'ಶೋಲೆ' ಸಿನಿಮಾದ ಬೀರ್‌ಬಲ್ ಇನ್ನಿಲ್ಲ: ಹೃದಯಘಾತದಿಂದ ಸತೀಂದರ್ ಕುಮಾರ್ ಖೋಸ್ಲಾ ನಿಧನ!
ಬಾಲಿವುಡ್ ಮಂದಿ ಶೋಕ ಸಾಗರದಲ್ಲಿ ಮುಳುಗಿದ್ದಾರೆ. ಹಿರಿಯ ನಟ ಸತೀಂದ್ರ ಕುಮಾರ್ ಖೋಸ್ಲಾ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ನಿನ್ನೆ (ಸೆಪ್ಟೆಂಬರ್ 13ರಂದು) ಮುಂಬೈನ ಕೋಕಿಲಾಬೇನ್ ಆಸ್ಪತ್ರೆಯಲ್ಲಿ ತೀವ್ರ ಹೃದಯಾಘಾತದಿಂದ ಸತೀಂದರ್ ಕುಮಾರ್ ಖೋಸ್ಲಾ ಕೊನೆಯುಸಿರೆಳೆದಿದ್ದಾರೆ.
ದಿಗ್ಗಜ ಸತೀಂದ್ರ ಕುಮಾರ್ ಖೋಸ್ಲಾ ನಿಧನಕ್ಕೆ ಬಾಲಿವುಡ್ ಮಂದಿ ಕಂಬನಿ ಮಿಡಿಯುತ್ತಿದ್ದಾರೆ. ಭಾರತೀಯ ಚಿತ್ರರಂಗದ ಎವರ್‌ಗ್ರೀನ್ ಸಿನಿಮಾ 'ಶೋಲೆ'ಯಲ್ಲಿ ಬೀರ್‌ಬಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಪಾತ್ರದಿಂದಲೇ ಬಾಲಿವುಡ್‌ನಲ್ಲಿ ಜನಪ್ರಿಯರಾಗಿದ್ದರು.

ಬಾಲಿವುಡ್‌ನಲ್ಲಿ 'ಶೋಲೆ' ಬೀರ್‌ಬಲ್ ಅಂತಲೇ ಜನಪ್ರಿಯರಾಗಿದ್ದರು. ಇವರಿಗೆ 80 ವರ್ಷ ವಯಸ್ಸಾಗಿತ್ತು. ಸತೀಂದರ್ ಕುಮಾರ್ ಖೋಸ್ಲಾ ಗೆಳೆಯ ಜುಗ್ನು ಈ ವಿಷಯವನ್ನು ಕನ್ಫರ್ಮ್ ಮಾಡಿದ್ದಾರೆ. ಹಿರಿಯ ನಟನ ಅಂತ್ಯಕ್ರಿಯೆಯನ್ನು ಬುಧವಾರ (ಸೆಪ್ಟೆಂಬರ್ 13) ನಡೆಸಲಾಗುತ್ತಿದೆ.
ಸಿನಿಮಾ ಮತ್ತು ಟಿವಿ ಕಲಾವಿದರ ಸಂಘ ಸತೀಂದರ್ ಕುಮಾರ್ ಖೋಸ್ಲಾ ನಿಧನಕ್ಕೆ ಸಂತಾಪ ಸೂಚಿಸಿದೆ. "ಬೀರ್‌ಬಲ್ ನಿಧನರಾಗಿದ್ದಕ್ಕೆ CINTAA ಸಂತಾಪ ಸೂಚಿಸುತ್ತದೆ (1981ರಿಂದ ಸದಸ್ಯ) ಎಂದು ಸಂಘ ಟ್ವೀಟ್ (X) ಮಾಡಿದೆ.
ಸತೀಂದರ್ ಕುಮಾರ್ ಖೋಸ್ಲಾ ಹಾಸ್ಯ ಪಾತ್ರಗಳಿಂದ ಹೆಚ್ಚು ಜನಪ್ರಿಯರಾಗಿದ್ದರು. ತೆಳುವಾದ ಮೀಸೆ, ಮುಂಬದಿಯ ಬೋಳು ತಲೆ ಅವರ ಹಾಸ್ಯ ಪ್ರಜ್ಞೆಗೆ ಮತ್ತಷ್ಟು ಸಾಥ್ ನೀಡುತ್ತಿದ್ದವು. ಸತೀಂದರ್ ಕುಮಾರ್ ಖೋಸ್ಲಾ ಬಾಲಿವುಡ್‌ನ ಹಲವು ಜನಪ್ರಿಯ ನಟರ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ.
'ಉಪ್ಕಾರ್', 'ರೋಟಿ ಕಪ್ಡಾ ಔರ್ ಮಕಾನ್', 'ಕ್ರಾಂತಿ' ಅಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, 'ಶೋಲೆ'ಯ ಬೀರ್‌ಬಲ್ ಪಾತ್ರ ಸತೀಂದರ್ ಕುಮಾರ್ ಕೋಸ್ಲಾ ಅವರಿಗೆ ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ಹಾಗೇ 'ನಸೀಬ್', 'ಯಾರಾನಾ', 'ಹಮ್ ಹೇ ರಾಹಿ ಪ್ಯಾರ್ ಕೆ' ಹಾಗೂ 'ಅಂಜಾಮ್' ಅಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಸತೀಂದರ್ ಕುಮಾರ್ ಖೋಸ್ಲಾ ಸುಮಾರು 500ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೇವಲ ಹಿಂದಿ ಅಷ್ಟೇ ಅಲ್ಲದೆ, ಪಂಜಾಬಿ, ಬೋಜ್ಪುರಿ, ಮರಾಠಿ ಸಿನಿಮಾಗಳಲ್ಲೂ ನಟಿಸಿದ್ದಾರೆ. ವಿ.ಶಾಂತಾರಾಮ್ ನಿರ್ದೇಶಿಸಿದ 'ಬೂಂದ್ ಜೊ ಬನ್ ಗಯಿ ಮೋತಿ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದರು. ಬಾಲಿವುಡ್‌ನ ಲೆಜೆಂಡರಿ ಆಕ್ಟರ್ ಮನೋಜ್ ಕುಮಾರ್ ನಟಿಸಿದ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.


Click it and Unblock the Notifications











