ಇಲ್ಲಿ ದೊಡ್ಡೋರ ಮಕ್ಕಳದ್ದೇ ಕಾರುಬಾರು: ಬಾಲಿವುಡ್ ಮೇಲೆ ತಾಪ್ಸಿ ಸಿಟ್ಟು
ತಮಿಳು ಚಿತ್ರರಂಗದಿಂದ ಬಾಲಿವುಡ್‌ಗೆ ಜಿಗಿದಿರುವ ತಾಪ್ಸಿ ಪನ್ನುಗೆ ಅಲ್ಲಿ ಕಹಿ ಅನುಭವಗಳೇ ಹೆಚ್ಚಾಗಿರುವಂತಿದೆ. ತನ್ನ ನಟನೆಯ ಕಾರಣದಿಂದ ಗಮನ ಸೆಳೆದರೂ ತಾಪ್ಸಿಗೆ ಎಷ್ಟೋ ಸಿನಿಮಾಗಳು ಕೈತಪ್ಪಿವೆ. ತಾನು ನಿಂತ ಜಾಗದಲ್ಲಿಯೇ ಅನಿಸಿದ್ದನ್ನು ಯಾವ ಮುಲಾಜೂ ಇಲ್ಲದೆ ತಾಪ್ಸಿ ನೇರವಾಗಿ ಹೇಳುವ ಛಾತಿಯವರು. ಬಾಲಿವುಡ್‌ನ ಪೈಪೋಟಿಯ ನಡುವೆಯೂ ಅವರು ತಮ್ಮ ಛಾಪು ಮೂಡಿಸಿದ್ದಾರೆ.
ಪೈಪೋಟಿ ಎಂದರೆ ಅವರಿಗೆ ಎದುರಾಗಿರುವುದು ಬಾಲಿವುಡ್‌ನ ತಾರೆಯರು, ಅವರ ಕುಟುಂಬ ಹಾಗೂ ಮಕ್ಕಳಿಂದ. ಬಾಲಿವುಡ್ ಎಂದರೆ ವಂಶಪಾರಂಪರ್ಯದ ಸ್ವತ್ತಿನಂತೆ ಕೆಲವರು ಭಾವಿಸುತ್ತಿದ್ದಾರೆ ಎಂದು ತಾಪ್ಸಿಗೆ ಅನಿಸಿದೆ. 'ಪಿಂಕ್' ಚಿತ್ರ ಖ್ಯಾತಿಯ ತಾಪ್ಸಿ ಪನ್ನು, ಬಾಲಿವುಡ್‌ನಲ್ಲಿ ಹೆಚ್ಚು ಚರ್ಚೆಯಲ್ಲಿರುವ 'ಸ್ವಜನಪಕ್ಷಪಾತ'ದ ಕುರಿತು ದಿಟ್ಟತನದಿಂದ ದನಿ ಎತ್ತಿದ್ದಾರೆ.

ನನ್ನ ಜಾಗಕ್ಕೆ ತಾರೆಯರ ಮಕ್ಕಳು
ತಾಪ್ಸಿ ಪನ್ನು ನಟಿಸಿರುವ 'ತಪ್ಪಡ್' ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಚಿತ್ರದ ಪ್ರಚಾರದ ವೇಳೆ ಅವರು, ಹಿಂದಿ ಚಿತ್ರರಂಗದ ಮೇಲೆ ಗಮನಾರ್ಹ ಆರೋಪ ಮಾಡಿದ್ದಾರೆ. ಅನೆಕ ಚಿತ್ರ ನಿರ್ದೇಶಕರು ತಮ್ಮನ್ನು 'ತಿರಸ್ಕರಿಸಿ', ಹಿಂದಿ ಚಿತ್ರರಂಗದ ತಾರಾ ಕಲಾವಿದರ ಮಕ್ಕಳಿಗೆ ಅವಕಾಶ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಸ್ವಜನಪಕ್ಷಪಾತದಿಂದ ನೋವು
ತಮ್ಮಷ್ಟು ಪ್ರತಿಭಾವಂತರಲ್ಲದಿದ್ದರೂ ಸ್ಟಾರ್ ಕಲಾವಿದರ ಮಗಳು ಎಂಬ ಕಾರಣಕ್ಕೆ ಆಕೆಗೆ ಸಿನಿಮಾದಲ್ಲಿ ಪಾತ್ರ ನೀಡಲಾಗಿದೆ. ಬಾಲಿವುಡ್‌ನಲ್ಲಿ ಸ್ವಜನಪಕ್ಷಪಾತದಿಂದ ಅತ್ಯಂತ ಹೆಚ್ಚು ಸಮಸ್ಯೆ ಅನುಭವಿಸಿದ ನಟಿಯೆಂದರೆ ತಾವೇ ಎಂದು ತಾಪ್ಸಿ ಹೇಳಿದ್ದಾರೆ.

