ಸುಶಾಂತ್ ಮ್ಯಾನೇಜರ್ ದಿಶಾ ಜತೆ ಸಂಬಂಧ?: ಆರೋಪಕ್ಕೆ ಸೂರಜ್ ಪಾಂಚೊಲಿ ಪ್ರತಿಕ್ರಿಯೆ ಏನು?
ನಟಿ ಜಿಯಾ ಖಾನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿದ್ದ ನಟ ಸೂರಜ್ ಪಾಂಚೊಲಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೂ ಸೂರಜ್ ಪಾಂಚೊಲಿ ಅವರಿಗೆ ನಂಟು ಇದೆ ಎಂಬ ಆರೋಪ ಕೇಳಿಬಂದಿದೆ.
Recommended Video
ಸುಶಾಂತ್ ಸಿಂಗ್ ಆತ್ಮಹತ್ಯೆಗೂ ಕೆಲವು ದಿನಗಳ ಮುನ್ನವಷ್ಟೇ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಕೂಡ ಕಟ್ಟಡದಿಂದ ಕೆಳಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರು. ದಿಶಾ ಸಾಯುವ ಮುನ್ನ ಗರ್ಭಿಣಿಯಾಗಿದ್ದರು. ಅದಕ್ಕೆ ಸೂರಜ್ ಪಾಂಚೊಲಿ ಕಾರಣ. ಸೂರಜ್ ಅವರಿಗೆ ಸಲ್ಮಾನ್ ಖಾನ್ ಬೆಂಬಲವಿದೆ. ಜಿಯಾ ಖಾನ್ ಪ್ರಕರಣದಲ್ಲಿ ಸೂರಜ್ ಅವರನ್ನು ಸಲ್ಮಾನ್ ಉಳಿಸಿದ್ದರು. ಹೀಗಾಗಿ ಸುಶಾಂತ್ ಘಟನೆಯ ಸುತ್ತ ಹಲವಾರು ಕೈಗಳಿವೆ ಎಂದು ಅನೇಕರು ಅನುಮಾನ ವ್ಯಕ್ತಪಡಿಸಿದ್ದರು. ಮುಂದೆ ಓದಿ...

ದಿಶಾರನ್ನು ಭೇಟಿಯೇ ಮಾಡಿಲ್ಲ
ಆದರೆ ದಿಶಾಗೂ ತಮಗೂ ಸಂಬಂಧವೇ ಇರಲಿಲ್ಲ ಎಂದು ಸೂರಜ್ ಹೇಳಿದ್ದಾರೆ. 'ಸುಶಾಂತ್ ಅವರ ಮಾಜಿ ಮ್ಯಾನೇಜರ್ ದಿಶಾ ಅವರನ್ನು ನನ್ನ ಜೀವನದಲ್ಲಿ ಒಮ್ಮೆಯೂ ಭೇಟಿ ಮಾಡಿರಲಿಲ್ಲ. ಯಾವ ಪಾರ್ಟಿಯಲ್ಲಿ ಕೂಡ ಸಿಕ್ಕಿಲ್ಲ. ದಿಶಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವುದು ಸಾಮಾಜಿಕ ಜಾಲತಾಣಗಳ ಮೂಲಕ ತಿಳಿದಿತ್ತು. ಸುಶಾಂತ್ ಮತ್ತು ದಿಶಾ ಅವರ ಆತ್ಮಹತ್ಯೆ ಪ್ರಕರಣವನ್ನು ನನಗೆ ಥಳಕು ಹಾಕಿರುವ ಬಗೆ ಸರಿಯಲ್ಲ.

