ಹೆಣ್ಣು ಮಗುವಿಗೆ ಜನ್ಮ ನೀಡಿದ ಟಾಕ್ಸಿಕ್ ನಟಿ ಕಿಯಾರಾ ಅಡ್ವಾಣಿ- ಸಿದ್ಧಾರ್ಥ್ ಮಲ್ಹೋತ್ರಾ!
ಬಾಲಿವುಡ್ ನಟಿ ಕಿಯಾರಾ ಅಡ್ವಾನಿ ಮತ್ತು ನಟ ಸಿದ್ಧಾರ್ಥ್ ಮಲ್ಹೋತ್ರಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಸುದ್ದಿ ಹೊರ ಬೀಳುತ್ತಿದ್ದಂತೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಬಾಲಿವುಡ್ ತಾರಾ ಜೋಡಿಯು ತಮ್ಮ ಮೊದಲ ಮಗುವಿನ ಆಗಮನದ ಬಗ್ಗೆ ಇನ್ನೂ ಅಧಿಕೃತ ಹೇಳಿಕೆಯನ್ನು ನೀಡಬೇಕಿದೆ. ಅಷ್ಟರೊಳಗೆ ಬಾಲಿವುಡ್‌ನ ಜನಪ್ರಿಯ ಛಾಯಾಗ್ರಾಹಕರೊಬ್ಬರು ಈ ಸಿಹಿ ಸುದ್ದಿಯನ್ನು ಬ್ರೇಕ್ ಮಾಡಿದ್ದಾರೆ.
ಬಾಲಿವುಡ್‌ನ ಛಾಯಾಗ್ರಾಹಕ ಮಾನವ್ ಮಂಗ್ಲಾನಿ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕಿಯಾರಾ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ದಂಪತಿಗೆ ಹೆಣ್ಣು ಮಗು ಜನಿಸಿದ ವಿಷಯವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಇಬ್ಬರ ಅಭಿಮಾನಿಗಳು ಕೂಡ ಅಭಿನಂದನೆಗಳನ್ನು ಸಲ್ಲಿಸುವುದಕ್ಕೆ ಶುರುವಿಟ್ಟುಕೊಂಡಿದ್ದಾರೆ.

ಆದರೆ, ಪೋಷಕರಾಗಿರುವ ಬಗ್ಗೆ ನಟಿ ಕಿಯಾರಾ ಅಡ್ವಾಣಿ ಹಾಗೂ ಸಿದ್ಧಾರ್ಥ್ ಮಲ್ಹೋತ್ರಾ ಇಬ್ಬರೂ ಅಧಿಕೃತವಾಗಿ ಮಾಹಿತಿಯನ್ನು ಹಂಚಿಕೊಳ್ಳಬೇಕಿದೆ. ಈ ಜೋಡಿ ಈ ವರ್ಷದ ಆರಂಭದಲ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇರುವುದಾಗಿ ಹೇಳಿಕೊಂಡಿದ್ದರು. ಪುಟ್ಟ ಮಗುವಿನ ಸಾಕ್ಸ್‌ನ ಪೋಟೊವನ್ನು ಶೇರ್ ಮಾಡಿ ಖುಷಿ ವಿಷಯವನ್ನು ತಮ್ಮ ಅಭಿಮಾನಿಗಳ ಸಮ್ಮುಖದಲ್ಲಿ ಹಂಚಿಕೊಂಡಿದ್ದರು. ಆ ವೇಳೆ ಅಭಿಮಾನಿಗಳು ಭರಪೂರ ಅಭಿನಂದನೆಗಳನ್ನು ಶೇರ್ ಮಾಡಿದ್ದರು.
