ಶ್ರದ್ಧಾ ಕಪೂರ್‌ಳನ್ನು ಕೆಲಸಕ್ಕೆ ಕಳಿಸುವುದಿಲ್ಲ ಎಂದ ಶಕ್ತಿ ಕಪೂರ್
ಲಾಕ್ ಡೌನ್ ಕಟ್ಟುಪಾಡುಗಳು ಸಡಿಲಗೊಂಡು ಸಿನಿಮಾ ಚಿತ್ರೀಕರಣಗಳನ್ನು ಪುನಃ ಆರಂಭಿಸಲು ಅನುಮತಿಗಳನ್ನು ನೀಡಲಾಗುತ್ತಿದೆ. ಹಲವಾರು ನಿಯಮಗಳ ಅಡಿಯಲ್ಲಿ ಚಿತ್ರೀಕರಣ ನಡೆಸಲು ರಾಜ್ಯ ಸರ್ಕಾರಗಳು ಅವಕಾಶ ಕೊಡುತ್ತಿವೆ. ಆದರೆ ಸಿನಿಮಾ ಚಿತ್ರೀಕರಣಗಳಲ್ಲಿ ತೊಡಗಿಸಿಕೊಳ್ಳಲು ಅನೇಕರು ಹಿಂದೇಟು ಹಾಕುತ್ತಿದ್ದಾರೆ.
Recommended Video
ಮನೆಯಿಂದ ಮಕ್ಕಳನ್ನು ಹೊರಗೆ ಕೆಲಸಕ್ಕೆ ಕಳುಹಿಸಲು ಪೋಷಕರು ಭಯಪಡುತ್ತಿದ್ದಾರೆ. ಹಾಗೆಯೇ ಮಕ್ಕಳೂ ಪೋಷಕರನ್ನು ಹೊರಗೆ ಕಳುಹಿಸಲು ಒಪ್ಪುತ್ತಿಲ್ಲ. ಇದರಿಂದ ಸೆಲೆಬ್ರಿಟಿಗಳೂ ಹೊರತಲ್ಲ. ಇತ್ತೀಚೆಗಷ್ಟೇ ಆಲ್ಕೋಹಾಲ್ ತರಲು ತಲೆಯ ಮೇಲೆ ದೊಡ್ಡ ಡ್ರಮ್ ಹೊತ್ತು ಹೊರಟು ನಗೆಪಾಟಲಿಗೆ ಈಡಾಗಿದ್ದ ಬಾಲಿವುಡ್‌ನ ಹಿರಿಯ ನಟ ಶಕ್ತಿ ಕಪೂರ್, ಮಗಳು ಶ್ರದ್ಧಾ ಕಪೂರ್ ಅವರನ್ನು ಸಿನಿಮಾ ಚಿತ್ರೀಕರಣಕ್ಕೆ ಕಳುಹಿಸುವುದಿಲ್ಲ ಎಂದಿದ್ದಾರೆ. ಮುಂದೆ ಓದಿ...

ಮಗಳಿಗೂ ಬಿಡೊಲ್ಲ
'ನಾನೀಗ ಹೊರಗೆ ಹೋಗಿ ಕೆಲಸ ಮಾಡಲು ಬಯಸುವುದಿಲ್ಲ. ನನ್ನ ಮಗಳು ಶ್ರದ್ಧಾಳನ್ನೂ ಕೂಡ ಸಿನಿಮಾ ಕೆಲಸಗಳನ್ನು ಮುಂದುವರಿಸಲು ಬಿಡುವುದಿಲ್ಲ. ಕೊರೊನಾ ವೈರಸ್ ಸೋಂಕಿನ ಭಯ ಹೋಗಿದೆ ಎಂದು ನಾನು ಅಂದುಕೊಳ್ಳುವುದಿಲ್ಲ. ಇನ್ನೂ ಕೆಟ್ಟದಾದ ಪರಿಸ್ಥಿತಿ ಬರುವುದಿದೆ ಎನಿಸುತ್ತಿದೆ.

