Mrunal Thakur:"ಸರಿಯಾದ ಸಂಗಾತಿ ಸಿಗೋದು ಕಷ್ಟ; ಸೇಫ್ಟಿಗೆ ಅಂಡಾಣು ಶೇಖರಿಸಿ ಇಟ್ಕೊಳೋಣ ಅಂತಿದೀನಿ"
ಬಹುಭಾಷಾ ನಟಿ ಮೃಣಾಲ್ ಠಾಕೂರ್ ಮುದ್ದಾದ ಚೆಲುವೆ. ಸೀರಿಯಲ್‌ಗಳಿಂದ ನಟನೆ ಆರಂಭಿಸಿ, ಈಗ ನಾನಾ ಭಾಷೆಗಳಲ್ಲಿ ಒಳ್ಳೊಳ್ಳೆ ಸಿನಿಮಾ ಮಾಡಿ ತನ್ನದೇ ಆದ ಫ್ಯಾನ್ ಬೇಸ್ ಸೃಷ್ಟಿಸಿಕೊಂಡಿರೋ ಪ್ರತಿಭಾವಂತೆ. ತನ್ನ ಮನಸ್ಸಿಗನ್ನಿಸಿದ್ದನ್ನು ಪ್ರಾಮಾಣಿಕವಾಗಿ ಮಾತನಾಡೋ ದಿಟ್ಟ ಚೆಲುವೆ.
ಇತ್ತೀಚೆಗೆ ತನ್ನ ಭವಿಷ್ಯ, ಬದುಕು, ಆಲೋಚನೆ, ಮಾನಸಿಕ ನೆಮ್ಮದಿ ಈ ಎಲ್ಲದರ ಬಗ್ಗೆ ಮಾತನಾಡುತ್ತಾ ಮೃಣಾಲ್ ತಾನು ಅಂಡಾಣು ಶೇಖರಣೆ ಮಾಡುವುದರ ಬಗ್ಗೆ ಆಲೋಚನೆ ಮಾಡುತ್ತಿದ್ದೇನೆ ಎಂದಿದ್ದರು. ಇದು ಈಗ ಸದ್ಯ ಚರ್ಚೆಯಾಗ್ತಿರೋ ಬಿಸಿಬಿಸಿ ಸುದ್ದಿ.
ಹಾಗಂತ ಅಂಡಾಣು ಶೇಖರಣೆ ಅಥವಾ ಎಗ್ ಫ್ರೀಜಿಂಗ್ ಹೊಸತೇನಲ್ಲ. ಕಳೆದ ಕೆಲವು ದಶಕಗಳಿಂದ ಸರ್ವೇಸಾಮಾನ್ಯವಾಗಿ ನಡೆಯುತ್ತಿರೋ ವೈದ್ಯಕೀಯ ಪ್ರಕ್ರಿಯೆ. ಇನ್ನು ಸಿನಿಮಾರಂಗದಲ್ಲಿ ಅಂಡಾಣು ಶೇಖರಣೆ ಕೂಡಾ ಹೊಸತಲ್ಲ. ಹಾಲಿವುಡ್‌ನಲ್ಲಿ ಸಾಕಷ್ಟು ಸಮಯದಿಂದ ಬಹಳಷ್ಟು ನಟಿಯರು ಈ ಬಗ್ಗೆ ಮಾತನಾಡಿದ್ದಾರೆ. ಬಹುತೇಕ ಜನ ಅಂಡಾಣು ಶೇಖರಣೆ ಮಾಡಿದ್ದಾರೆ ಕೂಡಾ.

ಇತ್ತೀಚೆಗಷ್ಟೇ ನಟಿ ಪ್ರಿಯಾಂಕಾ ಚೋಪ್ರಾ ತಾನು "ತನ್ನ ತಾಯಿಯ ಮಾತಿನಂತೆ 30 ವರ್ಷದ ಆಸು ಪಾಸಿನಲ್ಲಿ ಎಗ್ ಫ್ರೀಜಿಂಗ್ ಮಾಡಿದ್ದೆ. ಅದರಿಂದಾಗಿ ಈಗ ಮಗುವನ್ನು ಪಡೆದೆ ಎಂದು ಬಹಿರಂಗವಾಗೇ ಹೇಳಿಕೊಂಡಿದ್ದರು. ತಮ್ಮ ಮಗಳು ಮಾಲ್ತಿ ಮೇರಿ ಅಂಡಾಣು ಶೇಖರಣೆ ಮತ್ತು ಬಾಡಿಗೆ ತಾಯ್ತನ ಎನ್ನುವ ಎರಡು ವೈದ್ಯಕೀಯ ಕ್ಷೇತ್ರದ ಮಹತ್ವದ ಟೆಕ್ನಾಲಜಿಗಳು ತನಗೆ ಸಹಾಯ ಮಾಡಿದವು" ಎಂದಿದ್ದರು.
