Shah Rukh Khan: ಕಿಂಗ್ ಖಾನ್ 'ಡಂಕಿ' ಸೂಪರ್ ರೆಸ್ಪಾನ್ಸ್.. ಈ ವರ್ಷದ ಅತಿ ಹೆಚ್ಚು ವೀವ್ಸ್ ಕಂಡ ಟೀಸರ್
ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಸತತ ಸೋಲುಗಳ ಬಳಿಕ ಗ್ಯಾಪ್ ಕೊಟ್ಟು ಮತ್ತೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದರು. 'ಪಠಾಣ್' ಸಿನಿಮಾ ಮೂಲಕ ಕಮ್ ಬ್ಯಾಕ್ ಮಾಡಿದ್ದ ಶಾರುಖ್ ಮತ್ತೆ ಬಾಕ್ಸಾಫೀಸ್ ಕಿಂಗ್ ಅಂತ ಸಾಬೀತು ಮಾಡಿದ್ದರು. ಇದರ ಹಿಂದೇನೆ ಅಟ್ಲೀ ನಿರ್ದೇಶಿಸಿದ 'ಜವಾನ್' ಕೂಡ ಬ್ಲಾಕ್ ಬಸ್ಟರ್ ಹಿಟ್ ಆಯ್ತು.
ಈ ವರ್ಷ 'ಪಠಾಣ್', 'ಜವಾನ್' ಅಂತಹ ಎರಡು ಬ್ಲಾಕ್‌ಬಸ್ಟರ್ ಸಿನಿಮಾ ನೀಡಿದ ಕಿಂಗ್ ಖಾನ್ ಮತ್ತೊಂದು ಮೆಗಾ ಹಿಟ್ ಕೊಡುವುದಕ್ಕೆ ಸಜ್ಜಾಗಿದ್ದಾರೆ. ಎರಡು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸಾವಿರಾರು ಕೋಟಿ ಕಲೆಕ್ಷನ್ ಮಾಡಿ ಹೊಸ ದಾಖಲೆಯನ್ನೇ ಬರೆದಿವೆ. ಈಗ ಈ ಎರಡು ಸಿನಿಮಾಗಳ ಬಳಿಕ ಮತ್ತೊಂದು ವಿಭಿನ್ನ ಸಿನಿಮಾ ಮೂಲಕ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುವುದಕ್ಕೆ ರೆಡಿಯಾಗಿದ್ದಾರೆ. ಆ ಸಿನಿಮಾವೇ 'ಡಂಕಿ'.

ಬಾಲಿವುಡ್‌ನ ಸೋಲಿಲ್ಲದ ಸರದಾರ ಅಂತಲೇ ಜನಪ್ರಿಯರಾಗಿರುವ ನಿರ್ದೇಶಕ ರಾಜ್ ಕುಮಾರ್ ಹಿರಾನಿ 'ಡಂಕಿ'ಗೆ ಆಕ್ಷನ್ ಕಟ್ ಹೇಳಿದ್ದಾರೆ. ಶಾರುಖ್ ಖಾನ್ ಬರ್ತ್‌ಡೇ ಸಲುವಾಗಿ ಈ ಸಿನಿಮಾದ ಟೀಸರ್ ರಿಲೀಸ್ ಆಗಿತ್ತು. ಕಳೆದೆರಡು ಸಿನಿಮಾಗಳ ಮೂಲಕ ಮಾಸ್ ಅವತಾರದಲ್ಲಿ ಕಂಡಿದ್ದ ಕಿಂಗ್ ಖಾನ್ 'ಡಂಕಿ' ಮೂಲಕ ಕ್ಲಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಅಂದ್ಹಾಗೆ 'ಡಂಕಿ' ಶಾರುಖ್ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ಕಾಂಬಿನೇಷನ್‌ನ ಮೊದಲ ಸಿನಿಮಾ. ಹೀಗಾಗಿ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿದ್ದು ಟೀಸರ್ ರಿಲೀಸ್ ಮಾಡಲಾಗಿತ್ತು. ಆ ಟೀಸರ್‌ಗೆ ಸುಮಾರು 4 ಕೋಟಿಗೂ ಅಧಿಕ ವೀವ್ಸ್ ಸಿಕ್ಕಿದೆ. ಇದು ಈ ವರ್ಷದ ಅತೀ ದೊಡ್ಡ ದಾಖಲೆ ಎಂದು ಹೇಳಲಾಗಿದೆ. ಈ ವರ್ಷದಲ್ಲಿ ಅತಿ ಹೆಚ್ಚು ವೀವ್ಸ್ ಕಂಡ ಟೀಸರ್ ಎಂಬ ದಾಖಲೆ ಬರೆದಿದೆ.
