'ಒಂದು ಮಳೆ ಬಿಲ್ಲು' ಗಾಯಕ ಅರ್ಮಾನ್ ಮಲಿಕ್‌ಗೆ ಇದೇನಾಯ್ತು?
'ಒಂದು ಮಳೆ ಬಿಲ್ಲು ಒಂದು ಮಳೆ ಮೋಡ', 'ಸರಿಯಾಗಿ ನೆನಪಿದೆ ನನಗೆ', 'ಅನುಮಾನವೇ ಇಲ್ಲ'- ಹೀಗೆ ಕನ್ನಡದಲ್ಲಿ ತಮ್ಮ ಸುಮಧುರ ಕಂಠದ ಹಾಡುಗಳಿಂದ ಅಭಿಮಾನಿಗಳನ್ನು ಗಳಿಸಿರುವ ಬಾಲಿವುಡ್ ಗಾಯಕ ಅರ್ಮಾನ್ ಮಲಿಕ್ ಇದ್ದಕ್ಕಿದ್ದಂತೆ 'ಕಣ್ಮರೆ'ಯಾಗಿದ್ದಾರೆ. ಹಾಗೆ ಕಣ್ಮರೆಯಾಗುವಾಗ ನಿಗೂಢಾರ್ಥದ ಸಾಲೊಂದನ್ನು ಉಳಿಸಿ ಗೊಂದಲ ಮೂಡಿಸಿದ್ದಾರೆ.
ಅಂದಹಾಗೆ ಅರ್ಮಾನ್ ಕಣ್ಮರೆಯಾಗಿರುವುದು ಇನ್‌ಸ್ಟಾಗ್ರಾಂನಿಂದ. ಇದಕ್ಕಿದ್ದಂತೆ ಇನ್‌ಸ್ಟಾಗ್ರಾಂನಲ್ಲಿನ ತಮ್ಮ ಎಲ್ಲ ಹಳೆ ಪೋಸ್ಟ್‌ಗಳನ್ನೂ ಅರ್ಮಾನ್ ಡಿಲೀಟ್ ಮಾಡಿದ್ದಾರೆ. ಕೊನೆಗೆ ಕಪ್ಪು ಬಣ್ಣದ ಚಿತ್ರವೊಂದನ್ನು ತಮ್ಮ ಪ್ರೊಫೈಲ್ ಚಿತ್ರವಾಗಿ ಬದಲಿಸಿದ್ದಾರೆ. ತಮ್ಮ ಪ್ರೊಫೈಲ್‌ನಲ್ಲಿದ್ದ ಐಜಿಟಿವಿ ವಿಡಿಯೋಗಳನ್ನು ಮಾತ್ರ ಉಳಿಸಿದ್ದಾರೆ. ಈ ಮೂಲಕ ಅರ್ಮಾನ್ 8 ಮಿಲಿಯನ್ ಫಾಲೋವರ್‌ಗಳನ್ನು ಗೊಂದಲದಲ್ಲಿ ಸಿಲುಕಿಸಿದ್ದಾರೆ.

ನನ್ನಿಂದ ಇನ್ನು ಸಾಧ್ಯವಿಲ್ಲ...
ಇನ್‌ಸ್ಟಾಗ್ರಾಂ ಖಾತೆಯಲ್ಲಿನ ಎಲ್ಲಾ ಪೋಸ್ಟ್‌ಗಳನ್ನೂ ಡಿಲೀಟ್ ಮಾಡಿದ ಬಳಿಕ ಅರ್ಮಾನ್ ಅಭಿಮಾನಿಗಳ ತಲೆಯಲ್ಲಿ ಹುಳಬಿಡುವಂತಹ ಪೋಸ್ಟ್ಅನ್ನು ಹಾಕಿದ್ದಾರೆ. 'ಇನ್ನು ಮುಂದೆ ನನ್ನಿಂದ ಸಾಧ್ಯವಿಲ್ಲ' ಎಂಬ ಗುಪ್ತ ಅರ್ಥದ ಬರಹ ಅದರಲ್ಲಿದೆ. ಕೆಲವು ಗಂಟೆಗಳ ಬಳಿಕ 'ನಿನ್ನನ್ನು ಮುಂದೆ ತಳ್ಳುತ್ತಿದ್ದೇನೆ ಮತ್ತು ನೀನು ನನ್ನನ್ನು ಹಿಂದೆ ತಳ್ಳುತ್ತಿದ್ದೀಯ' ಎಂಬ ಸಾಲುಗಳನ್ನು ಪ್ರಕಟಿಸಿದ್ದಾರೆ. ಪ್ರಸ್ತುತ ಅವರ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಇರುವ ಎರಡೇ ಎರಡು ಪೋಸ್ಟ್‌ಗಳು ಇವು.

