ಕನ್ನಡಕ್ಕೆ ಕಾಲಿಟ್ಟ ಕಿಂಗ್ ಖಾನ್: ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಗುದ್ದಾಡಲು ಶಾರುಖ್ ರೆಡಿ!
ಶಾರುಖ್ ಖಾನ್ ಸಿನಿಮಾ ಇದೂವರೆಗೂ ಕೇವಲ ಒಂದೇ ಒಂದು ಭಾಷೆಯಲ್ಲಿ ರಿಲೀಸ್ ಆಗುತ್ತಿತ್ತು. ಕಿಂಗ್ ಖಾನ್ ಸಿನಿಮಾ ತಮ್ಮದೇ ಭಾಷೆಯಲ್ಲಿ ನೋಡಬೇಕು ಅನ್ನೋರಿಗೆ ನಿರಾಸೆಯಾಗುತ್ತಿತ್ತು. ಆದರೆ, ಪ್ಯಾನ್ ಇಂಡಿಯಾ ಸಿನಿಮಾಗಳ ಹಾವಳಿ ಹೆಚ್ಚಾಗುತ್ತಿದ್ದಂತೆ ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್ ದಕ್ಷಿಣದ ಕಡೆ ಮುಖ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾ ರಿಲೀಸ್ ಮಾಡಲು ಸಜ್ಜಾಗಿದ್ದಾರೆ.
ಶಾರುಖ್ ಖಾನ್ ಹಾಗೂ ದಕ್ಷಿಣ ಭಾರತದ ಸ್ಟಾರ್ ನಿರ್ದೇಶಕ ಅಟ್ಲಿ ಜೊತೆಯಾಗಿ ಸಿನಿಮಾ ಮಾಡುತ್ತಿರುವುದು ಗೊತ್ತೇ ಇದೆ. ಕಳೆದ ಕೆಲವು ದಿನಗಳಿಂದ ಈ ಸಿನಿಮಾ ಭಾರತದಾದ್ಯಂತ ಚರ್ಚೆಯಾಗುತ್ತಲೇ ಇದೆ. ಸದ್ಯ ಕಳೆದೆರಡು ದಿನಗಳಿಂದ ಶಾರುಖ್-ಆಟ್ಲಿ ಸಿನಿಮಾ ಟೈಟಲ್ ಬಗ್ಗೆನೇ ಚರ್ಚೆಯಾಗಿತ್ತು. ಈಗ ಕೇವಲ ಟೈಟಲ್ ಅನೌನ್ಸ್ ಮಾಡಿದ್ದಷ್ಟೇ ಅಲ್ಲ. ಸಿನಿಮಾ ಬಿಡುಗಡೆಗೆ ಬಗ್ಗೆನೂ ಮಾಹಿತಿ ಹಂಚಿಕೊಂಡಿದ್ದಾರೆ.
ಶಾರುಖ್ ಖಾನ್ ಸದ್ಯ 'ಪಠಾಣ್' ಚಿತ್ರದ ಶೂಟಿಂಗ್‌ನಲ್ಲಿ ಬ್ಯುಜಿಯಾಗಿದ್ದಾರೆ. ಆ ಸಿನಿಮಾ ಜೊತೆನೇ 'ಜವಾನ್' ಚಿತ್ತದ ಕೆಲಸದಲ್ಲಿಯೂ ಭಾಗಿಯಾಗಲಿದ್ದಾರೆ. ಈಗಾಗಲೇ ಸಿನಿಮಾ ರಿಲೀಸ್ ದಿನಾಂಕವನ್ನೂ ಚಿತ್ರತಂಡ ಘೋಷಿಸಿದೆ. 2023ರ ಜೂನ್ 2ರಂದು ಈ ಸಿನಿಮಾ ತೆರೆಗೆ ಬರಲಿದ್ದು, ಚಿಕ್ಕದೊಂದು ಟ್ರೈಟಲ್ ಟೀಸರ್ ಕೂಡ ರಿಲೀಸ್ ಆಗಿದೆ.

ಶಾರುಖ್ ಸಿನಿಮಾ ಕನ್ನಡದಲ್ಲೂ ರಿಲೀಸ್
ಶಾರುಖ್ ಹಾಗೂ ಅಟ್ಲಿ ಸಿನಿಮಾ ಹಲವು ಕಾರಣಗಳಿಗೆ ಸದ್ದು ಮಾಡುತ್ತಲೇ ಇದೆ. ಇದಕ್ಕೆ ಕಾರಣ, ಶಾರುಖ್-ಅಟ್ಲಿ ಕಾಂಬಿನೇಷನ್ ಒಂದಾದರೆ, ಇನ್ನೊಂದು ಸಿನಿಮಾದ ಟೈಟಲ್. ಹಲವು ದಿನಗಳ ಬಳಿಕ ಡಬಲ್ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ ಕಿಂಗ್ ಖಾನ್ ಸಿನಿಮಾ ಬಗ್ಗೆ ಸಹಜವಾಗಿಯೇ ಕುತೂಹಲವಿತ್ತು. ಆದ್ರೀಗ ಶಾರುಖ್ ಖಾನ್ ಸಿನಿಮಾ ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಬಿಡುಗಡೆಯಾಗಲಿದೆ. ಇದೇ ಮೊದಲ ಬಾರಿಗೆ ಶಾರುಖ್ ಸಿನಿಮಾ ಕನ್ನಡಕ್ಕೆ ಡಬ್ ಆಗಿ ಬಿಡುಗಡೆಯಾಗುತ್ತಿದೆ.

