ನು ಮತ್ತಷ್ಟು ಬ್ಯಾಡ್ ಎನ್ನುವಂತೆ ತೋರಿಸಿದೆ. ಈ ಬಗ್ಗೆ ಸಲ್ಮಾನ್ ಅಥವಾ ಆತನ ಕುಟುಂಬಸ್ಥರು ಯಾವುದೇ ಪ್ರತಿ ಹೇಳಿಕೆ ನೀಡಿಲ್ಲ.


Click it and Unblock the Notifications











