ಬಾಲಿವುಡ್ ಪದಾರ್ಪಣೆಗೆ ಶಾರುಖ್ ಮಗ ಸಜ್ಜು, ಆದರೆ ನಟನಾಗಿ ಅಲ್ಲ!
ಕಳೆದ ವರ್ಷ ಹೆಚ್ಚು ಸುದ್ದಿಯಲ್ಲಿದ್ದ ನಂಬರ್ ಒನ್ ಸೆಲೆಬ್ರಿಟಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್. ಭಾರತದಲ್ಲಿ ಮಾತ್ರವಲ್ಲ ವಿಶ್ವಮಟ್ಟದಲ್ಲಿ ಸಹ ಗೂಗಲ್‌ನಲ್ಲಿ ಆರ್ಯನ್ ಖಾನ್ ಮಾಹಿತಿಯನ್ನು ಹೆಚ್ಚು ಹುಡುಕಲಾಗಿತ್ತು.
Recommended Video
ಕಳೆದ ವರ್ಷ ಆರ್ಯನ್ ಖಾನ್ ಮಾದಕ ವಸ್ತು ಪ್ರಕರಣದಲ್ಲಿ ಎನ್‌ಸಿಬಿಯಿಂದ ಬಂಧನಕ್ಕೆ ಒಳಗಾಗಿದ್ದರು. ಅಕ್ಟೋಬರ್ 02 ರಂದು ಎನ್‌ಸಿಬಿಯಿಂದ ವಶಪಡಿಸಿಕೊಳಲ್ಪಟ್ಟ ಆರ್ಯನ್ ಖಾನ್ ಅನ್ನು ಅಕ್ಟೋಬರ್ 3 ರಂದು ಬಂಧಿಸಲಾಯ್ತು, ಬಳಿಕ ಅಕ್ಟೋಬರ್ 30 ರಂದು ಆರ್ಯನ್ ಖಾನ್ ಜಾಮೀನಿನ ಮೇಲೆ ಹೊರಗೆ ಬಂದರು.
ಆರ್ಯನ್ ಖಾನ್ ಪ್ರಕರಣ ಬಹುವಾಗಿ ಚರ್ಚೆಗೆ ಕಾರಣವಾಗಿತ್ತು. ಈ ಪ್ರಕರಣದಲ್ಲಿ ಎನ್‌ಸಿಬಿ ಮೇಲೆ ಲಂಚದ ಆರೋಪ, ಪಕ್ಷಪಾತದ ಆರೋಪಗಳು ಕೇಳಿ ಬಂದು ಎನ್‌ಸಿಬಿ ಆಂತರಿಕ ತನಿಖೆಯನ್ನು ಸಹ ಮಾಡಿತು. ಬಳಿಕ ಆ ಪ್ರಕರಣ ತಣ್ಣಗಾಯಿತು. ಇದೀಗ ಆರ್ಯನ್ ಖಾನ್ ಸುದ್ದಿ ಮತ್ತೆ ಮುನ್ನೆಲೆಗೆ ಬಂದಿದೆ. ಆರ್ಯನ್ ಖಾನ್ ಬಾಲಿವುಡ್ ಪ್ರವೇಶಿಸಲು ಸಕಲ ಸಜ್ಜಾಗಿದ್ದಾರೆ ಆದರೆ ನಟರಾಗಿ ಅಲ್ಲ.
ಶಾರುಕ್ ಖಾನ್ ಪುತ್ರನಿಗ್ ಬಿಗ್ ರಿಲೀಫ್: ಬಾಂಬೆ ಹೈ ಕೋರ್ಟ್ ಆದೇಶ!
ಬಾಲಿವುಡ್‌ನ ಕಿಂಗ್ ಖಾನ್ ಎಂದೇ ಶಾರುಖ್ ಅವರನ್ನು ಕರೆಯಲಾಗುತ್ತದೆ. ಆದರೆ ಅವರ ಪುತ್ರ ಆರ್ಯನ್ ಖಾನ್ ನಟರಾಗಿ ಬಾಲಿವುಡ್ ಪ್ರವೇಶ ಮಾಡುತ್ತಿಲ್ಲ ಬದಲಾಗಿ ಬರಹಗಾರನಾಗಿ ಬಾಲಿವುಡ್ ಪ್ರವೇಶ ಮಾಡುತ್ತಿದ್ದಾರೆ.

