ಗೋದ್ರಾ ರೈಲು ಹತ್ಯಾಕಾಂಡ ಆಧರಿಸಿದ 'ಸಬರಮತಿ ರಿಪೋರ್ಟ್' ಟೀಸರ್ ಔಟ್; "ಪ್ರೊಪೊಗಾಂಡ ಮೂವಿ" ಎಂದ ನೆಟ್ಟಿಗರು!
ಬಾಲಿವುಡ್‌ನಲ್ಲಿ ಇತ್ತೀಚೆಗೆ ರಿಲೀಸ್ ಆಗಿದ್ದ '12th ಫೇಲ್' ಅನ್ನೋ ಸಿನಿಮಾ ರಿಲೀಸ್ ಆಗಿ ಸದ್ದು ಮಾಡಿತ್ತು. ಈ ಸಿನಿಮಾದಲ್ಲಿ ಪ್ರಮುಖ ಪಾತ್ರದ ಮೂಲಕ ವಿಕ್ರಾಂತ್ ಮಸ್ಸಿ ಜನರ ಮೆಚ್ಚುಗೆ ಗಳಿಸಿದ್ದರು. ಈ ಸಿನಿಮಾ ಮೂಲಕ ಬಾಲಿವುಡ್‌ನಲ್ಲಿ ಜನಪ್ರಿಯತೆ ಗಳಿಸಿದ್ದ ವಿಕ್ರಾಂತ್ ಮಸ್ಸಿಯ ಹೊಸ ಸಿನಿಮಾದ ಟೀಸರ್ ಹೊರಬಿದ್ದಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಸಿನಿಮಾ ಬಗ್ಗೆ ಜೋರಾಗಿ ಚರ್ಚೆ ಹುಟ್ಟಿಕೊಂಡಿದೆ.
ಅಂದಹಾಗೆ, ಚರ್ಚೆಯಾಗುತ್ತಿರೋ ವಿಕ್ರಾಂತ್ ಮಸ್ಸಿಯ ಹೊಸ ಸಿನಿಮಾ 'ದಿ ಸಬರಮತಿ ರಿಪೋರ್ಟ್'. 2002ರಲ್ಲಿ ನಡೆದ ಸಬರಮತಿ ಎಕ್ಸ್‌ಪ್ರೆಸ್ ರೈಲು ದುರಂತವನ್ನು ಆಧರಿಸಿ, ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ಬಾಲಿವುಡ್ ನಟ ವಿಕ್ರಾಂತ್ ಮಸ್ಸಿ ಈ ಸಿನಿಮಾದಲ್ಲಿ ನ್ಯೂಸ್ ಚಾನೆಲ್‌ನ ನಿರೂಪಕನಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಸಿನಿಮಾದ ಚಿಕ್ಕದೊಂದು ತುಣುಕು ಹೊರಬಿದ್ದಿದ್ದು, ನೆಟ್ಟಿಗರಲ್ಲಿ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

22 ವರ್ಷಗಳ ಹಿಂದೆ (ಫೆಬ್ರವರಿ 22, 2002) ಗುಜರಾತಿನ ಗೋದ್ರಾದಲ್ಲಿ ಸಬರಮತಿ ಎಕ್ಸ್‌ಪ್ರೆಸ್ ರೈಲಿಗೆ ಬೆಂಕಿ ಇಟ್ಟಿದ್ದರು. ಇದು ಗುಜರಾತ್‌ನಲ್ಲಿ ಕೋಮುಗಲಭೆಗೆ ಎಡೆ ಮಾಡಿಕೊಟ್ಟಿತ್ತು. ಈ ರೈಲು ಹತ್ಯಾಕಾಂಡದ ಘಟನೆಯನ್ನು ಇಟ್ಟುಕೊಂಡು 'ಸಬರಮತಿ ಎಕ್ಸ್‌ಪ್ರೆಸ್' ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ಈ ಸಿನಿಮಾದಲ್ಲಿ ವಿಕ್ರಾಂತ್ ಮಸ್ಸಿ ಸುದ್ದಿ ವಾಚಕ ಶ್ರಬನ್ ಕುಮಾರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
'ಸಬರಮತಿ ರಿಪೋರ್ಟ್' ಸಿನಿಮಾ ಚಿಕ್ಕ ವಿಡಿಯೋದಲ್ಲಿ ವಿಕ್ರಾಂತ್ ಮಸ್ಸಿ ನ್ಯೂಸ್ ಚಾನೆಲ್ ಒಂದರ ಸ್ಟುಡಿಯೋದಲ್ಲಿ ಕೂತು ಸುದ್ದಿಯನ್ನು ಓದುತ್ತಿರುತ್ತಾರೆ. ಸಬರಮತಿ ಎಕ್ಸ್‌ಪ್ರೆಸ್ ರೈಲು ದುರಂತದ ಸುದ್ದಿಯನ್ನು ಟೆಲಿಪ್ರಾಮ್‌ಟರ್‌ನಲ್ಲಿ ಓದುವಾಗ, ಈ ಘಟನೆ ಬೆಂಕಿ ಆಕಸ್ಮಿಕ ಎಂದು ಹೇಳಲಾಗಿರುತ್ತೆ. ತಕ್ಷಣವೇ ತಡವರಿಸಿದ ನಟ ಇದು ಆಕಸ್ಮಿಕ ಅಲ್ಲ ಎಂದು ಹೇಳುವ ದೃಶ್ಯವಿದೆ. 'ದಿ ಸಬರಮತಿ ರಿಪೋರ್ಟ್' ತುಣುಕುಗಳು ಹೊರಬೀಳುತ್ತಿದ್ದಂತೆ ಸಿನಿಪ್ರಿಯರಲ್ಲಿ ಗೊಂದಲ ಮೂಡಿದೆ.
