Shah Rukh Khan: "ಇನ್ಮುಂದೆ ಲವ್ ಸ್ಟೋರಿಗಳಲ್ಲಿ ನಟಿಸುತ್ತೇನೋ ಇಲ್ಲವೋ ಗೊತ್ತಿಲ್ಲ" ಯುವತಿಯರ ಹೃದಯ ಒಡೆದ ಶಾರುಖ್
ಶಾರುಖ್ ಖಾನ್ ರೊಮ್ಯಾಂಟಿಕ್ ಸಿನಿಮಾಗಳಿಗೆ ಅದೆಷ್ಟು ಮಂದಿ ಫ್ಯಾನ್ಸ್ ಇಲ್ಲ ಹೇಳಿ. ಕಿಂಗ್ ಆಫ್ ರೊಮ್ಯಾನ್ಸ್ ಅನ್ನುವ ಕಾರಣಕ್ಕೆ ಇಷ್ಟು ದಿನ ಸೂಪರ್‌ಸ್ಟಾರ್ ಆಗಿ ಮೆರೆದಿದ್ದಾರೆ. ಆದರೆ, ಈಗ ರೊಮ್ಯಾಂಟಿಕ್ ಸಿನಿಮಾಗಳನ್ನು ಮಾಡೋದಿಲ್ಲ ಅನ್ನೋ ಸುಳಿವು ನೀಡಿದ್ದಾರೆ.
ಹೌದು.. ಶಾರುಖ್ ಖಾನ್ ರೊಮ್ಯಾಂಟಿಕ್ ಸಿನಿಮಾಗಳಲ್ಲಿ ನಟಿಸುವ ವಯಸ್ಸು ಅಲ್ಲ. ಆದರೂ, ಅವರ ಅಭಿಮಾನಿಗಳಿಗೆ ಶಾರುಖ್ ಖಾನ್ ಅನ್ನು ರೊಮ್ಯಾಂಟಿಕ್ ಸಿನಿಮಾಗಳಲ್ಲಿ ನೋಡಬೇಕೆಂಬ ಆಸೆ. ಆದ್ರೀಗ ರೊಮ್ಯಾಂಟಿಕ್ ಸಿನಿಮಾ ಮಾಡೋದಿಲ್ಲ ಅಂತ ಚಿಕ್ಕದೊಂದು ಸುಳಿವು ನೀಡಿ ಸುಮ್ಮನಾಗಿದ್ದಾರೆ. ಈ ವಿಷಯ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.

ಇತ್ತೀಚೆಗೆ ಶಾರುಖ್ ನಟಿಸಿದ ಎವರ್‌ಗ್ರೀನ್ ರೊಮ್ಯಾಂಟಿಕ್ ಸಿನಿಮಾಗಳಲ್ಲಿ ಒಂದಾಗಿರೋ ಕುಚ್ ಕುಚ್ ಹೋತಾ ಹೈ (Kuch Kuch Hota Hai) 25 ವರ್ಷಗಳನ್ನು ಪೂರೈಸಿತ್ತು. ಆ ವಿಶೇಷ ಸಂದರ್ಭದಲ್ಲಿ ರೊಮ್ಯಾಂಟಿಕ್ ಸಿನಿಮಾಗಳಿಂದ ದೂರು ಉಳಿಯುವ ಬಗ್ಗೆ ಮಾತಾಡಿದ್ದಾರೆ. ಇದು ಶಾರುಖ್ ಖಾನ್ ಡೈ ಹಾರ್ಡ್ ಫ್ಯಾನ್ಸ್ ಹೃದಯ ಚೂರು ಮಾಡಿದಂತಾಗಿದೆ.
'ಕುಚ್ ಕುಚ್ ಹೋತಾ ಹೈ'ಗೆ 25 ವರ್ಷ
'ಕುಚ್ ಕುಚ್ ಹೋತಾ ಹೈ' ಬಾಲಿವುಡ್‌ನ ಎವರ್‌ಗ್ರೀನ್ ರೊಮ್ಯಾಂಟಿಕ್ ಸಿನಿಮಾಗಳಲ್ಲೊಂದು. ಕರಣ್ ಜೋಹರ್ ನಿರ್ದೇಶಿಸಿದ್ದ ಈ ಸಿನಿಮಾ ಸಿಲ್ವರ್ ಜುಬಿಲಿ ಸಿನಿಮಾ ಎನಿಸಿಕೊಂಡಿತ್ತು. ಬಾಕ್ಸಾಫೀಸ್‌ನಲ್ಲೂ ಈ ಸಿನಿಮಾ ದಾಖಲೆಗಳನ್ನು ಬರೆದಿತ್ತು. ಅದೇ ಸಿನಿಮಾ ಇತ್ತೀಚೆಗೆ 25 ವರ್ಷಗಳನ್ನು ಪೂರೈಸಿತ್ತು. ಈ ಸಂಭ್ರಮದಲ್ಲಿ ಶಾರುಖ್ ಖಾನ್, ರಾಣಿ ಮುಖರ್ಜಿ, ನಿರ್ದೇಶಕ ಕರಣ್ ಜೋಹರ್ ಭಾಗಿಯಾಗಿದ್ದರು. ಈ ವೇಳೆ ರೊಮ್ಯಾಂಟಿಕ್ ಸಿನಿಮಾ ಮಾಡುವ ಬಗ್ಗೆ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ.

