ಸುಶಾಂತ್ ಸಿಂಗ್ ಖಿನ್ನತೆ ಬಗ್ಗೆ ತಮಗೆ ಗೊತ್ತಿರಲಿಲ್ಲ ಎಂದ ತಂದೆ
ಸುಶಾಂತ್ ಸಿಂಗ್ ರಜಪೂತ್ ಸಾವು ಅನೇಕ ಪ್ರಶ್ನೆ ಮತ್ತು ಗೊಂದಲಗಳನ್ನು ಹುಟ್ಟುಹಾಕಿದೆ. ಅವರ ಸಾವು ಆತ್ಮಹತ್ಯೆಯಿಂದಲೇ ಸಂಭವಿಸಿದೆ ಎಂದು ಮರಣೋತ್ತರ ಪರೀಕ್ಷೆ ವರದಿ ಹೇಳಿದೆ. ಆದರೆ ಈ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಅಂಶಗಳೇನು ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಸುಶಾಂತ್ ಸಾವಿಗೆ ಖಿನ್ನತೆ ಕಾರಣ ಎನ್ನಲಾಗಿದೆ. ಖಿನ್ನತೆಗೆ ಕಾರಣಗಳೇನು? ಮಗ ಖಿನ್ನತೆಯಿಂದ ಬಳಲುತ್ತಿದ್ದದ್ದು ತಮಗೆ ತಿಳಿದಿರಲಿಲ್ಲ ಎಂದು ಸುಶಾಂತ್ ತಂದೆ ಹೇಳಿದ್ದಾರೆ.
ಸುಶಾಂತ್ ಸಾವಿನ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸುಶಾಂತ್ ಕುಟುಂಬ ಮತ್ತು ಅವರಿಗೆ ಆಪ್ತರಾಗಿದ್ದ ಸ್ನೇಹಿತರಿಂದ ಹೇಳಿಕೆಗಳನ್ನು ದಾಖಲಿಸಿಕೊಳ್ಳುತ್ತಿದ್ದಾರೆ. ಸುಶಾಂತ್ ಸಾಯುವ ಮುನ್ನ ಯಾವುದೇ ಪತ್ರ ಬರೆಯದೆ ಇರುವುದರಿಂದ ಪೊಲೀಸರ ತನಿಖೆಗೆ ಸವಾಲುಗಳು ಹೆಚ್ಚಿವೆ. ಮುಂದೆ ಓದಿ...

ಮಾನಸಿಕ ಖಿನ್ನತೆ
ಸುಶಾಂತ್ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಅನೇಕ ವರದಿಗಳು ಹೇಳಿವೆ. ಅದಕ್ಕಾಗಿ ಅವರು ಕೆಲವು ಚಿಕಿತ್ಸೆ ಮತ್ತು ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರು ಎನ್ನುವುದು ಪ್ರಾಥಮಿಕ ತನಿಖೆಗಳಿಂದ ಗೊತ್ತಾಗಿದೆ. ಈ ಮಾನಸಿಕ ಸ್ಥಿತಿಯಿಂದ ಹೊರಬರಲು ಸುಶಾಂತ್ ವೈದ್ಯರೊಂದಿಗೆ ಸಂಪರ್ಕದಲ್ಲಿದ್ದರು.

ಸ್ವಲ್ಪ ಕುಗ್ಗಿದ್ದು ಹೌದು
ತನಿಖೆಯ ಭಾಗವಾಗಿ ಪೊಲೀಸರು ಸುಶಾಂತ್ ತಂದೆ ಕೃಷ್ಣ ಕುಮಾರ್ ಸಿಂಗ್ ಅವರನ್ನು ಪ್ರಶ್ನಿಸಿದ್ದಾರೆ. ಸುಶಾಂತ್ ಖಿನ್ನತೆಗೆ ಒಳಗಾಗಿದ್ದ ಸಂಗತಿ ತಮಗೆ ತಿಳಿದಿರಲಿಲ್ಲ. ಆದರೆ, ಸುಶಾಂತ್ ಸ್ವಲ್ಪ ಕುಗ್ಗಿರುವುದು ತಮ್ಮ ಗಮನಕ್ಕೆ ಬಂದಿತ್ತು ಎಂದು ಅವರ ತಂದೆ ತಿಳಿಸಿದ್ದಾರೆ.

ಮಾತ್ರೆ ನಿಲ್ಲಿಸಿದ್ದರು
ವೈದ್ಯರು ಸಲಹೆ ನೀಡಿದ್ದರೂ ಕೆಲವು ಸಮಯಗಳಿಂದ ಸುಶಾಂತ್ ಖಿನ್ನತೆ ನಿಗ್ರಹದ ಮಾತ್ರೆಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿದ್ದರು ಎಂದು ಸುಶಾಂತ್ ಆಪ್ತ ಸ್ನೇಹಿತ ಮಹೇಶ್ ಶೆಟ್ಟಿ ತಿಳಿಸಿದ್ದಾರೆ. ಸುಶಾಂತ್ ಆತ್ಮಹತ್ಯೆಗೂ ಮುನ್ನ ಮಹೇಶ್ ಶೆಟ್ಟಿ ಅವರಿಗೆ ಕರೆ ಮಾಡಿದ್ದರು. ಆದರೆ ಮಹೇಶ್ ಅದನ್ನು ಸ್ವೀಕರಿಸಿರಲಿಲ್ಲ.

ವೃತ್ತಿ ದ್ವೇಷದ ಆಯಾಮ
'ಸುಶಾಂತ್ ಅವರ ಕ್ರಿಯೇಟಿವ್ ಮ್ಯಾನೇಜರ್ ಸಿದ್ಧಾರ್ಥ್ ಪಿಥಾಣಿ ಅವರಿಂದ ಭಾನುವಾರ ಪ್ರಾಥಮಿಕ ಹೇಳಿಕೆ ದಾಖಲಿಸಿಕೊಂಡಿದ್ದು, ಮತ್ತೊಮ್ಮೆ ಕರೆಸಿಕೊಂಡಿದ್ದೆವು. ವೃತ್ತಿಪರ ವೈಷಮ್ಯದ ಆಯಾಮದಿಂದಲೂ ಪೊಲೀಸರು ತಮ್ಮ ತನಿಖೆ ಆರಂಭಿಸುವ ನಿರೀಕ್ಷೆಯಿದೆ' ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್‌ಮುಖ್ ಹೇಳಿದ್ದಾರೆ.


Click it and Unblock the Notifications