ಪದವಿ ಮುಗಿಸಿರುವ ಶಾರುಖ್ ಖಾನ್ ಪುತ್ರ
2020ರಲ್ಲಿ ಆರ್ಯನ್ ಖಾನ್ ದಕ್ಷಿಣ ಕ್ಯಾಲಿಫೋರ್ನಿಯಾದ ವಿವಿಯಿಂದ ಕಲೆ, ಸಿನಿಮಾ ಮತ್ತು ಟಿವಿ ವಿಭಾಗದಲ್ಲಿ ಪದವಿ ಮುಗಿಸಿದ್ದಾರೆ. ಇದೀಗ ತಮ್ಮ ಶಿಕ್ಷಣವನ್ನು ವೃತ್ತಿಯನ್ನಾಗಿ ಬದಲಿಸಿಕೊಳ್ಳಲು ಕಾತರರಾಗಿದ್ದಾರೆ. ಆರ್ಯನ್ ಖಾನ್ ಚಿತ್ರಕತೆ ರಚಿಸಿದ್ದು, ಒಂದು ಸಿನಿಮಾ ಹಾಗೂ ವೆಬ್ ಸರಣಿಗಾಗಿ ಚಿತ್ರಕತೆ ತಯಾರು ಮಾಡಿದ್ದಾರೆ. ಸಿನಿಮಾ ಹಾಗೂ ವೆಬ್ ಸರಣಿಯನ್ನು ಸ್ವತಃ ಆರ್ಯನ್ ನಿರ್ದೇಶನ ಮಾಡಲಿದ್ದಾರೆ.

ವೆಬ್ ಸರಣಿ ಇದೇ ವರ್ಷ ಬಿಡುಗಡೆ ಆಗುವ ಸಾಧ್ಯತೆ
ವೆಬ್ ಸರಣಿ ನಿರ್ಮಾಣದ ಬಗ್ಗೆ ಆರ್ಯನ್ ಖಾನ್ ಇದೀಗ ಒಟಿಟಿ ಒಂದರ ಜೊತೆಗೆ ಮಾತುಕತೆ ನಡೆಸುತ್ತಿದ್ದಾರೆ. ಒಟಿಟಿಯು ಆರ್ಯನ್ ಖಾನ್ ಐಡಿಯಾವನ್ನು ಬಹುತೇಕ ಒಪ್ಪಿದ್ದು ಶೀಘ್ರದಲ್ಲಿಯೇ ಕೆಲಸ ಪ್ರಾರಂಭವಾಗಲಿದೆ. ಈ ಬಗ್ಗೆ ಅಧಿಕೃತ ಘೋಷಣೆ ಬಾಕಿ ಇದೆ. ಇನ್ನು ಆರ್ಯನ್ ನಿರ್ದೇಶನ ಮಾಡಲಿರುವ ಸಿನಿಮಾವನ್ನು ಅಪ್ಪ ಶಾರುಖ್ ಖಾನ್‌ರ ರೆಡ್ ಚಿಲ್ಲೀಸ್ ನಿರ್ಮಾಣ ಸಂಸ್ಥೆಯೇ ನಿರ್ಮಾಣ ಮಾಡಲಿದೆ. ಸಿನಿಮಾದಲ್ಲಿ ಶಾರುಖ್ ಖಾನ್ ನಟಿಸುವುದಿಲ್ಲ ಬದಲಿಗೆ ಹೊಸ ನಟ-ನಟಿಯರು ನಟಿಸಲಿದ್ದಾರೆ.