ಆದರೆ ಮೃಣಾಲ್, ನಟಿ ಮೋನಾ ಸಿಂಗ್ ಮಾತಿನಿಂದ ಪ್ರಭಾವಿತರಾದರಂತೆ. ಸರಿಯಾದ, ನಮ್ಮ ಮನಸ್ಥಿತಿಗೆ ಹೊಂದುವಂಥಾ ಸಂಗಾತಿ ಸಿಗೋದು ಈಗಿನ ಪರಿಸ್ಥಿತಿಯಲ್ಲಿ ಬಹಳ ಕಷ್ಟದ ವಿಚಾರ. ನಮ್ಮ ಕೆಲಸ ಅವರಿಗೆ ಅರ್ಥವಾಗೋದು ಬಹಳ ಮುಖ್ಯ. ಹಾಗಾಗಿ ನಾನು ಈ ಆಲೋಚನೆ ಮಾಡುತ್ತಿದ್ದೇನೆ ಎಂದು ಮೃಣಾಲ್ ಠಾಕೂರ್ ಸಂದರ್ಶನವೊಂದರಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಅನೇಕ ಸಲ ನಮಗೆ ಒಪ್ಪುವ ಸಂಗಾತಿ ಸಿಗುವಾಗ ನಮ್ಮ ವಯಸ್ಸು ಮೀರಿರಬಹುದು. ಅಥವಾ ಸಣ್ಣ ವಯಸ್ಸಿನಲ್ಲಿ ಕೆರಿಯರ್ ಬಗ್ಗೆ ಹೆಚ್ಚಿನ ಗಮನ ಕೊಡಬೇಕಾಗಬಹುದು. ಈ ಎಲ್ಲಾ ಕಾರಣಗಳಿದ್ದಾಗ ಕೇವಲ ಮಕ್ಕಳನ್ನು ಪಡೆಯೋಕೋಸ್ಕರ ಬೇಗ ಮದುವೆಯಾಗಬೇಕಿಲ್ಲ. ಅಂಡಾಣು ಶೇಖರಣೆ ಮಾಡಿದ್ದರೆ, ತಾವು ಇಷ್ಟಪಟ್ಟ ರೀತಿಯ ಸಂಗಾತಿ ಸಿಕ್ಕ ನಂತರವೇ ತಮ್ಮದೇ ಅಂಡಾಣುವಿನಿಂದ ಆರೋಗ್ಯವಂತ ಮಕ್ಕಳನ್ನು ಪಡೆಯುವುದು ಸಾಧ್ಯವಿದೆ. ಹಾಗಾಗಿ ಇದೊಂದು ಉತ್ತಮ ವಿಚಾರ ಎಂದು ನಟಿ ಮೋನಾ ಸಿಂಗ್ ಹೇಳಿದ್ದರು. ಅಷ್ಟೇ ಏಕೆ, ಅಂಡಾಣು ಶೇಖರಣೆ ಮಾಡುವ ಕುರಿತು ಆಲೋಚಿಸುವ ಬಹುತೇಕ ಎಲ್ಲರ ಅನಿಸಿಕೆ ಹೀಗೇ ಇರುತ್ತದೆ.
ಒಟ್ನಲ್ಲಿ ಮೃಣಾಲ್ ಠಾಕೂರ್ ಅಂಡಾಣು ಶೇಖರಣೆ ಬಗ್ಗೆ ಮುಕ್ತವಾಗಿ ಮಾತನಾಡಿರೋದ್ರಿಂದ ಈ ವಿಚಾರ ಮತ್ತೊಮ್ಮೆ ಚರ್ಚೆಗೆ ಬಂದಂತಾಗಿದೆ. ಮದುವೆ, ಮಕ್ಕಳ ವಿಚಾರದಲ್ಲಿ ಈಗಿನ ಹೆಣ್ಣುಮಕ್ಕಳು ಬಹುತೇಕ ಹೀಗೇ ಯೋಚಿಸುತ್ತಿರೋದ್ರಿಂದ ಮೃಣಾಲ್ ಮಾತು ಯಾರಿಗೂ ಶಾಕಿಂಗ್ ಎನಿಸಿಲ್ಲ.
31 ವರ್ಷ ವಯಸ್ಸಿನ ಈ ನಟಿಯ ಆಲೋಚನೆ ಸರಿಯಾಗೇ ಇದೆ ಅನ್ನೋದು ಅಭಿಮಾನಿಗಳ ಅಭಿಪ್ರಾಯ. ಸುಮ್ಮನೆ ಯಾರನ್ನೋ ಮದುವೆಯಾಗಿ ನೆಮ್ಮದಿ ಕಳೆದುಕೊಂಡು, ಡಿವೋರ್ಸ್ ರಂಪಾಟಗಳಾಗೋದಕ್ಕಿಂತ ಹೀಗೆ ಮುಂದಾಲೋಚನೆ ಮಾಡಿ ತಡವಾದರೂ ಸರಿಯಾದ ವ್ಯಕ್ತಿಯನ್ನು ಮದುವೆಯಾಗಿ ನೆಮ್ಮದಿಯಾಗಿರೋದೇ ಬೆಟರ್ ಅನ್ನೋದು ಬಹುತೇಕ ಹೆಣ್ಣುಮಕ್ಕಳ ಅನಿಸಿಕೆ. ವೈದ್ಯಕೀಯ ಕ್ಷೇತ್ರದ ಆವಿಷ್ಕಾರಗಳು ಇದಕ್ಕೆ ಪೂರಕವಾಗಿರೋದು ಮತ್ತಷ್ಟು ಸಹಕಾರಿ.


Click it and Unblock the Notifications










