'ಸು ಫ್ರಮ್ ಸೋ' ಮರಾಠಿ ರಿಮೇಕ್ 'ತುಂಬಾಡ್ಚಿ ಮಂಜುಳಾ' ಟ್ರೈಲರ್ ಇಷ್ಟ ಆಯ್ತಾ? ಯಾವುದು ಚೆನ್ನಾಗಿದೆ?
2025ರಲ್ಲಿ ಬಾಕ್ಸಾಫೀಸ್‌ನಲ್ಲಿ ಸರ್ಪ್ರೈಸ್ ಕೊಟ್ಟ ಕನ್ನಡದ ಸಿನಿಮಾ 'ಸು ಫ್ರಮ್ ಸೋ'. ಶನೀಲ್ ಗೌತಮ್, ರಾಜ್ ಬಿ ಶೆಟ್ಟಿ ಸೇರಿದಂತೆ ಕರಾವಳಿ ಭಾಗದ ಕಲಾವಿದರು ನಟಿಸಿರುವ ಈ ಸಿನಿಮಾ ಗಲ್ಲಾಪಟ್ಟಿಗೆಯಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಿತ್ತು. ಜೆಪಿ ತುಮಿನಾಡ್ ನಿರ್ದೇಶಿಸಿದ್ದ ಈ ಸಿನಿಮಾ ಕನ್ನಡ ಚಿತ್ರರಂಗ ಅಷ್ಟೇ ಅಲ್ಲ, ಇಡೀ ಭಾರತವೇ ತಿರುಗಿ ನೋಡುವಂತೆ ಮಾಡಿತ್ತು.
'ಸು ಫ್ರಮ್ ಸೋ' ಕನ್ನಡ ಸೇರಿದಂತೆ ಮಲಯಾಳಂ ಹಾಗೂ ತೆಲುಗು ಭಾಷೆಗೆ ಡಬ್ ಮಾಡಿ ರಿಲೀಸ್ ಮಾಡಲಾಗಿತ್ತು. ಹಿಂದಿ, ಮರಾಠಿ ಸೇರಿದಂತೆ ಕೆಲ ಭಾಷೆಯ ರಿಮೇಕ್ ಹಕ್ಕುಗಳು ಸೇಲ್ ಆಗಿದ್ದವು. ಅದರಲ್ಲಿ ಮರಾಠಿ ರಿಮೇಕ್ ಬಿಡುಗಡೆಗೆ ಸಿದ್ಧವಾಗಿದ್ದು, ಟ್ರೈಲರ್ ಕೂಡ ರಿಲೀಸ್ ಆಗಿದೆ. ಅಂದ್ಹಾಗೆ ಮಾರಾಠಿಯಲ್ಲಿ ಈ ಸಿನಿಮಾಗೆ 'ತುಂಬಾಡ್ಚಿ ಮಂಜುಳಾ' ಎಂದು ಟೈಟಲ್ ಇಡಲಾಗಿದೆ.

'ತುಂಬಾಡ್ಚಿ ಮಂಜುಳಾ' ಸಿನಿಮಾವನ್ನು ಜೀ ಸ್ಟುಡಿಯೋಸ್ ನಿರ್ಮಾಣ ಮಾಡಿದೆ. ಈಗಾಗಲೇ ಸಿನಿಮಾದ ಪೋಸ್ಟರ್, ಟೀಸರ್‌ಗಳಿಂದ ಮರಾಠಿಗಳ ಕುತೂಹಲವನ್ನು ಕೆರಳಿಸಿತ್ತು. ಇದರ ಬೆನ್ನಲ್ಲೇ ಸಿನಿಮಾದ ಟ್ರೈಲರ್ ಕೂಡ ರಿಲೀಸ್ ಆಗಿದೆ. ಸಿನಿಮಾ ಪ್ರೇಮಿಗಳು 'ಸು ಫ್ರಮ್ ಸೋ' ಹಾಗೂ 'ತುಂಬಾಡ್ಚಿ ಮಂಜುಳಾ'ದ ಟ್ರೈಲರ್ ಅನ್ನು ಹೋಲಿಕೆ ಮಾಡುವುದಕ್ಕೆ ಶುರು ಮಾಡಿದ್ದಾರೆ.
'ತುಂಬಾಡ್ಚಿ ಮಂಜುಳಾ' ಮರಾಠಿ ಆಡಿಯನ್ಸ್ ತಕ್ಕಂತೆ ಸಿನಿಮಾವನ್ನು ಮಾಡಲಾಗಿದೆ. ಹಾಸ್ಯ ಹಾಗೂ ಹಾರರ್ ಟಚ್ ಜೊತೆ ಮಾಸ್ ಡೈಲಾಗ್, ಆಕ್ಷನ್ ಅನ್ನು ಇಟ್ಟು ಕಂಪ್ಲೀಟ್ ಕಮರ್ಷಿಯಲ್ ಸಿನಿಮಾ ಮಾಡಿರುವ ಹಾಗಿದೆ. ಟ್ರೈಲರ್ ನೋಡಿದವ ಕೆಲವರಿಗೆ ಇಂತಹ ಅನುಭವ ಆಗಿದೆ. ಹೀಗಾಗಿ ಟ್ರೈಲರ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರಿಗೆ ಇಷ್ಟ ಆಗಿದ್ದರೆ, ಇನ್ನು ಕೆಲವರಿಗೆ 'ಸು ಫ್ರಮ್ ಸೋ' ಅಂತಯೇ ನಿರೂಪಣೆ ಮಾಡಬೇಕಿತ್ತು ಎಂದು ಹೇಳಿದ್ದಾರೆ.
