'ಸಲಾರ್' ಬಜೆಟ್‌ನಲ್ಲಿ 'ಡಂಕಿ'ಯಂತಹ 4 ಸಿನಿಮಾ ಮಾಡ್ಬಹುದು: ಆದ್ರೂ ಬಾಕ್ಸಾಫೀಸ್‌ನಲ್ಲಿ ಯಾಕೆ ಟಕ್ಕರ್ ಕೊಡುತ್ತೆ?
ಡಿಸೆಂಬರ್ ತಿಂಗಳ ಕೊನೆಯಲ್ಲಿ ಬಾಕ್ಸಾಫೀಸ್‌ನಲ್ಲಿ ಮಹಾಯುದ್ಧ ನಡೆಯಲಿದೆ. ಈ ಯುದ್ಧದಲ್ಲಿ ಗೆಲ್ಲೋದು ಯಾರು? ಅನ್ನೋದು ಸದ್ಯಕ್ಕಿರುವ ಪ್ರಶ್ನೆ. ಒಂದಕ್ಕಡೆ ಯಶಸ್ಸಿನ ಅಲೆಯಲ್ಲಿ ತೇಲುತ್ತಿರೋ ಶಾರುಖ್ ಖಾನ್. ಇನ್ನೊಂದು ಕಡೆ ಸತತ ಮೂರು ಸೋಲುಗಳನ್ನು ಕಂಡಿರೋ ಪ್ರಭಾಸ್. ಇಬ್ಬರ ಸಿನಿಮಾಗಳು ಒಂದು ದಿನ ಹಿಂದೆ ಮುಂದೆ ಬಿಡುಗಡೆಯಾಗುತ್ತಿದೆ.
ಈ ಕಾರಣಕ್ಕೆ ಈ ಬಾಕ್ಸಾಫೀಸ್ ಯುದ್ಧದಲ್ಲಿ ಗೆಲ್ಲೋದು ಯಾರು? ಅನ್ನೋದು ಸಿನಿಮಾ ಪಂಡಿತರಿಗೆ ಯಕ್ಷ ಪ್ರಶ್ನೆಯಾಗಿದೆ. ಯಾಕಂದ್ರೆ, ಪ್ರಭಾಸ್ ಸೋತಿದ್ದರೂ ಪ್ರಶಾಂತ್, ಹೊಂಬಾಳೆ ಫಿಲ್ಮ್ಸ್ ಅಂತ ಸಂಸ್ಥೆ ಜೊತೆಗಿರುವುದರಿಂದ ಫ್ಯಾನ್ಸ್ ಕೊಂಚ ನಿರಾಳವಾಗಿದ್ದಾರೆ. ಇತ್ತ ಶಾರುಖ್ ಖಾನ್ 'ಡಂಕಿ' ಸಿನಿಮಾದ ಪ್ರಚಾರವನ್ನು ಭರ್ಜರಿಯಾಗಿ ಆರಂಭಿಸಿದ್ದಾರೆ.

'ಡಂಕಿ' ಸಿನಿಮಾದ ಲಟ್ ಪುಟ್ ಅನ್ನೋ ಹಾಡ ರಿಲೀಸ್ ಆಗಿದ್ದು, ಪ್ರೇಕ್ಷಕರಿಂದ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. ಈ ವೇಳೆ 'ಡಂಕಿ' ಸಿನಿಮಾದ ಬಜೆಟ್ ಎಷ್ಟು ಅನ್ನೋದು ರಿವೀಲ್ ಆಗಿದೆ. ಅಚ್ಚರಿ ಅಂದರೆ, ಈ ಸಿನಿಮಾಗೆ 'ಸಲಾರ್'ಗೆ ಖರ್ಚು ಮಾಡಿದ ನಾಲ್ಕರಲ್ಲಿ ಒಂದು ಭಾಗದಷ್ಟು ಬಜೆಟ್ ಅನ್ನು ಮಾತ್ರ ಉಪಯೋಗಿಸಲಾಗಿದೆ.
ಹೌದು, ಶಾರುಖ್ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ಸಂಭಾವನೆ ಬಿಟ್ಟು ಈ ಸಿನಿಮಾಗೆ ಖರ್ಚು ಮಾಡಿದ್ದು ಕೇವಲ 85 ಕೋಟಿ ರೂಪಾಯಿ. ಇನ್ನು ಪಬ್ಲಿಸಿಟಿ ಸೇರಿದಂತೆ ಬಿಡುಗಡೆವರೆಗೂ ಆಗುವ ಖರ್ಚು ಬರೀ 120 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಶಾರುಖ್ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿನೇ ನಿರ್ಮಾಪಕರಾಗಿರುವುದರಿಂದ ಈ ಸಿನಿಮಾದಿಂದ ಲಾಭವನ್ನು ಸಂಭಾವನೆಯಾಗಿ ಪಡೆಯಲಿದ್ದಾರೆ.
ಇತ್ತ 'ಸಲಾರ್' ಸಿನಿಮಾದ ಬಜೆಟ್ 400 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ಅಂದರೆ, 'ಡಂಕಿ'ಗಿಂತ ಈ ಸಿನಿಮಾದ ಬಜೆಟ್ ನಾಲ್ಕು ಪಟ್ಟು ಹೆಚ್ಚು. ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್, ಪ್ರಶಾಂತ್ ನೀಲ್ ಸಂಭಾವನೆಗೆ ಹೆಚ್ಚು ಹಣ ಉಪಯೋಗ ಆಗಿರುವ ಸಾಧ್ಯತೆಯಿದೆ. ಇನ್ನೊಂದು ಕಡೆ ದೊಡ್ಡ ದೊಡ್ಡ ಸೆಟ್ ಹಾಕಿ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ.
'ಡಂಕಿ' ಸಿನಿಮಾ ಬಜೆಟ್ ರಿವೀಲ್ ಆದ್ಮೇಲೆ 'ಸಲಾರ್' ತಂಡಕ್ಕೆ ಟೆನ್ಷನ್ ಹೆಚ್ಚಾದಂತೆ ಇದೆ. ಇಷ್ಟು ದೊಡ್ಡ ಮೊತ್ತದಲ್ಲಿ ಸಿನಿಮಾ ನಿರ್ಮಾಣ ಮಾಡಿದ ಮೇಲೆ 'ಡಂಕಿ'ಗಿಂತ ನಾಲ್ಕು ಪಟ್ಟು ಹೆಚ್ಚು ಹಣವನ್ನು ಬಾಕ್ಸಾಫೀಸ್‌ನಿಂದ ದೋಚಲೇ ಬೇಕಿದೆ. ಇಲ್ಲದೇ ಹೋದರೆ 'ಡಂಕಿ' ಪ್ರಭಾಸ್ ಹಾಗೂ ಪ್ರಶಾಂತ್ ನೀಲ್ ಮಂಡಿಯೂರಿದಂತೆಯೇ.

