ಗಂಗೂಬಾಯಿ ಸಿನಿಮಾದ ಟೈಟಲ್ ಬದಲಿಸಲು ಸುಪ್ರೀಂ ಕೋರ್ಟ್ ಸಲಹೆ: ಆಲಿಯಾ ಚಿತ್ರಕ್ಕೆ ಹೊಸ ಸಂಕಷ್ಟ
ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಗೂ ವಿವಾದಕ್ಕೂ ಹಳೇ ನಂಟು. ಇವರು ನಿರ್ದೇಶಿಸಿದ ಪ್ರತಿಯೊಂದು ಸಿನಿಮಾನೂ ಒಂದಲ್ಲ ಒಂದು ವಿವಾದಕ್ಕೆ ಸಿಕ್ಕಿಕೊಳ್ಳುತ್ತಲೇ ಇರುತ್ತೆ. ಈ ಬಾರಿ ಅಲಿಯಾ ಭಟ್ ಅಭಿನಯದ 'ಗಂಗೂಬಾಯಿ ಕಾಠಿಯಾವಾಡಿ' ಬಿಡುಗಡೆ ಹೊಸ್ತಿಲಲ್ಲಿ ಸಂಕಷ್ಟಕ್ಕೆ ಸಿಲುಕಿದೆ. ಸಿನಿಮಾ ಆರಂಭ ಆದಲ್ಲಿಂದಲೂ ಈ ಸಿನಿಮಾ ಬಗ್ಗೆ ಗಂಗೂಬಾಯಿ ಪುತ್ರ ಆಕ್ಷೇಪ ವ್ಯಕ್ತ ಪಡಿಸುತ್ತಲೇ ಬಂದಿದ್ದಾರೆ. ಆದರೆ, ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಮಾತ್ರ ಇದ್ಯಾವುದಕ್ಕೂ ತಲೆಕೆಡಿಸಿಕೊಂಡಿರಲಿಲ್ಲ.
ಈಗ ಸಿನಿಮಾ ಬಿಡುಗಡೆಗೆ ಇನ್ನು ಎರಡು ದಿನ ಬಾಕಿ ಇದೆ ಆಗಲೇ ಮತ್ತೆ ಸಂಕಷ್ಟಕ್ಕೆ ಸಿಲುಕಿದೆ. ಒಂದ್ಕಡೆ ಗಂಗೂಬಾಯಿ ಪುತ್ರನ ಕೋರ್ಟ್ ಮೆಟ್ಟಿಲೇರಿದ್ದರು, ಇನ್ನೊಂದು ಕಡೆ ಕಾಂಗ್ರೆಸ್ ಶಾಸಕರೊಬ್ಬರು 'ಗಂಗೂಬಾಯಿ ಕಾಠಿಯಾವಾಡಿ' ಚಿತ್ರದ ಟೈಟಲ್ ಬದಲಾಯಿಸಬೇಕೆಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಗೆ ಹೊಸ ಸಲಹೆಯೊಂದನ್ನು ನೀಡಿದೆ.

‘ಗಂಗೂಬಾಯಿ ಕಾಠಿಯಾವಾಡಿ’ ಟೈಟಲ್ ಬದಲಿಸಲು ಸಲಹೆ
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸಿದ ಹಾಗೂ ಆಲಿಯಾ ಭಟ್ ಗಂಗೂಬಾಯಿಯಾಗಿ ನಟಿಸಿದ 'ಗಂಗೂಬಾಯಿ ಕಾಠಿಯಾವಾಡಿ' ಚಿತ್ರದ ಟೈಟಲ್ ಬದಲಿಸಬೇಕು. ಕಾಮಾಠಿಪುರವನ್ನು ಕೆಟ್ಟದಾಗಿ ಸಿನಿಮಾ ತೋರಿಸಲಾಗಿದೆ. ರೆಡ್ ಲೈಟ್ ಏರಿಯಾ ಎನ್ನುವಂತೆ ಬಿಂಬಿಸಲಾಗಿದೆ. ಹೀಗಾಗಿ ಚಿತ್ರದ ಶೀರ್ಷಿಕೆಯನ್ನು ಬದಲಾಯಿಸಬೇಕು ಎಂದು ಕಾಂಗ್ರೆಸ್ ಶಾಸಕ ಅಮಿನ್ ಪಟೇಲ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಪ್ರತಿಕ್ರಿಯಿಸಿದ್ದು, ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಗೆ ಟೈಟಲ್ ಬದಲಾವಣೆ ಮಾಡುವಂತೆ ಸಲಹೆ ನೀಡಿದೆ.