ಶೂಟಿಂಗ್ ಶುರುವಾದರೆ ಆಪತ್ತು
ನನ್ನ ಮಕ್ಕಳು ಹೊರಗೆ ಹೋಗಲು ನಾನು ಬಿಡುವುದಿಲ್ಲ. ಕೆಲಸ ಎನ್ನುವುದು ಬಹಳ ಮುಖ್ಯ. ಆದರೆ ಜೀವವನ್ನು ಪಣವಾಗಿಡಲಾಗುವುದಿಲ್ಲ. ಈಗಿನ ಸಂದರ್ಭದಲ್ಲಿ ಶೂಟಿಂಗ್ ಆರಂಭಿಸಿದರೆ ಇನ್ನೂ ಗೊಂದಲ-ಭೀತಿ ಉಂಟಾಗಲಿದೆ. ಆಸ್ಪತ್ರೆಯ ಶುಲ್ಕ ಪಾವತಿಸುವ ಸ್ಥಿತಿ ಬರುವಂತಾಗುವ ಬದಲು ಇನ್ನಷ್ಟು ಕಾಲ ಕಾಯುವುದು ಒಳಿತು ಎಂದು ನನ್ನ ಬಳಗದ ಉದ್ಯಮದ ಜನರಿಗೆ ಹೇಳುತ್ತೇನೆ. ಹೊರಗಿನ ಸ್ಥಿತಿ ಬಹಳ ಕೆಟ್ಟದಾಗಿದೆ.

ಮಾನವೀಯತೆ ಉಳಿದಿಲ್ಲ
ಆಸ್ಪತ್ರೆಗಳಲ್ಲಿ ಹಾಸಿಗೆಗಳು ಸಿಗುತ್ತಿಲ್ಲ. ಜನರಿಗೆ ಚಿಕಿತ್ಸೆ ನೀಡಲು ಭಾರಿ ಮೊತ್ತದ ಹಣ ವಿಧಿಸುತ್ತಿದ್ದಾರೆ. ಶುಲ್ಕ ಪಾವತಿ ಮಾಡಲು ಸಾಧ್ಯವಾಗದ ಕಾರಣಕ್ಕೆ ವೃದ್ಧರೊಬ್ಬರನ್ನು ಹಾಸಿಗೆಗೆ ಕಟ್ಟಿಹಾಕಿದ ಘಟನೆಯ ಸುದ್ದಿ ಕೇಳಿದೆ. ಇದರ ಬಗ್ಗೆಯೂ ನಾನು ವಿಡಿಯೋ ಮಾಡಲು ಬಯಸಿದ್ದೇನೆ. ಈ ಜಗತ್ತು ಈಗ ತೀವ್ರ ದುಃಖದ ಸ್ಥಳವಾಗಿಬಿಟ್ಟಿದೆ. ಎಲ್ಲಿಯೂ ಮಾನವೀಯತೆ ಎನ್ನುವುದು ಉಳಿದಿಲ್ಲ ಎಂದು ಹೇಳಿದ್ದಾರೆ.

ಎಣ್ಣೆ ತರಲು ಡ್ರಮ್
ಇತ್ತೀಚೆಗೆ ಶಕ್ತಿ ಕಪೂರ್ ತಲೆಯ ಮೇಲೆ ದೊಡ್ಡ ಡ್ರಮ್ ಹೊತ್ತು ಸಾಗಿದ್ದರು. ಎತ್ತ ಹೊರಟಿದ್ದೀರಿ ಎಂದು ಕೇಳಿದ್ದಕ್ಕೆ, 'ಇಡೀ ಸಮಾಜಕ್ಕೆ ಎಣ್ಣೆ ತೆಗೆದುಕೊಂಡು ಬರಲು ಹೊರಟಿದ್ದೇನೆ' ಎಂದು ಹೇಳಿದ್ದರು. ಇದನ್ನು ನೆಟ್ಟಿಗರು ಟ್ರೋಲ್ ಮಾಡಿದ್ದರು.


Click it and Unblock the Notifications