ಶಾರುಖ್ ಖಾನ್ ಬಾಕ್ಸಾಫೀಸ್‌ನಲ್ಲಿ ಈಗಾಗಲೇ ಸಾವಿರ ಕೋಟಿಯ ಎರಡು ಸಿನಿಮಾಗಳನ್ನು ನೀಡಿರುವುದರಿಂದ ಮೂರನೇ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಹಾಗಂತ ಇಲ್ಲಿ ಕಿಂಗ್ ಖಾನ್‌ಗಿಂತ ನಂಬಿಕೆ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಮೇಲಿದೆ. 'ಮುನ್ನಬಾಯಿ ಎಂಬಿಬಿಎಸ್'ನಿಂದ ಹಿಡಿದು 'ಸಂಜು'ವರೆಗೂ ಸೋಲನ್ನೇ ಕಂಡಿಲ್ಲ. ರಾಜ್‌ಕುಮಾರ್ ಹಿರಾನಿ ನಿರ್ದೇಶಿಸಿದ ಪ್ರತಿಯೊಂದು ಸಿನಿಮಾವೂ ಮೆಗಾ ಹಿಟ್ ಅಂತ ಸಾಬೀತಾಗಿದೆ.
ಈ ಕಾರಣಕ್ಕೆ ಇಲ್ಲಿ 'ಡಂಕಿ' Vs 'ಸಲಾರ್'.. ಶಾರುಖ್ ಖಾನ್ Vs ಪ್ರಭಾಸ್ ಅಷ್ಟೇ ಅಲ್ಲ. ರಾಜ್‌ಕುಮಾರ್ ಹಿರಾನಿ Vs ಪ್ರಶಾಂತ್ ನೀಲ್ ಕೂಡ ಹೌದು. ಈ ಕಾರಣಕ್ಕೆ ಪ್ರಶಾಂತ್ ನೀಲ್ 'ಕೆಜಿಎಫ್ 2' ಸಿನಿಮಾದ ದಾಖಲೆಯನ್ನು 'ಸಲಾರ್' ಮೂಲಕ ಮುರಿಯಲೇ ಬೇಕು. ಈ ಒತ್ತಡ ಪ್ರಭಾಸ್‌ಗಿಂತ ಹೆಚ್ಚಾಗಿ ಪ್ರಶಾಂತ್ ನೀಲ್ ಮೇಲೆ ಹೆಚ್ಚಿದೆ.
'ಸಲಾರ್' ತೆಲುಗಿನ ಪ್ಯಾನ್ ಇಂಡಿಯಾ ಸಿನಿಮಾ. ಹೀಗಾಗಿ ಭಾರತ ಹಾಗೂ ವಿದೇಶದಲ್ಲಿ ಮಾಸ್ ಓಪನಿಂಗ್ ಪಡೆದುಕೊಳ್ಳುತ್ತೆ. ಜೊತೆಗೆ 'ಕೆಜಿಎಫ್ 2' ಪ್ರಶಾಂತ್ ನೀಲ್ ಸಿನಿಮಾ ನೋಡಲೇ ಬೇಕು ಅನ್ನೋ ಕುತೂಹಲ ಇದ್ದೇ ಇರುತ್ತೆ. ಅತಿ ಹೆಚ್ಚು ಸ್ಕ್ರೀನ್‌ಗಳಲ್ಲಿ ಸಿನಿಮಾ ರಿಲೀಸ್ ಮಾಡುವುದರಿಂದ ಬಾಕ್ಸಾಫೀಸ್‌ನಲ್ಲಿ ಮೂರು ದಿನ ಜೋರಾಗಿಯೇ ಸೌಂಡು ಮಾಡುತ್ತೆ. ಆಮೇಲೆ ಸಿನಿಮಾ ನಿಲ್ಲುವುದೇ ಕಂಟೆಂಟ್ ಮೇಲೆ. ಎಲ್ಲರೂ 'ಸಲಾರ್' ಟ್ರೈಲರ್ ಯಾವ ಮಟ್ಟಿಗೆ ಸದ್ದು ಮಾಡುತ್ತೆ? ಅನ್ನೋದರ ಮೇಲೆ ನಿಂತಿದೆ.


Click it and Unblock the Notifications











