Dharmendra Death: 'ಶೋಲೆ'ಯ 'ವೀರೂ'.. ಬಾಲಿವುಡ್ ದಿಗ್ಗಜ ಧರ್ಮೇಂದ್ರ ಇನ್ನಿಲ್ಲ
ಬಾಲಿವುಡ್‌ನ ಲೆಜೆಂಡ್ ಧರ್ಮೇಂದ್ರ ಇತ್ತೀಚೆಗೆ ಉಸಿರಾಟ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. 90 ವರ್ಷದ ನಟ ಹಲವು ವರ್ಷಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ನವೆಂಬರ್ 10ರಂದು ಆಸ್ಪತ್ರೆಗೆ ದಾಖಲಾಗಿದ್ದ ನಟನಿಗೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು. ಆದರೆ, ಮರುದಿನವೇ (ನವೆಂಬರ್ 11) ಚಿಕಿತ್ಸೆ ಫಲಿಸದೆ ಕೊನೆಯೊಸಿರೆಳೆದಿದ್ದಾರೆಂದು ಸುದ್ದಿ ಹಬ್ಬಿತ್ತು.
ದಿಗ್ಗಜನ ಸಾವಿನ ಸುದ್ದಿಗೆ ಧರ್ಮೇಂದ್ರ ಕುಟುಂಬ ಕೆಂಡಾಮಂಡಲವಾಗಿತ್ತು. ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ ಮನೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಮನೆಯಲ್ಲೇ ನೀಡುತ್ತಿದ್ದ ಚಿಕಿತ್ಸೆ ಫಲಿಸದೆ ಇಂದು (ನವೆಂಬರ್ 24) ಕೊನೆಯುಸಿರೆಳೆದಿದ್ದಾರೆ.

ಬಾಲಿವುಡ್ ಆಕ್ಷನ್ ಹೀರೋ.. ಹಿ-ಮ್ಯಾನ್ ಎಂದೇ ಜನಪ್ರಿಯರಾಗಿದ್ದ ಧರ್ಮೇಂದ್ರ ಒಂದು ವಾರದ ಹಿಂದಷ್ಟೇ ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದರು. ಇದಾದ ಒಂದು ವಾರ ಬಳಿಕ ಧರ್ಮೇಂದ್ರ ಅವರ ಆರೋಗ್ಯದಲ್ಲಿ ತೀವ್ರವಾಗಿ ಹದಗೆಟ್ಟಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆರಂಭದಲ್ಲಿ ವೆಂಟಿಲೇಟರ್ ಮೂಲಕ ಉಸಿರಾಟಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಮತ್ತಷ್ಟು ಆರೋಗ್ಯ ಕ್ಷಿಣಿಸಿದ್ದರಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು.
ಭಾರತೀಯ ಚಿತ್ರರಂಗಕ್ಕೆ ಇವರು ನೀಡಿದ ಕೊಡುಗೆ ಬಹಳ ದೊಡ್ಡದು. 1960ರಲ್ಲಿ ಚಿತ್ರರಂಗಕ್ಕೆ ಪ್ರವೇಶ ಮಾಡಿದ ನಟ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಅದರಲ್ಲೂ ಬಾಲಿವುಡ್‌ನಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದು, ನಟನಾಗಿ ಅಷ್ಟೇ ಅಲ್ಲದೆ, ನಿರ್ಮಾಪಕನಾಗಿಯೂ ಸಕ್ರಿಯರಾಗಿದ್ದಾರೆ. ವಯಸ್ಸು 85 ದಾಟಿದ್ದರೂ ಧರ್ಮೇಂದ್ರ ನಟನೆಯನ್ನು ನಿಲ್ಲಿಸಿರಲಿಲ್ಲ.
ಪಂಜಾಬ್‌ನ ಲೂದಿಯಾನ ಜಿಲ್ಲೆಯ ನಸ್ರಾಲಿ ಗ್ರಾಮದಲ್ಲಿ ಡಿಸೆಂಬರ್ 8, 1935ರಲ್ಲಿ ಜನಿಸಿದರು. ಇವರ ತಂದೆ ಹೆಡ್ ಮಾಸ್ಟರ್ ಆಗಿದ್ದರು. ಚಿಕ್ಕ ವಯಸ್ಸಿನಿಂದಲೇ ಸಿನಿಮಾ ಕಡೆಗೆ ಧರ್ಮೇಂದ್ರ ಒಲವು ಬೆಳೆಸಿಕೊಂಡಿದ್ದರು. ಬಾಲಿವುಡ್‌ನಲ್ಲಿ ನಾಯಕನಾಗಿ ನಟಿಸಬೇಕು ಅಂತ ಕನಸು ಕಂಡಿದ್ದರು. ಆ ಕನಸನ್ನು ನನಸು ಮಾಡಿಕೊಂಡ ಕೆಲವು ಮಂದಿಯಲ್ಲಿ ಇವರು ಕೂಡ ಒಬ್ಬರು.