ಹ್ಯಾಕ್ ಆಗಿರುವ ಅನುಮಾನ
ಅರ್ಮಾನ್ ಅವರ ನಿಗೂಢಾರ್ಥದ ಸಂದೇಶಗಳು ಅವರ ಅಭಿಮಾನಿಗಳಲ್ಲಿ ಕಳವಳ ಉಂಟುಮಾಡಿವೆ. ಅರ್ಮಾನ್ ಕುರಿತು ತಮ್ಮ ಕಾಳಜಿ ವ್ಯಕ್ತಪಡಿಸಿ ಕಾಮೆಂಟ್ ಸೆಕ್ಷನ್‌ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅನೇಕರು ಅರ್ಮಾನ್ ಅವರು ಆರೋಗ್ಯವಾಗಿದ್ದಾರೆಯೇ ಎಂದು ಪ್ರಶ್ನಿಸಿದ್ದರೆ, ಇನ್ನು ಕೆಲವರು ಅವರ ಪ್ರೊಫೈಲ್ ಹ್ಯಾಕ್ ಆಗಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಮಯ ಬಂದಾಗ ಹೇಳುತ್ತೇನೆ
ಆದರೆ ಎರಡು ದಿನಗಳ ಹಿಂದಷ್ಟೇ ಟ್ವಿಟ್ಟರ್‌ನಲ್ಲಿ 1 ಮಿಲಿಯನ್ ಫಾಲೋವರ್‌ಗಳನ್ನು ಪಡೆದ ಖುಷಿ ಹಂಚಿಕೊಂಡಿದ್ದ ಅರ್ಮಾನ್, ಟ್ವೀಟ್ ಜಗತ್ತಿನಲ್ಲಿ ತಮ್ಮ ಇರುವಿಕೆಯನ್ನು ತೋರಿಸಿದ್ದಾರೆ. 'ಸಮಯ ಎಲ್ಲವನ್ನೂ ಬಹಿರಂಗಪಡಿಸುತ್ತದೆ. ಚಿಂತೆ ಮಾಡಬೇಡಿ' ಎಂದು ಅಲ್ಲಿಯೂ ಗೂಢಾರ್ಥದ ಸಾಲನ್ನು ಬರೆದಿದ್ದಾರೆ.
ಸತ್ಯ ಗೊತ್ತಾಗುವವರೆಗೆ ಕಾಯಿರಿ
ಗುರುವಾರ ಮತ್ತೊಂದು ಟ್ವೀಟ್ ಮಾಡಿರುವ ಅರ್ಮಾನ್, 'ವಾಸ್ತವ ಸತ್ಯವನ್ನು ತಿಳಿದುಕೊಳ್ಳುವುದರ ಬದಲು ಕಲ್ಪನೆ ಮಾಡಿಕೊಳ್ಳುವುದು ಮತ್ತು ನಿಮ್ಮ ಮನಸ್ಸನ್ನು ಹೀಗೆಯೇ ಎಂದು ನಿರ್ಧರಿಸುವಂತೆ ಬಿಡುವುದರಿಂದ ಮತ್ತಷ್ಟು ಹಾನಿಯಾಗುತ್ತದೆ. ಸ್ವಲ್ಪ ಕಾಯಿರಿ. ತೀರಾ ತಡವಾಗುವ ಮೊದಲೇ ನಿಮಗೆ ಎಲ್ಲವೂ ಗೊತ್ತಾಗಲಿದೆ' ಎಂದು ಹೇಳಿದ್ದಾರೆ.


Click it and Unblock the Notifications