ಇನ್ನು ಈ ಸಿನಿಮಾದಲ್ಲಿ ಮರಾಠಿ ಕಲಾವಿದರ ದೊಡ್ಡ ದಂಡೇ ಇದೆ. ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಮಕರಂದ್ ಅನಸ್ಪುರೆ, ಜಿತೇಂದ್ರ ಜೋಶಿ, ಓಂ ಭುಟ್ಕರ್, ಅಂಶುಮಾನ್ ವಿಚಾರೆ, ಯೋಗೇಶ್ ಶಿರ್ಸತ್, ಗಣೇಶ್ ಪಂಡಿತ್, ಶಾರ್ದುಲ್ ಸರಾಫ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಹಾಸ್ಯದ ಸನ್ನಿವೇಶಗಳು, ಅದ್ಭುತ ಸಂಭಾಷಣೆ ಟ್ರೈಲರ್‌ನಲ್ಲಿ ಗಮನ ಸೆಳೆದಿದೆ.
ಅಂದ್ಹಾಗೆ 'ಸು ಫ್ರಮ್ ಸೋ' ಮರಾಠಿ ರಿಮೇಕ್ ಗೆ ಯುವ ನಿರ್ದೇಶಕ ವಿಧವ್ ಕೋರೆಗಾಂವ್ಕರ್ ಆಕ್ಷನ್ ಕಟ್ ಹೇಳಿದ್ದಾರೆ. ಇನ್ನು ಸಿನಿಮಾದ ಥೀಮ್ ಮರಾಠಿಗರಿಗೆ ಇಷ್ಟ ಆಗಿದ್ದು, ಸಿನಿಮಾ ತಂಡ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದ್ದು ಇಷ್ಟ ಆಗಿಲ್ಲ. " ಇದು ಕನ್ನಡದ ಸು ಫ್ರಮ್ ಸೋ ಸಿನಿಮಾದ ರಿಮೇಕ್ ಎಂದು ಎನಿಸುತ್ತಿದೆ. ಅದೇ ರೀತಿ ಸಿನಿಮಾವನ್ನು ಮಾಡಿದರೆ, ಅಷ್ಟೇ ಎಂಟರ್‌ಟೈನಿಂಗ್ ಆಗಿರುತ್ತೆ." ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಟ್ರೈಲರ್ ನಿಜಕ್ಕೂ ಚೆನ್ನಾಗಿದೆ. ಒಳ್ಳೆಯ ಸಿನಿಮಾ ಮಾಡಿದ್ದಾರೆಂದು ಅನಿಸುತ್ತಿದೆ. ಯಾರಿಗೆಲ್ಲ ಹಾರರ್-ಕಾಮಿಡಿ ಇಷ್ಟ ಆಗಿದೆ. ಅವರಿಗೆ ಖಂಡಿತಾ ಈ ಸಿನಿಮಾ ಇಷ್ಟ ಆಗುತ್ತೆ" ಎಂದು ಹೇಳಿದ್ದಾರೆ.
ಇನ್ನು 'ತುಂಬಾಡ್ಚಿ ಮಂಜುಳಾ' ಸಿನಿಮಾದ ಭರ್ಜರಿ ಪ್ರಚಾರ ಆರಂಭ ಆಗಿದೆ. ಮುಂಬೈನಲ್ಲಿ ಈ ಸಿನಿಮಾ ಟ್ರೈಲರ್ ಅನ್ನು ಅದ್ಧೂರಿಯಾಗಿ ರಿಲೀಸ್ ಮಾಡುವ ಮೂಲಕ ಸಿನಿಮಾ ಅಧಿಕೃತವಾಗಿ ಪ್ರಚಾರ ಶುರು ಮಾಡಿದೆ. ಇದೇ ಜೂನ್ 5ರಂದು ಈ ಸಿನಿಮಾ ರಿಲೀಸ್ ಆಗುತ್ತಿದೆ. ಮರಾಠಿಯಲ್ಲಿಯೂ 'ಸು ಫ್ರಮ್ ಸೋ'ನಂತಯೇ ಸಿನಿಮಾ ಸಕ್ಸಸ್ ಆಗುತ್ತಾ? ಬಾಕ್ಸಾಫೀಸ್‌ನಲ್ಲಿ ಇತಿಹಾಸ ಬರೆಯುತ್ತಾ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.


Click it and Unblock the Notifications
