DDLJ 30: ಭಾರತದಲ್ಲಿ ಅತೀ ಹೆಚ್ಚು ಕಾಲ ಪ್ರದರ್ಶನ ಕಂಡ ಸಿನಿಮಾಗೆ 30 ವರ್ಷ
ಶಾರುಖ್ ಖಾನ್, ಕಾಜೋಲ್‌ಗೆ ಸೂಪರ್ ಸ್ಟಾರ್‌ಢಮ್ ಕೊಟ್ಟ ಸಿನಿಮಾ 'ಡಿಡಿಎಲ್‌ಜೆ'( Dilwale Dulhania Le Jayenge). ಈ ಬಾಲಿವುಡ್ ಸಿನಿಮಾವೀಗ 30 ವರ್ಷಗಳ ಸಂಭ್ರಮದಲ್ಲಿದೆ. ಯಶ್ ರಾಜ್ ಫಿಲ್ಮ್ಸ್ ನಿರ್ಮಿಸಿರುವ ಈ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಹಲವು ದಾಖಲೆಗಳನ್ನು ಬರೆದು ಹೊಸ ಇತಿಹಾಸವನ್ನೇ ಸೃಷ್ಟಿಸಿದೆ.
ಅಕ್ಟೋಬರ್ 20, 1995. ಬಾಲಿವುಡ್ ಸಿನಿಮಾ 'ದಿಲ್ವಾಲ್ ದುಲ್ಹನಿಯಾ ಲೇ ಜಾಯೇಂಗೆ' ತೆರೆಗಪ್ಪಳಿಸಿತ್ತು. ಈ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಚರಿತ್ರೆಯನ್ನೇ ಸೃಷ್ಟಿಸಬಹುದು ಅನ್ನೋದು ಯಾರೂ ಊಹಿಸಿರಲಿಲ್ಲ. ಯಶ್ ಚೋಪ್ರಾ ಅಂತಹ ಅನುಭವಿ ನಿರ್ದೇಶಕನಿಗೆ ತನ್ನ ಮಗ ಆದಿತ್ಯ ಚೋಪ್ರಾ ಇಂತಹದ್ದೊಂದು ಮಾಸ್ಟರ್ ಪೀಸ್ ಅನ್ನು ನಿರ್ದೇಶಿಸಬಹುದು ಅನ್ನೋ ನಂಬಿಕೆ ಇರಲಿಲ್ಲ. ಅದು ಚೊಚ್ಚಲ ಸಿನಿಮಾ ಬೇರೆ.

'ಡಿಡಿಎಲ್‌ಜೆ' ರಿಲೀಸ್ ಆಗಿ 30 ವರ್ಷಗಳನ್ನು ಪೂರೈಸಿದೆ. ವಿಶ್ವದ ಯಾವುದೇ ಮೂಲೆಯಲ್ಲೂ ಬರೋಬ್ಬರಿ 30 ವರ್ಷಗಳ ಕಾಲ ಒಂದೇ ಚಿತ್ರಮಂದಿರಲ್ಲಿ ಸಿನಿಮಾ ಪ್ರದರ್ಶನ ಕಂಡಿರುವ ಉದಾಹರಣೆಗಳಿಲ್ಲ. ಇಂದಿಗೂ ಮುಂಬೈನ ಮರಾಠ ಚಿತ್ರಮಂದಿರದಲ್ಲಿ 'ದಿಲ್ವಾಲ್ ದುಲ್ಹನಿಯಾ ಲೇ ಜಾಯೇಂಗೆ' ಸಿನಿಮಾ ಪ್ರದರ್ಶನ ಕಾಣುತ್ತಿದೆ. ಇಷ್ಟು ವರ್ಷಗಳ ಸುಧೀರ್ಘ ಪ್ರದರ್ಶನ ಕಂಡಿದ್ದು ವಿಶ್ವದ ಯಾವುದೇ ಕಡೆಯಿಂದಲೂ ಗಮನಕ್ಕೆ ಬಂದಿಲ್ಲ. ಅಷ್ಟಕ್ಕೂ ಇಂದಿನ ಪೀಳಿಗೆಗೂ 'ಡಿಡಿಎಲ್‌ಜೆ' ಯಾಕಿಷ್ಟ? ಇಷ್ಟು ಸಮಯ ಸಿನಿಮಾ ಪ್ರದರ್ಶನ ಕಾಣಲು ಕಾರಣವೇನು?
'ರಾಜ್' ಪಾತ್ರದಲ್ಲಿ ಶಾರುಖ್ ಖಾನ್. ಸಿಮ್ರನ್ ಪಾತ್ರದಲ್ಲಿ ಕಾಜೋಲ್‌ರನ್ನು ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಇವರೊಂದಿಗೆ ಅಂಬರೀಷ್ ಪುರಿ, ಅನುಪಮ್ ಖೇರ್, ಫರಿದಾ ಜಲಾಲ್ ಅಂತಹ ದಿಗ್ಗಜರು ಈ ಸಿನಿಮಾಗೆ ಜೀವ ತುಂಬಿದ್ದರು. ಸಿನಿಮಾದ ಸ್ಟೋರಿ, ಸ್ಕ್ರೀನ್ ಪ್ಲೇ, ಮೇಕಿಂಗ್ 30 ವರ್ಷಗಳ ಹಿಂದಷ್ಟೇ ಅಲ್ಲ. ಇಂದಿಗೂ ಗಮನ ಸೆಳೆಯುತ್ತೆ. ಇಂದಿನ ಫಿಲ್ಮ್ಸ್ ಮೇಕರ್ಸ್‌ಗೂ 'ಡಿಡಿಎಲ್‌ಜೆ' ಮೀರಿಸುವ ಸಿನಿಮಾ ಮಾಡುವುದಕ್ಕೆ ಆಗಲಿಲ್ಲ.
ಶಾರುಖ್ ಖಾನ್‌ಗೆ ಈ ಸಿನಿಮಾ ವರವಾಗಿ ಸಾಬೀತಾಯ್ತು. ರೊಮ್ಯಾಂಟಿಕ್ ಹೀರೋ ಅನ್ನೋ ಪಟ್ಟ ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಬಂದುಬಿಟ್ಟಿತ್ತು. ಶಾರುಖ್ ಖಾನ್ ಸ್ಟೈಲ್ ಅನ್ನು ಅನುಕರಿಸುವುದಕ್ಕೆ ಶುರು ಮಾಡಿದರು. ಇಂದಿಗೂ ರೊಮ್ಯಾಂಟಿಕ್ ಸಿನಿಮಾಗಳನ್ನು ಮಾಡುವ ಹೀರೋ ಎಲ್ಲೋ ಒಂದು ಕಡೆ ಸನ್ನಿವೇಶಗಳಲ್ಲಿ ಶಾರುಖ್ ಖಾನ್ ಅನ್ನು ಅನುಕರಿಸುವುದನ್ನು ನೋಡಬಹುದು.