ಆರೋಪಗಳಿಂದ ನೋವಾಗಿದೆ
ಈ ಆರೋಪಗಳೆಲ್ಲವೂ ನಿರಾಧಾರ. ಇಂತಹ ಆರೋಪಗಳಿಂದ ನನಗೆ ತೀವ್ರ ನೋವಾಗಿದೆ. ಜಿಯಾ ಖಾನ್ ಪ್ರಕರಣದಲ್ಲಿ ಈಗಾಗಲೇ ಕೋರ್ಟ್ ವಿಚಾರಣೆ ಎದುರಿಸುತ್ತಿದ್ದೇನೆ. ಈ ಪ್ರಕರಣ ನನ್ನ ಸಹೋದರಿಗೆ ತುಂಬಾ ಕೆಟ್ಟ ಪರಿಣಾಮ ಬೀರಿದೆ. ಈಗ ದಿಶಾ ಸಾಲಿಯಾನ್ ಸಾವಿನ ಕುರಿತು ಇಂಟರ್ನೆಟ್‌ನಲ್ಲಿ ಹರಿದಾಡುತ್ತಿರುವ ಊಹಾಪೋಹಗಳಿಂದಾಗಿ ಬೇಸರಗೊಂಡಿದ್ದಾಳೆ. ನನ್ನ ಮೇಲಿನ ಆರೋಪಗಳಿಂದ ನನಗೂ ಬೇಸರವಾಗಿದೆ. ಸುಶಾಂತ್ ಮತ್ತು ದಿಶಾ ಸಾವಿನಲ್ಲಿ ಸಂಚು ನಡೆದಿದ್ದರೆ ಪೊಲೀಸರಿಗೆ ತಿಳಿಯುತ್ತಿತ್ತು ಎಂದು ಹೇಳಿದ್ದಾರೆ.

ಜಗಳ ನಡೆದಿದ್ದು ಸುಳ್ಳು
ಸೂರಜ್ ಮತ್ತು ಸುಶಾಂತ್ ನಡುವೆ 2017ರಲ್ಲಿ ಗಲಾಟೆ ನಡೆದಿತ್ತು. ದಿಶಾ ಸಾವಿನ ಕುರಿತು ಸೂರಜ್ ಅವರ ಕೈವಾಡವನ್ನು ಬಹಿರಂಗಪಡಿಸಲು ಸುಶಾಂತ್ ಬಯಸಿದ್ದರು ಎಂದು ಸಾಮಾಜಿಕ ಜಾಲತಾಣದಲ್ಲಿ ವದಂತಿ ಹರಿದಾಡುತ್ತಿದೆ. ಇದಕ್ಕೆ ಪೂರಕವೆಂಬಂತೆ ಹಳೆಯ ಪತ್ರಿಕಾ ಲೇಖನವೊಂದನ್ನು ಬಳಸಿಕೊಳ್ಳಲಾಗುತ್ತಿದೆ. ಇದನ್ನು ಕೂಡ ಸೂರಜ್ ನಿರಾಕರಿಸಿದ್ದಾರೆ.

ಸ್ಪಷ್ಟೀಕರಣ ನೀಡಿದ್ದೆ
'ನಾವಿಬ್ಬರೂ ಉತ್ತಮ ಸ್ನೇಹಿತರಲ್ಲದೆ ಇರಬಹುದು. ಆದರೆ ನಮ್ಮ ನಡುವೆ ಜಗಳವಾಗಲೀ, ಮನಸ್ತಾಪವಾಗಲೀ ಇರಲಿಲ್ಲ. 2017ರಲ್ಲಿ ನಮ್ಮ ನಡುವೆ ಕಿತ್ತಾಟ ನಡೆದಿತ್ತು ಎಂಬ ವರದಿ ಪ್ರಕಟವಾದಾಗ ಸುಶಾಂತ್ ನನಗೆ ಕರೆ ಮಾಡಿ ಪತ್ರಿಕೆಗೆ ಸ್ಪಷ್ಟೀಕರಣ ನೀಡುವಂತೆ ಕೇಳಿದ್ದರು. ನಾನು ಪತ್ರಿಕೆಗೆ ಹೇಳಿಕೆ ನೀಡಿ ಅಂತಹ ಘಟನೆ ನಡೆದಿರುವುದನ್ನು ನಿರಾಕರಿಸಿದ್ದೆ' ಎಂದು ಸೂರಜ್ ತಿಳಿಸಿದ್ದಾರೆ.