ಗಂಗೂಬಾಯಿ ಆತ್ಮಕತೆ ಎಂದಿದ್ದ ಬನ್ಸಾಲಿ
ಸಂಜಯ್ ಲೀಲಾ ಬನ್ಸಾಲಿ ಮುಂಬೈನ ಕಾಮಾಠಿಪುರದ ಡಾನ್ 'ಗಂಗೂಬಾಯಿ ಕಾಠಿಯಾಡಿ' ಚರಿತ್ರೆಯನ್ನು ಆಧರಿಸಿದ ಸಿನಿಮಾ ಆಗಿದೆ. ಈ ಸಿನಿಮಾದಲ್ಲಿ ಗಂಗೂಬಾಯಿಯನ್ನು ವೇಶ್ಯೆಯಂತೆ ಹಾಗೂ ಡಾನ್ ಅಂತ ತೋರಿಸಲಾಗಿದೆ. ಆದರೆ, ನನ್ನ ತಾಯಿ ಸಮಾಜ ಸೇವಕಿಯಾಗಿದ್ದರು ಎಂದು ಗಂಗೂಬಾಯಿ ಪುತ್ರ ಕೋರ್ಟ್ ಮೆಟ್ಟಿಲೇರಿದ್ದರು. ಸಂಜಯ್ ಲೀಲಾ ಬನ್ಸಾಲಿ ಲೇಖಕ ಹುಸೇನ್ ಜೈದಿಯವರ 'ಮಾಫಿಯಾ ಕ್ವೀನ್ಸ್ ಆಫ್ ಮುಂಬೈ' ಗ್ರಂಥವನ್ನು ಆಧರಿಸಿ ಮಾಡುತ್ತಿರುವುದಾಗಿ ಹೇಳಿದ್ದರು. ಇದೇ ವಿಚಾರವೀಗ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.

ಬನ್ಸಾಲಿಗೆ ವಿವಾದವೇನು ಹೊಸತಲ್ಲ
ಸಂಜಯ್ ಲೀಲಾ ಬನ್ಸಾಲಿ ಇತ್ತೀಚೆಗೆ ನಿರ್ದೇಶಿಸಿದ ಸಿನಿಮಾಗಳು ವಿವಾದಕ್ಕೆ ಸಿಲುಕುತ್ತಿವೆ. ಈ ಹಿಂದೆ ಕೂಡ ಬನ್ಸಾಲಿ ಎರಡು ಸಿನಿಮಾದ ಟೈಟಲ್ ಅನ್ನು ಬದಲಾಯಿಸಿದ್ದಾರೆ. ದೀಪಿಕಾ ಅಭಿನಯದ 'ಪದ್ಮಾವತಿ' ಶೀರ್ಷಿಗೆ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ 'ಪದ್ಮಾವತ್' ಎಂದು ಬದಲಾಯಿಸಿದ್ದರು. ದೀಪಿಕಾ ರಣ್‌ವೀರ್ ನಟಿಸಿದ ಮತ್ತೊಂದು ಸಿನಿಮಾ 'ರಾಮ್ ಲೀಲಾ' ಕೂಡ ವಿವಾದಕ್ಕೆ ಸಿಲುಕಿದ್ದರಿಂದ 'ಗೋಲಿಯೋಂಕಿ ರಾಸ್ ಲೀಲಾ ರಾಮ್ -ಲೀಲಾ' ಎಂದು ಬದಲಾಯಿಸಲಾಗಿತ್ತು. ಈ ಬಾರಿ ಕೂಡ ಶೀರ್ಷಿಕೆ ತಲೆನೋವಾಗಿದ್ದು, ಬನ್ಸಾಲಿ ಈ ಚಿತ್ರ ಟೈಟಲ್ ಅನ್ನೂ ಬದಲಾಯಿಸುತ್ತಾರಾ? ಎಂದು ನೋಡಬೇಕಿದೆ.

ಟೈಟಲ್ ಬದಲಿಸಿದರೆ ಬಿಡುಗಡೆ ಸುಲಭ?
ಸಿನಿಮಾ ಟೈಟಲ್ ಬದಲಾವಣೆ ಮಾಡಿ ಬಿಡುಗಡೆ ಮಾಡುವುದು ಸಂಜಯ್ ಲೀಲಾ ಬನ್ಸಾಲಿಗೆ ಹೊಸತೇನಲ್ಲ. ಹೀಗಾಗಿ ಈ ಸಂಕಷ್ಟದಿಂದ ಪಾರಾಗಾಲು ನಿರ್ದೇಶಕ ಬನ್ಸಾಲಿ ಶೀರ್ಷಿಕೆಯನ್ನು ಬದಲಾವಣೆ ಮಾಡುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಟೈಟಲ್ ಬದಲಾಯಿಸಿದರೆ ಸಿನಿಮಾ ಬಿಡುಗಡೆಗೆ ಎದುರಾಗಿರುವ ಸಂಕಷ್ಟದಿಂದ ಪಾರಾಗಬಹುದಾಗಿದೆ. ಒಂದು ವೇಳೆ ಒಪ್ಪದೆ ಇದ್ದಲ್ಲಿ ಸುಪ್ರೀಂ ಕೋರ್ಟ್ ನೀಡುವ ಮುಂದಿನ ಸಲಹೆ ಅಥವಾ ಆದೇಶದವರೆಗೂ ಕಾಯಬೇಕಾಗಬಹುದು.


Click it and Unblock the Notifications