ಇದೇ ಖುಷಿಯಲ್ಲಿ ಶಾರುಖ್ ಖಾನ್ ಮುಂಬೈನಲ್ಲಿ ಸುದ್ದಿಗೋಷ್ಠಿ ನಡೆಸಿದ್ದರು. ಈ ವೇಳೆ 'ಡಂಕಿ' ಬಗ್ಗೆ ಕಾನ್ಫಿಡೆಂಟ್ ಆಗಿ ಕೆಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. "ಪಠಾಣ್ ಹಾಗೂ ಜವಾನ್ ಸಿನಿಮಾಗಿಂತಲೂ ಡಂಕಿ ಸಿನಿಮಾ ಅತಿ ಹೆಚ್ಚು ಮನರಂಜನೆ ನೀಡಲಿದೆ. ರಾಜ್ ಕುಮಾರ್ ಹಿರಾನಿ ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ. ಹಿರಾನಿ ಸಿನಿಮಾಗಳಲ್ಲಿ ನಿರ್ದಿಷ್ಟ ನಟನಿಗಿಂತ ಕಥೆಯೇ ಪ್ರಮುಖ ಪಾತ್ರ ವಹಿಸುತ್ತದೆ. ಶೀಘ್ರದಲ್ಲೇ ಡಂಕಿ ಸಿನಿಮಾದ ಡ್ರಾಪ್ 2 ಮತ್ತು ಡ್ರಾಪ್ 3 ವಿಡಿಯೋ ರಿಲೀಸ್ ಆಗಲಿದೆ" ಎಂದು ಶಾರುಖ್ ಖಾನ್ ತಿಳಿಸಿದ್ದಾರೆ.
ರಾಜ್‌ಕುಮಾರ್ ಹಿರಾನಿ ಈ ಹಿಂದೆ ನಿರ್ದೇಶಿಸಿದ ಸಿನಿಮಾಗಳಲ್ಲಿ ಭಾವನೆಗಳ ಜೊತೆ ಜೊತೆಗೆ ಹಾಸ್ಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಅದೆಷ್ಟೇ ದೊಡ್ಡ ಸ್ಟಾರ್ ಆಗಿದ್ದರೂ ಕಥೆಗೆ ತಕ್ಕಂತೆ ಅವರ ಇಮೇಜ್ ಅನ್ನೇ ಬದಲಿಸಿ ಬಿಡುತ್ತಾರೆ. 'ಡಂಕಿ' ಸಿನಿಮಾ ಕೂಡ ಶಾರುಖ್ ಖಾನ್ ಇಮೇಜ್‌ಗಿಂತ ಹೆಚ್ಚಾಗಿ ಕಥೆಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ ಅನ್ನೋ ಮಾತು ಕೇಳಿ ಬರುತ್ತಿದೆ.
ರಾಜ್‌ಕುಮಾರ್ ಹಿರಾನಿ ಈ ಹಿಂದೆ 'ಮುನ್ನಬಾಯ್ ಎಂಬಿಬಿಎಸ್', 'ಲಗೇ ರಹೋ ಮುನ್ನಾಭಾಯ್', '3 ಈಡಿಯಟ್ಸ್', 'ಸಂಜು', 'ಪಿಕೆ' ಅಂತಹ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.
'ಡಂಕಿ' ಸಿನಿಮಾದಲ್ಲಿ ಶಾರುಖ್ ಖಾನ್ ಜೊತೆಗೆ ತಾಪ್ಸೀ ಪನ್ನು, ಬೋಮನ್ ಇರಾನಿ, ವಿಕ್ಕಿ ಕೌಶಲ್, ವಿಕ್ರಮ್ ಕೊಚ್ಚರ್ ನಟಿಸಿದ್ದಾರೆ. ಪ್ರೀತಿ ಮತ್ತು ಸ್ನೇಹಕ್ಕೆ ಸಂಬಂಧಿಸಿದ ಕಥೆಯಾಗಿರುವ 'ಡಂಕಿ' ಸಿನಿಮಾವನ್ನು ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೇನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಬ್ಯಾನರ್ ಜಂಟಿಯಾಗಿ ನಿರ್ಮಿಸಿದ್ದಾರೆ. ಅಭಿಜಾತ್ ಜೋಷಿ, ರಾಜ್‌ಕುಮಾರ್ ಹಿರಾನಿ ಮತ್ತು ಕನಿಕಾ ಧಿಲ್ಲೋನ್ ಕಥೆ ಬರೆದಿದ್ದಾರೆ. 'ಡಂಕಿ' ಸಿನಿಮಾ ಕ್ರಿಸ್‌ಮಸ್ ವೇಳೆಗೆ ವಿಶ್ವಾದ್ಯಂತ ಬಿಡುಗಡೆ ಆಗಲಿದೆ.


Click it and Unblock the Notifications










