ಅದೇ ಕರಾಳ ದಿನ.. ಅದೇ ಸುಶಾಂತ್ ಸಿಂಗ್ ನೆನಪು.. ಮತ್ತೊಬ್ಬ ಯುವ ನಟಿ ಸಂಚಿತಾ ಉಗಾಲೆ ಆತ್ಮ*ಹತ್ಯೆ
ಬಣ್ಣದ ಲೋಕದಲ್ಲಿ ಎಷ್ಟು ಕಲರ್‌ಫುಲ್ ಬದುಕುಗಳು ಇವೆಯೋ ಅಷ್ಟೇ ನೋವಿನ ಕಹಾನಿಗಳು ಕೂಡ ಇವೆ. ಈ ರಂಗೀನ್ ದುನಿಯಾದಲ್ಲಿ ಮಿಂಚಬೇಕು ಅಂತ ನೂರಾರು ಕನಸುಗಳನ್ನು ಇಟ್ಟಿಕೊಂಡು ಬಂದ ಅದೆಷ್ಟೋ ಮಂದಿ ಗೆದ್ದಿದ್ದಾರೆ. ಅದಕ್ಕಿಂತ ಹೆಚ್ಚು ಮಂದಿ ಸೋತಿದ್ದಾರೆ. ಕೆಲವರು ಇದೇ ನೋವಿನಲ್ಲಿ ಖಿನ್ನತೆಗೆ ಜಾರಿದ್ದಾರೆ. ಮತ್ತೆ ಕೆಲವರು ದುಡುಕಿನ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ.
ಸಿನಿಮಾ ಜಗತ್ತಿನಲ್ಲಿ ಜೂನ್ 14 ಅನ್ನು ಯಾರೂ ಅಷ್ಟು ಸುಲಭಕ್ಕೆ ಮರೆಯೋದಕ್ಕೆ ಸಾಧ್ಯವಿಲ್ಲ. ಇದೇ ಆರು ವರ್ಷಗಳ ಹಿಂದೆ ಜೂನ್ 14ರಂದು ಸಿನಿಮಾ ಮಂದಿಗೆ ಶಾಕ್ ಎದುರಾಗಿತ್ತು. ನಟ ಸುಶಾಂತ್ ಸಿಂಗ್ ರಜಪೂತ್ ಅವರ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ನಟನ ಸಾವು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು. ಇಂದಿಗೂ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಗ್ಗೆ ಅವರ ಅಭಿಮಾನಿಗಳು ಧ್ವನಿ ಎತ್ತುತ್ತಲೇ ಇದ್ದಾರೆ.

ಈಗ ಮತ್ತೊಬ್ಬ ಯುವ ನಟಿ ಇದೇ ದಿನ, ಅಂದರೆ ಜೂನ್ 14ರಂದೇ ಆತ್ಮ*ಹತ್ಯೆಗೆ ಶರಣಾಗಿದ್ದಾರೆ. ಹಿಂದಿ ಕಿರುತೆರೆಯ ಉದಯೋನ್ಮುಖ ಯುವ ನಟಿ ಸಂಚಿತಾ ಉಗಾಲೆ (Sanchita Ugale) ತಮ್ಮ ಬದುಕನ್ನು ತಾವೇ ಕೊನೆಗಾಣಿಸಿಕೊಂಡಿದ್ದಾರೆ. ಈ ನಟಿಯ ಸಾವು ಈಗ ಹಿಂದಿ ಚಿತ್ರರಂಗಕ್ಕೆ ಬರುವ ಯುವ ಸಮುದಾಯದಲ್ಲಿ ಆತಂಕವನ್ನು ಸೃಷ್ಟಿ ಮಾಡಿದೆ. ಅಷ್ಟಕ್ಕೂ 32 ವರ್ಷದ ಈ ನಟಿ ಸಾವಿಗೆ ಕಾರಣವೇನು? ಕಿರುತೆರೆ ಲೋಕ ಏನಂತಿದೆ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
ಸಂಚಿತಾ ಉಗಾಲೆ ಆತ್ಮ*ಹತ್ಯೆ
ಹಿಂದಿ ಕಿರುತೆರೆಯಲ್ಲಿ ಜನಪ್ರಿಯ ಧಾರಾವಾಹಿಗಳಾದ 'ಕುಂಕುಮ್ ಭಾಗ್ಯ', 'ದಿಲ್ವಾಲಿ ದುಲ್ಹಾ ಲೇ ಜಾಯೆಗಿ' ಅಂತಹ ಧಾರಾವಾಹಿಗಳಲ್ಲಿ ಸಂಚಿತಾ ಉಗಾಲೆ ನಟಿಸಿದ್ದರು. ಟಿವಿ ಶೋಗಳು ಅಷ್ಟೇ ಅಲ್ಲ. ವಿಕ್ಕಿ ಕೌಶಲ್ ನಟನೆಯ 'ಛಾವಾ' ಸಿನಿಮಾದ ಮೂಲಕವೂ ಬಾಲಿವುಡ್‌ನಲ್ಲಿ ಭರವಸೆಯನ್ನು ಮೂಡಿಸಿದ್ದರು. ಕಿರುತೆರೆ ಹಾಗೂ ಸಿನಿಮಾ ಎರಡರಲ್ಲೂ ಮಿಂಚುತ್ತಿದ್ದ 32 ವರ್ಷದ ಈ ನಟಿಯ ಹಠಾತ್ ಆತ್ಮ*ಹತ್ಯೆ ಸುದ್ದಿ ಇಡೀ ಟಿವಿ ಉದ್ಯಮವನ್ನು ತೀವ್ರ ಆಘಾತಕ್ಕೆ ತಳ್ಳಿದೆ.
ಸುಶಾಂತ್ ಸಿಂಗ್ ಡೆತ್ ಡೇ ದಿನವೇ..
ಬಾಲಿವುಡ್‌ನ ಜನಪ್ರಿಯ ನಟ ಸುಶಾಂತ್ ಸಿಂಗ್ ರಜಪೂತ್, 2020, ಜೂನ್ 14ರಂದು ಮುಂಬೈನ ತಮ್ಮ ನಿವಾಸದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದರು. ಈ ಘಟನೆ ನಡೆದ ಆರು ವರ್ಷಗಳ ಬಳಿಕ ಅದೇ ಜೂನ್ 14ರಂದು ನಟಿ ಸಂಚಿತಾ ಉಗಾಲೆ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಮುಂಬೈನ ನಲಸೋಪಾರಾ ಈಸ್ಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ನೇಣಿಗೆ ಶರಣಾಗಿದ್ದಾರೆ. ಈ ಕಾಕತಾಳೀಯ ಘಟನೆಗೆ ಜನರು ದಿಗ್ಭ್ರಮೆ ವ್ಯಕ್ತಪಡಿಸುತ್ತಿದ್ದಾರೆ. ಜೂನ್ 14 ಚಿತ್ರರಂಗಕ್ಕೆ ಶಾಪಗ್ರಸ್ತ ದಿನವೇ ಎಂದು ಕಳವಳ ವ್ಯಕ್ತಪಡಿಸುತ್ತಿದ್ದಾರೆ.