ಸಲ್ಮಾನ್ ಖಾನ್‌ರನ್ನು ಎಳೆಯಬೇಡಿ
ಸಲ್ಮಾನ್ ಖಾನ್ ಅವರಿಗೂ ಸಂಬಂಧವಿಲ್ಲ. ಅವರನ್ನು ವಿನಾಕಾರಣ ಇದಕ್ಕೆ ಎಳೆಯಲಾಗಿದೆ. ಸಲ್ಮಾನ್ ಖಾನ್ ಕ್ಯಾಂಪ್‌ನವನಾಗಿದ್ದರಿಂದ ಅವರು ನನಗೆ ಬೆಂಬ ನೀಡಿ ಸುಶಾಂತ್‌ರನ್ನು ಮೂಲೆ ಗುಂಪು ಮಾಡಿದರು ಎನ್ನಲಾಗುತ್ತಿದೆ. ಸುಶಾಂತ್ ನನ್ನನ್ನು ತಮ್ಮ ಕಿರಿಯ ಸಹೋದರನಂತೆ ನೋಡುತ್ತಿದ್ದರು. 'ರಾಬ್ತಾ' ಪ್ರದರ್ಶನಕ್ಕೂ ನನಗೆ ಆಹ್ವಾನ ನೀಡಿದ್ದರು. ನಾನು ಪಾಲ್ಗೊಂಡಿದ್ದೆ. ನಮ್ಮ ನಡುವೆ ಜಗಳ ಇದ್ದಿದ್ದರೆ ಅವರೇಕೆ ನನಗೆ ಆಹ್ವಾನ ನೀಡುತ್ತಿದ್ದರು.

ಜಿಯಾ ಖಾನ್ ತಾಯಿಯಿಂದ ಕಷ್ಟ
ಸಲ್ಮಾನ್ ಖಾನ್ ಅವರ 'ಹೀರೋ' ಚಿತ್ರದ ಮೂಲಕ ಪದಾರ್ಪಣೆ ಮಾಡಿದ್ದ ಸೂರಜ್, ಸ್ಟಾರ್ ಮಗನಾಗಿದ್ದರೂ ಚಿತ್ರರಂಗದಲ್ಲಿ ಸಾಕಷ್ಟು ಕಷ್ಟಪಟ್ಟಿದ್ದಾಗಿ ಹೇಳಿಕೊಂಡಿದ್ದಾರೆ. ನಾನು ಸಲ್ಮಾನ್ ಖಾನ್ ಕ್ಯಾಂಪ್‌ನವನಾಗಿದ್ದರೆ ಈ ವೇಳೆಗೆ ಹತ್ತು ಸಿನಿಮಾ ಮಾಡುತ್ತಿದ್ದೆ. ಕೋರ್ಟ್ ಕೇಸ್‌ನಿಂದ ಸಮಸ್ಯೆಗಳನ್ನು ಎದುರಿಸುತ್ತಿದ್ದೇನೆ. ಒಂದು ದಿನವೂ ತಪ್ಪಿಸದೆ ಏಳೆಂಟು ವರ್ಷಗಳಿಂದ ಕೋರ್ಟ್‌ಗೆ ಹಾಜರಾಗುತ್ತಿದ್ದೇನೆ. ಜಿಯಾ ತಾಯಿಯಿಂದಾಗಿ ಪ್ರಕರಣ ತಡವಾಗುತ್ತಿದೆ. ಅವರು ವಿಚಾರಣೆಗೆ ಹಾಜರಾಗುತ್ತಿಲ್ಲ ಎಂದು ಸೂರಜ್ ಆರೋಪಿಸಿದ್ದಾರೆ.


Click it and Unblock the Notifications