ಪ್ರಮುಖ ಪಾತ್ರದಲ್ಲಿ ನಟಿಸಿರುವ ವಿಕ್ರಾಂತ್ ಮಸ್ಸಿ 'ದಿ ಸಬರಮತಿ ರಿಪೋರ್ಟ್' ಟೀಸರ್ ಅನ್ನು ಶೇರ್ ಮಾಡಿ " ಗೋದ್ರಾ ರೈಲು ಹತ್ಯಾಕಾಂಡದಲ್ಲಿ 59 ಅಮಾಯಕರು ಜೀವ ಕಳೆದುಕೊಂಡರು. ಅವರಿಗೆ ಇಂದು ಗೌರವ ಸಲ್ಲಿಸುತ್ತಿದ್ದೇವೆ. ಈಗೋ 'ದಿ ಸಬರಮತಿ ರಿಪೋರ್ಟ್' ಅನ್ನು ಅರ್ಪಿಸುತ್ತಿದ್ದೇವೆ. ಸಿನಿಮಾಮಂದಿರಗಳಲ್ಲಿ ಮೇ 3, 2024ರಂದು ರಿಲೀಸ್" ಎಂದು ಬರೆದುಕೊಂಡಿದ್ದಾರೆ.
'ದಿ ಸಬರಮತಿ ರಿಪೋರ್ಟ್' ಸಿನಿಮಾದ ಚಿಕ್ಕ ತುಣುಕು ಹೊರಬೀಳುತ್ತಿದ್ದಂತೆ ನೆಟ್ಟಿಗರು ಅಲರ್ಟ್ ಆಗಿದ್ದಾರೆ. ಕೆಲವು ಟೀಸರ್ ಮೆಚ್ಚುಕೊಂಡರೆ, ಮತ್ತೆ ಕೆಲವರು ಪ್ರೊಪೊಗಾಂಡ ಎಂದು ಬರೆದುಕೊಂಡಿದ್ದಾರೆ. "ವಿಕ್ರಾಂತ್ ಇನ್ನೊಂದು ಅದ್ಭುತ ಪರ್ಫಾಮೆನ್ಸ್ ಜೊತೆಗೆ ಬಂದಿದ್ದಾರೆ" ಎಂದು ಒಬ್ಬರು ಕಮೆಂಟ್ ಮಾಡಿದ್ದರು. " ಅವರ ಮುಡಿಗೆ ಇನ್ನೊಂದು ಗರಿ" ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು "ಎಂತಹ ಅದ್ಭುತ ನಟ.. ಈ ಸಿನಿಮಾ ನೋಡುವುದಕ್ಕೆ ಕಾತುರನಾಗಿದ್ದೇನೆ" ಎಂದು ಕಮೆಂಟ್ ಮಾಡಿದ್ದಾರೆ.
ಮತ್ತೆ ಕೆಲವರಿಗೆ ಈ ಸಿನಿಮಾ ತುಣುಕು ರಾಜಕೀಯ ಪ್ರೇರಿತ ಎಂದು ಎನಿಸಿದೆ. ಇದೊಂದು ಪ್ರೊಪೊಗಾಂಡ ಸಿನಿಮಾದಂತೆ ತೋರುತ್ತಿದೆ ಎಂದು ಕಮೆಂಟ್ ಮಾಡಿದ್ದಾರೆ. " ನೀವು ಕೂಡ ರಾಜಕೀಯ ಹಿಡಿತಕ್ಕೆ ಒಳಗಾಗಿರುವುದು ದುರಂತ.. ಎಲ್ಲರೂ ತಮ್ಮ ಸಿದ್ಧಾಂತವನ್ನು ಕಳೆದುಕೊಳ್ಳುತ್ತಿದ್ದಾರೆ. ಈಗ ಅನ್‌ಫಾಲೋ ಮಾಡುತ್ತೇನೆ" ಒಬ್ಬ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. " ಇದು ಪ್ರೊಪೊಗಾಂಡ ಸಿನಿಮಾ.. ನೀವು ಈ ಸಿನಿಮಾವನ್ನು ಚುನಾವಣೆಯ ಬಳಿಕ ಬಿಡುಗಡೆ ಮಾಡಿದ್ದರೆ, ನಿಮ್ಮ ಭಾಗದ ಸತ್ಯವನ್ನು ನೋಡಲು ಕಾಯುತ್ತಿದ್ದೆ." ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.


Click it and Unblock the Notifications