ಇದೇ ಬಾಲಿವುಡ್ ತಾರೆಯರು ಕಿಯಾರಾ ಅಡ್ವಾಣಿ ಹಾಗೂ ಸಿದ್ಧಾರ್ಥ್ ಮಲ್ಹೋತ್ರಾಗೆ ಅಭಿನಂದನೆಗಳನ್ನು ಸಲ್ಲಿಸಿದ್ದರು. ಆಲಿಯಾ ಭಟ್, ಸಾರಾ ಅಲಿ ಖಾನ್, ಏಕ್ತಾ ಕಪೂರ್, ರಶ್ಮಿಕಾ ಮಂದಣ್ಣ, ಶಿಲ್ಪಾ ಶೆಟ್ಟಿ ಸೇರಿದಂತೆ ಹಲವು ಮಂದಿ ಅಭಿನಂದನೆಗಳನ್ನು ಸಲ್ಲಿಸಿದ್ದರು. ಈಗ ಹೆಣ್ಣು ಮಗುವಿಗೆ ಜನ್ಮ ನೀಡಿರುವ ವಿಷಯ ಹೊರಬೀಳುತ್ತಿದ್ದಂತೆ ಯಾವಾಗ ಅಧಿಕೃತ ಘೋಷಣೆ ಮಾಡುತ್ತಾರೆ? ಫೋಟೊವನ್ನು ಯಾವಾಗ ಹಂಚಿಕೊಳ್ಳುತ್ತಾರೆಂದು ಕಾದು ಕೂತಿದ್ದಾರೆ.
ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ 2023, ಫೆಬ್ರವರಿ 7ರಂದು ರಾಜಸ್ತಾನದ ಜೈಸಲ್ಮೇರ್‌ನಲ್ಲಿರುವ ಸೂರ್ಯ ಗ್ರಹ ಪ್ಯಾಲೇಸ್‌ನಲ್ಲಿ ವಿವಾಹವಾಗಿದ್ದರು. ಆತ್ಮೀಯರಿಗಷ್ಟೇ ಆಹ್ವಾನವಿದ್ದ ಈ ಮದುವೆ ಸಮಾರಂಭ ಅದ್ಧೂರಿಯಾಗಿ ನಡೆದಿತ್ತು. ವಿಶೇಷವಾಗಿ ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್, ಶಾಹಿದ್ ಕಪೂರ್, ಮೀರಾ ರಜಪೂತ್ ಸೇರಿದಂತೆ ಬಾಲಿವುಡ್‌ನ ಹಲವು ಗಣ್ಯರು ಭಾಗವಹಿಸಿದ್ದರು. ಮದುವೆಯಾದ ಎರಡು ವರ್ಷಗಳ ಬಳಿಕ ಈ ಸ್ಟಾರ್ ದಂಪತಿ ಮೊದಲ ಮಗುವನ್ನು ಬರ ಮಾಡಿಕೊಂಡಿದ್ದಾರೆ.
ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾನಿ ಇಬ್ಬರೂ ಹಲವು ದಿನಗಳಿಂದ ಡೇಟಿಂಗ್ ಮಾಡುತ್ತಿದ್ದರು. ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡ ಬಳಿಕ ಈ ಗಾಳಿಸುದ್ದಿಗಳು ಎಲ್ಲಡೆಗೆ ಹಬ್ಬಿತ್ತು. ಅಲ್ಲದೇ ಫ್ಯಾಮಿಲಿಯೊಂದಿಗೆ ಆಫ್ರಿಕಾ ಪ್ರವಾಸವನ್ನೂ ಕೈಗೊಂಡಿದ್ದರು. ಅಲ್ಲಿಂದ ಇಬ್ಬರ ಡೇಟಿಂಗ್ ಮ್ಯಾಟರ್ ಕನ್ಫರ್ಮ್ ಆಗಿತ್ತು. ಈ ಜೋಡಿ 'ಶೇರ್‌ಶಾ' ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು. ಈ ಸಿನಿಮಾದಲ್ಲಿ ಇಬ್ಬರ ಕೆಮಿಸ್ಟ್ರಿಯನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದರು. ಸಿನಿಮಾ ಸೂಪರ್ ಹಿಟ್ ಆಗಿತ್ತು.


Click it and Unblock the Notifications