ಧರ್ಮೇಂದ್ರ ಚಿತ್ರರಂಗಕ್ಕೆ ಕಾಲಿಡುವುದಕ್ಕೂ ಮುನ್ನವೇ ಪ್ರಕಾಶ್ ಕೌರ್ ಅವರೊಂದಿಗೆ ವಿವಾಹವಾಗಿದ್ದರು. ಮೊದಲ ಮದುವೆ ಆದಾಗ ಇವರಿಗೆ ಕೇವಲ 19 ವರ್ಷ ವಯಸ್ಸಾಗಿತ್ತು. ಮೊದಲ ಪತ್ನಿಗೆ ಸನ್ನಿ ಡಿಯೋಲ್ ಹಾಗೂ ಬಾಬಿ ಡಿಯೋಲ್ ಎಂಬ ಇಬ್ಬರು ಮಕ್ಕಳು ಗಂಡು ಮಕ್ಕಳು. ಅವರು ಕೂಡ ಬಾಲಿವುಡ್‌ನಲ್ಲಿ ಸ್ಟಾರ್‌ಗಳಾಗಿದ್ದಾರೆ. ಹಾಗೇ ವಿಜೇತಾ ಹಾಗೂ ಅಜೀತಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ಧರ್ಮೇಂದ್ರರನ್ನು ಬಾಲಿವುಡ್ ಕೈ ಹಿಡೀತು. ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಅವರನ್ನು ಹುಡುಕಿಕೊಂಡು ಬಂದಿತ್ತು. ಇನ್ನೇನು ಸ್ಟಾರ್ ಆಗಿ ಹೊರ ಹೊಮ್ಮಿದ್ದ ಧರ್ಮೇಂದ್ರ ಬತ್ತಳಿಕೆಯಿಂದ 'ಶೋಲೆ', 'ಫೂಲ್ ಔರ್ ಪತ್ತರ್', 'ಸೀತಾ ಔರ್ ಗೀತಾ', 'ಚುಪ್ಕೆ ಚುಪ್ಕೆ', 'ಶರಾಬಿ' ಮತ್ತು 'ರಾಜಾ ಜಾನಿ' ಅಂತಹ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಜನ ಮಾನಸದಲ್ಲಿ ಉಳಿದುಬಿಟ್ಟಿದ್ದಾರೆ.
ಆರಂಭದಲ್ಲಿ ಧರ್ಮೇಂದ್ರ ನಿಧನದ ಸುದ್ದಿ ವೈರಲ್ ಆಗಿತ್ತು. ಈ ಸುದ್ದಿ ಹಬ್ಬುತ್ತಿದ್ದಂತೆ ಎರಡನೇ ಪತ್ನಿ ಹೇಮಾ ಮಾಲಿನಿ ಹಾಗೂ ಮಗಳು ಇಶಾ ಡಿಯೋಲ್ ಆಕ್ರೋಶ ಹೊರ ಹಾಕಿದ್ದರು. ಧರ್ಮೇಂದ್ರ ಬದುಕಿದ್ದು, ಅವರ ಆರೋಗ್ಯ ಸ್ಥಿರವಾಗಿದೆ. ಅನಾರೋಗ್ಯದಿಂದ ಅವರು ಚೇತರಿಸಿಕೊಳ್ಳುತ್ತಿದ್ದಾರೆಂದು ಸೋಶಿಯಲ್ ಮೀಡಿಯಾ ಮೂಲಕ ಮಾಹಿತಿ ಹಂಚಿಕೊಂಡಿದ್ದರು. ಇಂದು (ನವೆಂಬರ್ 24) ಅವರ ಕೊನೆಯುಸಿರೆಳೆದಿದ್ದು, ಇನ್ನೂ ಕುಟುಂಬ ಮೂಲಗಳು ಅಧಿಕೃತವಾಗಿ ಮಾಹಿತಿ ನೀಡಿಲ್ಲ.


Click it and Unblock the Notifications











