ಮುಂಬೈ ನಾಗ್ಪುರ ಹೈವೇಯಲ್ಲಿ ಭೀಕರ ಅಪಘಾತಕ್ಕೀಡಾದ ಸೋನು ಸೂದ್ ಪತ್ನಿ ಸೋನಾಲಿ ಕಾರು, ಹೇಳಿದ್ದೇನು ರಿಯಲ್ ಹೀರೋ ?
ಬಹುಭಾಷೆಯ ಸ್ಟಾರ್ ಅಂದರೆ ಅವರಿಗೆ ಅವರದ್ದೇ ಆದ ಅಭಿಮಾನಿಗಳಿರುತ್ತಾರೆ. ಅವರು ಯಾವ ದೇಶಕ್ಕೆ ಹೋಗಲಿ ಅಲ್ಲಿ ಆಟೋಗ್ರಾಫ್ ಪ್ಲೀಸ್ ಎಂದು ಯಾರಾದರೂ ಒಬ್ಬರು ಕೈಯೊಡ್ಡಿಯೇ ಒಡ್ಡುತ್ತಾರೆ. ಹೀಗೆ ಫ್ಯಾನ್ ಫಾಲೋವರ್ಸ್ ಗಳನ್ನು ಹೊಂದಿರುವ ಸ್ಟಾರ್‌ಗಳಲ್ಲಿ ಸೋನು ಸೂದ್ ಕೂಡ ಒಬ್ಬರು.
ಒಂದಾದ ಮೇಲೊಂದು ಚಿತ್ರಗಳನ್ನು ಮಾಡುತ್ತಲೇ ಕನ್ನಡದಲ್ಲಿ ಕೂಡ ತನ್ನ ಚಾಪು ಮೂಡಿಸಿದ ಸೋನು ಸೋದ್ ಕೊರೊನಾ ಕಾಲದಲ್ಲಿ ಅನೇಕರ ಪಾಲಿನ ಸೂಪರ್ ಹೀರೋ ಕೂಡ ಹೌದು. ಇರುವವರು, ಇಲ್ಲದವರು ಎನ್ನುವ ಬೇಧ ಬಾವ ಇಲ್ಲದೇ ಕೊರೊನಾ ಜಗತ್ತನ್ನೇ ಅಮರಿಕೊಂಡಾಗ ಜನಸಾಮಾನ್ಯರ ಕಷ್ಟ-ನಷ್ಟಕ್ಕೆ ಮಿಡಿದ ಸೋನು ಸೂದ್ ಅನೇಕರ ಆಸೆ ಆಕಾಂಕ್ಷೆಗಳನ್ನು ಪೂರೈಸಿದರು. ದೇಹಿ ಎಂದು ಬಂದವರ ಹಸಿವು ನೀಗಿಸಿದರು. ವಲಸೆ ಕಾರ್ಮಿಕರ ಕೈಯನ್ನು ಹಿಡಿದರು.

ಇಂಥಾ ಸೋನು ಸೂದ್ ಅವರ ಪತ್ನಿ ಸೋನಾಲಿ ಸೂದ್ ಅವರು ಪ್ರಯಾಣಿಸುತ್ತಿದ್ದ ಕಾರು ಮುಂಬೈ-ನಾಗ್ಪುರ್ ಹೆದ್ದಾರಿಯಲ್ಲಿ ಭೀಕರ ಅಪಘಾತಕ್ಕೀಡಾಗಿದೆ. ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಅಪಘಾತಕ್ಕೀಡಾದ ಕಾರಿನ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅಪಘಾತದಲ್ಲಿ ಸೋನಾಲಿ ಸೂದ್ ಮತ್ತು ಅವರ ಸಹೋದರಿಯ ಮಗನಿಗೆ ಗಂಭೀರ ಗಾಯಗಳಾಗಿದ್ದು, ಸೋನಾಲಿ ಸೂದ್ ಅವರ ಸಹೋದರಿಗೆ ಹೆಚ್ಚಿನ ಗಾಯಗಳಾಗಿಲ್ಲ, ಅವರು ಅಪಾಯದಿಂದ ಪಾರಾಗಿದ್ಧಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿಯನ್ನು ಮಾಡಿವೆ. ನಾಗ್ಪುರದಲ್ಲಿ ಕಾರ್ಯಕ್ರಮವೊಂದರಲ್ಲಿ ಸೋನಾಲಿ ಭಾಗವಹಿಸಲು ಹೋಗಿದ್ದರು, ಕಾರ್ಯಕ್ರಮ ಮುಗಿಸಿಕೊಂಡು ಮರಳಿ ವಿಮಾನ ನಿಲ್ದಾಣಕ್ಕೆ ಬರುವ ಸಮಯದಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದ್ದು ಸದ್ಯ ಸೋನು ಸೌದ್ ನಾಗ್ಪುರಕ್ಕೆ ದೌಡಾಯಿಸಿದ್ದಾರೆ.