ಹೆಚ್ಚು ಸಮಯ ಉಳಿಯೊಲ್ಲ ಎಂದುಕೊಂಡಿದ್ದರು
ಆಫರ್‌ಗಳನ್ನು ಕಳೆದುಕೊಂಡಿದ್ದರಿಂದ ಅತೀವ ದುಃಖ ಮತ್ತು ನೋವುಂಟಾಗಿತ್ತು. ಹೀಗಾಗಿ ಸಾಕಷ್ಟು ಅತ್ತಿದ್ದಾಗಿ ಹೇಳಿಕೊಂಡಿದ್ದಾರೆ. ಆದರೆ ಬಾಲಿವುಡ್ ತಾನು ಉದ್ಯಮದಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯವಿಲ್ಲ, ಬೇಗನೆ ವಾಪಸ್ ಓಡಿಹೋಗುತ್ತಾಳೆ ಎಂದೇ ಭಾವಿಸಿತ್ತು ಎಂದಿದ್ದಾರೆ. 'ನಾನು ಹೆಚ್ಚು ಸಮಯ ಉಳಿಯುವುದಿಲ್ಲ ಎಂದು ಜನರು ಭಾವಿಸಿದ್ದರು. ಅನೇಕರು ನಾನು ಕಂಗೆಡುತ್ತೇನೆ ಎಂದುಕೊಂಡಿದ್ದರು. ನನಗೆ ಯಶಸ್ಸು ಸಿಕ್ಕಾಗಲೂ ನಾನು ಒಂದು ಅಥವಾ ಎರಡು ಸಿನಿಮಾಗಳನ್ನು ಮಾಡಬಹುದು. ಬಳಿಕ ವಾಪಸ್ ಹೋಗುತ್ತೇನೆ ಎಂದುಕೊಂಡಿದ್ದರು' ಎಂದು ತಿಳಿಸಿದ್ದಾರೆ.

ಈಗಲೂ ಹಾಗೆಯೇ ಹೇಳುತ್ತಿದ್ದಾರೆ
'ನನಗೆ ಯಶಸ್ಸು ಸಿಕ್ಕ ಬಳಿಕವೂ ಒಂದು ಅಥವಾ ಎರಡು ಅಥವಾ ಇನ್ನು ಕೆಲವಷ್ಟೇ. ಬಳಿಕ ಆಕೆ ಓಡಿಹೋಗುವುದು ಖಚಿತ ಎಂದುಕೊಂಡಿದ್ದರು. ಅಷ್ಟೇ ಅಲ್ಲ, ಜನರು ಈಗಲೂ ನನ್ನ ಬಗ್ಗೆ ಹಾಗೆಯೇ ಅಂದುಕೊಂಡಿದ್ದಾರೆ' ಎಂದು ತಾಪ್ಸಿ ಬಾಲಿವುಡ್ ಮನಸ್ಥಿತಿಯ ಬಗ್ಗೆ ಅಚ್ಚರಿ ಮತ್ತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


Click it and Unblock the Notifications