ಶಾರುಖ್ 'ಜವಾನ್' ಇಂಡಿಯಾ ಸಿನಿಮಾ
ಅಟ್ಲಿ ನಿರ್ದೇಶಿಸುವ ಸಿನಿಮಾ ಕಮರ್ಷಿಯಲ್ ಆಗಿ ಹಿಟ್ ಆಗುತ್ತೆ. ಇದೂವರೆಗೂ ಅಟ್ಲಿ ನಿರ್ದೇಶಿಸಿದ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಬೇಜಾನ್ ಸದ್ದು ಮಾಡಿದೆ. ಈಗ ಶಾರುಖ್ ಖಾನ್ ಮೇಲೆ ಅಟ್ಲಿ ಇದೇ ಪ್ರಯೋಗ ಮಾಡುತ್ತಿದ್ದಾರೆ. 'ಜವಾನ್'ಗೆ ಆ್ಯಕ್ಷನ್ ಕಟ್ ಹೇಳುತ್ತಿರುವ ಅಟ್ಲಿ, ಶಾರುಖ್ ಸಿನಿಮಾವನ್ನು ಹಿಂದಿ, ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲೂ ಬಿಡುಗಡೆ ಮಾಡುವುದಕ್ಕೆ ಸಜ್ಜಾಗಿದ್ದಾರೆ.

ಕಮರ್ಷಿಯಲ್ ಕಿಂಗ್ ಅಟ್ಲಿ
ಅಟ್ಲಿ ಸಿನಿಮಾಗೆ ದಕ್ಷಿಣ ಭಾರತದಲ್ಲಿ ಅಭಿಮಾನಿಗಳಿದ್ದಾರೆ. ಈಗಾಗಲೇ 'ರಾಜಾ ರಾಣಿ', 'ತೇರಿ', 'ಮೆರ್ಸೆಲ್', 'ಬಿಗಿಲ್' ಅಂತಹ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನಿರ್ದೇಶಿಸಿ ಕಾಲಿವುಡ್‌ನಲ್ಲಿ ಹವಾ ಸೃಷ್ಟಿಸಿದ್ದಾರೆ. ಸದ್ಯ 'ಜವಾನ್' ಸಿನಿಮಾ ಟೈಟಲ್ ಜೊತೆ ಶಾರುಖ್ ಝಲಕ್ ರಿಲೀಸ್ ಮಾಡಿದ್ದು, ಈ ಟೀಸರ್ ಹಲವು ಕೌತುಕಗಳನ್ನು ಸೃಷ್ಟಿಸಿದೆ. ಸದ್ಯ ಬಿಡುಗಡೆಯಾಗಿರುವ ಕಿರು ಟೀಸರ್‌ನಲ್ಲಿ ಶಾರುಖ್ ರಗಡ್ ಲುಕ್ ಕಿಕ್ ಕೊಡುತ್ತಿದೆ.

'ಜವಾನ್' ಬಗ್ಗೆ ಕಿಂಗ್ ಖಾನ್ ಹೇಳಿದ್ದೇನು?
"ಜವಾನ್ ಸಿನಿಮಾದ ಕಥೆ ಯಾವುದೇ ಭಾಗದಲ್ಲಿಯೂ ಸಲ್ಲುತ್ತದೆ. ಭಾಷೆಗೂ ಮೀರಿದ ಯೂನಿವರ್ಸಲ್ ಕಥೆಯಾಗಿದೆ. ಇಂತಹ ಕಥೆಯನ್ನು ಹೆಣೆದಿರುವ ಅಟ್ಲಿಗೆ ಧನ್ಯವಾದ ಹೇಳಲೇಬೇಕು. ನನಗೆ ಇದೊಂದು ಹೊಸ ಅನುಭವ ಆಗಿದ್ದು, ಮೈನವಿರೇಳಿಸುವ ಆ್ಯಕ್ಷನ್ ಸಿನಿಮಾದ ಹೈಲೆಟ್. ಸದ್ಯ ಬಿಡುಗಡೆ ಆಗಿರುವ ಟೀಸರ್ ಸಣ್ಣ ಝಲಕ್ ಅಷ್ಟೇ" ಎಂದಿದ್ದಾರೆ ಶಾರುಖ್. ಅತ್ತ ಅಟ್ಲಿ "ಇದೊಂದು ವಿಶ್ಯುವಲ್ ಟ್ರೀಟ್ ಸಿನಿಮಾ. ಪ್ರೇಕ್ಷಕರಿಗೆ ಈ ಸಿನಿಮಾ ಮೂಲಕ ಹೊಸ ಅನುಭವ ಸಿಗಲಿದೆ. ಆ್ಯಕ್ಷನ್ ಜೊತೆಗೆ ಕಮರ್ಷಿಯಲ್, ಡ್ರಾಮ ಈ ಸಿನಿಮಾದಲ್ಲಿ ಇರುತ್ತೆ." ಎಂದಿದ್ದಾರೆ.


Click it and Unblock the Notifications