ನಗುವಿನ ಹಿಂದಿತ್ತೇ ಕಣ್ಣೀರಿನ ಕಥೆ?
ಸಂಚಿತಾ ಉಗಾಲೆ ದುಡುಕಿನ ನಿರ್ಧಾರ ತೆಗೆದುಕೊಳ್ಳುವುದಕ್ಕೂ ಕೇವಲ 19 ಗಂಟೆಗಳ ಮುನ್ನ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ರೀಲ್ಸ್ ಒಂದನ್ನು ಹಂಚಿಕೊಂಡಿದ್ದರು. ಆ ವಿಡಿಯೋದಲ್ಲಿ ಸಂಚಿತಾ ಟ್ರೆಡಿಷನಲ್ ಲುಕ್‌ನಲ್ಲಿ ಮುಗುಳು ನಗುತ್ತಿದ್ದರು. 'ಡಫ್ಲಿವಾಲೆ ಡಫ್ಲಿ ಬಜಾ' ಹಾಡಿಗೆ ಹೆಜ್ಜೆಯನ್ನೂ ಹಾಕಿದ್ದರು. ಆ ರೀಲ್ಸ್‌ನಲ್ಲಿ ನಗು ನಗುತ್ತಿದ್ದ ಮುಖವನ್ನು ನೋಡಿದ್ಮೇಲೆ ಈ ನಟಿ ಇನ್ನು ಕೆಲವೇ ಗಂಟೆಗಳಲ್ಲಿ ಇಂತಹ ಘೋರ ನಿರ್ಧಾರ ತೆಗೆದುಕೊಳ್ಳಬಹುದೆಂದು ನಿರೀಕ್ಷೆಯನ್ನೂ ಮಾಡಿರಲಿಲ್ಲ.
ಕತ್ತಲ ಕೋಣೆಯಲ್ಲಿ ದುರಂತ
ಜೂನ್ 14, ಭಾನುವಾರ ಸಂಜೆ 7 ಗಂಟೆ ಸುಮಾರಿಗೆ ಸಂಚಿತಾ ಮನೆಯಲ್ಲಿ ಒಂಟಿಯಾಗಿದ್ದರು. ಈ ವೇಳೆ ತಮ್ಮ ಬೆಡ್‌ರೂಮ್ ಬಾಗಿಲನ್ನು ಒಳಗಿನಿಂದ ಲಾಕ್ ಮಾಡಿಕೊಂಡು ಸೀಲಿಂಗ್ ಫ್ಯಾನ್‌ಗೆ ಸೀರೆಯಿಂದ ನೇಣು ಬಿಗಿದುಕೊಂಡಿದ್ದಾರೆ. ಪೋಷಕರು ಹಿಂತಿರುಗಿದ ಬಳಿಕ ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ ಅಷ್ಟರಲ್ಲೇ ಅವರ ನಿಧನರಾಗಿದ್ದರು. ಸದ್ಯಕ್ಕೆ ಸ್ಥಳದಲ್ಲಿ ಯಾವುದೇ ಸುಸೈಡ್ ನೋಟ್ ಪತ್ತೆಯಾಗಿಲ್ಲ. ಹೀಗಾಗಿ ಅವರಲ್ಲಿದ್ದ ನೋವು, ಒತ್ತಡಗಳು ಏನೆಂಬುದು ತಿಳಿದು ಬಂದಿಲ್ಲ.
Disclaimer: ಜೀವನದಲ್ಲಿ ಎಷ್ಟೇ ದೊಡ್ಡ ಕಷ್ಟಗಳಿದ್ದರೂ ಆತ್ಮಹತ್ಯೆ ಅದಕ್ಕೆ ಪರಿಹಾರವಲ್ಲ. ಮಾನಸಿಕ ಒತ್ತಡ ಅಥವಾ ಖಿನ್ನತೆಯಿಂದ ಬಳಲುತ್ತಿದ್ದರೆ ದಯವಿಟ್ಟು ಸೂಕ್ತ ಮಾನಸಿಕ ತಜ್ಞರ ಅಥವಾ ಸಹಾಯವಾಣಿಗಳ ನೆರವು ಪಡೆಯಿರಿ.


Click it and Unblock the Notifications