ಶಾರುಖ್ ರೊಮ್ಯಾಂಟಿಕ್ ಸಿನಿಮಾ ಮಾಡಲ್ವಾ?
ಶಾರುಖ್ ಖಾನ್ ಇಂತಹದ್ದೊಂದು ಸುಳಿವು ನೀಡಿದ್ದಾರೆ. 'ಕುಚ್ ಕುಚ್ ಹೋತಾ ಹೈ' 25 ವರ್ಷ ಪೂರೈಸಿದ ಸಂಭ್ರಮದ ವೇಳೆ " ನಾನು ಯಾವಾಗಲೂ ಹೇಳುತ್ತಲೇ ಬಂದಿದ್ದೇನೆ. ಕರಣ್ ಜೋಹರ್, ಆದಿತ್ಯ ಚೋಪ್ರಾ, ಯಶ್ ಚೋಪ್ರಾ, ಯಶ್ ಜೋಹರ್ ಅವರಿಂದಲೇ ನಾನು ಸ್ಟಾರ್ ಆಗಿದ್ದೇನೆ. ಅವರಿಗೆ ನಾನು ಯಾವಾಗಲೂ ಆಬಾರಿಯಾಗಿದ್ದೇನೆ. ಆದ್ರೀಗ ನಾನು ಲವ್ ಸ್ಟೋರಿ ಮಾಡುತ್ತೇನೋ ಇಲ್ಲವೋ ಗೊತ್ತಿಲ್ಲ. ಈಗ ಯುವಕರಿಗೆ ಅದನ್ನು ಮಾಡುವುದಕ್ಕೆ ಅವಕಾಶ ಮಾಡಿಕೊಡೋಣ" ಎಂದು ಶಾರುಖ್ ಖಾನ್ ಹೇಳಿದ್ದಾರೆ. ಈ ಮೂಲಕ ಮುಂದೆ ಲವ್ ಸ್ಟೋರಿ ಮಾಡೋದು ಅನುಮಾನ ಎಂಬ ಸುಳಿವು ನೀಡಿದ್ದಾರೆ.
ಶಾರುಖ್ ಶಾಶ್ವತ ಯುವಕ
ಶಾರುಖ್ ಖಾನ್ ಮುಂದೆ ಲವ್ ಸ್ಟೋರಿ ಮಾಡುತ್ತೇನೋ ಇಲ್ಲವೋ ಗೊತ್ತಿಲ್ಲ ಎಂದು ಹೇಳುತ್ತಿದ್ದಂತೆ ಕರಣ್ ಜೋಹರ್ ಪ್ರತಿಕ್ರಿಯಿಸಿದ್ದಾರೆ. "ಶಾರುಖ್ ಖಾನ್ ಒಬ್ಬ ಶಾಶ್ವತ ಯುವಕ. ಲವ್ ಸ್ಟೋರಿಗಳಲ್ಲಿ ಎಂದೆಂದಿಗೂ ನಟಿಸಬಹುದು. ಹಿಂದಿ ಸಿನಿಮಾಗಳಲ್ಲಿ ಪ್ರೀತಿಯನ್ನು ಹುಟ್ಟಾಕಿದ್ದೇ ಶಾರುಖ್ ಖಾನ್" ಎಂದು ಕರಣ್ ಜೋಹರ್ ಹೇಳುವ ಮೂಲಕ ಮತ್ತೆ ರೊಮ್ಯಾಂಟಿಕ್ ಸಿನಿಮಾ ನಿರ್ದೇಶನ ಮಾಡುವ ಆಸೆ ಹುಟ್ಟಿಸಿದ್ದಾರೆ.
ದಾಖಲೆ ಬರೆದಿವೆ ಶಾರುಖ್ ಲವ್ ಸ್ಟೋರಿ
ಶಾರುಖ್ ಖಾನ್ ರೊಮ್ಯಾಂಟಿಕ್ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಹೊಸ ಹೊಸ ದಾಖಲೆಗಳನ್ನು ಬರೆದಿವೆ. 'ದಿಲ್ವಾಲೆ ದುಲ್ಹನಿಯಾ ಲೇ ಜಾಯೆಂಗೆ', 'ಕುಚ್ ಕುಚ್ ಹೋತಾ ಹೈ', 'ದಿಲ್ ತೋ ಪಾಗಲ್ ಹೇ', 'ವೀರ್ ಜಾರಾ' ಅಂತಹ ಸಿನಿಮಾಗಳು ಇಂದಿಗೂ ಯುವಕರ ಫೇವರಿಟ್ ಸಿನಿಮಾಗಳು. ವಯಸ್ಸು ಎಷ್ಟೇ ಆದರೂ ಮತ್ತೆ ಇಂತಹಗಳಲ್ಲಿ ಶಾರುಖ್ ಖಾನ್ ನೋಡುವುದಕ್ಕೆ ಫ್ಯಾನ್ಸ್ ಬಯಸುತ್ತಿದ್ದಾರೆ.


Click it and Unblock the Notifications