ಸುಹಾನಾ ಖಾನ್ ಸಹ ಸಿನಿಮಾ ವಿಷಯ ಅಭ್ಯಾಸಿಸುತ್ತಿದ್ದಾರೆ
ಶಾರುಖ್ ಖಾನ್‌ರ ಪುತ್ರಿ ಸುಹಾನಾ ಖಾನ್ ಸಹ ಸಿನಿಮಾ ಕಲೆಯನ್ನೇ ಅಭ್ಯಾಸ ಮಾಡುತ್ತಿದ್ದಾರೆ. ಅಮೆರಿಕದಲ್ಲಿ ಕಲಿಯುತ್ತಿರುವ ಸುಹಾನಾರ ಪದವಿ ಇನ್ನೂ ಮುಗಿದಿಲ್ಲ. ಆರ್ಯನ್‌ರ ಡ್ರಗ್ಸ್ ಪ್ರಕರಣ ಆಗುವುದಕ್ಕೆ ಮುನ್ನ ಸುಹಾನಾ ಕಾಲೇಜು ಪ್ರಾಜೆಕ್ಟ್‌ಗಾಗಿ ನಾಟಕವೊಂದನ್ನು ರಚಿಸಿ ಅದರಲ್ಲಿ ನಟಿಸಿದ್ದರು ಸಹ. ಸುಹಾನಾ ಸಹ ತಮ್ಮ ಪದವಿ ಮುಗಿಸಿದ ಬಳಿಕ ಸಿನಿಮಾ ನಿರ್ದೇಶನ, ನಿರ್ಮಾಣದಲ್ಲಿ ತೊಡಗಿಕೊಳ್ಳಲಿದ್ದಾರೆ. ಶಾರುಖ್‌ಗೆ ಅಬ್ರಾಂ ಹೆಸರಿನ ಮತ್ತೊಬ್ಬ ಮಗನಿದ್ದು ಆತನಿಗೆ ಈಗಿನ್ನೂ 9 ವರ್ಷ ವಯಸ್ಸು.

ಆರ್ಯನ್ ಖಾನ್ ಡ್ರಗ್ಸ್ ಪ್ರಕರಣ
ಅಕ್ಟೋಬರ್ 2 ರಂದು ಮುಂಬೈನ ಕ್ರೂಸ್ ಶಿಪ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಆರ್ಯನ್ ಖಾನ್ ಅನ್ನು ಎನ್‌ಸಿಬಿ ತಡೆದು ವಶಕ್ಕೆ ಪಡೆಯಿತು. ಆರ್ಯನ್ ಗೆಳೆಯ ಅರ್ಬಾಜ್ ಸೇಠ್ ಹಾಗೂ ಮಾಡೆಲ್ ಮುನ್‌ಮುನ್ ಧಮೇಚಾರನ್ನು ವಶಕ್ಕೆ ಪಡೆದು ಮರುದಿನ ಬಂಧಿಸಲಾಗಿತ್ತು. ಆರ್ಯನ್ ಖಾನ್‌ರ ಬಳಿ ಯಾವುದೇ ಡ್ರಗ್ಸ್ ಪತ್ತೆ ಆಗಿರಲಿಲ್ಲ. ಅರ್ಬಾಜ್ ಬಳಿ 6 ಗ್ರಾಂ ಮಾದಕ ವಸ್ತು ಪತ್ತೆಯಾಗಿತ್ತು. ಒಂದು ತಿಂಗಳ ಕಾಲ ಬಾಂಬೆ ಹೈಕೋರ್ಟ್ ಹಾಗೂ ಸುಪ್ರಿಂಕೋರ್ಟ್‌ನಲ್ಲಿ ಜಾಮೀನು ವಿಚಾರಣೆಗಳು ನಡೆದು ಕೊನೆಗೆ ಅಕ್ಟೋಬರ್ 30 ರಂದು ಆರ್ಯನ್ ಖಾನ್ ಅನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯ್ತು. ಆದರೆ ಆ ವೇಳೆಗೆ ಎನ್‌ಸಿಬಿ ಮೇಲೆಯೇ ಕೆಲವರು ಆರೋಪಗಳನ್ನು ಮಾಡಿದರು. ಆರ್ಯನ್ ಬಂಧನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಖಾಸಗಿ ವ್ಯಕ್ತಿ ಕಿರಣ್ ಗೋಸಾವಿಯ ಕಾರು ಡ್ರೈವರ್ ತಮ್ಮ ಮಾಲೀಕ ಶಾರುಖ್ ಖಾನ್ ಮ್ಯಾನೇಜರ್‌ನಿಂದ ಲಕ್ಷಾಂತರ ಹಣ ಪಡೆದಿದ್ದಾಗಿ ಹೇಳಿಕೆ ನೀಡಿದ. ಅದರಲ್ಲಿ ಎನ್‌ಸಿಬಿಗೆ ಪಾಲು ನೀಡಬೇಕು ಎಂದಿದ್ದಾಗ್ಯೂ ಹೇಳಿದ. ಇದು ಪ್ರಕರಣಕ್ಕೆ ದೊಡ್ಡ ತಿರುವು ನೀಡಿತ್ತು. ಪ್ರಕರಣ ಈಗಲೂ ಚಾಲ್ತಿಯಲ್ಲಿದೆ.


Click it and Unblock the Notifications