'ಡಿಡಿಎಲ್‌ಜೆ' ಬಳಿಕ ಕಾಜೋಲ್ ಹುಡುಗರ ಫೇವರಿಟ್ ನಟಿಯಾಗಿಬಿಟ್ಟರು. ಈ ಸಿನಿಮಾಗೆ ಜತಿನ್-ಲಲಿತ್ ಕಂಪೋಸ್ ಮಾಡಿದ ಹಾಡುಗಳು ಜೀವಾಳವಾಗಿದ್ದವು. ಲತಾ ಮಂಗೇಶ್ಕರ್ ಹಾಡಿದ್ದ "ಮೇರೇ ಕ್ವಾಬೋ ಮೇ ಜೋ ಆಯೇ.." ಹಾಡಿನಲ್ಲಿ ಕಾಜೋಲ್ ಬೋಲ್ಡ್ ಅನಿಸಿಬಿಟ್ಟಿದ್ದರು. ಲತಾ ಮಂಗೇಶ್ಕರ್ ಧ್ವನಿ ಕಾಜೋಲ್‌ಗೆ ಆ ಮಟ್ಟಿಗೆ ಹೊಂದಿಕೊಂಡಿತ್ತು. ಇದೊಂದೇ ಹಾಡು ಅಲ್ಲ, "ಹೊ ಗಯಾ ಹೇ ತುಜ್ ಕೋ ತೋ ಪ್ಯಾರ್ ಸಜನಾ" ಹಾಡು ಪ್ರೇಮಿಗಳ ಫೇವರಿಟ್. ಇನ್ನು " ತುಜೆ ದೇಕಾ ತೋಯೇ ಜಾನಾ ಸನಂ" ಪ್ರೇಮಿಗಳು ಗೀತೆಯಂತಾಗಿಬಿಟ್ಟದೆ. ಅವರು ಇರೋವರೆಗೂ ಈ ಹಾಡು ಅಜರಾಮರ.
ಈ ಸಿನಿಮಾ ಬಾಲಿವುಡ್‌ಗೆ ಒಬ್ಬ ಅತ್ಯುತ್ತಮ ನಿರ್ದೇಶಕನನ್ನು ಕೊಟ್ಟಿತ್ತು. 'ಡಿಡಿಎಲ್‌ಜೆ' ಬಿಡುಗಡೆಗೆ ಒಂದು ವಾರ ಮುನ್ನ ಆಪ್ತರಿಗೆ ತೋರಿಸಲಾಗಿತ್ತು. ಅಂದಿನ ಕಾಲದ ಪಾಪ್ ಕಲ್ಚರ್ ಅನ್ನು ಭಾರತೀಯ ಸಂಸ್ಕೃತಿಯೊಂದಿಗೆ ಸೇರಿಸಿ ಹೆಣೆದ ಸಿನಿಮಾ ಹೊಸ ಅನುಭವ ಕೊಟ್ಟಿತ್ತು. 30 ವರ್ಷ ನಿರಂತರ ಪ್ರದರ್ಶನ ಕಂಡ ಇದೇ ಮರಾಠ ಮಂದಿರ ಚಿತ್ರಮಂದಿರದ ಮುಖ್ಯಸ್ಥ ಮನೋಜ್ ದೇಸಾಯಿ ಈ ಸಿನಿಮಾ ನೋಡಿ ಯಶ್ ಚೋಪ್ರಾ ಬಳಿ "ಏ ಸಿನಿಮಾ ಲಂಬಿ ಚಲೇಗಿ" ( ಈ ಸಿನಿಮಾ ಸುದೀರ್ಘ ಕಾಲ ಪ್ರದರ್ಶನ ಕಾಣುತ್ತೆ) ಎಂದು ಹೇಳಿದ್ದರು. ಈ ವಿಷಯವನ್ನು ಈ ಸಂಭ್ರಮದಂದು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.


Click it and Unblock the Notifications











