ಕನಿಕಾ ಕಪೂರ್ ಮತ್ತೆ ಪಾಸಿಟಿವ್: ಆಸ್ಪತ್ರೆಯಿಂದಲೇ ಭಾವನಾತ್ಮಕ ಸಂಗತಿ ಹಂಚಿಕೊಂಡ ಗಾಯಕಿ
ಕೊರೊನಾ ವೈರಸ್‌ಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿರುವ ಬಾಲಿವುಡ್ ಗಾಯಕಿ ಕನಿಕಾ ಕಪೂರ್ ಅವರಲ್ಲಿ ನಾಲ್ಕನೆಯ ಬಾರಿಯೂ ಕೋವಿಡ್ 19 ಪಾಸಿಟಿವ್ ಎಂಬ ವರದಿ ಬಂದಿದೆ. ಅಂದರೆ ಸತತ ಚಿಕಿತ್ಸೆಯ ಬಳಿಕವೂ ಕನಿಕಾ ಅವರು ವೈರಸ್‌ನಿಂದ ಮುಕ್ತರಾಗಿಲ್ಲ.
Recommended Video
ಲಂಡನ್‌ನಿಂದ ಲಕ್ನೋಗೆ ಬಂದ 'ಬೇಬಿ ಡಾಲ್' ಖ್ಯಾತಿಯ ಕನಿಕಾ ಕಪೂರ್ ಅವರಲ್ಲಿ ಕೊರೊನಾ ವೈರಸ್ ಸೋಂಕು ಇರುವುದು ಮಾರ್ಚ್ 20ರಂದು ಪತ್ತೆಯಾಗಿತ್ತು. ಹತ್ತು ದಿನ ಕಳೆದರೂ ಅವರು ಚಿಕಿತ್ಸೆಗೆ ಸೂಕ್ತವಾಗಿ ಸ್ಪಂದಿಸದ ಕಾರಣ ಅವರು ಗುಣಮುಖರಾಗುತ್ತಿಲ್ಲ. ತಮ್ಮ ನಾಲ್ಕನೆಯ ಪರೀಕ್ಷೆಯ ವರದಿಯೂ ಪಾಸಿಟಿವ್ ಬಂದ ಬಳಿಕ ಕನಿಕಾ ಅಭಿಮಾನಿಗಳಿಗೆ ಭಾವುಕ ಪತ್ರವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಬರೆದಿದ್ದಾರೆ. ಹಾಗೆಯೇ ತಾವು ಐಸಿಯುಗೆ ದಾಖಲಾಗಿಲ್ಲ, ಮಕ್ಕಳು ಹಾಗೂ ಕುಟುಂಬದವರನ್ನು ಭೇಟಿಯಾಗಲು ಕಾಯುತ್ತಿರುವುದಾಗಿ ತಿಳಿಸಿದ್ದಾರೆ.

ಬದುಕಿನ ಮೌಲ್ಯ ಕಲಿಸುತ್ತಿದೆ
'ಜೀವನ ನಮಗೆ ಸಮಯದ ಸರಿಯಾದ ಬಳಕೆ ಮಾಡುವುದನ್ನು ಕಲಿಸಿದರೆ, ಸಮಯವು ನಮಗೆ ಬದುಕಿನ ಮೌಲ್ಯವನ್ನು ಕಲಿಸುತ್ತದೆ' ಎಂಬ ನುಡಿ ಮಾತೊಂದನ್ನು ಕನಿಕಾ ಹಂಚಿಕೊಂಡಿದ್ದಾರೆ. ಇದಕ್ಕೂ ಮುನ್ನ ಅವರು ಆಸ್ಪತ್ರೆ ಸೇರಿದ ಸಂದರ್ಭದಿಂದಲೂ ಹಂಚಿಕೊಂಡಿದ್ದ ಪೋಸ್ಟ್‌ಗಳನ್ನೆಲ್ಲವನ್ನೂ ಡಿಲೀಟ್ ಮಾಡಿದ್ದಾರೆ.

ಐಸಿಯುದಲ್ಲಿ ಇಲ್ಲ
'ನನ್ನ ಕುರಿತು ನಿಮ್ಮ ಕಾಳಜಿಗೆ ಧನ್ಯವಾದಗಳು. ಆದರೆ ನಾನು ಐಸಿಯುದಲ್ಲಿ ಇಲ್ಲ. ನಾನು ಆರಾಮಾಗಿ ಇದ್ದೇನೆ. ನನ್ನ ಮುಂದಿನ ಪರೀಕ್ಷೆಯಲ್ಲಿ ನೆಗೆಟಿವ್ ಬರಲಿದೆ ಎಂದು ಆಶಿಸಿದ್ದೇನೆ. ಮನೆಗೆ ಹೋಗಿ ಮಕ್ಕಳು ಮತ್ತು ಕುಟುಂಬದವರನ್ನು ಭೇಟಿ ಮಾಡಲು ಕಾತರಳಾಗಿದ್ದೇನೆ. ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ' ಎಂದು ಕನಿಕಾ ತಿಳಿಸಿದ್ದಾರೆ.

ಕನಿಕಾ ಕುಟುಂಬದವರ ಆತಂಕ
'ಕನಿಕಾ ಅವರ ಆರೋಗ್ಯ ವರದಿಗಳಿಂದ ಕಳವಳ ಉಂಟಾಗಿದೆ. ಆಕೆ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎನಿಸುತ್ತಿದೆ. ಈ ಲಾಕ್‌ಡೌನ್ ಸ್ಥಿತಿಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಅಕೆಯನ್ನು ಏರ್‌ಲಿಫ್ಟ್ ಮಾಡಲೂ ಅವಕಾಶವಿಲ್ಲ. ಆಕೆಯ ಚೇತರಿಕೆಗಾಗಿ ನಾವು ಪ್ರಾರ್ಥಿಸಬಹುದಷ್ಟೇ' ಎಂದು ಕನಿಕಾ ಕುಟುಂಬದವರೊಬ್ಬರು ತಿಳಿಸಿದ್ದಾರೆ.

ಸಂಪರ್ಕಕ್ಕೆ ಬಂದವರಲ್ಲಿ ನೆಗೆಟಿವ್
ಮಾರ್ಚ್ 9ರಂದು ಲಂಡನ್‌ನಿಂದ ಲಕ್ನೋಗೆ ಮರಳಿದ್ದ ಕನಿಕಾ, ಪಾರ್ಟಿಯೊಂದನ್ನು ಆಯೋಜಿಸಿದ್ದರು. ಅಲ್ಲದೆ, ಇತರೆ ಸಂತೋಷ ಕೂಟಗಳಲ್ಲಿ ಕೂಡ ಪಾಲ್ಗೊಂಡಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಅವರ ಸಂಪರ್ಕಕ್ಕೆ ಬಂದಿದ್ದ ಅನೇಕರನ್ನು ಪತ್ತೆ ಹಚ್ಚಿ ತಪಾಸಣೆಗೆ ಒಳಪಡಿಸಲಾಗಿದ್ದು, ಎಲ್ಲರಲ್ಲಿಯೂ ನೆಗೆಟಿವ್ ಪತ್ತೆಯಾಗಿದೆ.


Click it and Unblock the Notifications