ತಮ್ಮ ಪತ್ನಿ ಮತ್ತು ಕುಟುಂಬಸ್ಥರ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಕೂದಲೆಳೆ ಅಂತರದಿಂದ ಸೋನಾಲಿ ಮತ್ತು ಕುಟುಂಬಸ್ಥರು ಪಾರಾಗಿದ್ದಾರೆ ಎಂದು ಹೇಳಿರುವ ಸೋನು ಸೂದ್ ಎಲ್ಲರು ಅಪಾಯದಿಂದ ಪಾರಾಗಿದ್ದಾರೆ, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ. ಸಾಯಿಬಾಬಾ ಕೃಪೆಯಿಂದ ದೊಡ್ಡ ಅನಾಹುತ ತಪ್ಪಿದೆ ಎಂದಿರುವ ಸೋನು ಸೂದ್, ಅಪಘಾತ ಹೇಗೆ ಸಂಭವಿಸಿದೆ ಎನ್ನುವುದರ ಕುರಿತು ನನ್ನಲ್ಲಿಯೂ ಇನ್ನು ಮಾಹಿತಿ ಇಲ್ಲ ಎಂದು ಹೇಳಿದ್ದಾರೆ. ಕಾರಿನ ಫೋಟೊ ನೋಡಿದರೆ ಅಪಘಾತದ ತೀವೃತೆ ಅರಿವು ಆಗುತ್ತೆ ಎಂದಿರುವ ಸೋನು ಸೂದ್, ಸೋನಾಲಿ ನಾಳೆ ಬೆಳಗ್ಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ಹೇಳಿದ್ದಾರೆ. ಆ ನಂತರ ಮುಂಬೈಗೆ ತೆರಳುವುದಾಗಿ ಹೇಳಿದ್ದಾರೆ.
ಇನ್ನು ಅಪಘಾತದ ಸುದ್ದಿ ಹೊರ ಬರುತ್ತಿದ್ದಂತೆಯೇ ಸೋನು ಸೋದ್ ಅವರನ್ನು ಇಷ್ಟಪಡುವ ಅನೇಕರು ಆಘಾತಕ್ಕೊಳಗಾಗಿದ್ದಾರೆ. ಪರೋಪಕಾರಿ ಸೋನು ಸೂದ್ ಬದುಕಿನಲ್ಲಿ ಈ ತರಹದ ಬರಸಿಡಿಲು ಬಡಿಯಬಾರದಿತ್ತು ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸೋನು ಸೂದ್ ಅವರ ಪತ್ನಿ ಮತ್ತು ಸಹೋದರಿ, ಸಹೋದರಿಯ ಮಗ ಬೇಗ ಗುಣಮುಖರಾಗಲಿ ಎಂದು ಪ್ರಾರ್ಥನೆ ಮಾಡುತ್ತಿದ್ದಾರೆ. ತಮ್ಮ ಮನದ ಬೇಸರ-ನೋವನ್ನು ಕೂಡ ಹೊರ ಹಾಕುತ್ತಿದ್ದಾರೆ.
ಇನ್ನುಳಿದಂತೆ ಆಂಧ್ರಪ್ರದೇಶದ ಮೂಲದವರಾದ ಸೋನಾಲಿ ಅವರನ್ನು ಸೋನು ಸೋದ್ 1996ರಲ್ಲಿ ಮದುವೆಯಾದರು. ಹೊಸ ಜೀವನ ಆರಂಭ ಮಾಡಿದರು. ಬಾಲಿವುಡ್‌ನಲ್ಲಿ ಸೈಕಲ್ ತುಳಿಯುತ್ತಿದ್ದರು ಕೂಡ ಸೋನಾಲಿ, ಸೋನು ಅವರನ್ನು ಮದುವೆಯಾಗುವ ಮನಸು ಮಾಡಿದ್ದರು. ಅಯಾನ್ ಮತ್ತು ಇಶಾಂತ್ ಎಂಬ ಇಬ್ಬರು ಗಂಡು ಮಕ್ಕಳು ಸೋನು ಸೂದ್ ಮತ್ತು ಸೋನಾಲಿ ಅವರಿಗಿದ್ದು ಕೊರೊನಾ ಸಮಯದಲ್ಲಿ ತಮ್ಮ ಪತಿಯ ಜೊತೆ ಸೋನಾಲಿ ಕೂಡ ಜನರ ಸಹಾಯಕ್ಕೆ ಟೊಂಕ ಕಟ್ಟಿ ನಿಂತಿದ್ದರು. ಸದ್ಯ ಸೋನಾಲಿ ಚೇತರಿಸಿಕೊಳ್ಳುತ್ತಿದ್ದು ಸೋನು ಸೂದ್ ಖುದ್ದು ಹೇಳಿರುವಂತೆ ನಾಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ.


Click it and Unblock the Notifications











