ಬಾಲಿವುಡ್ ಗಾಯಕಿ ಕನಿಕಾ ಕಪೂರ್‌ಗೆ ಮೂರನೇ ಬಾರಿಯೂ ಕೊರೊನಾ ಪಾಸಿಟಿವ್
ಕೊರೊನಾ ವೈರಸ್ ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿರುವ ಬಾಲಿವುಡ್ ಗಾಯಕಿ ಕನಿಕಾ ಕಪೂರ್ ಅವರಿಗೆ ಮೂರನೇ ಬಾರಿ ನಡೆಸಲಾದ ಪರೀಕ್ಷೆಯಲ್ಲಿಯೂ ಸೋಂಕು ಪಾಸಿಟಿವ್ ಆಗಿದೆ. ಲಕ್ನೋದ ಸಂಜಯ್ ಗಾಂಧಿ ಪೋಸ್ಟ್ ಗ್ರಾಜುಯೇಟ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಭಾನುವಾರ ಎರಡನೆಯ ಬಾರಿ ಅವರಿಗೆ ಪರೀಕ್ಷೆ ಮಾಡಿದಾಗ ಕೋವಿಡ್ ಪಾಸಿಟಿವ್ ಬಂದಿತ್ತು. ಮಂಗಳವಾರ ರಾತ್ರಿ ಕೂಡ ಅವರ ಮೂರನೇ ಪರೀಕ್ಷೆಯ ವರದಿಯಲ್ಲಿ ಪಾಸಿಟಿವ್ ಎಂದು ನಮೂದಾಗಿದೆ. ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ವೇಳೆ ನಿರಂತರವಾಗಿ ತಪಾಸಣೆ ಮಾಡಲಾಗುತ್ತದೆ. ವರದಿಯಲ್ಲಿನ ಅಂಶಗಳನ್ನು ಪರಿಗಣಿಸಿದ ಅವರಿಗೆ ಚಿಕಿತ್ಸೆ ನೀಡಲಾಗುತ್ತದೆ.

ಎರಡು ಬಾರಿ ನೆಗೆಟಿವ್ ಬರಬೇಕು
ಹೀಗೆ ಕನಿಕಾ ಕಪೂರ್ ಅವರನ್ನು ಇದುವರೆಗೆ ಮೂರು ಬಾರಿ ತಪಾಸಣೆಗೆ ಒಳಪಡಿಸಲಾಗಿದ್ದು, ಮೂರು ಬಾರಿಯೂ ಅವರಲ್ಲಿ ಪಾಸಿಟಿವ್ ಬಂದಿದೆ. ಅಂದರೆ, ಅವರ ಆರೋಗ್ಯದಲ್ಲಿ ಸುಧಾರಣೆಯಾಗಿಲ್ಲ. ಅವರಲ್ಲಿ ಕನಿಷ್ಠ ಎರಡು ಟೆಸ್ಟ್‌ಗಳಲ್ಲಿ ಕೊರೊನಾ ವೈರಸ್ ನೆಗೆಟಿವ್ ಬರುವವರೆಗೂ ಚಿಕಿತ್ಸೆ ಮುಂದುವರಿಸಲಾಗುವುದು ಎಂದು ಆಸ್ಪತ್ರೆಯ ನಿರ್ದೇಶಕ ಪ್ರೊ. ಆರ್‌ಕೆ ಧಿಮಾನ್ ತಿಳಿಸಿದ್ದಾರೆ.

ಓಜಸ್ ದೇಸಾಯಿ ನೆಗೆಟಿವ್
ಈ ಮಧ್ಯೆ ಕನಿಕಾ ಸ್ನೇಹಿತ ಓಜಸ್ ದೇಸಾಯಿ ಅವರಲ್ಲಿ ಕೊರೊನಾ ವೈರಸ್ ಸೋಂಕು ಕಂಡುಬಂದಿಲ್ಲ. ತಾಜ್ ಹೋಟೆಲ್‌ನಲ್ಲಿ ಎರಡು ದಿನ ಕನಿಕಾ ಅವರೊಂದಿಗೆ ಉಳಿದುಕೊಂಡಿದ್ದ ಓಜಸ್ ದೇಸಾಯಿ, ಕನಿಕಾ ಅವರಲ್ಲಿ ಸೋಂಕು ಇರುವುದು ಬಹಿರಂಗವಾಗುತ್ತಿದ್ದಂತೆಯೇ ನಾಪತ್ತೆಯಾಗಿದ್ದರು. ಬಳಿಕ ಅವರನ್ನು ಪತ್ತೆಹಚ್ಚಲಾಗಿತ್ತು.

ಸ್ವಯಂ ತಪಾಸಣೆಗೆ ಒಳಗಾದ ಓಜಸ್
ಮುಂಬೈನ ಕಸ್ತೂರಬಾ ಆಸ್ಪತ್ರೆಯಲ್ಲಿ ತಾವೇ ಸ್ವತಃ ಕೋವಿಡ್ 19 ತಪಾಸಣೆಗೆ ಒಳಗಾಗಿದ್ದು, ಅದರಲ್ಲಿ ನೆಗೆಟಿವ್ ಎನ್ನುವ ವರದಿ ಬಂದಿದೆ ಎಂದು ಓಜಸ್ ಹೇಳಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅದರ ವರದಿಯನ್ನೂ ಅವರು ಹಂಚಿಕೊಂಡಿದ್ದಾರೆ.

ತಪಾಸಣೆ ಇಷ್ಟೊಂದು ದುಬಾರಿಯೇ?
'ವಾಕಿಂಗ್ ಡೆತ್' ಸರಣಿ ಖ್ಯಾತಿಯ ಹಾಲಿವುಡ್ ನಟ ಡೇನಿಯಲ್ ನ್ಯೂಮನ್ ಅವರು ಜಾರ್ಜಿಯಾದಲ್ಲಿ ಕೋವಿಡ್ ತಪಾಸಣೆಗೆ ಒಳಗಾಗಿದ್ದರು. ತಮ್ಮ ಸಹೋದ್ಯೋಗಿಯೊಬ್ಬರಲ್ಲಿ ಸೋಂಕು ಪಾಸಿಟಿವ್ ಆಗಿದ್ದರಿಂದ ಮತ್ತು ತಮ್ಮಲ್ಲಿಯೂ ಅದರ ಲಕ್ಷಣಗಳು ಕಂಡುಬಂದಿದ್ದರಿಂದ ಅವರು ತಪಾಸಣೆಗೆ ಒಳಗಾಗಿದ್ದರು. ಆದರೆ ಅವರಲ್ಲಿ ಸೋಂಕು ಪತ್ತೆಯಾಗಿಲ್ಲ. ಈ ತಪಾಸಣೆಗಾಗಿಯೇ ತಮಗೆ 9 ಸಾವಿರ ಡಾಲರ್ ಬಿಲ್ ಮಾಡಿರುವುದು ಕಂಡು ಅವರು ದಂಗಾಗಿದ್ದಾರೆ.


Click it and Unblock the Notifications











