3ನೇ ದಿನ 'ಪಠಾಣ್', 'ಜವಾನ್', 'ಕೆಜಿಎಫ್ 2' ದಾಖಲೆ ಮುರಿಯಲಿಲ್ಲ 'ಟೈಗರ್ 3': ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು?
ಸಲ್ಮಾನ್ ಖಾನ್, ಕತ್ರಿನಾ ಕೈಫ್ ಸಿನಿಮಾ 'ಟೈಗರ್ 3' ವಿಶ್ವದಾದ್ಯಂತ ಸುಮಾರು 5500 ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಅದರಲ್ಲೂ ಭಾರತದಲ್ಲಿ ದೀಪಾವಳಿ ಹಬ್ಬಕ್ಕೆ 'ಟೈಗರ್ 3' ಜೋರಾಗಿಯೇ ಸದ್ದು ಮಾಡುತ್ತಿದೆ. ಇನ್ನೇನು 150 ಕೋಟಿ ರೂಪಾಯಿ ಗಳಿಕೆಗೆ ಸನಿಹದಲ್ಲಿರೋ ಈ ಸಿನಿಮಾ ಮೂರು ದಿನಗಳಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ.
'ಟೈಗರ್ 3'ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ಭಾರತದಾದ್ಯಂತ ಬಾಕ್ಸಾಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡಿದೆ. ಮೊದಲ ದಿನಕ್ಕಿಂತ ಎರಡನೇ ದಿನ ಕಲೆಕ್ಷನ್ ಹೆಚ್ಚಿತ್ತು. ಮೂರನೇ ದಿನ ಗಳಿಕೆ ಕೂಡ ಕಮ್ಮಿಯೇನಿಲ್ಲ. ರಿಲೀಸ್ ಆದ ದಿನ 44.50 ಕೋಟಿ ರೂಪಾಯಿ ಗಳಿಕೆ ಕಂಡಿದ್ದರೆ, ಎರಡನೇ ದಿನ ಅತೀ ಹೆಚ್ಚು 55 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಅದೇ ಮೂರನೇ ದಿನ 42.50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

ಬ್ಯಾಕ್ ಟು ಬ್ಯಾಕ್ ಸೋಲಿನಿಂದ ಕಂಗೆಟ್ಟಿದ್ದ ಸಲ್ಮಾನ್ ಖಾನ್‌ಗೆ 'ಟೈಗರ್ 3' ಬಿಗ್ ರಿಲೀಫ್ ಕೊಟ್ಟಿದೆ. ಮೂರು ದಿನಗಳಲ್ಲಿ ಸುಮಾರು 142 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಟ್ರೇಡ್ ವಲಯಗಳಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ.
ದೆಹಲಿ,ಉತ್ತರ ಪ್ರದೇಶ, ಹರಿಯಾಣ, ಪಂಜಾಬ್, ರಾಜಸ್ಥಾನ ಹಾಗೂ ಮಧ್ಯ ಪ್ರದೇಶಗಳಲ್ಲಿ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಆದರೆ, ಮೊದಲ ದಿನ ದೇಶದ ಹಲವು ಭಾಗಗಳಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಎರಡನೇ ದಿನದಿಂದ ಡಲ್ ಏರಿಯಾಗಳಲ್ಲೂ ಕಲೆಕ್ಷನ್ ಪಿಕಪ್ ಆಗಿದೆ ಅಂತ ಟ್ರೇಡ್ ಎಕ್ಸ್‌ಪರ್ಟ್ ಹೇಳುತ್ತಿದ್ದಾರೆ. ಹೀಗಿದ್ದರೂ, 'ಟೈಗರ್ 3', ಶಾರುಖ್, ಯಶ್ ಸಿನಿಮಾಗಳ ದಾಖಲೆಯನ್ನು ಮೂರು ದಿನ ಮುರಿಯಲಿಲ್ಲ.
'ಟೈಗರ್ 3' ಅತೀ ಹೆಚ್ಚು ಗಳಿಸಿದ ಹಿಂದಿ ಸಿನಿಮಾಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಆದರೆ, ಯಶ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್ ಚಾಪ್ಟರ್ 2' ಮೂರನೇ ದಿನ ಕಲೆಕ್ಷನ್ ಅನ್ನು ಹಿಂದಕ್ಕೆ ಹಾಕಲು ಸಾಧ್ಯವಾಗಿಲ್ಲ. 'ಕೆಜಿಎಫ್ 2' ಮೂರನೇ ದಿನಕ್ಕೆ 143.64 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.

ಇನ್ನು ವಿಶ್ವದಾದ್ಯಂತ 'ಟೈಗರ್ 3' ಕಲೆಕ್ಷನ್ 200 ಕೋಟಿ ರೂಪಾಯಿ ಸಮೀಪದಲ್ಲಿದೆ. ವಿಶ್ವದಾದ್ಯಂತ ಮೊದಲ ದಿನ 95 ಕೋಟಿ ರೂಪಾಯಿ, ಎರಡನೇ ದಿನ 88.16 ಕೋಟಿ ಹಾಗೂ ಮೂರನೇ ದಿನದ ಗಳಿಕೆ ಸೇರಿ 183.39 ಕೋಟಿ ರೂಪಾಯಿ ಗಳಿಕೆ ಕಂಡಿದೆ. ಅಂದ್ಹಾಗೆ, ಇದು 100 ಕೋಟಿ ದಾಟುತ್ತಿರುವ ಸಲ್ಮಾನ್ ಖಾನ್ ನಟನೆಯ 17ನೇ ಸಿನಿಮಾ.
'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' 110.94 ಕೋಟಿ, ದಬಾಂಗ್ 3 146.23 ಕೋಟಿ, ಭಾರತ್ 212.03 ಕೋಟಿ, ರೇಸ್ 3 169.5 ಕೋಟಿ, ಟೈಗರ್ ಜಿಂದಾ ಹೈ 339.16 ಕೋಟಿ, ಟ್ಯೂಬ್‌ಲೈಟ್ 119.26 ಕೋಟಿ, ಸುಲ್ತಾನ್ 300.45 ಕೋಟಿ, ಪ್ರೇಮ್ ರಥನ್ ಧನ್ ಪಾಯೋ 210.16 ಕೋಟಿ, ಭಜರಂಗಿ ಭಾಯ್‌ಜಾನ್ 320.34 ಕೋಟಿ, ಕಿಕ್ 231.85 ಕೋಟಿ ಸೇರಿದಂತೆ ಹಲವು ಸಿನಿಮಾ 100 ಕೋಟಿ ಕ್ಲಬ್ ಸೇರಿವೆ.
'ಟೈಗರ್ 3' ಕಲೆಕ್ಷನ್‌ಗೆ ಹೆಚ್ಚು ಕೊಡುಗೆ ನೀಡಿದ ನಗರಗಳಲ್ಲಿ ಬೆಂಗಳೂರು ಕೂಡ ಸೇರಿದೆ. ಮುಂಬೈ, ಲಕ್ನೌ, ದೆಹಲಿ, ಅಹಮದಾಬಾದ್, ಪೂನಾ, ಚೆನ್ನೈ ಸೇರಿದಂತೆ ಹಲವು ನಗರಗಳಲ್ಲಿ 'ಟೈಗರ್ 3' ಸಿನಿಮಾಗೆ ಅದ್ಭುತ ಕಲೆಕ್ಷನ್ ಸಿಕ್ಕಿದೆ.


Click it and Unblock the Notifications











